|ಕೋಟ ಶ್ರೀನಿವಾಸ ಪೂಜಾರಿ
ನಾರಾಯಣ ಗುರುಗಳ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಅಳವಡಿಸಿ ಕೊಳ್ಳಲು ಕೇಂದ್ರ ಸರ್ಕಾರ ನಿರಾಕರಿಸಿತ್ತೆಂಬ ಸುದ್ದಿ ಚರ್ಚೆಗೆ ಗ್ರಾಸವಾಯಿತು. ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಮೊದಲೇ ನಾರಾಯಣ ಗುರುಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಪ್ರಚಾರದೊಂದಿಗೆ ಕೇಂದ್ರ ಸರ್ಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿಡಲು ಪ್ರಯತ್ನ ಸಾಗಿತು. ಟೀಕೆ ಮಾಡುವ ಭರದಲ್ಲಿ ದೇಶದ ಪ್ರಧಾನಮಂತ್ರಿಗಳನ್ನೇ ಎಳೆದು ತರುವ ಹುನ್ನಾರವಾಗಿತ್ತು.
ಪ್ರಧಾನಿಯಾದ ನಂತರ 2015ರ ಡಿಸೆಂಬರ್ 15ರಂದು ನಾರಾಯಣ ಗುರುಗಳ ಸಂಕಲ್ಪಕೇಂದ್ರವಾದ ಶಿವಗಿರಿಗೆ ಭೇಟಿ ನೀಡಿದ ನರೇಂದ್ರ ಮೋದಿಯವರು, ‘ಒಂದು ಕಾಲದಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿದ್ದ ಕೇರಳದಲ್ಲಿ, ಮೇಲು-ಕೀಳು, ಜಾತಿ-ಧರ್ಮಗಳ ತಾರತಮ್ಯದ ನೆಲವೀಡಾಗಿದ್ದ ನೆಲದಲ್ಲಿ, ನಾರಾಯಣ ಗುರುಗಳು ತಂದ ಸಾಮಾಜಿಕ ಪರಿವರ್ತನೆಯಿಂದಾಗಿ ಕೇರಳವಿಂದು ಸಮಾನತೆಯ ಸಂದೇಶ ಸಾರುವ ನಾಡಾಗಿದೆ. ನಾರಾಯಣ ಗುರುಗಳ ಆದರ್ಶ ಜಗತ್ತನ್ನೇ ಬೆಳಕು ಮಾಡಬಲ್ಲದು’ ಎಂದು ಹೇಳಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಅನಾವರಣ ಮಾಡಿದ್ದರು.
ನೋವಿನ ಸಂಗತಿ ಎಂದರೆ, ಕೇರಳದ ಕಮ್ಯುನಿಷ್ಟ್ ಸರ್ಕಾರ ಯಾವುದೇ ಪೂರ್ವಾಪರ ಯೋಚಿಸದೆ, 2021ರ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಕೇರಳ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಪರಿಗಣಿಸದೆ, ಕೇಂದ್ರ ಸರ್ಕಾರದ ಯಾವ ಆಹ್ವಾನವನ್ನೂ ಸ್ವೀಕರಿಸದೆ, ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅನುಮತಿ ಕೇಳಿತ್ತು. ಒಂದು ವೇಳೆ ನಿಯಮದಂತೆ ಸಹಜ ನಿರಾಕರಣೆ ಆಗಿದ್ದಲ್ಲಿ ಅದನ್ನು ರಾಜಕೀಯ ದಾಳವಾಗಿ ಉಪಯೋಗಿಸಿ ಕೇರಳದಲ್ಲಿ ತನಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವ ಈಳವ ಜನಾಂಗದ ಸಂಘಟನೆಯನ್ನು ಒಡೆಯುವ ರಾಜಕೀಯ ತಂತ್ರಗಾರಿಕೆ ಅದರದ್ದು.
ಕೇರಳದ ಈಳವರು, ಕರ್ನಾಟಕದ ಈಡಿಗರು, ನಾಮಧಾರಿಗಳು, ಕರಾವಳಿ ಜಿಲ್ಲೆಯಲ್ಲಿರುವ ಬಿಲ್ಲವರು ಮತ್ತು ರಾಜ್ಯದಲ್ಲಿರುವ ಸುಮಾರು 20ಕ್ಕೂ ಹೆಚ್ಚು ಉಪಪಂಗಡಗಳು ನಾರಾಯಣ ಗುರುಗಳನ್ನು ಕುಲದೇವರನ್ನಾಗಿ ಸ್ವೀಕರಿಸಿ, ಮಂದಿರಗಳನ್ನು ನಿರ್ಮಾಣ ಮಾಡಿ ನಿತ್ಯಪೂಜಿಸುತ್ತಾರೆ. ಇವರೆಲ್ಲರನ್ನೂ ಕೆರಳಿಸುವುದು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಈ ಹಿಂದುಳಿದ ವರ್ಗಗಳನ್ನು ಎತ್ತಿ ಕಟ್ಟುವುದು, ಆ ಮೂಲಕ ಹಿಂದೂ ಸಮಾಜವನ್ನು ಒಡೆಯುವುದು ಕೇರಳದ ಕಮ್ಯುನಿಷ್ಟ್ ಸರ್ಕಾರದ ಗುರಿಯಾಗಿತ್ತು.
ದೇಶದ ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಸೃಷ್ಟಿಸುವ ನೆಲೆಯಲ್ಲಿ ಕೇಂದ್ರ ಸರ್ಕಾರ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಪ್ರತಿ ರಾಜ್ಯಕ್ಕೆ ನಿಗದಿತ ವರ್ಷಗಳಿಗೊಮ್ಮೆ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಕಳೆದ ವರ್ಷ ಪರೇಡ್​ನಲ್ಲಿ ಭಾಗವಹಿಸಲು ಅವಕಾಶ ಪಡೆದ ಕೇರಳ ಮತ್ತೊಂದು ಅವಕಾಶ ಪಡೆಯಲು ತನ್ನ ನಿಗದಿತ ಅವಧಿ ಪೂರೈಸುವ ಅನಿವಾರ್ಯತೆ ಇತ್ತು.
ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಹುದೊಡ್ಡ ಕೊಡುಗೆ ನೀಡಿದ್ದ ನಾರಾಯಣ ಗುರುಗಳು ಮತಾಂತರ ತಡೆಗಟ್ಟಲು ಅಹರ್ನಿಶಿ ದುಡಿದಿದ್ದರು. ಹಿಂದೂ ಧರ್ಮದಲ್ಲಿರುವ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದಲ್ಲಿ ಬಹುದೊಡ್ಡ ಸಂಖ್ಯೆ ಹೊಂದಿರುವ ಈಳವರನ್ನು ಮತ್ತು ಜಾತಿಮತವೆನ್ನದೆ ಬಡವರನ್ನು, ಅನ್ಯ ಧರ್ವಿುಯರು ಸಾಮೂಹಿಕವಾಗಿ ಮತಾಂತರಗೊಳಿಸುತ್ತಿದ್ದಾಗ, ಶೂದ್ರರಿಗೂ ಈಶ್ವರನನ್ನು ಪೂಜಿಸಲು ಅವಕಾಶ ಮಾಡಿಕೊಟ್ಟರು. ನಾರಾಯಣ ಗುರುಗಳು ತಾವು ನಂಬಿದ ಸೈದ್ಧಾಂತಿಕ ತತ್ತ್ವಗಳಿಗೆ ಅದೆಷ್ಟು ಬದ್ಧರಾಗಿ ಕೆಲಸ ಮಾಡಿದ್ದಾರೆ ಎಂದರೆ, ಗುರುಗಳ ಆಶ್ರಮಕ್ಕೆ ಒಮ್ಮೆ ಗಾಂಧೀಜಿ ಆಗಮಿಸಿ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಸಾಕಷ್ಟು ಸಮಯ ರ್ಚಚಿಸಿದ ನಂತರ ಆಶ್ರಮದ ಒಟ್ಟು ಚಟುವಟಿಕೆಗಳನ್ನು ಗಮನಿಸಿದ ಗಾಂಧೀಜಿ, ‘ಪ್ರಪಂಚದಲ್ಲಿ ಸೃಷ್ಟಿಕರ್ತ ಯಾರು ಅಂತ ಕೇಳಿದರೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ ಎಂದು ನಾವು ಹೇಳುತ್ತೇವೆ. ಬ್ರಹ್ಮನ ಸೃಷ್ಟಿಯಲ್ಲಿ ಇಡೀ ಜಗತ್ತಿನ ಬದುಕು ರೂಪಿತವಾಗಿದೆ ಎಂದು ನಾವಂದುಕೊಂಡಿದ್ದು, ಆದರಿಂದು ಈ ಜಗತ್ತಿನಲ್ಲಿ ಮತ್ತೊಬ್ಬ ಆಧುನಿಕ ಬ್ರಹ್ಮನನ್ನು ನಾನು ನೋಡಿ ಬಂದೆ. ಆ ನೂತನ ಬ್ರಹ್ಮನೇ ನಾರಾಯಣ ಗುರು’ ಎನ್ನುತ್ತಾರೆ. ಅಂಥ ಶ್ರೇಷ್ಠ ಸಂತನ ಹೆಸರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ಆತಂಕಕಾರಿ.
(ಲೇಖಕರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

ಮದ್ವೆ ಬಳಿಕವೂ ಸಂಬಂಧಿ ಜತೆ ಲವ್; ಪ್ರೀತಿಯನ್ನು ಬಿಡಲಾಗದೆ ಮನೆ ಬಿಟ್ಟುಬಂದವರು ಪ್ರಾಣವನ್ನೇ ಬಿಟ್ಟರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
