| ರಾಘವ ಶರ್ಮ ನಿಡ್ಲೆ ಜೋಷಿಮಠ (ಚಮೋಲಿ)
ಉತ್ತರಾಖಂಡದ ಹಿಮಪ್ರವಾಹ ಸಂಭವಿಸಿ ವಾರ ಪೂರ್ಣಗೊಂಡರೂ ತಪೋವನದ ಎನ್​ಟಿಪಿಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಷನ್) ಸುರಂಗದಲ್ಲಿದ್ದ 39 ಸಿಬ್ಬಂದಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕೆಸರಿನಿಂದ ತುಂಬಿಕೊಂಡಿದ್ದ ಮತ್ತೊಂದು ಸುರಂಗದಿಂದ ಬದುಕಿ ಬಂದ 12 ಮಂದಿಯ ಕಥೆ ಕೇಳಿದರೆ ಮೈ ಜುಮ್ಮೆನಿಸುತ್ತದೆ. 45 ಕಿಮೀ ದೂರದಲ್ಲಿರುವ ಬದರೀನಾಥನೇ ನಮ್ಮೆಲ್ಲರನ್ನೂ ಕಾಪಾಡಿದ ಎಂದು ಕೈ ಮುಗಿಯುತ್ತಾರೆ ಈ ಸಿಬ್ಬಂದಿ! ಭಾನುವಾರ ಸಂಜೆ 5.45ಕ್ಕೆ ‘ಮೃತ್ಯುಸುರಂಗ’ದಿಂದ ಹೊರಬಂದಾಗ ಪುನರ್ಜನ್ಮ ಸಿಕ್ಕ ಭಾವನೆ ಅವರಲ್ಲಿತ್ತು. ಥರಗುಟ್ಟುವ 1-2 ಡಿಗ್ರಿ ಚಳಿ, 350 ಮೀಟರ್ ಉದ್ದದ ಸುರಂಗದಲ್ಲಿ 3 ಮೀಟರ್ ಎತ್ತರಕ್ಕಿದ್ದ ಕೆಸರು ನೀರು ಒಂದೆಡೆಯಾದರೆ ಸುರಂಗದ ಗೋಡೆಗಳಲ್ಲಿನ ಕಬ್ಬಿಣದ ರಾಡ್​ಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾಗ ಆಗುತ್ತಿದ್ದ ನೋವು-ಕಷ್ಟಗಳು, ಇನ್ನು ಬದುಕಲು ಸಾಧ್ಯವಿಲ್ಲ ಎಂದು ಅಳುತ್ತಿದ್ದ ಕೆಲವರು…ಇವೆಲ್ಲವನ್ನೂ ಮೀರಿ ಇವರೆಲ್ಲರೂ ಬಂದದ್ದೇ ರೋಚಕ ಕಥನ.
‘ಅಂದು ಎಂದಿನಂತೆ ಬೆಳಗ್ಗೆ 8 ಗಂಟೆಗೆ ಪ್ರಾಜೆಕ್ಟ್ ಇಂಜಿನಿಯರ್, ವೆಲ್ಡರ್​ಗಳು, ಎಲೆಕ್ಟ್ರಿಷಿಯನ್​ಗಳು ಸೇರಿ ಒಟ್ಟು 12 ಮಂದಿ ಕಾಮಗಾರಿ ಸಂಬಂಧ ಸುರಂಗ ಪ್ರವೇಶಿಸಿದ್ದರು. ಬೆಳಗ್ಗೆ 10.45ರ ವೇಳೆ ಸುರಂಗದಲ್ಲಿ ಕೆಲವರು ಬೊಬ್ಬಿಡುತ್ತಾ, ತಕ್ಷಣ ಸುರಂಗದಿಂದ ಹೊರಹೋಗಿ ಎಂದು ಕೂಗಿದರು. ಏನು ಮಾಡೋಣ ಎಂದು ಯೋಚಿಸುವ ಮುನ್ನವೇ ರಾಕ್ಷಸಾಕಾರದ ಕೆಸರಿನ ಅಲೆ ಸುರಂಗ ಸೇರಿಕೊಂಡಾಗಿತ್ತು. ಮೇಲಾಗಿ, ಎದುರುಭಾಗದಲ್ಲಿ ಕೆಸರು ತುಂಬಿಕೊಡ್ಡಿದ್ದು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ’ ಎಂದು ಸುರಂಗದಿಂದ ಪಾರಾಗಿ ಬಂದ ಭೂಗರ್ಭ ಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ ನೆನೆಸಿಕೊಂಡರು. 12ರಲ್ಲಿ 10 ಮಂದಿ ತಕ್ಷಣವೇ ಗೋಡೆಗಳಲ್ಲಿದ್ದ ಕಬ್ಬಿಣದ ರಾಡ್​ಗಳನ್ನು ಹಿಡಿದು ನಿಂತುಕೊಂಡರು. ಸುರಂಗದಲ್ಲಿ ಬುಲೊ್ಡೕಜರ್ ಕೂಡ ಇತ್ತು. ಅದರಲ್ಲಿದ್ದ ಆಪರೇಟರ್ ಹಾಗೂ ಮತ್ತೋರ್ವ ಕಾರ್ವಿುಕ ಮೇಲಿದ್ದ ಎಕ್ಸ್​ಕಾವೇಟರ್ ಏರಿದರು. ಅದಾಗಲೇ 4 ಮೀಟರ್ ಎತ್ತರವಿದ್ದ ಸುರಂಗದಲ್ಲಿ 3 ಮೀಟರ್ ಎತ್ತರಕ್ಕೆ ಕೆಸರು ತುಂಬಿಕೊಂಡಿತ್ತು. ‘ಕಳೆದ ನಾಲ್ಕೈದು ದಿನಗಳಿಂದ ಚಳಿ ಪ್ರಮಾಣ ಜೋರಿತ್ತು. ಹಿಮ ಪ್ರವಾಹದ ಕೆಸರು ನೀರು ಕೂಡ ಐಸ್​ನಂತಿತ್ತು ಎನ್ನುತ್ತಾರೆ ಪಾರಾಗಿ ಬಂದ ಸಿಬ್ಬಂದಿ ಸತೀಶ್ ಕುಮಾರ್ ಠಾಕೂರ್.
385 ಹಳ್ಳಿಗಳ ಸ್ಥಳಾಂತರ?:ಹಿಮಪ್ರವಾಹದಿಂದಾಗಿ ಚಮೋಲಿ ಜಿಲ್ಲೆಯ ರೇಣಿ ಹಳ್ಳಿ ವಿಪರೀತ ಹಾನಿಗೊಳಗಾಗಿರುವುದರಿಂದ ನದಿ ಕಣಿವೆಯಲ್ಲಿರುವ ರಾಜ್ಯದ 385 ಹಳ್ಳಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕೊನೆಗೂ ಸಿಕ್ಕಿತು ಮೊಬೈಲ್ ಸಿಗ್ನಲ್
ಯಾರ ಮೊಬೈಲ್​ನಲ್ಲೂ ನೆಟ್ವರ್ಕ್ ಸಿಗುತ್ತಿರಲಿಲ್ಲ. ನಿನ್ನ ಮೊಬೈಲ್​ನಲ್ಲಿ ಸಿಗ್ನಲ್ ಸಿಗುತ್ತಾ ನೋಡು ಎಂದು ಪನ್ವಾರ್​ಗೆ ವಿನೋದ್ ಕುಮಾರ್ ಹೇಳಿದ್ದರಿಂದ ಪನ್ವಾರ್ ಮೊಬೈಲ್ ಪರೀಕ್ಷಿಸಿದರು. ಅರೆ..! ಸರ್. ಸಣ್ಣದಾಗಿ ಬಿಎಸ್​ಎನ್​ಎಲ್ ಸಿಗ್ನಲ್ ಬಂದಿದೆ ಎಂದು ಪನ್ವಾರ್ ಬೊಬ್ಬಿಟ್ಟ. ಪನ್ವಾರ್ ಖುಷಿ ನೋಡಿ ಉಳಿದೆಲ್ಲರಲ್ಲೂ ಸಂಭ್ರಮೋಲ್ಲಾಸ ಮನೆ ಮಾಡಿತು. ತಕ್ಷಣವೇ ವೆಲ್ಡರ್ ಪನ್ವಾರ್ ಈ ಯೋಜನೆಯ ನಿರ್ದೇಶಕ ರಾಕೇಶ್ ದಿಮ್ರಿಯವರಿಗೆ ಕರೆ ಮಾಡಿದ. ‘‘ಇನ್ನು 10 ನಿಮಿಷಗಳಲ್ಲಿ ನೀವಿದ್ದ ಸ್ಥಳಕ್ಕೆ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್​ನ ರಕ್ಷಣಾ ಕಾರ್ಯಪಡೆ ಬರಲಿದೆ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ’ ಎಂಬ ಪ್ರತಿಕ್ರಿಯೆ ಬಂತು. 12 ಮಂದಿಯ ಮೊಗದಲ್ಲಿ ಬದುಕಿನ ಭರವಸೆಯ ಬೆಳ್ಳಿ ಕಿರಣ ಅಚ್ಚೊತ್ತಿತ್ತು. ರಕ್ಷಣಾ ಕಾರ್ಯಪಡೆಯ ನೆರವಿನಿಂದಾಗಿ ಸಂಜೆ 5.45ಕ್ಕೆ ಬದುಕುತ್ತೇವೆಂಬ ಸಣ್ಣ ಭರವಸೆ ನಿಜವಾಗಿತ್ತು! ‘ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ಈ ಕೆಲಸವಿಲ್ಲದಿದ್ದರೆ ಮತ್ತೊಂದು. ಜೀವ ಉಳಿದದ್ದೇ ಹೆಚ್ಚು. ಆ 39 ಮಂದಿ ಹೇಗಿದ್ದಾರೋ? ನಮ್ಮನ್ನು ಬದುಕಿಸಿದ ಭಗವಂತ ಜೀವನಕ್ಕೊಂದು ದಾರಿ ತೋರಿಸುತ್ತಾನೆ’ ಎನ್ನುವುದು ವೆಲ್ಡರ್ ಪನ್ವಾರ್ ಮಾತು.
ಹಾಡು ಹೇಳಿ ಕಾಲ ಕಳೆದೆವು
ಕಬ್ಬಿಣದ ರಾಡ್ ಹಿಡಿದಿದ್ದವರ ಕೈಗಳು ಚಳಿಯಿಂದ ಮರಗಟ್ಟುತ್ತಿದ್ದವು. ಹಂತಹಂತವಾಗಿ ಒಬ್ಬೊಬ್ಬರೇ ತಮ್ಮ ಸ್ಥಳಗಳನ್ನು ಎಕ್ಸ್​ಕಾವೇಟರ್​ಗೆ ಬದಲಿಸಲು ಶುರು ಮಾಡಿದರು. ಎಕ್ಸ್ ಕಾವೇಟರ್​ನಲ್ಲಿದ್ದ ಮಂದಿ ರಾಡ್ ಹಿಡಿದು ನಿಂತರು. ಇಡೀ ಪ್ರದೇಶ ಕೆಸರಿನಿಂದ ಬ್ಲಾಕ್ ಆಗಿದ್ದರಿಂದ ಉಸಿರಾಡುವುದೂ ಕಷ್ಟವಾಗುತ್ತಿತ್ತು. ‘ಸಿಬ್ಬಂದಿಯಲ್ಲಿ ಹಿರಿಯರಾಗಿದ್ದ ಶ್ರೀನಿವಾಸ ರೆಡ್ಡಿಯವರೂ ಬದುಕುವ ಭರವಸೆ ಕಳೆದುಕೊಂಡಿದ್ದರು. ಎಲ್ಲರೂ ಪರಸ್ಪರ ಧೈರ್ಯ ತುಂಬಿ ಕೊಂಡೆವು ಮತ್ತು ಪರಸ್ಪರ ಹಾಡು ಹಾಡುತ್ತಾ ಕಾಲ ಕಳೆದೆವು ಎಂದು ವೆಲ್ಡರ್ ವಿನೋದ್ ಕುಮಾರ್ ಪನ್ವಾರ್ ವಿವರಿಸಿದಾಗ ಆತನ ಕಣ್ಣಾಲಿಗಳು ತೇವಗೊಂಡಿದ್ದವು. ಸುರಂಗದಲ್ಲಿ ಓರ್ವ ಹಾಡಲು ಶುರುಮಾಡಿದಂತೆ ಎಲ್ಲರೂ ಸೇರಿ ಒಂದು ದನಿಯಲ್ಲಿ ಹಾಡಿದ್ದರು. ‘ನಾವೆಲ್ಲರೂ ಒಟ್ಟಿಗಿದ್ದೇವೆ. ಯಾರನ್ನೂ ಬಿಟ್ಟುಕೊಡುವುದಿಲ್ಲ’ ಎಂಬ ಸಂದೇಶ ಹಂಚಿಕೊಳ್ಳುವುದೇ ಉದ್ದೇಶ ಆಗಿತ್ತು ಎಂದರು ಶ್ರೀನಿವಾಸ ರೆಡ್ಡಿ. ಆಂಧ್ರಪ್ರದೇಶ ಮೂಲದ ಅವರು, ಬೆಂಗಳೂರಿನ ನಮ್ಮ ಮೆಟೊ್ರೕದಲ್ಲಿ ಕೆಲಸ ಮಾಡಿದ್ದರು. ‘ನನಗೆ ಕನ್ನಡ ಬಲು ಇಷ್ಟ. ಭಾಷೆ ಪೂರ್ಣ ಗೊತ್ತಿಲ್ಲದಿದ್ದರೂ ನಿಮ್ಮೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಕನ್ನಡದಲ್ಲೇ ವಿವರಿಸಿದರು.
ಚಳಿ..ಚಳಿ…
ಸುರಂಗದಲ್ಲಿ ಕಾರ್ಯನಿರ್ವಹಿಸುವ ಮಂದಿ ಸಾಮಾನ್ಯವಾಗಿ ಪ್ರತಿ ಮಧ್ಯಾಹ್ನ 12.30ಕ್ಕೆ ಭೋಜನಕ್ಕಾಗಿ ಹೊರಬರುತ್ತಾರೆ. ಆದರೆ, ಫೆ.7ರ ಕರಾಳ ದಿನ ಊಟವೂ ಇಲ್ಲ, ನೀರೂ ಇಲ್ಲ. ಉಸಿರಾಡಲು ಗಾಳಿಯೂ ಇಲ್ಲ. ಚಳಿಯ ಕಾಟ ಬೇರೆ. ಶರೀರವನ್ನೂ ಆಗಾಗ್ಗೆ ಬೆಚ್ಚಗಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ರಾಡ್ ಹಿಡಿದವರಲ್ಲಿ ಕೆಲವರು ತಮ್ಮ ಕಾಲುಗಳನ್ನು ಅಲ್ಲಾಡಿಸಿದರು. ಎಕ್ಸ್​ಕಾವೇಟರ್​ನಲ್ಲಿದ್ದವರು ಅಲ್ಲೇ ನಿಂತು ಸಣ್ಣಪುಟ್ಟ ವ್ಯಾಯಾಮ ಮಾಡಿದರು. ಪರಸ್ಪರ ಕೈ ಉಜ್ಜಿಕೊಂಡರು. ಬಿಗಿದಪ್ಪಿಕೊಂಡರು. ನಿಂತು ಮೂರ್ನಾಲ್ಕು ಗಂಟೆ ಕಳೆಯಿತು. 12 ಮಂದಿ, ನಿಧಾನವಾಗಿ ಕೆಸರನ್ನು ಬದಿಗೆ ಸರಿಸಿ, ಪ್ರವೇಶದ್ವಾರದ ಕಡೆಗೆ ತೆರಳುವ ಸಾಹಸಕ್ಕೆ ಮುಂದಾದರು. 350 ಮೀಟರ್ ಅಂತರದಲ್ಲಿ ಪ್ರವೇಶದ್ವಾರವಿತ್ತು. ರಾಡ್ ಹಿಡಿದು, ಕೆಸರು ಸರಿಸಿ, 50 ಮೀಟರ್ ದಾಟಲು 2 ಗಂಟೆ ಬೇಕಾಯ್ತು! ತಮ್ಮಲ್ಲಿದ್ದ ಮೊಬೈಲ್ ಟಾರ್ಚ್ ಬಳಸಿಕೊಂಡು ಒಂದೊಂದೇ ಹೆಜ್ಜೆ ಇಟ್ಟಿದ್ದರು. ಕೆಸರಿನೊಂದಿಗೆ ದೊಡ್ಡ ದೊಡ್ಡ ಬಂಡೆಗಳೂ ಸುರಂಗದೊಳಗೆ ಸೇರಿಕೊಂಡಿದ್ದರಿಂದ ಈ ಬಂಡೆಗಳ ಮೇಲೂ ಕೆಲ ಕ್ಷಣ ಕೂತಿದ್ದರು. ‘ಆರಂಭದಲ್ಲಿ ನಾವು ಬದುಕಿ ಹೊರಬರುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ಆದರೆ, ಯಾವಾಗ ಕೆಸರು ನಿಧಾನವಾಗಿ ಕೆಳ ಹೋಗಲು ಶುರುವಾಯೊ್ತೕ ಆಗ ನಾನು ಇತರೆ ಸಿಬ್ಬಂದಿಯಲ್ಲಿ, ಹೆದರುವುದು ಬೇಡ. ದೇವರಿದ್ದಾನೆ. ಕೆಸರು ತಗ್ಗುತ್ತಿದೆ ಎಂದು ಧೈರ್ಯ ಹೇಳಿದೆ’ ಎಂದು ಮೇಲುಸ್ತುವಾರಿ ವೀರೇಂದ್ರ ಕುಮಾರ್ ಗೌತಮ್ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 8 =
Remember me
