|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಒಂದು ಕಾಲದಲ್ಲಿ ವೈಭವದಿಂದ ಮೆರೆದು, 12 ವರ್ಷದಿಂದ ಮಂಕಾಗಿದ್ದ ರಾಜ್ಯದ ಗಣಿ ಮತ್ತು ಅದಿರು ಕ್ಷೇತ್ರ ಪುನಃ ಚಿಗುರಿಕೊಳ್ಳುವ ಬೆಳವಣಿಗೆ ನಡೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಅದಿರನ್ನು ರಫ್ತು ಅಥವಾ ಸಾಗಣೆ ಮಾಡುವ ಸಂಬಂಧ ಇದ್ದ ಅಡೆತಡೆ ನಿವಾರಣೆಗಾಗಿ ಮಧ್ಯಂತರ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದ್ದು, ಈ ಮೂಲಕ ಬಳ್ಳಾರಿ, ಚಿತ್ರದುರ್ಗ, ತುಮಕೂರು ಭಾಗದಲ್ಲಿ ಗಣಿ ಮತ್ತು ಪೂರಕ ಚಟುವಟಿಕೆಗಳು ಮತ್ತೆ ಚಿಗುರುವ ಸಾಧ್ಯತೆಗಳಿವೆ.
ವಾಣಿಜ್ಯ ಮತ್ತು ಕೈಗಾರಿಕೆ (ಮೈನ್ಸ್) ಇಲಾಖೆ ಮಧ್ಯಂತರ ಮಾರ್ಗಸೂಚಿ ಪ್ರಕಟಿಸಿದ್ದು, ಒಂದಷ್ಟು ನಿಯಮಗಳನ್ನು ಪ್ರಸ್ತಾಪಿಸುವ ಜತೆಗೆ ತಂತ್ರಜ್ಞಾನ ಆಧಾರಿತ ಮಾನಿಟರಿಂಗ್ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಲಾಗಿದೆ. 2008-09ರಲ್ಲಿ ಅಕ್ರಮ ಗಣಿಗಾರಿಕೆ ಮಿತಿಮೀರಿ ಸರ್ಕಾರದ ಬುಡಕ್ಕೇ ಬಂದಾಗ ತನಿಖೆ ನಡೆದು ಅಂತಿಮವಾಗಿ ಪೂರ್ಣ ಪ್ರಮಾಣದಲ್ಲಿ ಗಣಿಗಾರಿಕೆ ಮೇಲೆ ಕರಿಛಾಯೆ ಆವರಿಸಿತ್ತು. ಕಾಲಾನಂತರದಲ್ಲಿ ಗಣಿಗಾರಿಕೆ ಆರಂಭವಾದರೂ ಇಲ್ಲಿ ಉತ್ಪಾದನೆಯಾದ ಅದಿರು ಇಲ್ಲಿಯ ಕಾರ್ಖಾನೆಗೆ ಮಾತ್ರ ಬಳಕೆಯಾಗಬೇಕೆಂದು ನಿಯಮ ಹೇರಲಾಗಿತ್ತು. ಇದರಿಂದ ಅದಿರು ಸಂಗ್ರಹವೂ ಹೆಚ್ಚಾಯಿತು, ಗಣಿ ಚಟುವಟಿಕೆಯೂ ಮಂದಗತಿಯಲ್ಲಿ ಸಾಗಿತ್ತು. ಗಣಿ ಹೊಂದಿರುವ ಕಂಪನಿಗಳು ಸಹ ಅದಿರು ಸಾಗಣೆಗೆ ಅಡಚಣೆಯಾಗಿತ್ತು, ನಿಯಮಗಳು ಅವಕಾಶ ಕೊಟ್ಟಿರಲಿಲ್ಲ. ಇದೀಗ ಸುಲಲಿತವಾಗಿ ಅದಿರು ಸಾಗಣೆಗೆ ಅವಕಾಶ ನೀಡುವಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸುವ ಸಂಬಂಧ ಮಾರ್ಗಸೂಚಿ ಪ್ರಕಟವಾಗಿದೆ.
ಕರ್ನಾಟಕ (ಅಕ್ರಮ ಗಣಿಗಾರಿಕೆ ನಿಯಂತ್ರಣ. ಖನಿಜ ಸಾಗಣೆ ಮತ್ತು ಸಂಗ್ರಹ) ನಿಯಮ 2011ರ ಪ್ರಕಾರ, ಕಬ್ಬಿಣದ ಅದಿರು ಬಳಕೆ ಮಾಡುವ ಕೈಗಾರಿಕೆಗಳು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಅದಿರು ಸಾಗಣೆ ಪರ್ವಿುಟ್ ಅನ್ನು ನೋಂದಾಯಿತ ಬಳಕೆದಾರರಿಗೆ (ಕೈಗಾರಿಕೆ) ಮಾತ್ರ ನೀಡಲಾಗುತ್ತದೆ ಹೊರತು ಟ್ರೇಡರ್ (ದಲ್ಲಾಳಿ)ಗಳಿಗೆ ನೀಡುವುದಿಲ್ಲ. ಅದಿರನ್ನು ಪ್ರತ್ಯೇಕವಾಗಿ ಲಾಟ್ ಮಾಡಿ, ಯಾರಿಗೆ ಸರಬರಾಜಾಗುತ್ತದೆ ಎಂಬುದನ್ನು ನಿಗದಿ ಮಾಡಿಕೊಳ್ಳಬೇಕು. ಶಿಷ್ಟಾಚಾರ ಪರಿವೀಕ್ಷಣಾ ತಂಡ ಪರಿಶೀಲಿಸಿದ ನಂತರ ಅದನ್ನು ತೆರವು ಮಾಡಲು ಅವಕಾಶ ಸಿಗಲಿದೆ.
ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ (ಐಎಲ್​ಎಂಎಸ್) ವೆಬ್ ವೇದಿಕೆಯಲ್ಲಿ ಆರ್ಜಿಯೊಂದಿಗೆ ರಾಯಲ್ಟಿ, ಜಿಲ್ಲಾ ಖನಿಜ ನಿಧಿ, ರಾಷ್ಟ್ರೀಯ ಖನಿಜ ನಿಧಿ ಸೇರಿ ಇತರ ಶುಲ್ಕ ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರದಿಂದ ಅದಿರು ಲಾಟ್​ನ ಕೆಮಿಕಲ್ ಅನಲಿಸಿಸ್ ರಿಪೋರ್ಟ್, ಜಿಯೋ ಕೋ-ಆರ್ಡಿನೇಟ್ ಸಹ ಅನುಮತಿ ಪಡೆದುಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಜತೆಗೆ ಅಫಿಡೆವಿಟ್ ಕೂಡ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ನಂತರ ಉಪ ನಿರ್ದೇಶನಕರು ಅಥವಾ ಹಿರಿಯ ಭೂ ವಿಜ್ಞಾನಿ ಅರಣ್ಯ ಇಲಾಖೆಯ ಅಧಿಕಾರಿ ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ (ಅರಣ್ಯ ಪ್ರದೇಶದೊಳಗಿನ ಗುತ್ತಿಗೆ ಪ್ರದೇಶವಾಗಿದ್ದಲ್ಲಿ) ಅಲ್ಲಿಂದ ಸ್ಟಾಕ್​ನಿಂದ ಸ್ಯಾಂಪಲ್ ಸಂಗ್ರಹಿಸಲಿದ್ದಾರೆ. ಇನ್ನೊಂದು ಪ್ರಮುಖ ಅಂಶವೆಂದರೆ, ಅದಿರು ಸಾಗಣೆ ವಾಹನಕ್ಕೆ ಆರ್​ಎಫ್​ಐಡಿ ಇರಬೇಕು ಮತ್ತು ಆ ವಾಹನ ಇಲಾಖೆಯ ಚೆಕ್​ಪೋಸ್ಟ್ ಮೂಲಕವೇ ಹಾದು ಹೋಗಬೇಕು. ಆರ್​ಐಡಿಎಫ್ ಇರುವುದರಿಂದ ಇಲಾಖೆಯಿಂದ ನಿರಂತರ ಮಾನಿಟರಿಂಗ್ ನಡೆಯುವುದು. ಅಂದಹಾಗೆ, ಕರ್ನಾಟಕದಿಂದ ಅದಿರು ರಫ್ತು ಸಂದರ್ಭ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಂದು ಬಾರಿಗೆ 10 ಸಾವಿರ ರೂ. ಕಟ್ಟಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ರಫ್ತುದಾರನು ದೇಶದೊಳಗೆ ಇನ್ನೊಬ್ಬ ವ್ಯಕ್ತಿ ಅಥವಾ ಕಂಪನಿಗೆ ಅದಿರು ಮಾರಾಟ ಮಾಡುವುದು ಅಥವಾ ಬದಲು ಮಾಡಿಕೊಳ್ಳುವುದಿಲ್ಲ ಎಂದು ಸ್ಟಾಂಪ್​ಪೇಪರ್ ಮೂಲಕ ನೋಟರಿ ಸಹಿ ಮಾಡಿಸಿ ಕೊಡುವ ಕಠಿಣ ನಿಯಮ ಹಾಕಲಾಗಿದೆ. ಅದಿರು ರಫ್ತುಗೆ ಬಳಕೆ ಮಾಡುವ ಬಂದರಿನ ಅನುಮತಿ ಪತ್ರವೂ ಬೇಕಾಗುತ್ತದೆ. ಅದಿರನ್ನು ಎಷ್ಟು ದಿನ ಬಂದರಿನಲ್ಲಿ ಸ್ಟಾಕ್ ಮಾಡಲಾಗುತ್ತದೆ, ಯಾವ ಸ್ಥಳಕ್ಕೆ ಕಳುಹಿಸಲಾಗುತ್ತದೆ ಎಂಬುದು ಐಎಲ್​ಎಂಎಸ್​ಗೆ ತಿಳಿಸಬೇಕಾಗುತ್ತದೆ. ಶೀಘ್ರವೇ ಇನ್ನೊಂದಿಷ್ಟು ಸುಧಾರಣಾ ಕ್ರಮದೊಂದಿಗೆ ಪೂರ್ಣ ಪ್ರಮಾಣದ ಮಾಹಿತಿಯ ಮಾರ್ಗಸೂಚಿ ಹೊರಡಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.
ಅದಿರು ಸಾಗಣೆ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿದೆ. ಸರಿಯಾದ ಕ್ರಮದಲ್ಲಿ ಮಾನಿಟರಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
|ಹಾಲಪ್ಪ ಆಚಾರ್ಗಣಿ ಸಚಿವ
ಸರ್ಕಾರದ ಮೇಲೆ ಒತ್ತಡ:ರಾಜ್ಯದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಗಣಿಗಾರಿಕೆಗೆ ಅವಕಾಶವಿದೆಯಾದರೂ ಅದಿರನ್ನು ರಫ್ತು ಮಾಡಲು ಪ್ರಸ್ತುತ ನಿಷೇಧವಿದೆ. ಆದರೆ ಫೆಡರೇಷನ್ ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಮನವಿ ಮಾಡಿ ಈ ರೀತಿ ರಫ್ತು ನಿಷೇಧ ಸರಿಯಲ್ಲ. ಈ ಉದ್ಯಮ ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕುತ್ತಿ ದ್ದಾರೆಂದು ಸಮಸ್ಯೆ ಬಗ್ಗೆ ವಿವರಿಸಲಾಗಿತ್ತು. ಅಲ್ಲದೇ ರಫ್ತು ನಿಷೇಧ ತೆರವು ಮಾಡುವಂತೆ ಸರ್ಕಾರದ ಮೇಲೆ ಒತ್ತಡವೂ ಇತ್ತು.
ಪ್ರಸ್ತುತ ಏನಿದೆ ಪರಿಸ್ಥಿತಿ?;ಸದ್ಯ ಗಣಿಗಾರಿಕೆ ಚಟುವಟಿಕೆ ನಡೆದಿದ್ದು, ರಾಜ್ಯದಲ್ಲಿ ಉತ್ಪತ್ತಿಯಾಗುವ ಅದಿರನ್ನು ರಾಜ್ಯ ಕೈಗಾರಿಕೆ, ಉದ್ಯಮಗಳಿಗೆ ಮಾತ್ರ ನೀಡಲಾಗುತ್ತಿದೆ. ಜೆಎಸ್​ಡಬ್ಲ್ಯು ದೊಡ್ಡ ಗ್ರಾಹಕ. ಇದನ್ನು ಹೊರತುಪಡಿಸಿ ಉಳಿದವರು ಸಣ್ಣ ಮಟ್ಟಿನ ಖರೀದಿದಾರರು. ರಾಜ್ಯದಲ್ಲಿ ಉತ್ಪತ್ತಿಯಾಗುವ ಅದಿರನ್ನು ಏನು ಮಾಡುವುದೆಂಬ ಸಂಕಟ ಈ ಕ್ಷೇತ್ರದವರಿಗಿದೆ. ಜತೆಗೆ ಸ್ಟಾಕ್ ಯಾರ್ಡ್​ನಲ್ಲಿ ಬಹಳ ದಿನಗಳು ಇಡುವುದಕ್ಕೂ ಸಾಧ್ಯವಿಲ್ಲ.
ಆಡಳಿತ ಪಕ್ಷಕ್ಕೆ ಅಳುಕು:ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯೇ 12-13 ವರ್ಷದ ಹಿಂದೆ ಬಿಜೆಪಿ ಸರ್ಕಾರಕ್ಕೆ ಉರುಳಾಗಿತ್ತು. ಬಳಿಕ ಅದಿರು ಉತ್ಪಾದನೆ ಮೇಲೆ ಪರಿಣಾಮ ಬೀರುವ ನಿರ್ಧಾರಗಳೂ ಆದವು. ಪುನಃ ಅದಿರು ಉತ್ಪಾದನೆಯಾದರೂ ಅದನ್ನು ವಿದೇಶಕ್ಕೆ ರಫ್ತು ಮಾಡಲು ಅವಕಾಶಗಳಿಲ್ಲ. ಒಂದೊಮ್ಮೆ ಮತ್ತೆ ಮುಕ್ತಗೊಳಿಸಿ ಅಕ್ರಮ ಗಣಿಗಾರಿಕೆ ಶುರುವಾದರೆ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಅಳುಕು ಆಡಳಿಕ ಪಕ್ಷಕ್ಕಿತ್ತು. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದು ಪ್ರತಿ ಹಂತದಲ್ಲೂ ಮಾನಿಟರಿಂಗ್ ವ್ಯವಸ್ಥೆಗೆ ಗಮನ ಕೊಡಲಾಗಿದೆ. ಮುಂದೆ ಚುನಾವಣೆ ಇದೆ, ರಫ್ತು ನಿಷೇಧ ತೆರವು ಮಾಡಿದರೆ ಆಗುವ ಲಾಭ ನಷ್ಟದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯೂ ನಡೆದಿದೆ.
ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
