ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಲಕ್ಷದ್ವೀಪ ಕಡಲತೀರಕ್ಕೆ ತೆರಳಿ ವಿಹರಿಸಿದ ಬಳಿಕ ಭಾರಿ ಸಂಚಲನವೇ ಮೂಡಿದೆ. ಪ್ರಧಾನಿ ನಡೆಗೆ ಎಕ್ಸ್​ನಲ್ಲಿ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ ಮಾಲ್ದೀವ್ಸ್​ನ ಮೂವರು ಜನಪ್ರತಿನಿಧಿಗಳ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಅವರನ್ನು ವಜಾ ಮಾಡುವ ಮೂಲಕ ಮಾಲ್ದೀವ್ಸ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಈ ಬೆನ್ನಲ್ಲೇ ಮಾಲ್ದೀವ್ಸ್ ಬಹಿಷ್ಕರಿಸಿ ಎಂಬ ಅಭಿಯಾನ ಕೂಡ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಕಡಲತಡಿಯ ಪ್ರವಾಸೋದ್ಯಮವನ್ನೇ ದೊಡ್ಡ ಆದಾಯವಾಗಿ ಹೊಂದಿರುವ ಮಾಲ್ದೀವ್ಸ್, ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಗಿದೆ.
ಮೂವರು ಸಚಿವರ ಅಮಾನತುವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ.
ಭಾರತೀಯ ಪ್ರವಾಸಿಗರೇ ಅತ್ಯಧಿಕಮಾಲ್ದೀವ್ಸ್​ಗೆ ಭೇಟಿ ಕೊಟ್ಟ ಪ್ರವಾಸಿಗರ ಪೈಕಿ ಭಾರತದ ಪಾಲು ದೊಡ್ಡದು ಎಂಬುದು ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಮಾಹಿತಿಯಿಂದಲೇ ಬಹಿರಂಗಗೊಂಡಿದೆ. 2023ರ ಡಿ.13ರ ವರೆಗೆ ಆ ವರ್ಷದಲ್ಲಿ ಮಾಲ್ದೀವ್ಸ್​ಗೆ 17,57,939 ಪ್ರವಾಸಿಗರು ಬಂದಿದ್ದು, 2022ನೇ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಶೇ. 12.6 ಹೆಚ್ಚಳವಾಗಿದೆ. ಕಳೆದ ವರ್ಷ ಬಂದಿರುವ ಪ್ರವಾಸಿಗರಲ್ಲಿ 2,09,198 ಪ್ರವಾಸಿಗರೊಂದಿಗೆ ಭಾರತವೇ ಟಾಪ್-1 ಸ್ಥಾನದಲ್ಲಿದ್ದರೆ, ರಷ್ಯಾ (2,09,146) ಮತ್ತು ಚೀನಾ (1,87,118) ನಂತರದ ಸ್ಥಾನಗಳಲ್ಲಿವೆ. ಉಳಿದಂತೆ ಯುಕೆಯಿಂದ 1.55 ಲಕ್ಷ, ಜರ್ಮನಿ-1.35 ಲಕ್ಷ, ಇಟಲಿ-1.18 ಲಕ್ಷ, ಯುಎಸ್ 74 ಸಾವಿರ, ಫ್ರಾನ್ಸ್-49 ಸಾವಿರ, ಸ್ಪೇನ್-40 ಸಾವಿರ ಮತ್ತು ಸ್ವಿಜರ್ಲೆಂಡ್​ನಿಂದ 37 ಸಾವಿರ ಪ್ರವಾಸಿಗರು ಮಾಲ್ದೀವ್ಸ್​ಗೆ ಕಳೆದ ವರ್ಷ ಭೇಟಿ ನೀಡಿದ್ದರು. ಮಾಲ್ದೀವ್ಸ್​ನ ಮೊದಲ ಹಂತದ ವಿಸ್ತರಣೆ ಸಂದರ್ಭದಲ್ಲಿ ಅಂದರೆ 2018ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಮಾಲ್ದೀವ್ಸ್-ಭಾರತ ನಡುವಿನ ನೇರ ವಿಮಾನದಲ್ಲಿ 51 ಸಾವಿರ ಮಂದಿ ಪ್ರಯಾಣಿಸಿದ್ದರು. 2019ರ ಇದೇ ಅವಧಿಯಲ್ಲಿ ಇದು 60 ಸಾವಿರಕ್ಕೆ ತಲುಪಿತ್ತು. ಅಂದರೆ ಭಾರತ-ಮಾಲ್ದೀವ್ಸ್ ಮಧ್ಯೆ ವಿಮಾನದಲ್ಲಿ ನಿತ್ಯ ಸುಮಾರು 700 ಮಂದಿ ಪ್ರಯಾಣಿಸಿದಂತಾಗಿದೆ. ಅದರಲ್ಲೂ 2021ರ ನಾಲ್ಕನೇ ತ್ರೖೆಮಾಸಿಕದಲ್ಲಿ ಭಾರತದಿಂದ 1.15 ಲಕ್ಷ ಮಂದಿ ವಿಮಾನದಲ್ಲಿ ಮಾಲ್ದೀವ್ಸ್​ಗೆ ಪ್ರಯಾಣಿಸಿದ್ದರು.
ಲಕ್ಷದ್ವೀಪದ ವೈಶಿಷ್ಟ್ಯಲಕ್ಷದ್ವೀಪವು ಭಾರತದ ಅತಿಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ. ವಿಸ್ತೀರ್ಣದಲ್ಲಿ 36 ಚದರ ಕಿ.ಮೀ. ಇರುವ ಇದು 36 ದ್ವೀಪಗಳ ಸಮೂಹ. ಈ ದ್ವೀಪಗಳು ಕೇರಳದ ಕೊಚ್ಚಿಯಿಂದ 220ರಿಂದ 440 ಕಿ.ಮೀ. ದೂರದಲ್ಲಿವೆ. ಕವರಟ್ಟಿ ಎನ್ನುವುದು ಲಕ್ಷದ್ವೀಪದ ರಾಜಧಾನಿ ಹಾಗೂ ಇಲ್ಲಿನ ಪ್ರಮುಖ ಪಟ್ಟಣವಾಗಿದೆ. ಹಚ್ಚಹಸಿರಿನ ಭೂಪ್ರದೇಶ, ಸೂರ್ಯಚುಂಬನದ ಕಡಲತೀರ ಹೊಂದಿರುವ ಈ ಲಕ್ಷದ್ವೀಪ ಸುಂದರ ಪ್ರಾಕೃತಿಕ ವಾತಾವರಣ ಹೊಂದಿದ್ದು, ಪ್ರವಾಸಕ್ಕೆ ಅತಿಯೋಗ್ಯವಾಗಿದೆ. ಆದರೆ ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದು, ಪ್ರವಾಸಿಗರು ಲಕ್ಷದ್ವೀಪ ಆಡಳಿತ ಕೇಂದ್ರದಿಂದ ಅನುಮತಿ ಪಡೆದೇ ಪ್ರವೇಶ ಮಾಡಬೇಕಾಗಿದೆ.
ಪ್ರವಾಸವೇ ರದ್ದುಮಾಲ್ದೀವ್ಸ್ ರಾಜಕಾರಣಿಗಳ ಅವಹೇಳನಾತ್ಮಕ ಪೋಸ್ಟ್​ಗಳು ಭಾರತದ ರಾಷ್ಟ್ರೀಯವಾದಿಗಳನ್ನು ಬಡಿದೆಬ್ಬಿಸಿದ್ದು, ದೇಶಾಭಿಮಾನದ ಅಲೆ ಎಬ್ಬಿಸಿದೆ. ಮಾಲ್ದೀವ್ಸ್ ಪ್ರವಾಸಕ್ಕೆ ತೆರಳಲು ಈಗಾಗಲೇ ಮುಂಗಡ ಬುಕ್ ಮಾಡಿಕೊಂಡಿದ್ದ ಹಲವರು, ಅದನ್ನು ರದ್ದುಗೊಳಿಸಿದ್ದಲ್ಲದೆ ಮಾಲ್ದೀವ್ಸ್ ನಡೆಯೇ ಅದಕ್ಕೆ ಕಾರಣ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಮಾಲ್ದೀವ್ಸ್​ನ ಹೋಟೆಲ್​ಗಳ ಸುಮಾರು 8 ಸಾವಿರ ಬುಕಿಂಗ್, ವಿಮಾನ ಪ್ರಯಾಣದ 2,500 ಬುಕಿಂಗ್​ಗಳು ರದ್ದಾಗಿವೆ ಎನ್ನಲಾಗಿದೆ.
ಇದರ ಹಿಂದೆ ಚೀನಾದ ಕುತಂತ್ರ?ಮಾಲ್ದೀವ್ಸ್ ವಿಚಾರವಾಗಿ ಉಂಟಾಗಿರುವ ಈಗಿನ ಬಿಕ್ಕಟ್ಟು ರಾಜತಾಂತ್ರಿಕ ಸಂಘರ್ಷವಾಗಿ ಮಾರ್ಪಡುವ ಸಾಧ್ಯತೆಗಳೂ ಗೋಚರಿಸಲಾರಂಭಿಸಿವೆ. ಸದ್ಯದ ಪ್ರಕರಣದ ಹಿಂದೆ ಚೀನಾದ ಕುತಂತ್ರದ ಪಾತ್ರವೂ ಇರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಮಾಲ್ದೀವ್ಸ್​ನ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆ ಆಗಿರುವ ಡಾ.ಮೊಹಮದ್ ಮುಯಿಝುು ಚೀನಾ ಪರ ಒಲವು ಹೊಂದಿದ್ದಾರೆ. ಮತ್ತೊಂದೆಡೆ ಮಾಲ್ದೀವ್ಸ್ ಕಿನಾರೆಯಲ್ಲಿ ನೇಮಿಸಲಾಗಿರುವ ಭಾರತೀಯ ಸೇನಾಪಡೆಯನ್ನು ಹಿಂಪಡೆಯುವಂತೆ ಇತ್ತೀಚೆಗೆ ಭಾರತಕ್ಕೆ ಒತ್ತಾಯಿಸಿದ್ದರು. ಭಾರತ-ಮಾಲ್ದೀವ್ಸ್ ನಡುವಿನ ಹೈಡ್ರೋಗ್ರಫಿ ಸಹಕಾರ ಒಪ್ಪಂದ ಇದೇ ಜೂ. 7ಕ್ಕೆ ಮುಗಿಯಲಿದ್ದು, ಅದನ್ನು ಮುಂದುವರಿಸದಿರಲು ಕೂಡ ಮಾಲ್ದೀವ್ಸ್ ನಿರ್ಣಯಿಸಿದೆ. ಜತೆಗೆ ಭಾರತ, ಶ್ರೀಲಂಕಾ, ಮಾರಿಷಸ್​ನೊಂದಿಗೆ ಮಾಲ್ದೀವ್ಸ್ ಸದಸ್ಯ ರಾಷ್ಟ್ರವಾಗಿದ್ದರೂ ಎನ್​ಎಸ್​ಎ ಮಟ್ಟದ ಕೊಲಂಬೊ ಸೆಕ್ಯುರಿಟಿ ಕಾನ್​ಕ್ಲೇವ್​ನ ಸಭೆಯಲ್ಲಿ ಭಾಗವಹಿಸಿಲ್ಲ. ಮುಯಿಝುು ತಾವು ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಭಾರತಕ್ಕೆ ಇನ್ನೂ ಭೇಟಿ ನೀಡದಿದ್ದರೂ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಆಹ್ವಾನದ ಮೇರೆಗೆ ಜ.8ರಂದು ಚೀನಾಗೆ ತೆರಳಿ ಭೇಟಿ ಮಾಡಲಿರುವುದು ಕುತೂಹಲ ಕೆರಳಿಸಿದೆ. ಮುಯಿಝುುಗಿಂತ ಹಿಂದಿನವರು ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಮೊದಲಿಗೆ ಭಾರತಕ್ಕೆ ಭೇಟಿ ನೀಡುವ ಪರಿಪಾಠ ಇರಿಸಿಕೊಂಡಿದ್ದಲ್ಲದೆ, ಉಭಯರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ, ಸಹಕಾರಗಳ ಕುರಿತು ಆದ್ಯತೆ ಹೊಂದಿದ್ದರು. ಈ ಮಧ್ಯೆ ಮಾಲ್ದೀವ್ಸ್​ನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಹೂಡಿಕೆ ಮಾಡಿರುವ ಚೀನಾ, ಅಲ್ಲಿ ತನ್ನ ಹಿಡಿತ ಸಾಧಿಸಿರುವುದು ಕಂಡುಬಂದಿದೆ. ಇದಕ್ಕೆ ಪೂರಕ ಎಂಬಂತೆ ಮಾಲ್ದೀವ್ಸ್​ನ ನೂತನ ಉಪಾಧ್ಯಕ್ಷ ಹುಸೇನ್ ಮೊಹಮದ್ ಲತೀಫ್ ಕಳೆದ ತಿಂಗಳಲ್ಲಿ ಚೀನಾಗೆ ಭೇಟಿ ನೀಡಿದ್ದಲ್ಲದೆ, ಚೀನಾ ಪ್ರಾಯೋಜಿತ ಚೀನಾ-ಭಾರತ ಮಹಾಸಾಗರ ವಲಯದ ವೇದಿಕೆಯ ಸಭೆಯಲ್ಲಿ ಭಾಗಿಯಾಗಿದ್ದರು.
ಸಿಡಿದೆದ್ದ ನಟರು-ಕ್ರಿಕೆಟಿಗರುಬಾಲಿವುಡ್, ಕ್ರಿಕೆಟ್, ಮಾಧ್ಯಮ ಕ್ಷೇತ್ರಗಳವರಲ್ಲದೆ ಇತರ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರೂ ಸೋಷಿಯಲ್ ಮೀಡಿಯಾದಲ್ಲಿ ಮಾಲ್ದೀವ್ಸ್ ನಡೆ ವಿರೋಧಿಸಿ ಮತ್ತು ಭಾರತದ ಹಿರಿಮೆಯನ್ನು ಹೊಗಳಿ ಪೋಸ್ಟ್ ಮಾಡಿಕೊಂಡು ದೇಶಾಭಿಮಾನ ಮೆರೆದಿದ್ದಾರೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸಿಂಧುದುರ್ಗದ ಕರಾವಳಿ ತೀರದಲ್ಲಿ ತಮ್ಮ 50ನೇ ಜನ್ಮದಿನ ಆಚರಿಸಿಕೊಂಡಿದ್ದ ದೃಶ್ಯಗಳನ್ನು ಹಂಚಿಕೊಂಡಿದ್ದಲ್ಲದೆ, ಕರಾವಳಿ ಪಟ್ಟಣ ನಾವು ಬಯಸಿದ್ದೆಲ್ಲವನ್ನೂ ಮತ್ತು ಅದಕ್ಕೂ ಹೆಚ್ಚಿನದ್ದನ್ನು ನೀಡಿದೆ. ಸುಂದರವಾದ ಸ್ಥಳ, ಅದ್ಭುತ ಆತಿಥ್ಯ ನಮ್ಮ ನೆನಪುಗಳ ಖಜಾನೆಯಲ್ಲಿ ಉಳಿದಿವೆ ಎಂದಿದ್ದಾರೆ. ಮಾಲ್ದೀವ್ಸ್​ನ ಪ್ರಮುಖ ವ್ಯಕ್ತಿಗಳು ಭಾರತದ ಬಗ್ಗೆ ದ್ವೇಷ ಹಾಗೂ ಜನಾಂಗೀಯ ನಿಂದನೆಯ ಹೇಳಿಕೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂತು. ಮಾಲ್ದೀವ್ಸ್​ಗೆ ಅತಿ ಹೆಚ್ಚು ಪ್ರವಾಸಿಗರನ್ನು ಕಳುಹಿಸುವ ಭಾರತದ ಬಗ್ಗೆಯೇ ಅವರು ಈ ರೀತಿ ಸಂದೇಶ ರವಾನಿಸದ್ದು ಬೇಸರ ಮೂಡಿಸಿತು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಟರಾದ ಸಲ್ಮಾನ್ ಖಾನ್, ಜಾನ್ ಅಬ್ರಹಾಂ, ನಟಿ ಶ್ರದ್ಧಾ ಕಪೂರ್, ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಈ ವಿಷಯದಲ್ಲಿ ಭಾರತವನ್ನು ಬೆಂಬಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 18 =
Remember me
