|ಮನ್ಸುಖ್ ಮಾಂಡವಿಯಾ
ಕಂಪ್ಯೂಟರ್ ಜಾಲಗಳು ಪರಸ್ಪರ ಸಂವಹನವನ್ನೇ ನಡೆಸದ ಅಂತರ್ಜಾಲರಹಿತ ಜಗತ್ತನ್ನು ಇಂದು ಒಮ್ಮೆ ಕಲ್ಪಿಸಿಕೊಂಡು ನೋಡಿ. ಅಂತಹ ಸಂಪರ್ಕರಹಿತ ಜಗತ್ತು ಹೇಗಿರುತ್ತದೆಂದರೆ, ವಿಶ್ವದ ಒಂದು ಭಾಗದಲ್ಲಿ ಈಗಾಗಲೇ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಚಕ್ರವನ್ನು, ಅದರ ಅರಿವೇ ಇಲ್ಲದೆ ಜಗತ್ತಿನ ಮತ್ತೊಂದು ಭಾಗದಲ್ಲಿ ಮತ್ತೊಮ್ಮೆ ಆವಿಷ್ಕಾರ ಮಾಡಬಹುದು! ಪ್ರಮಾಣೀಕೃತ ‘ಇಂಟರ್ನೆಟ್ ಪೋ›ಟೋಕಾಲ್’(ಐಪಿ) ಇಲ್ಲದಿದ್ದರೆ, ನಮ್ಮ ವಾಸ್ತವದ ಸ್ಥಿತಿಯು ಆಮೂಲಾಗ್ರವಾಗಿ ವಿಭಿನ್ನವಾಗಿ ಕಾಣುತ್ತಿತ್ತು – ಅನೇಕ ಸ್ಥಳೀಯ ಪ್ರದೇಶ ವ್ಯಾಪ್ತಿಯ ನೆಟ್​ವರ್ಕ್​ಗಳೇ ಇರುತ್ತಿದ್ದವು. ಆದರೆ, ಅವೆಲ್ಲವುಗಳನ್ನು ಒಟ್ಟಿಗೆ ಸಂರ್ಪಸಲು ಒಂದು ಸಾಮಾನ್ಯ ಇಂಟರ್​ನೆಟ್ ಜಾಲ ಇರುತ್ತಿರಲಿಲ್ಲ. ಇಂದು ಡಿಜಿಟಲ್ ಆರೋಗ್ಯ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಯೂ ಹೀಗೇಯೇ ಇದೆ. ಅಲ್ಲಿ ಕ್ರಾಂತಿಕಾರಿ ತಂತ್ರಜ್ಞಾನಗಳು ಬೆಳವಣಿಗೆಯಾಗಿದ್ದರೂ ಅವು ಸಾಗಬೇಕಾದ ಸೂಕ್ತ ನಿರ್ದೇಶನ, ಪ್ರಮಾಣಿತ ನೀತಿಗಳು ಇಲ್ಲ. ವಿಶ್ವದ ದಕ್ಷಿಣದಲ್ಲಿ ವಾಸಿಸುವ ಶತಕೋಟಿ ಜನರಿಗೆ ಪ್ರಯೋಜನವಾಗಬಲ್ಲ ಆವಿಷ್ಕಾರಗಳಿಗೆ ಮತ್ತಷ್ಟು ವೇಗವನ್ನು ಖಾತರಿಪಡಿಸುವ ನಿರ್ಣಾಯಕ ಜಾಗತಿಕ ನಾಯಕತ್ವವಿಲ್ಲ.
ಡಿಜಿಟಲ್ ಆರೋಗ್ಯದ ರೋಮಾಂಚಕ ಜಗತ್ತು, ಸಣ್ಣ ಮತ್ತು ಶಕ್ತಿಯುತ ಉಪಕರಣಗಳು ಹಾಗೂ ಆವಿಷ್ಕಾರಗಳಿಂದ ತುಂಬಿದೆ. ಧರಿಸಬಹುದಾದ ಸ್ಮಾರ್ಟ್ ಸಾಧನಗಳು (ವೇರಬಲ್ ಡಿವೈಸ್), ‘ಇಂಟರ್ನೆಟ್ ಆಫ್ ಥಿಂಗ್ಸ್’ ‘ವರ್ಚುವಲ್ ಕೇರ್’, ‘ರಿಮೋಟ್ ಮಾನಿಟರಿಂಗ್’, ‘ಕೃತಕ ಬುದ್ಧಿಮತ್ತೆ’, ‘ಬಿಗ್ ಡೇಟಾ ವಿಶ್ಲೇಷಣೆ’, ‘ಬ್ಲಾಕ್-ಚೈನ್’, ‘ಡೇಟಾ ವಿನಿಮಯ ಸಕ್ರಿಯಗೊಳಿಸುವ ಸಾಧನಗಳು’, ‘ಸಂಗ್ರಹಣೆ’, ’ರಿಮೋಟ್ ಡೇಟಾ ಕ್ಯಾಪ್ಚರ್’ ಮುಂತಾದವು ಇದರಲ್ಲಿ ಸೇರಿವೆ. ಆದರೆ, ಏಕೀಕೃತ ಜಾಗತಿಕ ದೃಷ್ಟಿಕೋನವಿಲ್ಲದೆ ವಿಭಜಿತ ಪರಿಸರ ವ್ಯವಸ್ಥೆಯಲ್ಲಿ ಇವೆಲ್ಲವೂ ಚದುರಿಹೋಗಿವೆ. ಕೋವಿಡ್ ಸಾಂಕ್ರಾಮಿಕವು ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಸಾಧನಗಳ ಅಗಾಧ ಸಾಮರ್ಥ್ಯದ ಅರಿವನ್ನು ನಮಗೆ ಮೂಡಿಸಿದೆ. ಇಂತಹ ಸಂದರ್ಭದಲ್ಲೂ ಇವು ಹೀಗೆ ವಿಚ್ಛಿದ್ರ ಸ್ಥಿತಿಯಲ್ಲಿವೆ.
ಭಾರತದ ಬೃಹತ್ ಪ್ರಯೋಗ:ಭಾರತದಲ್ಲಿ, ನಾವು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಸಾಧನಗಳ ಕ್ರಾಂತಿಕಾರಿ ಸಾಮರ್ಥ್ಯವನ್ನು ಕಂಡಿದ್ದೇವೆ ಮತ್ತು ಅನುಭವಿಸಿದ್ದೇವೆ. ಕೋವಿಡ್-19 ಸಮಯದಲ್ಲಿ, ಕೋವಿನ್ ಮತ್ತು ಇ-ಸಂಜೀವಿನಿಯಂತಹ ವೇದಿಕೆಗಳು ಲಸಿಕೆಗಳು ಮತ್ತು ಆರೋಗ್ಯ ಸೇವೆಗಳಿಂದ ಹೊರಗಿದ್ದವರೂ ಸೇರಿದಂತೆ ಒಂದು ಶತಕೋಟಿಗೂ ಹೆಚ್ಚು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಲಸಿಕೆಗಳನ್ನು ತಲುಪಿಸುವ ವಿಧಾನವನ್ನೇ ಸಂಪೂರ್ಣ ಕ್ರಾಂತಿಕಾರಿಯಾಗಿಸಿದವು.
ಭಾರತದ ಕೋವಿಡ್ -19 ಲಸಿಕೀಕರಣ ಅಭಿಯಾನದ ಡಿಜಿಟಲ್ ಬೆನ್ನೆಲುಬು ಎನಿಸಿರುವ ಕೋವಿನ್ ವೇದಿಕೆಯು ಒಂದು ಕಡೆ ಲಸಿಕೆಯ ಸಾಗಣೆಯ ಮೇಲೆ ನಿಗಾ ಇರಿಸಿದರೆ, ಮತ್ತೊಂದೆಡೆ ಲಸಿಕೆ ಪಡೆಯಲು ಪ್ರತಿಯೊಬ್ಬ ಫಲಾನುಭವಿಯನ್ನು ನೋಂದಾಯಿಸಿತು, ಲಸಿಕೆ ಪಡೆದಿದ್ದಕ್ಕೆ ಪುರಾವೆಯಾದ ಡಿಜಿಟಲ್ ಪ್ರಮಾಣಪತ್ರಗಳನ್ನು ಸೃಷ್ಟಿಸಿತು.
ಜನರು ಮತ್ತು ವ್ಯವಸ್ಥೆಯ ನಡುವಿನ ಮಾಹಿತಿ ಅಸಮಾನತೆಯನ್ನು ಕಡಿಮೆ ಮಾಡುವ ಮೂಲಕ, ಕೋವಿನ್ ಲಸಿಕೀಕರಣ ಅಭಿಯಾನವನ್ನು ಪ್ರಜಾಸತ್ತಾತ್ಮಕ ಗೊಳಿಸಿತು. ಲಸಿಕೆಗಳು ಎಲ್ಲಾ ಅರ್ಹ ಫಲಾನುಭವಿಗಳಿಗೆ ಲಭ್ಯವಾಗುವಂತೆ ಖಾತರಿಪಡಿಸಿತು. ಅವರು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಒಂದೇ ಸಮಾನ ಮಾರ್ಗವಿತ್ತು, ಎಲ್ಲರೂ ಲಸಿಕೆಗಳಿಗಾಗಿ ಒಂದೇ ಸರದಿಯಲ್ಲಿ ನಿಂತಿದ್ದರು. ಈ ಸಾಧನದ ಸಾಮರ್ಥ್ಯವನ್ನು ಮನಗಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಡಿಜಿಟಲ್ ವೇದಿಕೆಯನ್ನು ಜಗತ್ತಿನ ಇತರ ದೇಶಗಳ ಬಳಕೆಗೆ ಉಡುಗೊರೆಯಾಗಿ ಅರ್ಪಿಸಿದರು.
ಅಂತೆಯೇ, ಟೆಲಿಮೆಡಿಸಿನ್ ವೇದಿಕೆಯಾದ ‘ಇ-ಸಂಜೀವಿನಿ’, ಜನರಿಗೆ ತಮ್ಮ ಮನೆಗಳಿಂದಲೇ ವೈದ್ಯರೊಂದಿಗೆ ಆನ್​ಲೈನ್ ಸಮಾಲೋಚನೆಗೆ ಅವಕಾಶ ಮಾಡಿಕೊಟ್ಟಿತು. 10 ಕೋಟಿಗೂ ಹೆಚ್ಚು ಸಮಾಲೋಚನೆಗಳನ್ನು ಇದರ ಮೂಲಕ ನಿರ್ವಹಿಸಲಾಗಿದೆ. ಗರಿಷ್ಠ ದಿನಕ್ಕೆ 5 ಲಕ್ಷಕ್ಕೂ ಹೆಚ್ಚು ಸಮಾಲೋಚನೆಗಳನ್ನು ಸಹ ಇದರ ಮೂಲಕ ನಡೆಸಲಾಗಿದೆ.
‘ಡಿಜಿಟಲ್’ ಆಗಿ ಸಕ್ರಿಯಗೊಳಿಸಿದ ‘ಕೋವಿಡ್ ವಾರ್​ರೂಮ್ ನಮಗೆ ಪುರಾವೆ ಆಧಾರಿಸಿ ನೀತಿ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಯಿತು. ವಿಶೇಷ ನಿಗಾ ವ್ಯವಸ್ಥೆಯಾದ ‘ಕೋವಿಡ್-19 ಇಂಡಿಯಾ’ ಪೋರ್ಟಲ್, ಭೌಗೋಳಿಕವಾಗಿ ಸೋಂಕನ್ನು ಪತ್ತೆ ಹಚ್ಚಿತು ಮತ್ತು ಅಗತ್ಯ ಔಷಧಗಳ ಪೂರೈಕೆ ದಾಸ್ತಾನಿನ ಮೇಲ್ವಿಚಾರಣೆ ಮಾಡಿತು. ಪ್ರಕರಣಗಳ ಹೊರೆಯ ಆಧಾರದ ಮೇಲೆ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಬೇಡಿಕೆಯನ್ನು ಪತ್ತೆ ಮಾಡಿತು. ‘ಆರೋಗ್ಯ ಸೇತು’, ‘ಆರ್ ಟಿ -ಪಿಸಿಆರ್’ ತಂತ್ರಾಂಶ ಮತ್ತು ಇತರ ಡಿಜಿಟಲ್ ಉಪಕರಣಗಳು ನಮ್ಮ ದೇಶಕ್ಕೆ ಡೇಟಾವನ್ನು ನೀತಿಯಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟವು.
ಸಾರ್ವಜನಿಕ ಆರೋಗ್ಯದಲ್ಲಿ ಡಿಜಿಟಲ್ ಸಾಧನಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಭಾರತವು ಈಗಾಗಲೇ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಾದ – ‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ (ಎಬಿಡಿಎಂ) ಅನ್ನು ನಿರ್ವಿುಸುತ್ತಿದೆ/ರಚಿಸುತ್ತಿದೆ. ಇದು ರೋಗಿಗಳಿಗೆ ತಮ್ಮ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಬೇಕಾದಾಗ ಅವುಗಳನ್ನು ಪಡೆಯಲು ಹಾಗೂ ಸೂಕ್ತ ಚಿಕಿತ್ಸೆ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳನ್ನು ಆರೋಗ್ಯ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುತ್ತದೆ. ಇದು ರೋಗಿಗಳಿಗೆ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಬಗ್ಗೆ ನಿಖರವಾದ ಮಾಹಿತಿ ಹೊಂದಲು ಸಹಾಯ ಮಾಡುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಜಗತ್ತಿನ ಇತರ ದೇಶಗಳಲ್ಲಿ, ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದೇ ರೀತಿಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ವಿುಸಲು ನಮ್ಮ ಕಲಿಕೆಗಳು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮುಂದಾಗಿದೆ. ಆ ಮೂಲಕ ಡಿಜಿಟಲ್ ಸಾರ್ವಜನಿಕ ಸರಕುಗಳ ಕುರಿತಾಗಿ ಆ ದೇಶಗಳು ನಡೆಸಬೇಕಾದ ಸಂಶೋಧನಾ ಪ್ರಯತ್ನಗಳ ಹೊರೆ ಕಡಿಮೆ ಮಾಡಲು ನೆರವಾಗುತ್ತದೆ; ವಿಶ್ವದ ಈ ಭಾಗಗಳಲ್ಲಿನ ದುರ್ಬಲ ಜನರು ಅತ್ಯಾಧುನಿಕ ಡಿಜಿಟಲ್ ಪರಿಹಾರಗಳು ಮತ್ತು ಆವಿಷ್ಕಾರಗಳ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಕನಸನ್ನು ನನಸಾಗಬಹುದು.
ಜಾಗತಿಕ ವ್ಯವಸ್ಥೆಗೆ ಇರುವ ತೊಂದರೆ:ಕೃತಿಸ್ವಾಮ್ಯ ನೀತಿಗಳು ಮತ್ತು ಸ್ವಾಮ್ಯದ ವ್ಯವಸ್ಥೆಗಳು ಡಿಜಿಟಲ್ ಪರಿಹಾರಗಳ ಲಭ್ಯತೆಯನ್ನು ನಿರ್ಬಂಧಿಸುತ್ತವೆ. ಹೆಚ್ಚಿನ ಕ್ರಾಂತಿಕಾರಿ ಡಿಜಿಟಲ್ ಪರಿಹಾರಗಳ ಲಭ್ಯತೆಯು ಸುಲಭವಾಗಿಲ್ಲ. ಏಕೆಂದರೆ ಅಗತ್ಯವಾದ ಭಾಷೆ, ವಿಷಯ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಅವುಗಳ ಹಂಚಿಕೆ ಅಸಮಾನವಾಗಿದೆ.
ಸಂಬಂಧಿತ ಡಿಜಿಟಲ್ ಸಾರ್ವಜನಿಕ ಸರಕುಗಳು ಅಥವಾ ‘ಮುಕ್ತ-ಸಂಪನ್ಮೂಲ’ (ಓಪನ್ ಸೋರ್ಸ್) ಪರಿಹಾರಗಳು ಅಸ್ತಿತ್ವದಲ್ಲಿದ್ದರೂ ಅವುಗಳ ಉಪಯುಕ್ತತೆ ಸೀಮಿತವಾಗಿದೆ. ಏಕೆಂದರೆ ಅವು ಯಾವುದೇ ಸಾಮಾನ್ಯ ಜಾಗತಿಕ ಮಾನದಂಡಗಳಿಲ್ಲದ ವೇದಿಕೆ, ಡೇಟಾ ಮತ್ತು ತರ್ಕವನ್ನು ಒಳಗೊಂಡಿವೆ. ಡೇಟಾ ಸುರಕ್ಷತೆ ಮತ್ತು ಗೌಪ್ಯತೆಯ ವಿಚಾರವಾಗಿ ಕಳವಳಗಳನ್ನು ಪರಿಹರಿಸುವ ಜತೆಗೆ, ವಿವಿಧ ವ್ಯವಸ್ಥೆಗಳಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ನೋಡಿಕೊಳ್ಳುವ ಡಿಜಿಟಲ್ ಆರೋಗ್ಯ ಕುರಿತಾದ ಯಾವುದೇ ಜಾಗತಿಕ ಆಡಳಿತ ನೀತಿಗಳು ಸದ್ಯಕ್ಕೆ ಲಭ್ಯವಿಲ್ಲ.
ಡಿಜಿಟಲ್ ಆರೋಗ್ಯದ ವಿಚಾರವಾಗಿ ಜಾಗತಿಕ ಮಾನದಂಡಗಳನ್ನು ರೂಪಿಸಲು ಹಲವಾರು ಸ್ವತಂತ್ರ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಈ ಉಪಕ್ರಮಗಳು ನಿಧಾನಗತಿಯಲ್ಲಿವೆ ಮತ್ತು ಇವುಗಳ ಜಾರಿಗೆ ಯಾವುದೇ ಬೆಂಬಲವಿಲ್ಲದ ಕಾರಣ ಅವು ಸಮನ್ವಯಗೊಂಡಿಲ್ಲ. ಜಾಗತಿಕ ಸಮುದಾಯವಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಒಂದೇ ಪರಿಣಾಮಕಾರಿ ಸೂರಿನಡಿ ಒಟ್ಟುಗೂಡಿಸಲು ನಿರ್ಧರಿಸಿದರೆ, ಈ ಸವಾಲುಗಳನ್ನು ಅವಕಾಶಗಳಾಗಿ ಬದಲಾಯಿಸಬಹುದು. ಡಿಜಿಟಲ್ ಆರೋಗ್ಯಕ್ಕಾಗಿ ಭವಿಷ್ಯ ಸನ್ನದ್ಧ ದೃಷ್ಟಿಕೋನವನ್ನು ರ್ಚಚಿಸಲು ಮತ್ತು ನಿರ್ವಿುಸಲು ಪರಿಣಾಮಕಾರಿ ಹಾಗೂ ಶಕ್ತಿಯುತ ವೇದಿಕೆಯಾಗಲು ಜಿ -20 ಸಜ್ಜಾಗಿದೆ.
ಭಾರತ ಅಧ್ಯಕ್ಷತೆಯ ಮಹತ್ವ:ಒಟ್ಟಾರೆ ಮನುಕುಲಕ್ಕಾಗಿ ಡಿಜಿಟಲ್ ಆರೋಗ್ಯದ ಪರಿಣಾಮಕಾರಿ ಜಾಗತಿಕ ನೀಲಿನಕ್ಷೆಯನ್ನು ನಾವು ನಿರ್ವಿುಸಿ, ಜಾರಿಗೊಳಿಸಿದರೆ ಎಂತಹ ಅದ್ಭುತ ಸಾಮರ್ಥ್ಯವನ್ನು ಅನಾವರಣ ಮಾಡಬಹುದೆಂದು ಕಲ್ಪಿಸಿಕೊಳ್ಳಿ.
ಅದಕ್ಕಾಗಿ ನಾವು ಡಿಜಿಟಲ್ ಆರೋಗ್ಯ ಕುರಿತಾದ ಒಂದು ಜಾಗತಿಕ ಉಪಕ್ರಮದ ರೂಪದಲ್ಲಿ ಚದುರಿಹೋಗಿರುವ ಪ್ರಯತ್ನಗಳನ್ನು ಒಟ್ಟುಗೂಡಿಸಬೇಕು. ಆಡಳಿತ ನೀತಿಗಳನ್ನು ಸಾಂಸ್ಥಿಕಗೊಳಿಸಬೇಕು. ದಶಕಗಳ ಹಿಂದೆ ಅಂತರ್ಜಾಲಕ್ಕಾಗಿ ಮಾಡಿದಂತೆ ಸಾಮಾನ್ಯ ಪ್ರೋಟೋಕಾಲ್​ನಲ್ಲಿ ಸಹಕರಿಸಲು ಅವೆಲ್ಲವನ್ನೂ ಒಟ್ಟುಗೂಡಿಸಬೇಕು; ಆರೋಗ್ಯ ರಕ್ಷಣೆಯಲ್ಲಿ ಭರವಸೆಯ ಡಿಜಿಟಲ್ ಪರಿಹಾರಗಳನ್ನು ‘ಡಿಜಿಟಲ್ ಸಾರ್ವಜನಿಕ ಸರಕು’ಗಳೆಂದು ಗುರುತಿಸಿ, ಪ್ರಮಾಣೀಕರಿಸಬೇಕು; ವಿವಿಧ ವಿಭಾಗಗಳು ಮತ್ತು ವಲಯಗಳಿಗೆ ಸೇರಿದ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು; ಜಾಗತಿಕ ಆರೋಗ್ಯ ದತ್ತಾಂಶ ವಿನಿಮಯಕ್ಕಾಗಿ ವಿಶ್ವಾಸ ಹೆಚ್ಚಿಸಬೇಕು ಜತೆಗೆ, ಅಂತಹ ಉಪಕ್ರಮಗಳಿಗೆ ಆರ್ಥಿಕ ನೆರವು ಒದಗಿಸುವ ಮಾರ್ಗಗಳನ್ನು ಕಂಡುಹಿಡಿಯಬೇಕು.
ಜಿ-20 ಶೃಂಗಸಭೆಯ ಭಾಗವಾಗಿ, ಭಾರತದಲ್ಲಿ ನಾವು ಈ ಕೆಲವು ವಿಷಯಗಳ ಬಗ್ಗೆ ಒಮ್ಮತ ಮೂಡಿಸಲು ಮತ್ತು ಮಾರ್ಗಸೂಚಿಯನ್ನು ರಚಿಸಲು ಶ್ರಮಿಸುತ್ತೇವೆ. ಜತೆಗೆ ಅವುಗಳನ್ನು ಕಾರ್ಯಗತಗೊಳಿಸಲು ಕಾರ್ಯವಿಧಾನಗಳನ್ನು ರೂಪಿಸುತ್ತೇವೆ. ಇದರಿಂದ ಜಾಗತಿಕ ದಕ್ಷಿಣದ ದೇಶಗಳು ಸೇರಿದಂತೆ ಇಡೀ ಜಗತ್ತಿಗೆ ಡಿಜಿಟಲ್ ಆರೋಗ್ಯದ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಬಹುದು. ಡಿಜಿಟಲ್ ಆರೋಗ್ಯದಲ್ಲಿ ಪ್ರಗತಿ ಸಾಧಿಸಲು ಮಾಡಬೇಕಾಗಿರುವ ಕೆಲಸವೆಂದರೆ, ನಮ್ಮ ಸಂಕುಚಿತ ಹಿತಾಸಕ್ತಿಗಳನ್ನು ಬಿಟ್ಟು, ಸಾಮೂಹಿಕ ಒಳಿತಿಗೆ ಆದ್ಯತೆ ನೀಡುವುದು. ಜತೆಗೆ ‘ಜಾಗತಿಕ ಆರೋಗ್ಯ ವ್ಯಾಪ್ತಿ’ಯಲ್ಲಿರುವ ‘ಜಗತ್ತು’ ನಮ್ಮ ಸ್ವಂತ ದೇಶಗಳನ್ನು ಮೀರಿದ್ದಾಗಿದೆ ಎಂದು ಗ್ರಹಿಸಬೇಕು. ಒಟ್ಟಾರೆಯಾಗಿ, ‘ಜಿ-20’ನಲ್ಲಿ ನಮ್ಮನ್ನು ಪ್ರೇರೇಪಿಸಬೇಕಾಗಿರುವುದು ಮತ್ತು ಮುನ್ನಡೆಸಬೇಕಾಗಿರುವುದು ’ವಸುಧೈವ ಕುಟುಂಬಕಂ’ ಅಂದರೆ ಬ್ರಹ್ಮಾಂಡವು ಒಂದು ಕುಟುಂಬವಾಗಿದೆ ಎಂಬ ತತ್ವ. ಎಷ್ಟೇ ಕಷ್ಟವಾದರೂ ಆ ಕುಟುಂಬಕ್ಕೆ, ಅಂದರೆ ಜಗತ್ತಿಗೆ ಆರೋಗ್ಯವನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ.
(ಲೇಖಕರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವರು)
ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five + twelve =
Remember me
