ಜನಪ್ರಿಯ ಸೌಂದರ್ಯ ಸ್ಪರ್ಧೆಯಾದ ಮಿಸ್ ವರ್ಲ್ಡ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 1996ರಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ಜರುಗಿದ ಈ ಸ್ಪರ್ಧೆಗೆ ಬಲಪಂಥೀಯರು, ಎಡಪಂಥೀಯರು ಹಾಗೂ ಹಲವಾರು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವ್ಯಾಪಕ ಪ್ರತಿಭಟನೆಗಳೂ ನಡೆದಿದ್ದವು. ಈ ವರ್ಷಾಂತ್ಯದಲ್ಲಿ ಮತ್ತೆ ಭಾರತದಲ್ಲಿ ಈ ಸ್ಪರ್ಧೆ ನಡೆಯಲಿದೆ. ಹಾಗಿದ್ದರೆ ಮತ್ತೆ ವಿರೋಧಗಳು ವ್ಯಕ್ತವಾಗುತ್ತವೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕಂತೂ ಯಾವುದೇ ಪ್ರತಿರೋಧ ಕಂಡುಬಂದಿಲ್ಲ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಸುಂದರಿ (ಮಿಸ್ ವರ್ಲ್ಡ್) ಸ್ಪರ್ಧೆಯು ಭಾರತದಲ್ಲಿ ಜರುಗಲಿದೆ ಎಂದು ಮಿಸ್​ವರ್ಲ್ಡ್ ಸಂಸ್ಥೆ ಕೆಲ ದಿನಗಳ ಹಿಂದೆ ಘೋಷಿಸಿದೆ. ಈ ನಿರ್ಧಾರವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಉತ್ತೇಜಿಸುವ ಅದರ ಬದ್ಧತೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅದರ ಉತ್ಸಾಹವನ್ನು ಗುರುತಿಸುತ್ತದೆ ಎಂದೂ ಅದು ಹೇಳಿದೆ. ಭಾರತದಲ್ಲಿ ಈ ಸ್ಪರ್ಧೆ ಎರಡನೇ ಬಾರಿಗೆ ಜರುಗುತ್ತಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ 1996ರಲ್ಲಿ ಆಯೋಜಿಸಲಾಗಿತ್ತು. 1996ರಲ್ಲಿ ಭಾರತದಲ್ಲಿ ಈ ಸ್ಪರ್ಧೆ ಆಯೋಜಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಬಾಲಿವುಡ್ ನಟ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಅಮಿತಾಭ್ ಬಚ್ಚನ್ ಕಾರ್ಪೆರೇಷನ್ ಲಿಮಿಟೆಡ್ (ಎಬಿಸಿಎಲ್) ಈ ಕಾರ್ಯಕ್ರಮವನ್ನು ಸಂಘಟಿಸಿತ್ತು. ಸ್ಪರ್ಧೆಯ ನಂತರ ಈ ಕಂಪನಿ ಆರ್ಥಿಕ ನಷ್ಟ ಅನುಭವಿಸಿತು.
ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದಾಗ, ಹಲವಾರು ಪ್ರತಿಭಟನೆಗಳು ನಡೆದವು. ಇದರಲ್ಲಿ ಆತ್ಮಾಹುತಿಯೂ ಸೇರಿತ್ತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಹೇಳುತ್ತದೆ. ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಈಜುಡುಗೆ ಸ್ಪರ್ಧೆಯನ್ನು ಸೀಶೆಲ್ಸ್ ದ್ವೀಪಗಳಿಗೆ ಸ್ಥಳಾಂತರಿಸಲಾಯಿತು. ಇಂತಹ ಸ್ಪರ್ಧೆಗಳು ಮಹಿಳೆಯರಿಗೆ ಅವಮಾನಕರ ಎಂದು ಸ್ತ್ರೀವಾದಿಗಳು ಆಕ್ಷೇಪಿಸಿದರು. ಇಂತಹ ಪ್ರದರ್ಶನವು ಪಾಶ್ಚಿಮಾತ್ಯ ಸಂಸ್ಕೃತಿಯ ಆಕ್ರಮಣವೆಂದು ಹಿಂದೂ ರಾಷ್ಟ್ರೀಯವಾದಿಗಳು ಟೀಕಿಸಿದರು. ಸ್ಪರ್ಧೆಯಲ್ಲಿ ಮಹಿಳೆಯರು ‘ತಜ್ಞರ’ ತೀರ್ಪಿಗಾಗಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ಹೀಗಾಗಿ ‘ಪಾಶ್ಚಿಮಾತ್ಯ’ ಆದರ್ಶಗಳ ಬರುವಿಕೆಯೊಂದಿಗೆ ಸಾಂಪ್ರದಾಯಿಕ ಭಾರತೀಯ ಮೌಲ್ಯಗಳ ನಷ್ಟವಾಗುತ್ತದೆ ಎಂಬ ಕಳವಳವನ್ನು ಬಲಪಂಥೀಯ ಗುಂಪುಗಳು ವ್ಯಕ್ತಪಡಿಸಿದವು. ಜಾಗತೀಕರಣ ಮತ್ತು ಮಾರುಕಟ್ಟೆ ಶಕ್ತಿಗಳ ಅನಾವರಣದಿಂದ ಭಾರತೀಯ ಮಹಿಳೆಯರು ಮತ್ತು ಕಾರ್ವಿುಕರಿಗೆ ದುಷ್ಪರಿಣಾಮ ಉಂಟಾಗುತ್ತದೆ ಹಾಗೂ ಬಡತನ- ಸಬಲೀಕರಣದ ವಿಷಯಗಳ ಬದಲಾಗಿ ಇಂತಹ ಘಟನೆಗಳ ಮೇಲೆ ಏಕೆ ಗಮನ ಕೇಂದ್ರೀಕರಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿ ಎಡಪಂಥೀಯ ಗುಂಪುಗಳು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮಹಿಳಾ ಜಾಗರಣ ಸಮಿತಿ, ಮಹಿಳಾ ಜಾಗೃತಿ, ವಿಮೋಚನಾ, ಅಖಿಲ ಭಾರತ ಮಹಿಳಾ ಪ್ರಜಾಸತ್ತಾತ್ಮಕ ವೇದಿಕೆ, ರಾಷ್ಟ್ರೀಯ ಮಹಿಳಾ ಆಯೋಗದ ಮಹಿಳಾ ಗುಂಪುಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆಲ್ ಇಂಡಿಯಾ ವುಮೆನ್ಸ್ ಡೆಮಾಕ್ರಟಿಕ್ ಫೋರಮ್ ಒಂದು ಅಣಕು ಸ್ಪರ್ಧೆಯನ್ನು ಕೂಡ ಆಗ ಆಯೋಜಿಸಿತ್ತು. ಸಾರ್ವಜನಿಕ ಉದ್ಯಾನದಲ್ಲಿ ಆಯೋಜಿಸಿದ್ದ ಅಣಕು ಸ್ಪರ್ಧೆಯಲ್ಲಿ ಸ್ತ್ರೀವಾದಿಗಳು ಮಹಿಳಾ ಸ್ಪರ್ಧಿಗಳಿಗೆ ಮಿಸ್ ಪಾವರ್ಟಿ, ಮಿಸ್ ಹೋಮ್ೆಸ್ ಮತ್ತು ಮಿಸ್ ಲ್ಯಾಂಡ್​ಲೆಸ್ ಎಂದು ಕಿರೀಟ ತೊಡಿಸಿದರು. ಇಷ್ಟೆಲ್ಲ ಪ್ರತಿಭಟನೆಗಳ ನಡುವೆಯೂ ಈ ಸ್ಪರ್ಧೆಯನ್ನು ನಡೆಸಲಾಯಿತು.
ವಿಶ್ವ ಸುಂದರಿ ಸ್ಪರ್ಧೆಯು ವಿಶ್ವದ ಅತ್ಯಂತ ಹಳೆಯ ಸ್ಪರ್ಧೆಗಳಲ್ಲಿ ಒಂದಾಗಿದೆ. ಅಮೆರಿಕದ ಸಾರ್ವಜನಿಕ ಪ್ರಸಾರ ಸೇವೆ (ಅಮೆರಿಕ ಪಬ್ಲಿಕ್ ಬ್ರಾಡ್​ಕಾಸ್ಟಿಂಗ್- ಎಪಿಬಿ) ಪ್ರಕಾರ, ಇದನ್ನು 1951 ರಲ್ಲಿ ಬ್ರಿಟನ್​ನಲ್ಲಿ ಪ್ರಾರಂಭಿಸಲಾಯಿತು. ಯುದ್ಧಾನಂತರದ ಪುನರ್ನಿರ್ವಣ ದಿನಗಳಲ್ಲಿ ಈ ಕಾರ್ಯಕ್ರಮವು ಬ್ರಿಟಿಷ್ ಸರ್ಕಾರ ಆಯೋಜಿಸಿದ್ದ ‘ಫೆಸ್ಟಿವಲ್ ಆಫ್ ಬ್ರಿಟನ್’ನಲ್ಲಿ ಜರುಗಿತು. ಇದು ದೇಶದ ಕೈಗಾರಿಕಾ ಉತ್ಪನ್ನಗಳು, ತಾಂತ್ರಿಕ ಆವಿಷ್ಕಾರಗಳು ಮತ್ತು ಕಲೆಗಳನ್ನು ಪ್ರದರ್ಶಿಸಿತು. ಸಂಘಟಕರು ಉತ್ಸವದ ಹಾಜರಾತಿ ಹೆಚ್ಚಿಸಲು ಲಂಡನ್ ಮನರಂಜನಾ ಕಂಪನಿಯಾದ ಮೆಕ್ಕಾ ಲಿಮಿಟೆಡ್​ನ ಸೇವೆ ಪಡೆದುಕೊಂಡರು. ಕಂಪನಿಯ ಪ್ರಚಾರ ನಿರ್ದೇಶಕರಾದ ಎರಿಕ್ ಮೊರ್ಲಿ ಅವರು ‘ಫೆಸ್ಟಿವಲ್ ಆಫ್ ಬ್ರಿಟನ್’ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನು ಸೇರಿಸಲು ಉತ್ಸವದ ಆಯೋಜಕರ ಮನವೊಲಿಸಿದರು. ಸ್ಪರ್ಧಿಗಳಿಗೆ ಹೊಸ ಬೀಚ್​ವೇರ್ ಸೆನ್ಸೇಷನ್ ಬಿಕಿನಿ ಉಡುಗೆ ತೊಡಿಸಿ ಸ್ಪರ್ಧೆಯ ಪರೀಕ್ಷೆಯನ್ನು ನಡೆಸಬೇಕು ಎಂದು ಮೊರ್ಲಿ ನಿರ್ಧರಿಸಿದರು. ಆದರೆ, ಬಿಕಿನಿ ದಿರಿಸುಗಳ ಮೂಲಕ ಮಹಿಳೆಯರನ್ನು ನಿರ್ಣಯಿಸುವುದಾದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಐರ್ಲೆಂಡ್ ಮತ್ತು ಸ್ಪೇನ್ ಬೆದರಿಕೆ ಒಡ್ಡಿದ್ದರಿಂದಾಗಿ, ಬಿಕಿನಿ ಬದಲಿಗೆ ಸ್ನಾನದ ಸೂಟ್ ದಿರಿಸು ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. ನಂತರ ಇದನ್ನು ಬ್ರಿಟಿಷ್ ಪತ್ರಿಕೆಗಳು ‘ಮಿಸ್ ವರ್ಲ್ಡ್’ ಎಂದು ಬಿಂಬಿಸಿದವು. ಈ ಕಾರ್ಯಕ್ರಮವು ಯಶಸ್ಸು ಕಂಡಿದ್ದರಿಂದ ಇದನ್ನು ಪ್ರತಿ ವರ್ಷ ಸಂಘಟಿಸಲು ನಿರ್ಧರಿಸಲಾಯಿತು. ನಂತರ ದಿನಗಳಲ್ಲಿ ಟೆಲಿವಿಷನ್ ಪ್ರಸಾರ ಆರಂಭವಾಗಿದ್ದರಿಂದ ಇದರ ಜನಪ್ರಿಯತೆ ಹೆಚ್ಚಿತು.
ಈ ವರ್ಷದ ಸೌಂದರ್ಯ ಸ್ಪರ್ಧೆಯಲ್ಲಿ 130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ‘ಇವರು ತಮ್ಮ ವಿಶಿಷ್ಟ ಪ್ರತಿಭೆ, ಬುದ್ಧಿವಂತಿಕೆ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸಲು ಭಾರತದಲ್ಲಿ ಒಟ್ಟುಗೂಡುತ್ತಾರೆ. ಪ್ರತಿಭಾ ಪ್ರದರ್ಶನಗಳು, ಕ್ರೀಡಾ ಸವಾಲುಗಳು ಮತ್ತು ದತ್ತಿ ಉಪಕ್ರಮಗಳು ಸೇರಿದಂತೆ ಕಠಿಣ ಸ್ಪರ್ಧೆಗಳ ಸರಣಿಯಲ್ಲಿ ಭಾಗವಹಿಸುತ್ತಾರೆ. ಇವೆಲ್ಲವೂ ಅವರನ್ನು ಬದಲಾವಣೆಯ ಅಸಾಧಾರಣ ರಾಯಭಾರಿಗಳನ್ನಾಗಿ ಮಾಡುವ ಗುಣಗಳನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿವೆ’ ಎಂದು ಆಯೋಜಕರು ಹೇಳಿದ್ದಾರೆ. ನವೆಂಬರ್/ಡಿಸೆಂಬರ್ 2023ರಲ್ಲಿ ನಿಗದಿಯಾಗಿರುವ ಗ್ರಾ್ಯಂಡ್ ಫಿನಾಲೆಗೆ ಒಂದು ತಿಂಗಳ ಮೊದಲು ಭಾಗವಹಿಸುವವರನ್ನು ಶಾರ್ಟ್​ಲಿಸ್ಟ್ ಮಾಡಲು ಹಲವಾರು ಸುತ್ತುಗಳು ಇರುತ್ತವೆ ಎಂದು ಸಂಸ್ಥೆಯ ವೆಬ್​ಸೈಟ್ ಹೇಳುತ್ತದೆ.
1991ರಲ್ಲಿ ಭಾರತದಲ್ಲಿ ಜಾರಿಗೊಳಿಸಲಾದ ಆರ್ಥಿಕ ಉದಾರೀಕರಣ ನೀತಿಯು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಮತ್ತು ಖಾಸಗಿ ವ್ಯವಹಾರಗಳು ಭಾರತವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು, ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಬ್ರಾ್ಯಂಡ್​ಗಳು ತಮ್ಮ ಉತ್ಪನ್ನ ಮತ್ತು ಸೇವೆಗಳ ವಿಸ್ತರಣೆಗೆ ಭಾರತವನ್ನು ಒಂದು ಹೊಸ ಮಾರುಕಟ್ಟೆಯಾಗಿ ಕಂಡುಕೊಂಡವು. 1994ರಲ್ಲಿ ವಿಶ್ವ ಸುಂದರಿ (ಮಿಸ್ ವರ್ಲ್ಡ್) ಮತ್ತು ಭುವನ ಸುಂದರಿ (ಮಿಸ್ ಯುನಿವರ್ಸ್) ಪ್ರಶಸ್ತಿಗಳನ್ನು ಭಾರತದ ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ಕ್ರಮವಾಗಿ ಗೆದ್ದರು. ಇದರಿಂದಾಗಿ ಸೌಂದರ್ಯ ಸ್ಪರ್ಧೆಗಳು ಭಾರತದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಸಹಾಯವಾಯಿತು.
ಕೇಂದ್ರದಿಂದ ಸೂರ್ಯಕಾಂತಿ, ಸೋಯಾಬೀನ್‌ ಎಣ್ಣೆಯ ಆಮದು ಸುಂಕ ಕಡಿತ: ಅಡುಗೆ ಎಣ್ಣೆ ಬೆಲೆ ಇಳಿಕೆ ಸಾಧ್ಯತೆ

ಎರಡು ಚಪ್ಪಲಿಗಳಿವೆ ಹುಷಾರ್​! ಪವನ್​ ಕಲ್ಯಾಣ್​ಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಾಜಿ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
