ನವದೆಹಲಿ: ಮಧ್ಯಪ್ರದೇಶ ಸರ್ಕಾರಕ್ಕೆ ಮುಖ್ಯಮಂತ್ರಿ ಕಮಲನಾಥ್ ಅವರ ಆಡಳಿತ ವೈಖರಿ, ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಭಾರಿ ಹೊಡೆತ ನೀಡಿದೆ. ಕಳೆದ ಕೆಲವು ದಿನಗಳ ರಾಜಕೀಯ ಬೆಳವಣಿಗೆ ಇದೀಗ ಅಂತಿಮ ಘಟ್ಟಕ್ಕೆ ಬಂದಿದ್ದು, ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯೊಂದಿಗೆ ಒಂದು ಅಧ್ಯಾಯ ಮುಗಿದಂತಾಗಿದೆ.
ಜ್ಯೋತಿರಾದಿತ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಕಮಲನಾಥರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಜ್ಯೋತಿರಾದಿತ್ಯ ಅವರ ಬೆಂಬಲಿಗರಾದ 22 ಶಾಸಕರು ಕೂಡ ರಾಜೀನಾಮೆಯನ್ನು ಸ್ಪೀಕರ್​ಗೆ ರವಾನಿಸಿದ್ದಾರೆ. ಇದರೊಂದಿಗೆ ಕಮಲನಾಥ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 114 ಸದಸ್ಯ ಬಲದ ಬದಲು ಈಗ 92 ಸದಸ್ಯಬಲವನ್ನಷ್ಟೇ ಆಡಳಿತಾರೂಢ ಕಾಂಗ್ರೆಸ್​ ಹೊಂದಿದೆ. ಹೀಗಾಗಿ, ಈಗ ಎಲ್ಲರ ಗಮನ ಒಂದೆಡೆ ಕಮಲನಾಥ ಸರ್ಕಾರದ ಕಡೆಗಿದೆ.
ಇದೇ ವೇಳೆ, ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ಮಿಷನ್ ಮಧ್ಯಪ್ರದೇಶ ಮುಕ್ತಾಯ ಹಂತ ತಲುಪಿದ್ದು, ಮುಂದಿನ ನಡೆ ರಾಜಸ್ಥಾನದ ಕಡೆಗೆ ಇದೆಯೇ ಎಂಬ ಅನುಮಾನವೂ ಮೂಡಿದೆ. ಇದಕ್ಕೂ ಕಾರಣ ಇಲ್ಲದಿಲ್ಲ. ಅಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಯ ಸಾಮ್ಯತೆಯನ್ನು ಹೊಂದಿರುವುದು ಸ್ಪಷ್ಟ.
ರಾಜ್ಯಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಸೃಷ್ಟಿಯಾಗಿದ್ದು, ಅಭ್ಯರ್ಥಿ ನೇಮಕ ವಿಚಾರದ ಗಲಾಟೆ ಮುನ್ನೆಲೆಗೆ ಬಂದಿದೆ. ವಜ್ರ ವ್ಯಾಪಾರಿ ರಾಜೀವ್ ಅರೋರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಈ ವಿರೋಧವನ್ನು ಲೆಕ್ಕಿಸದೆ ಅರೋರಾ ಹೆಸರನ್ನು ಹೈಕಮಾಂಡ್​ಗೆ ಶಿಫಾರಸು ಮಾಡಿದ್ದಾರೆ.
ವಜ್ರ ವ್ಯಾಪಾರಿಯನ್ನು ರಾಜ್ಯಸಭೆಗೆ ಕಳುಹಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅದರ ಬದಲು ಪಕ್ಷದ ಕಾರ್ಯಕರ್ತರನ್ನೇ ರಾಜ್ಯಸಭೆಗೆ ಕಳುಹಿಸಬೇಕು ಎಂಬುದು ಸಚಿನ್ ಪೈಲಟ್​ ಪ್ರತಿಪಾದನೆ. ಇದೊಂದೇ ವಿಚಾರ ಅಲ್ಲ, ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಪ್ರಕರಣ ಸೇರಿ ಹಲವು ವಿಷಯಗಳಲ್ಲಿ ಹೊಸ ಚಿಗುರು(ಸಚಿನ್ ಪೈಲಟ್​)- ಹಳೇ ಬೇರು(ಅಶೋಕ್ ಗೆಹ್ಲೋಟ್​) ನಡುವೆ ಹೊಂದಾಣಿಕೆ ಇಲ್ಲದಿರವುದು ವ್ಯಕ್ತವಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತಿವೆ.
ಸದ್ಯ ಕಾಂಗ್ರೆಸ್ ಇಲ್ಲಿ ಅಧಿಕಾರ ಉಳಿಸಿಕೊಂಡಿರುವುದು ಒಬ್ಬ ಬಂಡಾಯ ಬಿಎಸ್​ಪಿ ಶಾಸಕನ ಬೆಂಬಲದೊಂದಿಗೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್​ಗೆ 112 ಸದಸ್ಯ ಬಲ ಇದ್ದು, ಇದರಲ್ಲಿ ಮೂವರು ಸಿಪಿಎಂ, ಒಬ್ಬ ಆರ್​ಎಲ್​ಡಿ ಶಾಸಕರೂ ಸೇರಿದ್ದಾರೆ. ಇಲ್ಲಿ ಬಿಜೆಪಿ 80 ಸದಸ್ಯರನ್ನು ಹೊಂದಿದ್ದು, ಒಂದೊಮ್ಮೆ ಮಧ್ಯಪ್ರದೇಶ ಮಾದರಿಗೆ ಬಿಜೆಪಿ ಮನಸ್ಸು ಮಾಡಿದರೆ, ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕೂಡ ಅಪಾಯಕ್ಕೀಡಾಗಲಿದೆ. 20 ಶಾಸಕರ ಲೆಕ್ಕಾಚಾರ ಇಲ್ಲಿ ಅಡಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾಗಿ ವರದಿಯಾಗಿದೆ. (ಏಜೆನ್ಸೀಸ್)
‘ಕೈ’ ಬಿಡಿಸಿಕೊಂಡು ಹೋಗಿ ‘ಕಮಲ’ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ…ಅಂತೂ ಬಿಜೆಪಿಗೆ ಸೇರ್ಪಡೆಯಾಗಿಯೇ ಬಿಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
