| ಎನ್. ಗುರುನಾಗನಂದನಭಾರತದ ಬಹುನಿರೀಕ್ಷಿತ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವವನ್ನು ಪರೀಕ್ಷಿಸಲು ಲ್ಯಾಂಡರ್ ಇಂದು ಲ್ಯಾಂಡ್ ಆಗಲಿದೆ. ಈ ಸಂಗತಿ ಸಂತಸವನ್ನು ಉಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಇಸ್ರೋಗೆ ಶುಭಕೋರಿದ್ದಾರೆ. ಆದರೆ ಕೆಲವರು ಚಂದ್ರನ ಅಧ್ಯಯನದಿಂದ ಜನರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದರು. ಹೀಗಾಗಿ ಕಮೆಂಟ್ ಸೆಕ್ಷನ್​ಗಳಲ್ಲಿ ಬಹಳಷ್ಟು ಚರ್ಚೆಗಳಾದವು. ಚಂದ್ರಯಾನದಿಂದ ದೇಶಕ್ಕೆ ಬಹಳಷ್ಟು ಲಾಭಗಳಿವೆ, ಹಲವಾರು ಅವಕಾಶಗಳು ತೆರೆಯಲಿವೆ. ಈಗಾಗಲೇ ಅಮೇರಿಕ, ರಷ್ಯಾ, ಚೀನಾ ಚಂದ್ರನ ಆರ್ಥಿಕತೆಯ ಪಾಲುದಾರರಾಗಿದ್ದಾರೆ. ಹಾಗಾಗಿ ಚಂದ್ರನ ಆರ್ಥಿಕತೆ ಮೇಲೆ ಹಕ್ಕು ಸಾಧಿಸಲು ಭಾರತಕ್ಕೆ ಇದು ಒಳ್ಳೆಯ ಅವಕಾಶ.
ಏನಿದು ಚಂದ್ರನ ಆರ್ಥಿಕತೆ? ಅದರಿಂದ ಆಗುವ ಪ್ರಯೋಜನವೇನು? ಮುಂತಾದ ಪ್ರಶ್ನೆಗಳು ಮೂಡುವುದು ಸಹಜ. ಅದನ್ನು ಹೀಗೆ ವ್ಯಾಖ್ಯಾನಿಸಬಹುದು. ಚಂದ್ರ ಮತ್ತು ಅದರ ಕಕ್ಷೆಗೆ ಸಂಬಂಧಪಟ್ಟ ಸಂಪನ್ಮೂಲಗಳ ಉತ್ಪಾದನೆ, ಬಳಕೆ ಮತ್ತು ವಿನಿಮಯದ ಚಟುವಟಿಕೆಯನ್ನು ಚಂದ್ರನ ಆರ್ಥಿಕತೆ ಒಳಗೊಂಡಿರುತ್ತದೆ. ಅಂದರೆ ಚಂದ್ರನ ಮೇಲೆ ರೋವರ್ ಯಶಸ್ವಿಯಾಗಿ ಇಳಿದು ಅಲ್ಲಿಂದ ಫೋಟೋ ಕಳಿಸಿಕೊಡುತ್ತದೆ. ಆ ಫೋಟೋ/ವಿವರ ಭಾರತದ ಆಸ್ತಿಯಾಗುತ್ತದೆ. ಈ ರೀತಿ ಅಲ್ಲಿ ನಡೆಸಿದ ಸಂಶೋಧನೆಗಳ ವರದಿ, ಮಣ್ಣಿನ ಮಾದರಿ, ವಿಡಿಯೋ ಮುಂತಾದವುಗಳನ್ನು ಯಾವ ದೇಶ ಅಥವಾ ಸಂಸ್ಥೆ ಸಂಗ್ರಹಿಸುತ್ತದೆಯೋ ಅದು ಚಂದ್ರನ ಆರ್ಥಿಕತೆಯಲ್ಲಿ ಸೇರುತ್ತದೆ. ಎಲ್ಲ ದೇಶಗಳಿಗೂ ಸಂಕೀರ್ಣ ಬಾಹ್ಯಾಕಾಶ ಕಾರ್ಯಾಚರಣೆ ಮಾಡುವ ತಂತ್ರಜ್ಞಾನ ಇರುವುದಿಲ್ಲ. ಹಾಗಾಗಿ ಬೇರೆ ದೇಶಗಳು ಸಂಗ್ರಹಿಸಿದ ಡೇಟಾಗಳ ಮೇಲೆ ಅವಲಂಬಿತವಾಗಿವೆ. ಚಂದ್ರಯಾನ-3ರಿಂದ ಯಶಸ್ಸಿನಿಂದ ಭಾರತಕ್ಕೆ ಆಗುವ ಮತ್ತೊಂದು ಲಾಭವೆಂದರೆ ಇಂದಿನವರೆಗೆ ಯಾರೂ ರ್ಸ³ಸದ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಿದ ಕೀರ್ತಿ ದೊರೆಯುತ್ತದೆ. ಚಂದ್ರನ ಈ ಭಾಗ ಬಾಹ್ಯಾಕಾಶ ಸಂಶೋಧಕರಿಗೆ ಬಹಳ ಕುತೂಹಲದ ಪ್ರದೇಶ. ಅಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲ. ವಿಶಿಷ್ಟ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದಿಂದ ವೈಜ್ಞಾನಿಕವಾಗಿ ಆಸಕ್ತಿದಾಯಕವಾಗಿದೆ. ದಕ್ಷಿಣ ಧ್ರುವದಲ್ಲಿಯೇ ಬಹುದೊಡ್ಡ ಚಂದ್ರನ ಕುಳಿ ಇರುವುದು. ಅದು ಸೃಷ್ಟಿಯಾಗಿ 400 ಕೋಟಿ ವರ್ಷಗಳಾದರೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅದರ ಬಗ್ಗೆ ತಿಳಿಯುವುದರ ಜತೆಗೆ ಅಲ್ಲಿನ ಪರಿಸರ, ತಾಪಮಾನ, ವಿಕಿರಣ ಮಟ್ಟ, ಭೂಪ್ರದೇಶದ ಆಕೃತಿ, ಧೂಳಿನ ಮಟ್ಟ, ಪ್ರಾಚೀನ ಬಂಡೆಗಳು ಮತ್ತು ಸಂಭಾವ್ಯ ಲಾವಾ ಟ್ಯೂಬ್ ಮುಂತಾದವುಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಈ ಪ್ರದೇಶವನ್ನು ಸಂಶೋಧಿಸುವುದರಿಂದ ಚಂದ್ರನ ಇತಿಹಾಸ ತಿಳಿಯಬಹುದು. ಅಲ್ಲಿ ಸಿಗುವ ಮಣ್ಣು, ಧೂಳಿನ ಮಾದರಿಯಿಂದ ಸೌರ ಮಂಡಲದ ಸೃಷ್ಟಿಯ ಬಗ್ಗೆ ತಿಳಿಯಲು ಕೂಡ ಬಹಳ ಪ್ರಯೋಜನಕಾರಿ. ಆದ್ದರಿಂದ ಚಂದ್ರಯಾನ-3ರ ಮಾಹಿತಿಗೆ ಬೇಡಿಕೆ ಹೆಚ್ಚು. ವೈಜ್ಞಾನಿಕ ಕ್ಷೇತ್ರದ ಜತೆ ಈ ಡೇಟಾ ಮನರಂಜನಾ ಕ್ಷೇತ್ರಕ್ಕೆ ಕೂಡ ಅಗತ್ಯವಿದೆ. ಅಲ್ಲಿನ ಫೋಟೋ, ವಿಡಿಯೋ, ಶಬ್ದಗಳನ್ನು ಸಿನಿಮಾ, ಸಾಕ್ಷ್ಯಚಿತ್ರ, ವಿಡಿಯೋ ಗೇಮ್ ಮುಂತಾದವುಗಳಲ್ಲಿ ಬಳಸಲು ಖರೀದಿಸುತ್ತಾರೆ. ಭಾರತ ಚಂದ್ರನ ವಿಶೇಷ ಪ್ರದೇಶವನ್ನು ಅನ್ವೇಷಿಸುತ್ತಿರುವ ಕಾರಣ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. 2021ರಲ್ಲಿ ಆರ್ಟೆಮಿಸ್ ಕಾರ್ಯಕ್ರಮದ ಮಾಹಿತಿಯಿಂದ ನಾಸಾ ಸುಮಾರು 2.2 ಬಿಲಿಯನ್ ಡಾಲರ್ ಸಂಪಾದನೆ ಮಾಡಿತು. ಅದರೊಂದಿಗೆ ಸುಮಾರು 37,000 ಉದ್ಯೋಗಗಳನ್ನೂ ಸೃಷ್ಟಿಸಿತು.
ಚಂದ್ರಯಾನ-3ರ ಯಶಸ್ಸಿನಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮೇಲುಗೈ ಸಾಧಿಸುವುದರ ಜತೆಗೆ ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಉದ್ಯೋಗ ಅವಕಾಶ ಮತ್ತು ಖಾಸಗಿ ಹೂಡಿಕೆಗಳನ್ನು ಹೆಚ್ಚಿಸುವಲ್ಲಿ ಚಂದ್ರಯಾನ ಸಹಕಾರಿ. ಹಲವಾರು ವರ್ಷಗಳಿಂದ ಬಾಹ್ಯಾಕಾಶ ಕ್ಷೇತ್ರ ಉದ್ಯೋಗಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಆದರೆ ಕರೊನಾದಿಂದ ಸ್ಪೇಸ್​ಟೆಕ್ ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ಲಕ್ಷಾಂತರ ಬ್ಲೂ ಮತ್ತು ವೈಟ್ ಕಾಲರ್ ಉದ್ಯೋಗಗಳ ಸೃಷ್ಟಿಗೆ ಚಂದ್ರಯಾನದ ಬೂಸ್ಟರ್ ಡೋಸ್ ಬೇಕಿದೆ. ಇದರೊಂದಿಗೆ ಸ್ಟಾರ್ಟ್​ಅಪ್​ಗಳಿಗೆ ಚಂದ್ರಯಾನ-3ರ ಪ್ರಯೋಜನವಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್​ಅಪ್ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಬಹಳಷ್ಟು ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಸ್ಥೆಗಳು ಪ್ರಾರಂಭವಾಗುತ್ತಿವೆ. ಸುಮಾರು 140ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್​ಅಪ್​ಗಳು ನೋಂದಣಿಯಾಗಿವೆ. ಸೆಟಲೈಟ್ ಫೋನ್ ಸಿಗ್ನಲ್, ಒಟಿಟಿ, 5ಜಿ ಮುಂತಾದ ದಿನನಿತ್ಯ ಬಳಕೆಯ ಉಪಕರಣಗಳನ್ನು ಈ ಸ್ಟಾರ್ಟ್​ಅಪ್​ಗಳು ಅಭಿವೃದ್ಧಿ ಪಡಿಸುತ್ತಿವೆ. 2020ರಲ್ಲಿ 9.6 ಬಿಲಿಯನ್ ಡಾಲರ್ ಮೌಲ್ಯವಿತ್ತು. 2025ರ ಹೊತ್ತಿಗೆ ಸುಮಾರು 13 ಬಿಲಿಯನ್ ಡಾಲರ್ ಆಗಲಿದೆ ಎಂದು ವರದಿಗಳು ತಿಳಿಸುತ್ತವೆ. ಚಂದ್ರಯಾನ-3ಕ್ಕೆ ಬಹಳಷ್ಟು ಕಂಪನಿಗಳು ಪರಿಣಾಮಕಾರಿಯಾದ ಬೆಲೆಗೆ ಉಪಕರಣಗಳ ಪೂರೈಕೆ ಮಾಡಿವೆ. ಹಾಗಾಗಿ ಈ ಬಾಹ್ಯಾಕಾಶ ಕಾರ್ಯಕ್ರಮ ಯಶಸ್ವಿಯಾದರೆ ಹೂಡಿಕೆದಾರರನ್ನು ಆಕರ್ಷಿಸಬಹುದು. ಈ ಮೂಲಕ ಭಾರತಕ್ಕೆ ಜಂಟಿ ಹೂಡಿಕೆಗಳಿಂದ ಒಳ್ಳೆಯ ಲಾಭವಿದೆ. ಅದರೊಂದಿಗೆ ಬೇರೆ ದೇಶಗಳಿಗೆ ಕೂಡ ಭಾರತೀಯ ಉತ್ಪನ್ನಗಳ ಪೂರೈಕೆಗೆ ಮಾರ್ಗ ಸರಳವಾಗುತ್ತದೆ. ಇದೆಲ್ಲದರ ಜತೆ ಮತ್ತೊಂದು ಮಹತ್ತರ ಪ್ರಯೋಜನವೆಂದರೆ ನಾಸಾ ಮತ್ತು ಇಸ್ರೋ ಸಹಯೋಗದಂತೆ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಜತೆ ಕೈ ಜೋಡಿಸಲು ಸಹಾಯವಾಗುತ್ತದೆ. ಇದರಿಂದ ಹೆಚ್ಚಿನ ಆರ್ಥಿಕ ನೆರವು ಸಿಗುತ್ತದೆ. ಜಾಗತಿಕ ಮಟ್ಟದಲ್ಲಿ ಒಳ್ಳೆಯ ಸ್ಥಾನ ಮತ್ತು ಸಂಬಂಧ ಕಾಪಾಡಿಕೊಳ್ಳಬಹುದು. ಇದರಿಂದ ಶಿಕ್ಷಣ, ಪ್ರವಾಸ ಮುಂತಾದ ಕ್ಷೇತ್ರಗಳಿಗೆ ಅನುಕೂಲವಾಗುತ್ತದೆ.
ಈ ಹಿಂದೆ ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್ ಸಂಸ್ಥೆ ಬಾಹ್ಯಾಕಾಶ ಪ್ರವಾಸ ಆಯೋಜಿಸಿತ್ತು. ಚಂದ್ರಯಾನದ ಯಶಸ್ಸಿನಿಂದ ಮುಂದೆ ಈ ರೀತಿಯ ಬಾಹ್ಯಾಕಾಶ ಪ್ರವಾಸ ಹೆಚ್ಚಾಗುತ್ತದೆ. ಚಂದ್ರನ ಮೇಲ್ಮೈನಲ್ಲಿ ಮಾನವನ ಉಪಸ್ಥಿತಿ ಸ್ಥಾಪಿಸಲು ಪ್ರಯತ್ನಗಳು ಹೆಚ್ಚಾಗುತ್ತವೆ. 2025ರ ಹೊತ್ತಿಗೆ ಮನುಷ್ಯರನ್ನು ಚಂದ್ರನ ಮೇಲೆ ಕಳುಹಿಸಲು ಅಮೆರಿಕ ಸಜ್ಜಾಗುತ್ತಿದೆ. ಚೀನಾ ಕೂಡ ಮಾನವ ಕಾರ್ಯಚರಣೆಯನ್ನು ಮಾಡಲು ಸಿದ್ಧವಾಗುತ್ತಿದೆ. ಈ ರೀತಿ ಬಾಹ್ಯಾಕಾಶ ಸಾರಿಗೆಯನ್ನು ಕಲ್ಪಿಸುವುದರಿಂದ ದೇಶಕ್ಕೆ ಆದಾಯ ಹೆಚ್ಚಾಗುತ್ತದೆ. ಸ್ಪೇಸ್ ಪ್ರೋಗ್ರಾಮ್ಳನ್ನು ಬಹಳ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತದೆ ಎಂಬ ಹೆಗ್ಗಳಿಕೆ ನಮ್ಮ ದೇಶಕ್ಕಿದೆ. ಇದರಿಂದ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯಬಹುದು. ಚಂದ್ರನ ಆರ್ಥಿಕತೆ ಬಹಳ ಪ್ರಾರಂಭಿಕ ಹಂತದಲ್ಲಿದೆ. ಹಾಗಾಗಿ ಚಂದ್ರಯಾನ-3 ಯಶಸ್ವಿಯಾದರೆ ಭವಿಷ್ಯದಲ್ಲಿ ಬಹಳಷ್ಟು ಲಾಭ ಗಳಿಸಬಹುದು. ಅದರೊಂದಿಗೆ ಚಂದ್ರಯಾನ-3 ಯಶಸ್ಸು ಇಸ್ರೋದ ಮಹತ್ವಾಕಾಂಕ್ಷೆಯ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಗಗನಯಾನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುತ್ತದೆ. ಚಂದ್ರಯಾನ-3ಕ್ಕೆ ಬಳಸಿರುವ ಎಲ್​ವಿಎಂ-3 ರಾಕೆಟನ್ನು ಮನುಷ್ಯರನ್ನು ಕರೆದೊಯ್ಯಲು ಬೇಕಾದ ರೀತಿ ನವೀಕರಿಸಿ ಗಗನಯಾನಕ್ಕೆ ಬಳಸುತ್ತಾರೆ. ಇಂತಹ ಹಲವಾರು ಕಾರಣಗಳಿಗೆ ಬಾಹ್ಯಾಕಾಶ ಕಾರ್ಯಕ್ರಮಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಗತ್ಯ. ಜನರ ಜಿವನದ ಗುಣಮಟ್ಟ ಹೆಚ್ಚಿಸಲು ಬಾಹ್ಯಾಕಾಶ ಕಾರ್ಯಕ್ರಮದ ಅಗತ್ಯವಿದೆ. ಹವಾಮಾನ ಮುನ್ಸೂಚನೆ, ಸಮುದ್ರ ಸಂಪನ್ಮೂಲ ಮತ್ತು ಅರಣ್ಯ ವ್ಯಾಪ್ತಿಯ ಮೌಲ್ಯಮಾಪನ, ಸಂವಹನ, ರಕ್ಷಣೆ ಮುಂತಾದ ಕಾರಣಗಳಿಗೆ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಬೇಕು. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲು ಶೇ.2ರಷ್ಟಿದ್ದು 2030ರ ಹೊತ್ತಿಗೆ ಸುಮಾರು ಶೇ. 10 ಆಗಬಹುದು ಎಂದು ಅಂದಾಜಿಸಲಾಗಿದೆ. 2024ರ ವೇಳೆಗೆ ಬಾಹ್ಯಾಕಾಶ ಕ್ಷೇತ್ರವನ್ನು ಸುಮಾರು 50 ಬಿಲಿಯನ್ ಡಾಲರ್​ಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ. ಕೆಲವು ತಂತ್ರಜ್ಞಾನ ತಕ್ಷಣಕ್ಕೆ ಫಲ ಕೊಟ್ಟರೆ, ಇನ್ನು ಕೆಲವು ಸ್ವಲ್ಪ ಸಮಯದ ನಂತರ ಪ್ರಯೋಜನ ನೀಡುತ್ತದೆ. ಇದು ಕೂಡ ಬಹುತೇಕ ಅಂಥದ್ದೇ.
ಒಬ್ಬನಲ್ಲೇ ಇದ್ದವು ಎರಡೂ ಜನನಾಂಗ; ದೇಶದಲ್ಲಿ ಇಂಥ ಇಪ್ಪತ್ತು ಪ್ರಕರಣ!

ರಾಜ್ಯದ 66 ಪೊಲೀಸ್​ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಎಲ್ಲಿಗೆ ಯಾರು? ಇಲ್ಲಿದೆ ಪೂರ್ತಿ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 5 =
Remember me
