ರಾಘವ ಶರ್ಮ ನಿಡ್ಲೆನವದೆಹಲಿ
ಆರು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ ಆದರ್ಶ ಗ್ರಾಮ ಯೋಜನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದ್ದರು. ಆದರೆ, ಈ ಯೋಜನೆ ‘ದೇಶದ ಗ್ರಾಮೀಣ ಮಟ್ಟದಲ್ಲಿ ಮಹತ್ವದ ಬದಲಾವಣೆಯನ್ನೇನೂ ಮಾಡಿಲ್ಲ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯೇ ಕಂಡುಕೊಂಡಿದೆ!
ಯೋಜನೆಯ ಮೂಲ ಉದ್ದೇಶ ಸಾಧಿಸುವಲ್ಲಿ ಸಂಸದರು ವಿಫಲರಾಗಿದ್ದಾರೆ. ಹೀಗಾಗಿ, ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮರುಪರಿಶೀಲನೆ ಆಗಬೇಕಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ತಜ್ಞರ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕೆಲವೊಂದು ಪಂಚಾಯತ್​ಗಳು ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಕಮಟ್ಟಿಗೆ ಸುಧಾರಣೆ ತಂದಿವೆ ಎಂದೂ ವರದಿ ಹೇಳಿರುವುದು ಸ್ವಲ್ಪ ಸಮಾಧಾನಕರ ವಿಷಯ.
ಸಂಸದ ಆದರ್ಶ ಗ್ರಾಮ ಯೋಜನೆ ಸೇರಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಜನ ಕಲ್ಯಾಣ ಯೋಜನೆಗಳ ವಾಸ್ತವ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸುವ ಜವಾಬ್ದಾರಿಯನ್ನು 5ನೇ ಕಾಮನ್ ರಿವ್ಯೂ ಮಿಷನ್​ಗೆ ವಹಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ತಜ್ಞ ರಾಜೀವ್ ಕಪೂರ್ ಮಿಷನ್ ಮುಖ್ಯಸ್ಥರಾಗಿದ್ದು, ಮಾಜಿ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಂಶೋಧನಾ ಸಂಸ್ಥೆಗಳನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಛತ್ತೀಸ್​ಗಢ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ- ಹೀಗೆ ಒಟ್ಟು 7 ರಾಜ್ಯಗಳ 21 ಜಿಲ್ಲೆಗಳು ಮತ್ತು 120 ಹಳ್ಳಿಗಳಿಗೆ ಭೇಟಿ ನೀಡಿ ಸಂಗ್ರಹಿಸಲಾದ ವರದಿ ಇದಾಗಿದೆ.
ಗ್ರಾಮಗಳನ್ನು ದತ್ತು ತೆಗೆದುಕೊಂಡಿರುವ ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರು ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ತೋರಿದಂತೆ ಕಂಡುಬಂದಿಲ್ಲ ಮತ್ತು ಸಂಸದರ ವಾರ್ಷಿಕ ನಿಧಿ ಹಣವನ್ನೂ ಈ ಯೋಜನೆಗೆ ಹೆಚ್ಚಾಗಿ ವಿನಿಯೋಗಿಸಿಲ್ಲ. ಕೆಲವು ಸಕ್ರಿಯ ಸಂಸದರು ವೈಯಕ್ತಿಕ ಆಸಕ್ತಿ ಮುಖೇನ ನಿರ್ದಿಷ್ಟ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಿದ್ದರೂ, ಸಮಗ್ರ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾದಂತೆ ಕಂಡುಬಂದಿಲ್ಲ. ಹೀಗಾಗಿ, ಈ ಹಳ್ಳಿ/ಗ್ರಾಮಗಳನ್ನು ‘ಮಾದರಿ ಹಳ್ಳಿಗಳು’ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಇದೇ ರೂಪದಲ್ಲಿ ಯೋಜನೆ ಮುಂದುವರಿದಲ್ಲಿ ಹೆಚ್ಚಿನ ಪ್ರಯೋಜನವಾಗದು, ಮೂಲ ಉದ್ದೇಶವೂ ಈಡೇರದು. ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಗೆ ಹೊಸ ರೂಪ ನೀಡಿ ಹೆಚ್ಚಿನ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ಪ್ರತ್ಯೇಕ ನಿಧಿ ಇಲ್ಲ: 2014ರ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ‘ಸಂಸದ ಆದರ್ಶ ಗ್ರಾಮ ಯೋಜನೆ’ ಘೊಷಿಸಿದ್ದರು. ಹಳ್ಳಿಗಳ ಅಭಿವೃದ್ಧಿ ಜತೆಗೆ ಸಂಸದರ ನಾಯಕತ್ವ, ಬದ್ಧತೆ, ಶಕ್ತಿ-ಸಾಮರ್ಥ್ಯ ಸುಧಾರಿಸುವುದೂ ಯೋಜನೆಯ ಉದ್ದೇಶಗಳಲ್ಲೊಂದು. ‘ಇದು ವಿಶಿಷ್ಟ ಯೋಜನೆ’ ಎಂದು ಕೊಂಡಾಡಿದ್ದ ಬಿಜೆಪಿ ಸಂಸದರೂ, ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದರು. ಆದರೆ, ಯೋಜನೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮೀಸಲಿಡಲಿಲ್ಲ. ಸಂಸದರ ನಿಧಿಯನ್ನೇ ಬಳಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಸಂಸದರು ಸಿಲುಕಿದರು. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಯಿತು ಮತ್ತು ಹಲವು ಸಂಸದರಿಗೆ ಹಣ ಕೂಡಿಸುವುದೂ ಕಷ್ಟವಾಯ್ತು. ಆದರೆ, ಬಿಜೆಪಿ ಸಂಸದರು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಎಂದು ಸುಮ್ಮನಿದ್ದರು. ವಿಪಕ್ಷಗಳ ಕೆಲವು ಸಂಸದರು ಗ್ರಾಮಗಳನ್ನು ದತ್ತು ತೆಗೆದುಕೊಂಡರೆ, ಮತ್ತೆ ಕೆಲವರು, ‘ನಮ್ಮಲ್ಲಿ ದುಡ್ಡಿಲ್ಲ. ಇದಕ್ಕೆ ಪ್ರತ್ಯೇಕ ದುಡ್ಡು ಎಲ್ಲಿಂದ ತರೋದು’ ಎಂದು ಯೋಜನೆಗೆ ಮಹತ್ವ ಕೊಡಲಿಲ್ಲ.
ಮೆಚ್ಚುಗೆಯೂ ಇದೆ: ಇಂಫಾಲ್ ಪೂರ್ವ ಜಿಲ್ಲೆಯ ತಾಖೇಲ್ ಪಂಚಾಯತ್, ರಾಜಸ್ಥಾನದ ಬಿಲ್ವಾರ ಜಿಲ್ಲೆಯ ದೌಲತ್​ಗಢ ಹಳ್ಳಿಗಳಲ್ಲಿ ಯೋಜನೆ ಬಹುತೇಕ ಯಶಸ್ವಿಯಾಗಿದೆ ಎಂದೂ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ತಾಖೇಲ್ ಪಂಚಾಯತ್ ವ್ಯಾಪ್ತಿಯಲ್ಲಿ ಕೆರೆಗಳ ಬಳಿ ಸಾರ್ವಜನಿಕ ಶೌಚಗೃಹಗಳು, ಮಕ್ಕಳ ಆಟದ ಮೈದಾನ ಸೇರಿದಂತೆ ವಿವಿಧ ಜನೋಪಯೋಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೌಲತ್​ಗಢದಲ್ಲಿ ಅಲ್ಲಿನ ಮಾಜಿ ಸಂಸದರೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದಾರೆ ಎಂದು ವರದಿಯಲ್ಲಿ ಶ್ಲಾಘಿಸಲಾಗಿದೆ.
ಮುಂದೇನು?
ಈ ವರದಿ ಬಳಿಕ ಕೇಂದ್ರ ಸರ್ಕಾರ ಯೋಜನೆಗೆ ತಿದ್ದುಪಡಿ ತಂದು ಪ್ರತ್ಯೇಕ ನಿಧಿ ಕಲ್ಪಿಸುವುದೇ ಎಂಬುದು ಸದ್ಯದ ಪ್ರಶ್ನೆ. ಆದರೆ, ಕರೊನಾ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಈ ಯೋಜನೆಗೆ ಪ್ರತ್ಯೇಕ ಹಣಕಾಸು ನೆರವು ನೀಡಲು ಸಾಧ್ಯವೇ ಎಂಬ ಅನುಮಾನ ಹಲವರದ್ದು.
ಏಳು ರಾಜ್ಯಗಳ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದ 31 ತಜ್ಞರು ನಮ್ಮ ತಂಡದಲ್ಲಿದ್ದು ಕೇಂದ್ರದ ವಿವಿಧ ಯೋಜನೆಗಳ ವಸ್ತು-ಸ್ಥಿತಿ ಬಗೆಗಿನ ನಮ್ಮ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಲಿವೆ ಎಂದು ನಂಬಿದ್ದೇವೆ. ಈ ಯೋಜನೆಗಳ ಅನುಷ್ಠಾನಗಳ ಹಲವು ಹಂತಗಳಲ್ಲಿ ನಾವು ಬದಲಾವಣೆಗೆ ಸಾಕ್ಷಿಯಾಗಿದ್ದೆವು ಮತ್ತು ಇದಕ್ಕಾಗಿ ಸಂಬಂಧಪಟ್ಟ ಎಲ್ಲರೂ ಅಭಿನಂದನಾರ್ಹರು. ಹಾಗಿದ್ದರೂ, ಅನೇಕ ಹಳ್ಳಿಗಳಲ್ಲಿ ಮೂಲಭೂತ ಅಗತ್ಯಗಳಿಲ್ಲದೆ ಜನರಿಗೆ ಗೌರವಯುತವಾದ ಜೀವನ ನಡೆಸಲು ಸಾಧ್ಯವಾಗದಿರುವುದೂ ಹೌದು.
| ರಾಜೀವ್ ಕಪೂರ್
ಮುಖ್ಯಸ್ಥ, 5ನೇ ಕಾಮನ್ ರಿವ್ಯೂ ಮಿಷನ್
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 + eight =
Remember me
