ಬೆಂಗಳೂರು:ಮಲ್ಲಿಕಾರ್ಜುನ ಖರ್ಗೆ ಬೆಂಕಿಯಲ್ಲಿ ಅರಳಿದವರು. ಚಿಕ್ಕ ಮಗುವಿದ್ದಾಗಲೇ ತಮ್ಮ ಕುಟುಂಬದ ಗುಡಿಸಲು ರಜಾಕಾರರ ದ್ವೇಷದ ಜ್ವಾಲೆಗೆ ಆಹುತಿಯಾದ ಪರಿಣಾಮ ನೋವಿನಲ್ಲಿ ಬೆಳೆದು ಬಂದವರು. ಪಕ್ಷ ನಿಷ್ಠೆಯಿಂದಾಗಿ ದೊಡ್ಡ ಹುದ್ದೆಗೆ ತಲುಪಿದ್ದಾರೆ.
ಕಲಬುರಗಿಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಬಂದವರು ಖರ್ಗೆ. ಆನಂತರ ಕಾರ್ವಿುಕ ನಾಯಕರಾಗಿ ದುಡಿಯುವ ವರ್ಗಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಡಿ. ದೇವರಾಜ ಅರಸು ಯುವಕರನ್ನು ಗುರುತಿಸಿ ರಾಜಕೀಯಕ್ಕೆ ಕರೆತಂದವರಲ್ಲಿ ಖರ್ಗೆ ಸಹ ಒಬ್ಬರು. ಅರಸು ಗರಡಿಯಲ್ಲಿ ಬೆಳೆದು ಬಂದ ಖರ್ಗೆ, ಅಂಬೇಡ್ಕರ್ ಅವರ ತತ್ವ-ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಂಡು ಸದಾ ಬಡವರು ಹಾಗೂ ಶೋಷಿತರ ಪರ ದನಿ ಎತ್ತಿದವರು. ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತರಾದ ಅವರು, ಹೈಕಮಾಂಡ್ ನಿರ್ಧಾರಕ್ಕೆ ಎಂದೂ ಎದುರಾಡಿದವರಲ್ಲ. ಗಾಂಧಿ ಕುಟುಂಬದ ನಿಷ್ಠಾವಂತರೂ ಹೌದು. ತಮಗೆ ಸಿಕ್ಕ ಅವಕಾಶಗಳಲ್ಲಿ ಪರಿಶಿಷ್ಟರು, ಬಡವರ ಪರ ಕೆಲಸ ಮಾಡಿಕೊಂಡು ಬಂದ ಖರ್ಗೆ ಬುದ್ಧನ ಅನುಯಾಯಿ. ಅದರಿಂದಾಗಿಯೇ ಕಲಬುರಗಿಯಲ್ಲಿ ಸಿದ್ದಾರ್ಥ ವಿಹಾರ ಧಾಮ ಟ್ರಸ್ಟ್ ಮೂಲಕ ಬುದ್ಧ ವಿಹಾರ ನಿರ್ಮಾಣ ಮಾಡಿದ್ದಾರೆ. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ.
ಹೈ-ಕಗೆ ವಿಶೇಷ ಸ್ಥಾನಮಾನ:ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ 371 (ಜೆ) ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ತಂದಿದ್ದು ಖರ್ಗೆ ಅವರ ದೊಡ್ಡ ಸಾಧನೆ. ಅದರಿಂದ ಆ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ ಸಿಕ್ಕಿದ್ದು ಮಾತ್ರವಲ್ಲದೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಯೂ ಸಿಕ್ಕಿತು.
ಕ್ರಿಕೆಟ್ ಪ್ರಿಯ:ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಯಾವುದೇ ಮ್ಯಾಚ್​ಗಳನ್ನು ಎಂದಿಗೂ ತಪ್ಪಿಸಿಕೊಂಡವರಲ್ಲ. ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಲ್ಲಿದ್ದಾಗ ಸಹ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದರೆ ತಮ್ಮ ಆಪ್ತ ಸಿಬ್ಬಂದಿ ಮೂಲಕ ಸ್ಕೋರ್​ಗಳನ್ನು ಕೇಳಿ ತಿಳಿಯುತ್ತಿದ್ದದ್ದು ಅವರ ವಿಶೇಷ. ಕ್ರಿಕೆಟ್ ಜತೆಗೆ ಹಾಕಿ ಹಾಗೂ ಕಬ್ಬಡಿ ಬಗ್ಗೆಯೂ ಅಷ್ಟೇ ಆಸಕ್ತಿ.
ಪತ್ನಿ, ಪರಿವಾರದ ಸಾಥ್:ಖರ್ಗೆ ಅವರ ರಾಜಕೀಯ ಯಶೋಗಾಥೆ ಹಿಂದೆ ಪತ್ನಿ ರಾಧಾಬಾಯಿ ಹಾಗೂ ಪರಿವಾರದವರ ಸಾಥ್ ಪ್ರಮುಖವಿದೆ. 1968ರ ಮೇ 13ರಂದು ಖರ್ಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ದೊಡ್ಮನೆ ಕುಟುಂಬದ ರಾಧಾಬಾಯಿ ಜತೆಗೆ ವಿವಾಹವಾದರು. ರಾಹುಲ್, ಪ್ರಿಯಾಂಕ್, ಮಿಲಿಂದ್, ಜಯಶ್ರೀ, ಪ್ರಿಯದರ್ಶಿನಿ ಮಕ್ಕಳು. ನಾನಾ ಕೆಲಸಕಾರ್ಯ ನಿಮಿತ್ತ ಖರ್ಗೆ ಮನೆ ಬಿಟ್ಟು ಸುತ್ತಾಟ ಮಾಡುತ್ತಿದ್ದರು. ಈ ಸ್ಥಿತಿಯಲ್ಲಿ ಪತ್ನಿ ರಾಧಾಬಾಯಿ ಪತಿಯ ಕೆಲಸಕ್ಕೆ ಬೆಂಬಲಿಸುವ ಜತೆ ಜತೆಯಲ್ಲೇ ಎಲ್ಲ ಮಕ್ಕಳನ್ನು ಚೆನ್ನಾಗಿ ಓದಿಸಿ, ಸುಂಸ್ಕೃತರಾಗಿಸಿ ಬೆಳೆಸಿದರು. ಇಬ್ಬರೂ ಪುತ್ರಿಯರು ವೈದ್ಯರಿದ್ದಾರೆ. ದೊಡ್ಡ ಮಗ ರಾಹುಲ್ ಕಲಬುರಗಿ ಬುದ್ಧವಿಹಾರ ಟ್ರಸ್ಟ್ ಅಧ್ಯಕ್ಷರು. ಎರಡನೇ ಮಗ ಪ್ರಿಯಾಂಕ್ ಶಾಸಕ. ಮಿಲಿಂದ್ ಪುಣೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕುಟುಂಬದಲ್ಲಿ ಪ್ರಿಯಾಂಕ್ ಮಾತ್ರ ರಾಜಕೀಯಕ್ಕೆ ಬಂದಿದ್ದಾರೆ. ಖರ್ಗೆ ಯಶಸ್ಸಿನಲ್ಲಿ ಅರ್ಧಾಂಗಿನಿ ರಾಧಾಬಾಯಿ ಪಾತ್ರ ಅರ್ಧಕ್ಕೂ ಹೆಚ್ಚು. ಹೀಗಂತ ಅನೇಕ ಸಂದರ್ಭಗಳಲ್ಲಿ ಸ್ವತಃ ಖರ್ಗೆ ಹೇಳಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾರ್ದಿಕ ಅಭಿನಂದನೆಗಳು. ರಾಷ್ಟ್ರೀಯ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಇದು ಕಾಂಗ್ರೆಸ್​ನ ಆಂತರಿಕ ಪ್ರಜಾಪ್ರಭುತ್ವದ ಗೆಲುವು. ಖರ್ಗೆ ಅವರಿಗಿರುವ ಪಕ್ಷದ ಸಂಘಟನೆ ಮತ್ತು ಶಾಸಕಾಂಗದ ಸುದೀರ್ಘ ಅನುಭವವು ಪಕ್ಷ ಮತ್ತು ನಮ್ಮ ಕಾರ್ಯಕರ್ತರನ್ನು ಬಲಪಡಿಸುವಲ್ಲಿ ನಿಜವಾಗಿಯೂ ಪ್ರತಿಫಲದಾಯಕವಾಗಿರುತ್ತದೆ.
|ರಣದೀಪ್ ಸಿಂಗ್ ಸುರ್ಜೆವಾಲಕಾಂಗ್ರೆಸ್ ರಾಜ್ಯ ಉಸ್ತುವಾರಿ
ಪ್ರತಿಭೆ ಮತ್ತು ಅನುಭವವನ್ನು ಮೈಗೂಡಿಸಿಕೊಂಡ ಖರ್ಗೆ ಅವರಿಗೆ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ಖರ್ಗೆ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ ಸಂಗತಿ.
|ಸಿದ್ದರಾಮಯ್ಯವಿಧಾನಸಭೆ ವಿರೋಧ ಪಕ್ಷದ ನಾಯಕ
ಖರ್ಗೆ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೇರಲಿದೆ ಎನ್ನುವ ವಿಶ್ವಾಸವಿದೆ. ಅವರು ಅಧ್ಯಕ್ಷರಾಗಿರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಶಕ್ತಿ ಬರುತ್ತದೆ. ಜತೆಗೆ ರಾಷ್ಟ್ರಕ್ಕೆ ದೊಡ್ಡ ಸಂದೇಶ ರವಾನೆಯಾಗಿದೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಕಂಡ ರಾಜಕೀಯ ಭೀಷ್ಮ. ಕಲ್ಯಾಣ ಕರ್ನಾಟಕದ ಧ್ರುವತಾರೆ. ದೇಶದ ಆಡಳಿತ ಪಕ್ಷದ ಜನವಿರೋಧಿ ನೀತಿಗಳನ್ನು ಖಡಾಖಂಡಿತವಾಗಿ ಖಂಡಿಸಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ರಾಜಕಾರಣದ ಗಾರುಡಿಗ. ಅಪ್ರತಿಮ ಸಂಸದೀಯ ಪಟು ಆಗಿರುವ ಖರ್ಗೆ ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ನನಗೆ ಅತೀವ ಸಂತಸ ತಂದಿದೆ. ಅವರ ನೇತೃತ್ವದಲ್ಲಿ ಪಕ್ಷ ಇನ್ನೂ ಎತ್ತರಕ್ಕೆ ಬೆಳೆಯಲಿ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
|ಎಸ್. ಆರ್ ಪಾಟೀಲ್ಮಾಜಿ ಸಚಿವರು
ಎಐಸಿಸಿಗೆ ರಾಜ್ಯದಿಂದ ಅಧ್ಯಕ್ಷರಾಗುತ್ತಿರುವ ಎರಡನೇಯವರು ಮಲ್ಲಿಕಾರ್ಜುನ ಖರ್ಗೆ. ದಕ್ಷಿಣದ ರಾಜ್ಯಗಳಿಂದ ಇದುವರೆಗೂ ಒಂಬತ್ತು ಮಂದಿ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದು, ಖರ್ಗೆ 10ನೇಯವರಾಗಿದ್ದಾರೆ. ಎಸ್. ನಿಜಲಿಂಗಪ್ಪ ಅವರು 1968ರಿಂದ 1969ರ ತನಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಹಾಗೂ ಆನಂತರ ಈ ಹುದ್ದೆಗೆ ರಾಜ್ಯದಿಂದ ಯಾರೊಬ್ಬರೂ ಆಯ್ಕೆಯಾಗಿರಲಿಲ್ಲ. ದಕ್ಷಿಣದ ರಾಜ್ಯಗಳಿಂದ ಪಾನಪಕ್ಕಂ ಆನಂದಚಾರ್ಲು ( 1891) ಈ ಹುದ್ದೆ ಅಲಂಕರಿಸಿದ ಮೊದಲಿಗರು. ಆಬಳಿಕ ಸಿ.ಶಂಕರನ್​ನಾಯರ್ (1897), ಸಿ. ವಿಜಯರಾಘವನ್ (1920), ಶ್ರೀನಿವಾಸ ಐಯ್ಯಂಗಾರ್ (1926), ನೀಲಂ ಸಂಜೀವರೆಡ್ಡಿ (1960-62), ಕೆ. ಕಾಮರಾಜ್ (1964-66), ಎಸ್.ನಿಜಲಿಂಗಪ್ಪ (1968-69), ಕಾಪು ಬ್ರಹ್ಮಾನಂದರೆಡ್ಡಿ (1977), ಪಿ.ವಿ. ನರಸಿಂಹರಾವ್ (1992-94) ಹಾಗೂ ಮಲ್ಲಿಕಾರ್ಜುನ ಖರ್ಗೆ (2022).
ಆದೋನಿ(ಆಂಧ್ರಪ್ರದೇಶ):ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಅರ್ಧ ಗಂಟೆ ಮೊದಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೂತನ ಕಾಂಗ್ರೆಸ್ ಅಧ್ಯಕ್ಷ ಎಂದು ಉಲ್ಲೇಖಿಸಿದರು! ಆಂಧ್ರಪ್ರದೇಶದ ಕುರ್ನಲ್​ನಲ್ಲಿ ಭಾರತ್ ಜೋಡೊ ಯಾತ್ರೆ ಸಂದರ್ಭ ಫಲಿತಾಂಶ ಪ್ರಕಟವಾಗುವ ಅರ್ಧಗಂಟೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಹುಲ್, ಪಕ್ಷದಲ್ಲಿ ನನ್ನ ಪಾತ್ರವೇನೆಂಬುದನ್ನು ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಂತರ ಖರ್ಗೆ ಜೀ ಮತ್ತು ಸೋನಿಯಾ ಜೀ ಅವರನ್ನು ಕೇಳಿ ಎಂದು ಹೇಳಿದರು. ಪಕ್ಷದ ಸಂಘಟನೆ, ನೂತನ ಯೋಜನೆಗಳ ಕುರಿತು ನೂತನ ಅಧ್ಯಕ್ಷರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 11 =
Remember me
