ನವದೆಹಲಿ:ಮಣಿಪುರ ಹಿಂಸಾಚಾರ ಮತ್ತು ಅವಿಶ್ವಾಸ ಗೊತ್ತುವಳಿ ವಿಷಯಗಳು ಮಳೆಗಾಲದ ಸಂಸತ್ ಅಧಿವೇಶನದ ಸಮಯವನ್ನು ಬಹುತೇಕ ಆಪೋಷನ ತೆಗೆದುಕೊಂಡಿವೆ. ಮೊದಲ ದಿನದಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, ಶುಕ್ರವಾರ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ, ಅವಿಶ್ವಾಸಮತ ಕುರಿತ ಗದ್ದಲದ ನಡುವೆಯೇ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಮಣಿಪುರದ ಹಿಂಸಾಚಾರ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಮತ್ತು ಈಶಾನ್ಯ ರಾಜ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದು, ಮುಂದಿನ ವಾರ ಮಂಡನೆಯಾಗಲಿರುವ ದೆಹಲಿ ಆಡಳಿತ ನಿಯಂತ್ರಣ ಕುರಿತ ಮಸೂದೆಯು ಮತ್ತಷ್ಟು ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಅವಿಶ್ವಾಸಮತ ಗೊತ್ತುವಳಿ ನೋಟಿಸ್ ಅಂಗೀಕಾರವಾಗಿದ್ದರೂ, ಮಸೂದೆಗಳನ್ನು ಅಂಗೀಕಾರ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿದರು. ಮಧ್ಯಾಹ್ನ ಸದನ ಸೇರುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿದ್ದ ರಾಜೇಂದ್ರ ಅಗರವಾಲ್ ಅವರು ಗಣಿ ಮತ್ತು ಖನಿಜ ತಿದ್ದುಪಡಿ ವಿಧೇಯಕವನ್ನು ಪರಿಗಣನೆಗೆ ತೆಗೆದುಕೊಂಡರು. ಗದ್ದಲದ ನಡುವೆಯೇ ಮಸೂದೆ ಅಂಗೀಕಾರವಾಯಿತು. ರಾಷ್ಟ್ರೀಯ ನರ್ಸಿಂಗ್ ಆಯೋಗದ ಮಸೂದೆ-2023 ಮತ್ತು ರಾಷ್ಟ್ರೀಯ ದಂತ ಆಯೋಗದ ಮಸೂದೆ-2023 ಅನ್ನು ಲೋಕಸಭೆ ಅಂಗೀಕರಿಸಿತು. ವಿರೋಧ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು, ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಪಕ್ಷ ಸಂಸದರಿಗೆ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು. ಸದನದ ಕಲಾಪಕ್ಕೆ ಅವಕಾಶ ಬೇಡವೇ? ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸುವ ಸಮಯ ಬಹಳ ಮುಖ್ಯ ಎಂದರು. ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ ತಕ್ಷಣವೇ ಚರ್ಚೆ ಆರಂಭಿಸಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಒತ್ತಾಯಿಸಿದರು.
ಚೌಧರಿ ಹೇಳಿಕೆಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಎಲ್ಲವೂ ನಿಯಮಗಳ ಪ್ರಕಾರ ನಡೆಯುತ್ತಿದೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು 10 ದಿನಗಳಲ್ಲಿ ಪ್ರಾರಂಭಿಸಬಹುದು. ನಿಮ್ಮ ಬಳಿ ಸಂಖ್ಯಾಬಲ ಇದ್ದರೆ ಮಸೂದೆಗಳನ್ನು ಸೋಲಿಸಿ ಎಂದು ಸವಾಲು ಹಾಕಿದರು.
ಇದು ರಂಗಭೂಮಿ ಅಲ್ಲ. ಸಭಾಧ್ಯಕ್ಷ ಸ್ಥಾನಕ್ಕೆ ಗೌರವ ನೀಡುವುದು ಸಂಸದರ ಕರ್ತವ್ಯ. ನಾನು ಏನನ್ನಾದರೂ ಹೇಳುತ್ತಿದ್ದರೆ, ನೀವು ಎದ್ದು ಡ್ರಾಮಾ ಮಾಡುತ್ತೀರಿ.
| ಜಗದೀಪ್ ಧನಕರ್, ರಾಜ್ಯಸಭೆ ಅಧ್ಯಕ್ಷ
ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್​ಗೆ ಪ್ರಾಧಿಕಾರ ರಚಿಸುವಂತೆ ಹೊರಡಿಸಲಾದ ಸುಗ್ರೀವಾಜ್ಞೆಯ ಮಸೂದೆ ಮುಂದಿನ ವಾರ ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಶುಕ್ರವಾರ ಹೇಳಿದ್ದಾರೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ತಿದ್ದುಪಡಿ) ಮಸೂದೆಯನ್ನು ಸದನದಲ್ಲಿ ಮಂಡಿಸುದಾಗ ವಿರೋಧ ಪಕ್ಷದ ನಾಯಕರು ಸಲ್ಲಿಸಿದ ಹಲವಾರು ಸೂಚನೆಗಳನ್ನು ಸಹ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್​ನ ಅಧೀರ್ ರಂಜನ್ ಚೌಧರಿ, ಟಿಎಂಸಿಯ ಸೌಗತ ರಾಯ್ ಮತ್ತು ಡಿಎಂಕೆಯ ಎ. ರಾಜಾ, ಎನ್.ಕೆ. ಪ್ರೇಮಚಂದ್ರನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಸಲ್ಲಿಸಿದ ನೋಟಿಸ್​ಗಳನ್ನು ಲೋಕಸಭೆ ಸಚಿವಾಲಯ ಒಪ್ಪಿಕೊಂಡಿದೆ. ದೆಹಲಿಯಲ್ಲಿ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿ ಹೊರತುಪಡಿಸಿ ಉಳಿದ ಸೇವೆಗಳ ನಿಯಂತ್ರಣವನ್ನು ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಸ್ತಾಂತರಿಸಿತ್ತು. ಇದಾದ ಒಂದು ವಾರದ ನಂತರ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಮೊದಲು ದೆಹಲಿ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್​ಗಳು ಲೆಫ್ಟಿನೆಂಟ್ ಗವರ್ನರ್ ಅವರ ನಿಯಂತ್ರಣದಲ್ಲಿತ್ತು. ಈ ಮಸೂದೆಗೆ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಕೂಡ ವಿರೋಧ ವ್ಯಕ್ತಪಡಿಸಿದ್ದು, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಮಿತ್ರ ಪಕ್ಷಗಳ ಬೆಂಬಲ ಇದ್ದು, ರಾಜ್ಯಸಭೆಯಲ್ಲಿ ಈ ಮಸೂದೆ ಸಲೀಸಾಗಿ ಅಂಗೀಕಾರ ಪಡೆಯಲಿದೆ ಎನ್ನಲಾಗಿದೆ.
ರಾಜ್ಯಸಭೆಯಲ್ಲಿ ಟಿಎಂಸಿ ನಾಯಕ ಡೆರೆಕ್ ಒಬ್ರೀಯಾನ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ನಡುವೆ ವಾಗ್ವಾದ ನಡೆಯಿತು. ಮಣಿಪುರದ ಪರಿಸ್ಥಿತಿಯನ್ನು ರ್ಚಚಿಸಲು ನಿಯಮ 267ರ ಅಡಿಯಲ್ಲಿ ವಿರೋಧ ಪಕ್ಷದ ಸದಸ್ಯರು ನೀಡಿದ ನೋಟಿಸ್​ಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಒಬ್ರೇಯಾನ್ ಆಕ್ರೋಶ ವ್ಯಕ್ತಪಡಿಸಿದರು. ಮೇಜು ಗುದ್ದಿ ಕಲಾಪಕ್ಕೆ ಅಡ್ಡಿಪಡಿಸಿದರು. ಇಂಥ ನಡವಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ ಧನಕರ್ ಕಲಾಪ ಮುಂದೂಡಿದರು. ‘ಇದು ರಂಗಭೂಮಿ ಅಲ್ಲ. ಸಭಾಧ್ಯಕ್ಷ ಸ್ಥಾನಕ್ಕೆ ಗೌರವ ನೀಡುವುದು ಸಂಸದರ ಕರ್ತವ್ಯ. ನಾನು ಏನನ್ನಾದರೂ ಹೇಳುತ್ತಿದ್ದರೆ, ನೀವು ಎದ್ದು ಡ್ರಾಮಾ ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎಸ್​ಪಿ, ಎಎಪಿ, ಎನ್​ಸಿಪಿ ಮತ್ತು ಡಿಎಂಕೆ ಸೇರಿ ವಿವಿಧ ಪಕ್ಷಗಳ 47 ಸಂಸದರು ಶುಕ್ರವಾರ ನೋಟಿಸ್ ನೀಡಿ, ಪಟ್ಟಿಮಾಡಿದ ವ್ಯವಹಾರವನ್ನು ಅಮಾನತುಗೊಳಿಸಿ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದ್ದವು. ಇದಕ್ಕೆ ಸಭಾಧ್ಯಕ್ಷ ಧನಕರ್ ಒಪ್ಪದಿರುವುದು ಪ್ರತಿಭಟನೆಗೆ ಕಾರಣವಾಯಿತು.
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಕೃತ್ಯವನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಘಟನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಮಹಿಳೆಯರ ಮೇಲಿನ ಯಾವುದೇ ಅಪರಾಧಗಳ ಬಗ್ಗೆ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಕೇಂದ್ರ ಸರ್ಕಾರವು ಈಗಿನ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.
ಆರೋಪಿಗಳನ್ನು ಬಂಧಿಸಲು ವಿವಿಧ ಸ್ಥಳಗಳಲ್ಲಿ ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ಕೋರ್ಟ್​ಗೆ ಮಾಹಿತಿ ನೀಡಿದೆ.
ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಸುಪ್ರೀಂ ಕೋರ್ಟ್ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ವಿಚಾರಣೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಲು ಪ್ರಕರಣದ ವಿಚಾರಣೆಯನ್ನು ಹೊರ ರಾಜ್ಯಕ್ಕೆ ವರ್ಗಾಯಿಸುವಂತೆ ನ್ಯಾಯಾಲಯವನ್ನು ಕೇಂದ್ರ ಸರ್ಕಾರ ಒತ್ತಾಯಿಸಿದೆ. ಜುಲೈ 20ರಂದು ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದ ಸುಪ್ರೀಂ, ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಹಿಂಸಾಕೃತ್ಯಗಳಿಗೆ ಮಹಿಳೆಯರನ್ನು ಸಾಧನವಾಗಿ ಬಳಸುವುದು ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಹೇಳಿಕೆ ದಾಖಲು:ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆಗೆ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಕುಟುಂಬದ ಸದಸ್ಯರು ಹಾಗೂ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಇದುವರೆಗೆ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಆಗ್ರಹಿಸಿದ್ದಾರೆ. 20 ಸಂಸದರನ್ನು ಒಳಗೊಂಡ ವಿಪಕ್ಷದ ನಿಯೋಗ ಶನಿವಾರ ಮಣಿಪುರಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಕಣಿವೆ ಮತ್ತು ಬೆಟ್ಟ ಪ್ರದೇಶಗಳ ಹಿಂಸಾಪೀಡಿತ ಜನರನ್ನು ನಿಯೋಗ ಭೇಟಿ ಮಾಡಲಿದೆ. ಎರಡು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಿದೆ. ಭಾನುವಾರ ಬೆಳಗ್ಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನೂ ನಿಯೋಗ ಭೇಟಿ ಮಾಡಲಿದೆ. ನಂತರ ದೆಹಲಿಗೆ ವಾಪಸಾಗಿ ವಸ್ತುಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ. ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗುವುದು ಎಂದು ಅವರು ವಿವರಿಸಿದರು.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
