ನವದೆಹಲಿ:ಏಳಕ್ಕೆ ಏಳೂ ಕರೊನಾ ವೈರಸ್ ಸೋಂಕಿತರು ಗುಣಮುಖ ರಾಗುವುದರೊಂದಿಗೆ ಗೋವಾ ಈಗ ಕರೊನಾಮುಕ್ತ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಪ್ರವಾಸಿಗರಿಂದಲೇ ತುಂಬಿಕೊಂಡಿರುವ ಗೋವಾದಲ್ಲಿ ವೈರಾಣು ಹರಡುವಿಕೆ ವ್ಯಾಪಕ ಪ್ರಮಾಣದಲ್ಲಿ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಗಡಿ ಭಾಗಗಳನ್ನು ಸಕಾಲದಲ್ಲಿ ಮುಚ್ಚಿ, ವಿದೇಶಿ ಪ್ರವಾಸಿಗರನ್ನು ಕ್ವಾರಂಟೈನ್​ನಲ್ಲಿಡುವ ಮೂಲಕ ಕರೊನಾ ಹರಡುವಿಕೆಯನ್ನು ಸರ್ಕಾರ ನಿಯಂತ್ರಿಸಿದೆ. ಸಹಜವಾಗಿಯೇ ಸಿಎಂ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರಕ್ಕಿದು ಹೆಮ್ಮೆಯ ವಿಷಯ. ರಾಜ್ಯದಲ್ಲಿ ಮೊದಲ ಕೇಸು ಪತ್ತೆಯಾಗಿದ್ದು ಮಾರ್ಚ್ 25ರಂದು. ರಾಜ್ಯದಲ್ಲಿ ಲಾಕ್​ಡೌನ್ ಘೊಷಣೆಯಾದ ಮಾರನೇ ದಿನವೇ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢವಾದ ಸುದ್ದಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಏಳು ಸೋಂಕಿತರಲ್ಲಿ 6 ಮಂದಿಗೆ ವಿದೇಶ ಪ್ರವಾಸದ ಹಿನ್ನೆಲೆಯಿತ್ತು. ಓರ್ವ ವ್ಯಕ್ತಿ ವಿದೇಶ ಪ್ರವಾಸ ಮುಗಿಸಿ ಬಂದವರೊಬ್ಬರ ಸಹೋದರ. ಪ್ರಾಥಮಿಕ ಸಂಪರ್ಕದಿಂದ ಅವರಿಗೆ ಸೋಂಕು ತಗುಲಿತ್ತು. ರಾಜ್ಯದಲ್ಲೀಗ ಸೋಂಕಿತರಿಲ್ಲದಿದ್ದರೂ, ಮೇ 3ರ ತನಕ ಲಾಕ್​ಡೌನ್ ಮುಂದುವರಿಯಲಿದೆ. ಕೆಲ ಪ್ರದೇಶಗಳಲ್ಲಿ ನಿಯಮ ಸಡಿಲಿಸಲಾಗಿದೆ. ಮುಂದಿನ ದಿನಗಳಲ್ಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಘೊಷಿಸಿದೆ. ದೈಹಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ. ಏತನ್ಮಧ್ಯೆ, ಹಸಿರು ವಲಯದಲ್ಲಿರುವ ಕೆಲವು ಶಂಕಿತರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ವೈದ್ಯ ಗೋಮ್ಸ್​ಗೆ ಮೆಚ್ಚುಗೆ:ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕರೊನಾ ಚಿಕಿತ್ಸೆ ಉಸ್ತುವಾರಿ ಹೊತ್ತಿರುವ ನೋಡಲ್ ಅಧಿಕಾರಿ ಡಾ. ಎಡ್ವಿನ್ ಗೋಮ್್ಸ ಪಾತ್ರಕ್ಕೆ ಆರೋಗ್ಯ ಸಚಿವರು ಸೇರಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಹಂತದಲ್ಲಿ ಕರೊನಾ ಬಿಕ್ಕಟ್ಟು ಎದುರಿಸಲು ಗೋವಾ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸನಿಹದಲ್ಲಿರುವ ಗೋವಾಕ್ಕೆ ಕರೊನಾ ಹರಡುವ ಎಲ್ಲ ಸಾಧ್ಯತೆಗಳಿದ್ದವು. ಆದರೆ, ಗೋಮ್್ಸ ನೇತೃತ್ವದ ವೈದ್ಯರ ತಂಡ ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಿತು. ರಾಜ್ಯದ ಏಕೈಕ ಮೆಡಿಕಲ್ ಕಾಲೇಜನ್ನು ಕೋವಿಡ್-19 ಚಿಕಿತ್ಸೆಗೆಂದೇ ಮೀಸಲಿಡಲಾಯಿತು. ‘ಡಾ. ಎಡ್ವಿನ್ ಕೇವಲ ಚಿಕಿತ್ಸೆ ನೀಡಿದ್ದಲ್ಲ. ನನ್ನಲ್ಲಿ ಧೈರ್ಯ ತುಂಬಿದರು. ಆತ್ಮವಿಶ್ವಾಸ ಹೆಚ್ಚಿಸಿದರು. ನಾನು ಆಂಕ್ಸೈಟಿ ಕಡಿಮೆಯಾಗಲು ಮಾತ್ರೆ ತೆಗೆದುಕೊಳ್ಳುತ್ತಿದೆ. ಒಂದೊಮ್ಮೆ ಅತೀವ ಒತ್ತಡದಲ್ಲಿದ್ದ ಅವರೂ ನನ್ನೊಂದಿಗೆ ಮಾತ್ರೆ ಸೇವಿಸಿದ್ದರು. ನನ್ನೆಲ್ಲಾ ಚಿಂತೆಗಳನ್ನು ದೂರ ಮಾಡಿದ ಗೋಮ್ಸ್​ರನ್ನು ಎಂದಿಗೂ ಮರೆಯಲಾರೆ’ ಎನ್ನುವುದು ಕರೊನಾದಿಂದ ಹೊರಬಂದ ರೆಮೆಡಿಯೋಸ್ ಎಂಬವರ ಅಭಿಪ್ರಾಯ.
ಹಡಗಿನಿಂದ ಬಂದವರು:ಏಳೂ ಸೋಂಕಿತರು ಹಡಗಿನ ಮೂಲಕ ಗೋವಾಕ್ಕೆ ಬಂದವರಾಗಿದ್ದರು. ಓರ್ವ ವ್ಯಕ್ತಿ ಅಮೆರಿಕದಿಂದ ಮುಂಬೈಗೆ ಬಂದು, ಅಲ್ಲಿಂದ ಹಡಗಿನ ಮೂಲಕ ಗೋವಾಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿದ್ದಂತೆ ಬಂದರುಗಳಲ್ಲಿಯೂ ವಿದೇಶಿಗರನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ವಿಶೇಷ ಎಂದರೆ ಯಾವ ರೋಗಿ ಕೂಡ ಗಂಭೀರ ಅನಾರೋಗ್ಯದ ಮಟ್ಟಕ್ಕೆ ಹೋಗಿರಲಿಲ್ಲ. ಹೀಗಾಗಿ, ಅವರನ್ನು ವೆಂಟಿಲೇಟರ್​ಗೆ ಹಾಕುವ ಸನ್ನಿವೇಶ ಸೃಷ್ಟಿಯಾಗಲಿಲ್ಲ ಎಂದು ವಿಶ್ವಜಿತ್ ರಾಣೆ ಮಾಹಿತಿ ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ಮುಂದಿನ ಆರೇಳು ತಿಂಗಳ ಮಟ್ಟಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಪುನರಾರಂಭ ಸಾಧ್ಯವಿಲ್ಲ ಎಂದೂ ಸರ್ಕಾರ ತಿಳಿಸಿದೆ.
ಮಣಿಪುರ ನಿರಾಳ:ಗೋವಾ ಬಳಿಕ ಮಣಿಪುರ ಕರೊನಾಮುಕ್ತ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರೊನಾ ಸೋಂಕಿತ ಎರಡನೇ ವ್ಯಕ್ತಿಯೂ ಎರಡು ದಿನಗಳ ಹಿಂದೆ ಗುಣಮುಖರಾಗುವ ಮೂಲಕ ರಾಜ್ಯ ಸರ್ಕಾರವೂ ನಿರಾಳವಾಗಿದೆ. 23 ವರ್ಷದ ಯುವತಿ ಮತ್ತು 65 ವರ್ಷದ ವೃದ್ಧರಿಗೆ ಸೋಂಕು ತಗುಲಿತ್ತು. ಬ್ರಿಟನ್​ನಿಂದ ವಾಪಸಾಗಿದ್ದ ಯುವತಿಗೆ ಕರೊನಾ ಲಕ್ಷಣಗಳು ಕಂಡುಬಂದಿದ್ದವು ಮತ್ತು ಪರೀಕ್ಷೆಗೊಳಪಟ್ಟ ನಂತರ ಸೋಂಕಿರುವುದು ದೃಢವಾಗಿತ್ತು. ಸದರಿ ವೃದ್ಧ ದೆಹಲಿಯ ನಿಜಾಮುದ್ದಿನ್ ಮರ್ಕಜ್​ನಲ್ಲಿ ನಡೆದಿದ್ದ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಸೋಂಕು ತಗುಲಿಸಿಕೊಂಡಿದ್ದರು ಈ ನಡುವೆ ಭಾರತ-ಮ್ಯಾನ್ಮಾರ್ ಗಡಿ ಭಾಗದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದ್ದು, ವಿದೇಶಿಗರು ದೇಶದೊಳಕ್ಕೆ ನುಸುಳದಂತೆ ಎಚ್ಚರ ವಹಿಸಲಾಗಿದೆ.
ತ್ರಿಪುರಾದಲ್ಲೂ ನೆಮ್ಮದಿ:ಈಶಾನ್ಯ ಭಾರತದ ತ್ರಿಪುರಾ ಕರೊನಾಮುಕ್ತ ದೇಶದ ಮೂರನೇ ರಾಜ್ಯ. ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರು ಗುರುವಾರ ಈ ಘೊಷಣೆ ಮಾಡಿದ್ದಾರೆ. ಲಾಕ್​ಡೌನ್​ಗೆ ಮುನ್ನ ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣಕ್ಕೆ ವಾಪಸಾಗಿದ್ದ 45 ವರ್ಷದ ಮಹಿಳೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಇದು ತ್ರಿಪುರದ ಮೊದಲ ಕರೊನಾ ಪ್ರಕರಣ. ನಂತರ ಮಧ್ಯಪ್ರದೇಶ ಮೂಲದ ತ್ರಿಪುರಾ ಸ್ಟೇಟ್ ರೈಫಲ್ಸ್​ನ 13ನೇ ಬೆಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇನಾ ಸಿಬ್ಬಂದಿಗೆ ಏಪ್ರಿಲ್ 10ರಂದು ಕರೊನಾ ಸೋಂಕಿರುವುದು ದೃಢವಾಗಿತ್ತು. ಈಗ ಇಬ್ಬರೂ ಸೋಂಕಿನಿಂದ ಹೊರಬಂದಿದ್ದಾರೆ. ಈ ಮಧ್ಯೆ, 111 ಕರೊನಾ ಶಂಕಿತರ ಮೇಲೆ ನಿಗಾ ವಹಿಸಲಾಗಿದ್ದು, 227 ಮಂದಿಯನ್ನು ದಿಗ್ಬಂಧನದಲ್ಲಿರಿಸಲಾಗಿದೆ. ಕರೊನಾ ವೈರಸ್ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಮಿತವಾಗಿ ವಿದ್ಯುತ್ ಹಾಗೂ ದೂರವಾಣಿ ಬಳಕೆ ಮಾಡಬೇಕು ಹಾಗೂ ಅನುಮತಿ ಇದ್ದರೆ ಮಾತ್ರ ಏರ್ ಕಂಡಿಷನರ್ ಬಳಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ತನಕ ಯಾವುದೇ ಭೂಸ್ವಾಧೀನ ಚಟುವಟಿಕೆಗೆ ಸರ್ಕಾರಿ ಹಣವನ್ನು ಬಳಸುವಂತಿಲ್ಲ. ತನ್ನ ಬಹುತೇಕ ಖರೀದಿಗಳಿಗೆ ಸರ್ಕಾರ ಇ-ಮಾರುಕಟ್ಟೆಯನ್ನು ಅವಲಂಬಿಸಲಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಸಂಬಂಧ ಇಲಾಖೆಗಳಿಗೆ ನೀಡಲಾಗಿರುವ ಬಜೆಟ್ ಅನ್ನು ಸಮರ್ಪಕವಾಗಿ ಬಳಸಬೇಕು ಮತ್ತು ಯಾವುದೇ ಬಾಹ್ಯ ಒತ್ತಡಕ್ಕೆ ಒಳಗಾಗಬಾರದು ಎಂದು ಶುಕ್ರವಾರದ ಸಚಿವ ಸಂಪುಟ ಸಭೆ ಬಳಿಕ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
