ನವದೆಹಲಿ:ದೇಶದ ಪ್ರಥಮ ಜಲಾಂತರ್ಗತ ಮೆಟ್ರೋ ರೈಲನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಕೋಲ್ಕತದಲ್ಲಿ ಉದ್ಘಾಟಿಸಿದರು. ಈ ಮೂಲಕ ಕೋಲ್ಕತ ನಿವಾಸಿಗಳ 53 ವರ್ಷಗಳ ಬೃಹತ್ ಕನಸನ್ನು ಅವರು ನನಸಾಗಿಸಿದರು. ಪ್ರಧಾನಿ ಈ ರೈಲಿನಲ್ಲಿ ಪ್ರಯಾಣಿಸಿದ್ದು, ಸಹ ಪ್ರಯಾಣಿಕರ ಜತೆ ಸಂವಹನ ಕೂಡ ನಡೆಸಿದರು. ಜತೆಗೆ ಕೋಲ್ಕತ ಮೆಟ್ರೋದ ವಿವಿಧ ಮಾರ್ಗಗಳನ್ನೂ ಉದ್ಘಾಟಿಸಿದರು.
ಸಾರ್ವಜನಿಕ ಸಾರಿಗೆಯನ್ನು ಅತ್ಯಾಧುನಿಕಗೊಳಿಸು ವುದು ಸರ್ಕಾರದ ಆದ್ಯತೆ. ನಾನು ಚಿಕ್ಕವನಿದ್ದಾಗ ಮೊದಲ ಸಲ ಕೋಲ್ಕತಗೆ ಬಂದಿದ್ದಾಗ ಮೆಟ್ರೋವನ್ನು ನೋಡುವುದೇ ಒಂದು ಆಕರ್ಷಣೆ ಆಗಿತ್ತು. ಇಂದು ಮೆಟ್ರೋ ಬೆಳವಣಿಗೆ ಕೂಡ ಬಿಜೆಪಿಯ ತೀವ್ರಗತಿಯ ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿಯಾಗಿದೆ. 2014ಕ್ಕೂ ಹಿಂದಿನ 40 ವರ್ಷಗಳಲ್ಲಿ ಕೋಲ್ಕತ ಮೆಟ್ರೋ ಮಾರ್ಗ 28 ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ 31 ಕಿ.ಮೀ.ನಷ್ಟು ಮೆಟ್ರೋ ಮಾರ್ಗ ಸೇರಿಸಲಾಗಿದೆ ಎಂದು ಮೋದಿ ಹೇಳಿದರು.
ಅತ್ಯಂತ ಆಳದ ಮೆಟ್ರೋ ಸ್ಟೇಷನ್:ಹೌರಾ ಮತ್ತು ಕೋಲ್ಕತಗಳ ಮಧ್ಯೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಜಲಾಂತರ್ಗತ ಮೆಟ್ರೋ ರೈಲು ಹೂಗ್ಲಿ ನದಿಯಲ್ಲಿ ಹಾದುಹೋಗುತ್ತದೆ. 16.6 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ 6 ನಿಲ್ದಾಣಗಳು ಇವೆ. ಹೌರಾ ಮೈದಾನ್ ಮತ್ತು ಎಸ್​ಪ್ಲಾಂಡೆ ಸ್ಟೇಷನ್​ಗಳ ಮಧ್ಯೆ 4.8 ಕಿ.ಮೀ. ಸುರಂಗದ ಪೈಕಿ 1.2 ಕಿ.ಮೀ. ದೂರ ಹೂಗ್ಲಿ ನದಿಯ 30 ಮೀ. ಆಳದಲ್ಲಿ ಸಾಗುವುದರಿಂದ ಹೌರಾ ಮೆಟ್ರೋ ಸ್ಟೇಷನ್ ದೇಶದ ಅತ್ಯಂತ ಆಳದ ಮೆಟ್ರೋ ಸ್ಟೇಷನ್ ಎಂಬ ಖ್ಯಾತಿಗೂ ಪಾತ್ರವಾಗಿದೆ.
ಸಂದೇಶ್​ಖಾಲಿ ಅಲೆ:ಮೆಟ್ರೋ ರೈಲು ಉದ್ಘಾಟನೆ ಬಳಿಕ ಸಂದೇಶ್​ಖಾಲಿ ಜಿಲ್ಲೆಯ ಬರಾಸತ್​ನಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ರ್ಯಾಲಿಯಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಪಶ್ಚಿಮಬಂಗಾಳದ ಮಹಿಳೆಯರು ಸಿಡಿದೆದ್ದಿದ್ದು, ಈ ಅಲೆ ಸಂದೇಶ್​ಖಾಲಿಗಷ್ಟೇ ಸೀಮಿತವಾಗಿರದೆ ಬಂಗಾಳದ ಮೂಲೆಮೂಲೆಗೂ ವ್ಯಾಪಿಸಲಿದೆ ಎಂದು ಹೇಳಿದರು. ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರವು ಅಪರಾಧಿಗಳನ್ನು ರಕ್ಷಿಸಲು ತನ್ನ ಎಲ್ಲ ಶಕ್ತಿ ಬಳಸುತ್ತಿದೆ ಎಂದ ಮೋದಿ, ಪ್ರಬಲ ವ್ಯಕ್ತಿ ಶೇಖ್ ಷಾಜಹಾನ್ ಕೇಂದ್ರಿತ ಸಂದೇಶ್​ಖಾಲಿ ಪ್ರಕರಣವನ್ನು ಉಲ್ಲೇಖಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಒಳಗೊಂಡಿರುವ ಇಂಡಿಯಾ ಒಕ್ಕೂಟದ ವಿಪಕ್ಷಗಳ ನಾಯಕರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿರುವ ಬಗ್ಗೆ ಭಯಭೀತರಾಗಿದ್ದು, ನಿದ್ರೆ-ಸಮತೋಲನ ಕಳೆದುಕೊಂಡು ನನ್ನನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಮೋದಿ ಹೇಳಿದರು. ಮಹಿಳೆಯರತ್ತ ಬೊಟ್ಟು ಮಾಡಿ ಮಾತನಾಡಿದ ಮೋದಿ, ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ನನ್ನನ್ನು ಪ್ರತಿ ಕಷ್ಟದಿಂದ ರಕ್ಷಿಸುತ್ತಾರೆ. ಬಂಗಾಳದ ತಾಯಂದಿರು ಹಾಗೂ ಸಹೋದರಿಯರು ನನಗೆ ದುರ್ಗಾಮಾತೆಯಂತೆ ಎಂದರು. ಬಾಲ್ಯದಲ್ಲೇ ಮನೆ ತೊರೆದ ನಾನು ದೇಶಾದ್ಯಂತ ಸುತ್ತಾಡಿದೆ. ಜೇಬಿನಲ್ಲಿ ಬಿಡಿಗಾಸು ಇರದಿದ್ದರೂ ಒಂದಲ್ಲ ಒಂದು ಮನೆಯವರು ಊಟ ಮಾಡುತ್ತೀರಾ ಎಂದು ಕೇಳಿದ್ದರು. ನಾನು ಒಂದು ದಿನವೂ ಹಸಿವಿನಿಂದ ಕಳೆಯಲಿಲ್ಲ. ನಾನು ಈಗ ಆ ಉಪಕಾರ ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದೇನೆ ಎಂದೂ ಮೋದಿ ಹೇಳಿದರು.
12,800 ಕೋಟಿ ರೂ. ಯೋಜನೆಗಳಿಗೆ ಚಾಲನೆ:ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಹಾರದ ಪಶ್ಚಿಮ ಚಂಪರಣ್ ಜಿಲ್ಲೆಯಲ್ಲಿ 12,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಿದರು. ಜಿಲ್ಲೆಯ ಬೆಟ್ಟೆ ೖಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ-ವಿಕಸಿತ ಬಿಹಾರ’ ಕಾರ್ಯಕ್ರಮದಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯುವಜನತೆಯೇ ಇದರ ದೊಡ್ಡ ಫಲಾನುಭವಿಗಳು ಎಂಬುದಾಗಿ ಹೇಳಿದರು. ರೈಲು, ರಸ್ತೆ, ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಂಬಂಧಿತ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನಡೆಸಲಾಯಿತು. ಮುಜಾಫರ್​ಪುರ-ಮೋತಿಹಾರಿ ನಡುವಿನ ಇಂಡಿಯನ್ ಆಯಿಲ್​ನ 109 ಕಿ.ಮೀ. ಉದ್ದದ ಎಲ್​ಪಿಜಿ ಪೈಪ್​ಲೈನ್ ಕೂಡ ಮೋದಿ ಉದ್ಘಾಟಿಸಿದರು. ಎರಡು ರೈಲುಗಳಿಗೂ ಅವರು ಇದೇ ಸಂದರ್ಭ ಹಸಿರು ನಿಶಾನೆ ತೋರಿದರು. ರಾಜ್ಯಪಾಲ ರಾಜೇಂದ್ರ ವಿ. ಅರ್ಲೆಕರ್, ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ, ವಿಜಯ್ಕುಮಾರ್ ಸಿನ್ಹಾ, ಸಚಿವ ವಿಜಯ್ಕುಮಾರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದರು.
ಮಹಿಳೆಯರಿದ್ದ ಬಸ್​ಗೆ ತಡೆ:ಹಿಂಸಾತ್ಮಕ ಪ್ರತಿಭಟನೆ ನಡೆದ ಸಂದೇಶ್​ಖಾಲಿಯಿಂದ 80 ಕಿ.ಮೀ. ದೂರದ ಬರಾಸತ್​ನ ಕಚಾರಿ ಮೈದಾನ ದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಭೆಗೆ ಸಂದೇಶ್​ಖಾಲಿಯಿಂದ ಮಹಿಳೆಯರನ್ನು ಕರೆದೊಯ್ಯಲು ರಾಜ್ಯ ಬಿಜೆಪಿ ಘಟಕ ಬಸ್​ಗಳ ವ್ಯವಸ್ಥೆ ಮಾಡಿತ್ತು. ಆದರೆ ರಸ್ತೆಮಾರ್ಗದಲ್ಲಿ ಪ್ರಧಾನಿ ಸಾಗಲಿರುವುದರಿಂದ ಭದ್ರತಾ ಶಿಷ್ಟಾಚಾರ ಎಂದು ಪೊಲೀಸರು ಮಹಿಳೆಯರಿದ್ದ ಈ ಬಸ್​ಗಳಿಗೆ ತಡೆಯೊಡ್ಡಿದ ಪ್ರಕರಣಗಳೂ ವರದಿಯಾಗಿವೆ.
ಸಂತ್ರಸ್ತೆಯರ ಭೇಟಿ:ಸಭೆ ಬಳಿಕ ಸಂದೇಶ್​ಖಾಲಿಯ ಸಂತ್ರಸ್ತ ಕೆಲವು ಮಹಿಳೆಯರನ್ನು ಪ್ರಧಾನಿ ಮೋದಿ ಭೇಟಿಯಾದರು. ತಮ್ಮ ಮೇಲಾದ ಕಿರುಕುಳದ ಕುರಿತು ಮಹಿಳೆಯರು ಪ್ರಧಾನಿಗೆ ಅಹವಾಲು ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.
ಇಂದು ಕಾಶ್ಮೀರಕ್ಕೆ ಮೋದಿ:ಪ್ರಧಾನಿ ಮೋದಿ ಮಾ.7ರಂದು ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಶ್ರೀನಗರದಲ್ಲಿ ಆಯೋಜಿಸಲಾಗಿರುವ ರ್ಯಾಲಿಯಲ್ಲಿ ಭಾಗಿ ಆಗಲಿದ್ದಾರೆ. 370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು-ಕಾಶ್ಮೀರಕ್ಕೆ ಇದು ಪ್ರಧಾನಿಯ ಮೊದಲ ಭೇಟಿ ಆಗಿರುವುದರಿಂದ ಹೆಚ್ಚಿನ ಗಮನ ಸೆಳೆದಿದೆ. ಮಾತ್ರವಲ್ಲ, ಗುರುವಾರ ಶ್ರೀನಗರದಲ್ಲಿ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿತ 370ನೇ ವಿಧಿಯನ್ನು 2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 8 =
Remember me
