ನ್ಯೂಯಾರ್ಕ್:ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್​ನ ಐತಿಹಾಸಿಕ 100ನೇ ಸಂಚಿಕೆ ಏಪ್ರಿಲ್ 30ರ ಭಾನುವಾರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸ್ಥಳೀಯ ಕಾಲಮಾನ ರಾತ್ರಿ 1.30ಕ್ಕೆ ನೇರವಾಗಿ ಪ್ರಸಾರ ಆಗಲಿದೆ. ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್​ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತದೆ. ಈ ಐತಿಹಾಸಿಕ ಕ್ಷಣಕ್ಕೆ ಸಿದ್ಧರಾಗಿರಿ ಎಂದು ವಿಶ್ವ ಸಂಸ್ಥೆಗೆ ಭಾರತದ ಕಾಯಂ ಮಿಷನ್ ಟ್ವೀಟ್ ಮಾಡಿದೆ.
ನ್ಯೂಯಾರ್ಕ್​ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಮತ್ತು ಭಾರತೀಯ ಸಮುದಾಯದ ಸಂಘಸಂಸ್ಥೆಗಳು ಕೂಡ ಮೋದಿ ಭಾಷಣ ಪ್ರಸಾರಕ್ಕೆ ವ್ಯವಸ್ಥೆ ಮಾಡಿವೆ.
4 ಲಕ್ಷ ಸ್ಥಳದ ಟಾರ್ಗೆಟ್:ವಿದೇಶಗಳಲ್ಲಿ ಸಹಿತ ಒಟ್ಟು ಸುಮಾರು 4 ಲಕ್ಷ ಸ್ಥಳಗಳಲ್ಲಿ ಜನರು ಮನ್ ಕೀ ಬಾತ್​ನ 100ನೇ ಸಂಚಿಕೆಯನ್ನು ಆಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಶನಿವಾರ ತಿಳಿಸಿವೆ. ಇದನ್ನೊಂದು ಐತಿಹಾಸಿಕ ಯಶಸ್ವಿ ಕಾರ್ಯಕ್ರಮವಾಗಿಸಲು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಉಸ್ತುವಾರಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಎಲ್ಲ ರಾಜ್ಯಗಳ ರಾಜಭವನಗಳಲ್ಲಿ, ಬಿಜೆಪಿ ಅಥವಾ ಮಿತ್ರಕೂಟದ ಆಡಳಿತದ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಲ್ಲಿ ಕೂಡ ಗಣ್ಯರು ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ರಾಜ್ಯಗಳ ಪದ್ಮ ಪುರಸ್ಕೃತರಿಗೆ ರಾಜಭವನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಬಿಲ್ ಗೇಟ್ಸ್ ಅಭಿನಂದನೆ:ಮನ್ ಕೀ ಬಾತ್​ನ ಮೈಲಿಗಲ್ಲು ಸಂಚಿಕೆಯ ಪ್ರಸಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅಭಿನಂದಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮವು ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮುಂತಾದ ಸಮುದಾಯ ಆಧಾರಿತ ವಿಷಯಗಳನ್ನು ವೇಗವರ್ಧಕಗೊಳಿಸಿದೆ ಎಂದು ಗೇಟ್ಸ್ ಹೇಳಿದ್ದಾರೆ.
ಗಂಡು ಮಗುವಿಗೆ ಜನನ:ಮನ್ ಕೀ ಬಾತ್ 100ನೇ ಸಂಚಿಕೆ ಪ್ರಯುಕ್ತ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸಿರುವ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ ಸ್ವಸಹಾಯ ಗುಂಪೊಂದರ ಸದಸ್ಯೆ ಪೂನಂ ದೇವಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿದ್ದ ಅವರೊಂದಿಗೆ ಲಖಿಂಪುರ ಖೇರಿಯ ಸ್ವಸಹಾಯ ಗುಂಪಿನ ಕೆಲಸ ಕಾರ್ಯಗಳ ಬಗ್ಗೆ ಪ್ರಧಾನಿ ಮೋದಿ ರ್ಚಚಿಸಿದ್ದರು. ನಂತರ ಹೆರಿಗೆ ನೋವು ಕಾಣಿಸಿಕೊಂಡ ದೇವಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.
ವ್ಯಾಪಕ ಪ್ರಸಾರ:1000ಕ್ಕೂ ಅಧಿಕ ರೇಡಿಯೊ ಸ್ಟೇಶನ್​ಗಳು, ಸಮುದಾಯ ರೇಡಿಯೋಗಳು, ಎಫ್​ಎಂ ಸ್ಟೇಷನ್​ಗಳು, ನಾನಾ ಟಿವಿ ವಾಹಿನಿಗಳು 100ನೇ ಸಂಚಿಕೆಯನ್ನು ಪ್ರಸಾರ ಮಾಡಲಿವೆ.
ಅಂಚೆ ಚೀಟಿ ನಾಣ್ಯ ಬಿಡುಗಡೆ:ಮನ್ ಕೀ ಬಾತ್ 100ನೇ ಸಂಚಿಕೆ ಸ್ಮರಣಾರ್ಥ ಅಂಚೆ ಚೀಟಿ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ.
ದೇಶದ ಜನರಿಗೆ ನೈಜ ಭಾರತವನ್ನು ಪರಿಚಯಿಸುವಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶೇಕಡ 76ರಷ್ಟು ಮಾಧ್ಯಮ ಪ್ರತಿನಿಧಿಗಳು ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಸಮೂಹ ಸಂವಹನ ಸಂಸ್ಥೆ (ಐಐಎಂಸಿ) ನಡೆಸಿದ ವಿಶೇಷ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.
ಸಂಸ್ಥೆಯ ಔಟ್​ರೀಚ್ ವಿಭಾಗ ಏಪ್ರಿಲ್ 12ರಿಂದ 25ರ ನಡುವೆ ಈ ಅಧ್ಯಯನ ನಡೆಸಿತ್ತು ಎಂದು ಐಐಎಂಸಿ ಮಹಾ ನಿರ್ದೇಶಕ ಸಂಜಯ್ ದ್ವಿವೇದಿ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು (ಪತ್ರಕರ್ತರು), ಮಾಧ್ಯಮ ಬೋಧಕರು, ಮಾಧ್ಯಮ ಸಂಶೋಧಕರು ಮತ್ತು ಮಾಧ್ಯಮ ವಿದ್ಯಾರ್ಥಿಗಳು ಆದಿಯಾಗಿ ಮಾಧ್ಯಮ ಸಂಬಂಧಿತ ಒಟ್ಟು 890 ವ್ಯಕ್ತಿಗಳು ಅಧ್ಯಯನದಲ್ಲಿ ಭಾಗವಹಿಸಿದ್ದರು. ದೇಶದಾದ್ಯಂತದ 116 ಮಾಧ್ಯಮ ಸಂಸ್ಥೆಗಳು, ಅಕಾಡೆಮಿಕ್ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು ಪಾಲ್ಗೊಂಡಿದ್ದವು. ಭಾಗವಹಿಸಿದವರಲ್ಲಿ 326 ಮಹಿಳೆಯರು ಹಾಗೂ 564 ಪುರುಷರಿದ್ದರು. ಪ್ರತಿಕ್ರಿಯೆ ನೀಡಿದವರಲ್ಲಿ ಶೇಕಡ 66 ಮಂದಿ 18ರಿಂದ 25 ವರ್ಷ ನಡುವಿನವರಾಗಿದ್ದರು.
|ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು
ದೇಶದ ಜನರೊಂದಿಗೆ ಅವಿನಾಭಾವ ಬಾಂಧವ್ಯ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ 100 ಸಂಚಿಕೆಗಳನ್ನು ಪೂರೈಸುವ ಇಂದು (ಏಪ್ರಿಲ್ 30) ನಮ್ಮ ದೇಶಕ್ಕೆ ಒಂದು ಮಹತ್ವದ ದಿನವಾಗಿದೆ. 2014ರ ಅಕ್ಟೋಬರ್ 3ರಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗುವ ಸ್ಪೂರ್ತಿದಾಯಕವಾದ ಈ ಕಾರ್ಯಕ್ರಮ ದೇಶದ ನುಡಿ ಗಾರುಡಿಗ ಆಗಿದೆ. ಪ್ರಧಾನಿಯ ಚಿಂತನೆಗಳು, ಅಭಿಪ್ರಾಯಗಳು ಮತ್ತು ವಿವೇಕದ ಮಾತುಗಳು ಜನತೆಯ ಆಶೋತ್ತರ ಮತ್ತು ಆಶಯಗಳ ಮಹತ್ವವನ್ನು ಪ್ರತಿನಿಧಿಸುತ್ತವೆ.
ದೇಶದ ಮನೆ-ಮನೆಗಳು, ಗಲ್ಲಿ-ಗಲ್ಲಿಗಳಲ್ಲಿ ಜನರು ಕಿವಿಗೊಟ್ಟು ಆಲಿಸುವ ಈ ರೇಡಿಯೋ ಕಾರ್ಯಕ್ರಮವು ಜನಸಾಮಾನ್ಯರ ಸಹಿತ ನಿಜಜೀವನದ ಸಾಧಕರ ಸ್ಪೂರ್ತಿದಾಯಕ ಕಥೆಗಳನ್ನು ಅನಾವರಣಗೊಳಿಸುತ್ತದೆ. ಜನರು ಅದರಿಂದ ಸ್ಪೂರ್ತಿ ಪಡೆದು ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಲು ನೆರವಾಗುತ್ತದೆ. ಪ್ರಧಾನಿ ಮೋದಿ ಕಳೆದ ಒಂಬತ್ತು ವರ್ಷಗಳಿಂದ ರಾಷ್ಟ್ರ ನಿರ್ವಣ, ಕಲೆ, ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆ, ಸಾಮಾಜಿಕ ಚಳವಳಿಗಳು, ವೈಜ್ಞಾನಿಕ ಮನೋಭಾವ, ಆಟೋಟ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ, ನಶಿಸುತ್ತಿರುವ ಗುಡಿಕೈಗಾರಿಕೆಗಳ ಪುನರುಜ್ಜೀವನ, ಸಾಮಾಜಿಕ ಸೌಹಾರ್ದ ಮತ್ತು ರಾಷ್ಟ್ರೀಯ ಸಮಗ್ರತೆಗೆ ಉತ್ತೇಜನ ಮುಂತಾದ ಕ್ಷೇತ್ರಗಳಿಗೆ ನಮ್ಮ ದೇಶದ ಸಾಮಾನ್ಯ ನಾಗರಿಕರೂ ನೀಡಿರುವ ಅಪಾರ ಕೊಡುಗೆಗಳನ್ನು ದೇಶದ ಗಮನಕ್ಕೆ ತಂದಿದ್ದಾರೆ.
ಪ್ರೇರಕ ಸಾಧನಕ್ಕೆ ದೃಷ್ಟಾಂತ:ಡಿಜಿಟಲ್ ಯುಗದಲ್ಲಿ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವ ಒಂದು ಸಾಧಾರಣ ಸಂವಹನ ಮಾಧ್ಯಮವನ್ನು ಸ್ಪೂರ್ತಿ ಮತ್ತು ದೇಶದ ಪರಿವರ್ತನೆಯ ಒಂದು ಸಂಭಾವ್ಯ ಸಾಧನವನ್ನಾಗಿ ಹೇಗೆ ಮಾಡಬಹುದು ಎನ್ನುವುದಕ್ಕೆ ಮನ್ ಕೀ ಬಾತ್ ಒಂದು ವಿಶಿಷ್ಟ ಉದಾಹರಣೆಯಾಗಿದೆ. ದೇಶ ಕಟ್ಟುವಲ್ಲಿ ಜನರನ್ನು ಒಗ್ಗೂಡಿಸಿ ಪ್ರೇರೇಪಿಸುವಲ್ಲಿ ಜಗತ್ತಿಗೇ ಮಾದರಿಯಾದ ವೇದಿಕೆ ಇದಾಗಿದೆ. ರಾಜಾರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧಿ, ಈಶ್ವರಚಂದ್ರ ವಿದ್ಯಾಸಾಗರ, ಜ್ಯೋತಿಬಾ ಫುಲೆ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಜಯಪ್ರಕಾಶ್ ನಾರಾಯಣ್ ಮುಂತಾದ ಮಹಾನ್ ನಾಯಕರ ಕುರಿತು ಓದಿ ಹಾಗೂ ಅವರ ಮಾತುಗಳನ್ನು ಆಲಿಸಿ ನಾನು ಸುದೀರ್ಘ ರಾಜಕೀಯ ಜೀವನದಲ್ಲಿ ಸ್ಪೂರ್ತಿ ಪಡೆದಿದ್ದೇನೆ. ಈ ಮಹಾನ್ ವ್ಯಕ್ತಿಗಳ ಮಾತುಗಳು ನಮ್ಮ ದೇಶದಲ್ಲಿ ಸಾಮಾಜಿಕ ಪರಿವರ್ತನೆ ತಂದ ಬಗೆಯನ್ನು ನಾವು ಅನುಭವಿಸಿದ್ದೇವೆ, ನೋಡಿದ್ದೇವೆ. ಸಮಾಜದ ದಮನಿತ ಹಾಗೂ ದುರ್ಬಲ ಜನವಿಭಾಗಗಳ ಸಬಲೀಕರಣ ಹಾಗೂ ಉನ್ನತಿಗೆ ಅವರೆಲ್ಲ ಹೋರಾಡಿದ್ದನ್ನು ಕಂಡಿದ್ದೇವೆ. ನಾಗರಿಕರಲ್ಲಿ ಸ್ಪೂರ್ತಿ ತುಂಬಿ ಅವರನ್ನು ಒಗ್ಗೂಡಿಸುವ ಹಾಗೂ ದೇಶವನ್ನು ಬದಲಾಯಿಸುವ ಮಾರ್ಗ ತೋರುವ ವ್ಯಕ್ತಿಯೊಬ್ಬರನ್ನು ಆಧುನಿಕ ಭಾರತ ಕಂಡೀತೇ ಎಂದು ನಾನು ಯಾವಾಗಲೂ ಅಚ್ಚರಿಪಡುತ್ತಿದ್ದೆ. ನಾನು ನರೇಂದ್ರ ಮೋದಿ ಅವರೊಂದಿಗೆ ದೀರ್ಘ ಕಾಲದಿಂದ ಕೆಲಸ ಮಾಡಿದ್ದೇನೆ. ಅವರೊಬ್ಬ ಬಹುಮುಖ ವ್ಯಕ್ತಿತ್ವದ ವ್ಯಕ್ತಿ: ಸಮಾಜ ಸುಧಾರಕ, ಪೋಷಕ, ಶಿಕ್ಷಕ, ಕಟ್ಟುನಿಟ್ಟಿನ ಆಡಳಿತಗಾರ, ಬಲಿಷ್ಠ ಸಂಕಲ್ಪಶಕ್ತಿಯ ವ್ಯಕ್ತಿ, ಸ್ಪೂರ್ತಿದಾಯಕ ವಿಶ್ವ ನಾಯಕ, ಪ್ರೇರಣಾದಾಯಕ ಭಾಷಣಗಾರ, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಅರಿವಿನ ದೀಪಧಾರಿ, ಹಾಗೂ ಒಬ್ಬ ‘ಪ್ರಧಾನ ಸೇವಕ’ನಾಗಿ ದೇಶವನ್ನು ವೇಗವಾಗಿ ಅಭಿವೃದ್ಧಿ ಹಾಗೂ ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ದು ಭಾರತವನ್ನು ‘ವಿಶ್ವಗುರು’ವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನೇತಾರ.
ಮನ್ ಕೀ ಬಾತ್ ಮೂಲಕ ಮೋದಿ ದೇಶದೊಂದಿಗೆ ಸಂವಹನ ನಡೆಸುವಾಗ ಜನಸಮೂಹದಲ್ಲಿ ಮಾಂತ್ರಿಕ ಪರಿಣಾಮ ಬೀರುತ್ತಿರುವುದಕ್ಕೆ ಅದುವೇ ಕಾರಣವಾಗಿದೆ. ಕರೊನಾ ಸಾಂಕ್ರಾಮಿಕತೆಯ ನಿರ್ವಹಣೆ ಮತ್ತು ಕೋವಿಡ್ ಲಸಿಕೆ ಅಭಿಯಾನದಂಥ ಕಠಿಣ ಕಾರ್ಯಭಾರಗಳನ್ನು ಯಶಸ್ವಿಯಾಗಿ ನಡೆಸಲು ಮೋದಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಹೇಗೆ ಬಳಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಜಲ ಮತ್ತು ಪರಿಸರ ಸಂರಕ್ಷಣೆ, ಉತ್ತಮ ಆರೋಗ್ಯಕ್ಕಾಗಿ ಯೋಗದ ಪ್ರವರ್ತನೆ, ಭಾರತದ ದೇಶೀಯ ಆಟಿಕೆ ಉದ್ಯಮ ಹಾಗೂ ನಮ್ಮ ಪ್ರಾಚೀನ ಕಥೆ ಹೇಳುವ ಕಲೆಯ ಪುನರುಜ್ಜೀವನ, ಸ್ವಚ್ಛತೆ ಮತ್ತು ನೈರ್ಮಲ್ಯ ವಿಚಾರಗಳಲ್ಲೂ ಇದನ್ನು ಅವರು ಸಾಧಿಸಿದ್ದಾರೆ.
ಮನ್ ಕೀ ಬಾತ್ ವಿದೇಶಗಳಲ್ಲೂ ಜನಪ್ರಿಯವಾದ ಕಾರ್ಯಕ್ರಮವಾಗಿದೆ. 11 ವಿದೇಶಿ ಭಾಷೆಗಳಲ್ಲಿ ಭಾಷಣ ಪ್ರಸಾರವಾಗುತ್ತಿರುವುದು ಅದರ ಜನಮೆಚ್ಚುಗೆಗೆ ಸಾಕ್ಷಿಯಾಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿ ಜನಪ್ರಿಯತೆ ಹೆಚ್ಚಿರುವುದರಿಂದ ಪ್ರತಿಪಕ್ಷಗಳಲ್ಲಿ ತುಮುಲ ಉಂಟಾಗಿದೆ. ಜನರೊಂದಿಗೆ ಬೆಸೆಯುವ ಮೋದಿ ಕಾರ್ಯವಿಧಾನಕ್ಕೆ ಮನ್ ಕೀ ಬಾತ್ ಇನ್ನೊಂದು ಸೇರ್ಪಡೆ ಅಷ್ಟೇ. ಇದೊಂದು ರಾಜಕೀಯರಹಿತವಾದ ಕಾರ್ಯಕ್ರಮವಾದರೂ ಅದು ಭಾರತದ ಬಲದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಹಾಗೂ ನಮ್ಮ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ಯತ್ನಿಸುತ್ತದೆ. ಮೋದಿಯವರ ಈ ವಿಶಿಷ್ಟ ಉಪಕ್ರಮದ ಮಹತ್ವವನ್ನು ಕುಗ್ಗಿಸಲು ಪ್ರತಿಪಕ್ಷಗಳು ಯತ್ನಿಸುತ್ತಿದ್ದು ಅವುಗಳ, ವಿಶೇಷವಾಗಿ ಕಾಂಗ್ರೆಸ್​ನ ಟೊಳ್ಳು ರಾಜಕೀಯವನ್ನು ಎತ್ತಿ ತೋರಿಸುತ್ತದೆ. ನಮ್ಮ ಸಮಾಜದಲ್ಲಿ ಧನಾತ್ಮಕತೆಯನ್ನು ತಂದಿದ್ದು ಮನ್ ಕೀ ಬಾತ್ ಕಾರ್ಯಕ್ರಮದ ಅತಿ ದೊಡ್ಡ ಕೊಡುಗೆ ಎಂದು ಧಾರಾಳವಾಗಿ ಹೇಳಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
