|ರಾಘವ ಶರ್ಮ ನಿಡ್ಲೆನವದೆಹಲಿ
ಪ್ರಧಾನಮಂತ್ರಿ ನರೇಂದ್ರ ಮೋದಿ 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರದ ನೇತೃತ್ವದ ವಹಿಸಿ 7 ವರ್ಷ ಪೂರ್ಣಗೊಳಿಸಿರುವ ಮಧ್ಯೆ, ಜನಪ್ರಿಯತೆಯಲ್ಲಿ ಈಗಲೂ ಅವರು ಮುಂದಿದ್ದಾರೆ. ಮೋದಿಗೆ ಪರ್ಯಾಯ ನಾಯಕನನ್ನು ಕಂಡುಕೊಳ್ಳಲು ವಿಪಕ್ಷಗಳಿಗೆ ಇನ್ನೂ ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್ ಹೆಸರುಗಳು ಆಗಿಂದಾಗ್ಗೆ ಕೇಳಿಬಂದರೂ, ದೇಶವ್ಯಾಪಿ ಒಪ್ಪುವ ದಿಟ್ಟ, ಸಮರ್ಥ ನಾಯಕ ವಿಪಕ್ಷಗಳಲ್ಲಿ ಇಲ್ಲ ಎನ್ನುವುದೇ ಬಿಜೆಪಿಯ ದೊಡ್ಡ ಪ್ಲಸ್ ಪಾಯಿಂಟ್.
72ರ ವಯಸ್ಸಿನಲ್ಲೂ ದಿನಕ್ಕೆ 16-18 ಗಂಟೆ ಕೆಲಸ ಮಾಡುತ್ತಿರುವ ಮೋದಿ, ಈ ವಿಷಯದಲ್ಲಿ ಬಿಜೆಪಿ ಮಾತ್ರವಲ್ಲ ವಿಪಕ್ಷಗಳ ನಾಯಕರಿಗೂ ಮಾದರಿಯಾಗಿದ್ದಾರೆ. ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಯಕತ್ವ, ಸರ್ಕಾರ ಮತ್ತು ಪಕ್ಷದ ಇಮೇಜ್ ದುಪ್ಪಟ್ಟುಗೊಳಿಸುವ ಕಾರ್ಯತಂತ್ರವೂ ಇದರ ಹಿಂದಿದೆ. ಮುಂಬರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವು ನಂತರದಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರುವುದರಿಂದ ಪ್ರಧಾನಿ ಮೋದಿ ಜನ್ಮದಿನ ಹೆಸರಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮ, ಅಭಿಯಾನಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರ್ಯಕ್ರಮಗಳು ಮುಂದಿನ ಮೂರು ವಾರಗಳ ತನಕ ನಡೆಯಲಿವೆ.
ದಿಟ್ಟ ನಿರ್ಣಯ:ಹತ್ತಾರು ಸವಾಲುಗಳ ಮಧ್ಯೆಯೂ ಕಳೆದ 7 ವರ್ಷಗಳಲ್ಲಿ ಹಲವು ದಿಟ್ಟ ನಿರ್ಣಯಗಳನ್ನು ಜಾರಿ ಮಾಡಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ, ರಾಮಮಂದಿರ ಕೇಸು ನಿರ್ವಹಣೆ, ತ್ರಿವಳಿ ತಲಾಖ್, ಪೌರತ್ವ ತಿದ್ದುಪಡಿ ಕಾನೂನು… ಹೀಗೆ ಮುಳ್ಳಿನ ಹಾದಿಗಳನ್ನೂ ಲೆಕ್ಕಿಸದೆ ತಮ್ಮನ್ನು ಬೆಂಬಲಿಸಿ, ಮತಹಾಕಿದ ಜನರನ್ನು ಸಂತುಷ್ಟಗೊಳಿಸಲು ಸರ್ಕಾರ ಯತ್ನಿಸಿದೆ. ಆದರೆ, 2020ರಲ್ಲಿ ಜಗತ್ತಿಗೆ ಮತ್ತು ದೇಶಕ್ಕಾವರಿಸಿದ ಕರೊನಾ ಮಹಾಮಾರಿ ಅಭಿವೃದ್ಧಿಯ ವೇಗಕ್ಕೆ ಕಡಿವಾಣ ಹಾಕಿತು. ದೇಶದ ಆರ್ಥಿಕ ವ್ಯವಸ್ಥೆಯೂ ಹಾನಿಗೊಳಗಾಗಿದೆ. ಉದ್ಯಮಗಳು ಸಂಕಷ್ಟಕ್ಕೀಡಾಗಿರುವ ಜತೆಗೆ ನಿರುದ್ಯೋಗ ಪ್ರಮಾಣವೂ ಹೆಚ್ಚಿದೆ. ಇದಕ್ಕೆ ಪರಿಹಾರಾರ್ಥವಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನೂ ಜಾರಿ ಮಾಡಿದೆ. ನಿಧಾನಗತಿಯ ಆರ್ಥಿಕ ಚೇತರಿಕೆ ಮಧ್ಯೆ ತೈಲ ಬೆಲೆ ಏರಿಕೆಯಿಂದಾಗಿ ಆಹಾರ ಸೇರಿ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಬಿಸಿ ಬಡ ಮತ್ತು ಮಧ್ಯಮ ವರ್ಗದ ನಿತ್ಯ ಬದುಕಿಗೆ ಬರೆ ಬಿದ್ದಿದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ತಗ್ಗಲಿದ್ದು, ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂಬ ಮಾತುಗಳು ಸರ್ಕಾರದ ವಲಯದಲ್ಲಿ ಕೇಳಿಬಂದಿದೆ. ಇದನ್ನು ಸಾಧಿಸುವ ಬಗೆ ಹೇಗೆ ಎಂಬುದು ಸ್ಪಷ್ಟವಾಗಿಲ್ಲ.
ರಕ್ಷಣಾ ಸವಾಲು:ಕಳೆದ 7 ವರ್ಷಗಳಲ್ಲಿ ಉಗ್ರ ಕೃತ್ಯಗಳನ್ನು ಅಡಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಿಲಿಟರಿ ಕ್ಯಾಂಪ್​ಗಳ ಮೇಲೆ ದಾಳಿಗಳು ಸಂಭವಿಸಿದರೂ, ಸಾರ್ವಜನಿಕರ ಮೇಲಿನ ದಾಳಿ ತಡೆಯುವಲ್ಲಿ ಗುಪ್ತಚರ ಇಲಾಖೆ ಸಫಲವಾಗಿವೆ. ಮೋದಿ ಮುಂದಾಳತ್ವದಲ್ಲಿ ದೇಶದ ಗುಪ್ತಚರ ವ್ಯವಸ್ಥೆ ಬಲಗೊಂಡಿದೆ. ಕೆಲ ದಿನಗಳ ಹಿಂದೆ 6 ಉಗ್ರರನ್ನು ಬಂಧಿಸಿರುವುದು ಇದಕ್ಕೊಂದು ನಿದರ್ಶನ. ರಕ್ಷಣಾ ಕ್ಷೇತ್ರಕ್ಕೆ ರಫೇಲ್ ಯುದ್ಧ ವಿಮಾನ ಸೇರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬಂದಿರುವ ನಡುವೆ ಬಲಾಢ್ಯ ಮಿಲಿಟರಿ ಹೊಂದಿರುವ ಚೀನಾ ದೇಶ ಮೋದಿ ಸರ್ಕಾರಕ್ಕೆ ಸವಾಲಾಗಿರುವುದು ಸುಳ್ಳಲ್ಲ. ಗಲ್ವಾನ್ ಗಡಿಯಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿದೆ. ಚೀನೀ ಯೋಧರ ವಿರುದ್ಧ ನಮ್ಮ ಸೇನಾನಿಗಳು ಕಳೆದ ಏಪ್ರಿಲ್​ನಲ್ಲಿ ದಿಟ್ಟತನ ಮೆರೆದು ಹುತಾತ್ಮರಾದರು. ನಂತರದಲ್ಲಿ, ಭಾರತೀಯ ಸೇನಾನಿಗಳ ಮನೋಬಲ ವೃದ್ಧಿಸಲು ಖುದ್ದು ಮೋದಿಯವರೇ ಗಡಿ ಪ್ರದೇಶಗಳಿಗೆ ತೆರಳಿದ್ದರು. ದೇಶದ ನಾಯಕನಿಂದ ಓರ್ವ ಸೇನಾನಿ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ?
ತಾಲಿಬಾನ್ ಸಮಸ್ಯೆ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕೆ ಪಾಕಿಸ್ತಾನ ಮತ್ತು ಚೀನಾ ನೇರ ಬೆಂಬಲ ಘೊಷಿಸಿರುವುದು ಭಾರತಕ್ಕೆ ವ್ಯೂಹಾತ್ಮಕ ಸವಾಲು ಸೃಷ್ಟಿಸಿದೆ. ತಾಲಿಬಾನಿಗಳನ್ನು ಬಳಸಿಕೊಂಡು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಉಗ್ರರನ್ನು ಭಾರತದ ವಿರುದ್ಧ ಪ್ರಚೋದಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಚೀನಾ ಕುಮ್ಮಕ್ಕು ನೀಡುವ ಸಾಧ್ಯತೆ ಇದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಿದ ಬಳಿಕ ಅಲ್ಲಿ ಇನ್ನೂ ಚುನಾವಣೆ ನಡೆದಿಲ್ಲ. ರಾಜಕೀಯವಾಗಿ ಮತ್ತು ವ್ಯೂಹಾತ್ಮಕವಾಗಿ ಕಣಿವೆ ರಾಜ್ಯದಲ್ಲಿ ತಾಲಿಬಾನ್-ಚೀನಾ-ಪಾಕಿಸ್ತಾನ ಪ್ರೇರಿತ ಶಕ್ತಿಗಳು ಭಾರತಕ್ಕೆ ಹೊಸ ಸವಾಲೊಡ್ಡಬಹುದು. ಈ ನಿಟ್ಟಿನಲ್ಲಿ ಜೆ.ಕೆ. ಚುನಾವಣೆ ಸೇರಿ ಮುಂದಿನ 2 ವರ್ಷಗಳು ಮೋದಿ ನಾಯಕತ್ವಕ್ಕೆ ಕಠಿಣ ಸವಾಲಿನದ್ದಾಗಿರಲಿವೆ.
ಕ್ರೀಡಾ ಕ್ಷೇತ್ರಕ್ಕೆ ಬೆಳಕು:ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಳುಗಳು ವಿಶ್ವ ವೇದಿಕೆಯಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆ ವಿಷಯ. ಕಳೆದ 7 ವರ್ಷಗಳಿಂದ ಕ್ರೀಡಾ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿರುವುದೇ ಇದಕ್ಕೆ ಕಾರಣ.
ಕೃಷಿ ಕಾಯ್ದೆ ಹೋರಾಟ:ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಪ್ರಶ್ನಿಸಿ ರಾಜಧಾನಿ ದೆಹಲಿ, ಪಂಜಾಬ್, ಉತ್ತರಪ್ರದೇಶ, ಹರಿಯಾಣ ರಾಜ್ಯಗಳ ಗಡಿಯಲ್ಲಿ ಪ್ರತಿಭಟನೆಗಳು ಈಗಲೂ ಮುಂದುವರಿದಿವೆ. ಕೃಷಿಕರೊಂದಿಗೆ ಕೇಂದ್ರ ಹಲವು ಸುತ್ತಿನ ಮಾತುಕತೆ ನಡೆಸಿದರೂ, ಸಂಧಾನ ಸಾಧ್ಯವಾಗುತ್ತಿಲ್ಲ.
ರಾಮಮಂದಿರ ಸಾಕಾರ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗಬೇಕು ಎಂಬ ಕೋಟ್ಯಂತರ ಹಿಂದು ಶ್ರದ್ಧಾಳುಗಳ ಆಶಯವನ್ನು ನಿಜಗೊಳಿಸುವ ಹಾದಿಯಲ್ಲಿ ಸರ್ಕಾರ ಮುನ್ನಡೆದಿದೆ. ಮೋದಿ ನಾಯಕತ್ವವಿಲ್ಲದಿದ್ದರೆ ಇದು ಸಾಧ್ಯವಾಗುತ್ತಲೇ ಇರಲಿಲ್ಲ ಎನ್ನುವುದು ವಿಪಕ್ಷಗಳಲ್ಲಿರುವ ಹಿಂದು ಧರ್ವಿುಯರೂ ಒಪ್ಪಿಕೊಳ್ಳುತ್ತಾರೆ. ಸುಪ್ರೀಂಕೋರ್ಟ್​ನಲ್ಲಿ ರಾಮಜನ್ಮಭೂಮಿ ನಿರ್ಮಾಣ ಪರ ನಿಲುವು ತೆಗೆದುಕೊಂಡ ಸರ್ಕಾರ ಕಾನೂನು ಸಂಕೋಲೆಗಳಿಂದ ಮುಕ್ತಿ ಸಿಗುವಂತೆ ಮಾಡಿತು.
ನಿರ್ಣಾಯಕ ಚುನಾವಣೆಗಳು:ಮುಂಬರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ, ಪಂಜಾಬ್ ವಿಧಾನಸಭೆ ಚುನಾವಣೆ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಮತ್ತು ಮೋದಿ ನಾಯಕತ್ವಕ್ಕೆ ನಿರ್ಣಾಯಕ ಎನಿಸಿಕೊಳ್ಳಲಿವೆ. ಮುಂದಿನ ವರ್ಷಾಂತ್ಯದ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗಳೂ ಬಿಜೆಪಿಗೆ ಸವಾಲಾಗಲಿವೆ. ಕಳೆದ ಉತ್ತರ ಪ್ರದೇಶ ಚುನಾವಣೆ ವೇಳೆ ಬಿಜೆಪಿಗೆ ಸಿಎಂ ಅಭ್ಯರ್ಥಿ ಇರಲಿಲ್ಲ. ಆದರೆ ಈ ಬಾರಿ ಯೋಗಿ ಆದಿತ್ಯನಾಥ ವರ್ಚಸ್ಸನ್ನು ಬಿಜೆಪಿ ನಂಬಿಕೊಂಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿದ್ದರೂ, ಎಷ್ಟೋ ಸಂದರ್ಭಗಳಲ್ಲಿ ಅವು ಸುಳ್ಳಾಗಿದ್ದುಂಟು.
ಸಮರ್ಥ ಕರೊನಾ ನಿರ್ವಹಣೆ:ಕಳೆದ ಫೆಬ್ರವರಿಯಲ್ಲಿ ಆರಂಭಗೊಂಡ ಕರೊನಾ ಮಹಾಮಾರಿ ಕೇಂದ್ರಕ್ಕೆ ಬಹುದೊಡ್ಡ ಸವಾಲಾಗಿ ಕಾಡಿತ್ತು. ಒಂದನೇ ಅಲೆ ಮಾರಣಾಂತಿಕ ಎನಿಸದಿದ್ದರೂ, 2ನೇ ಅಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಮೃತಪಟ್ಟರು ಮತ್ತು ಸೂಕ್ತ ಚಿಕಿತ್ಸೆ ಸಿಗದೆ ನರಳಾಡುವಂತಾಯಿತು. ಆರೋಗ್ಯ ಮೂಲ ಸೌಕರ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿದ್ದವು. ಲಸಿಕಾ ಅಭಿಯಾನ ಶುರುವಾದಲ್ಲಿಂದ ಕರೊನಾ ನಿರ್ವಹಣೆ ಗಮನಸೆಳೆದಿದ್ದು, ಈಗ ಸುಮಾರು 70 ಕೋಟಿ ಜನಸಂಖ್ಯೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೊವ್ಯಾಕ್ಸಿನ್ ಎಂಬ ಭಾರತೀಯ ಲಸಿಕೆಯನ್ನೂ ಉತ್ಪಾದಿಸಲಾಯಿತು. ಈಗ ಮೂರನೇ ಅಲೆ ಎದುರಿಸಲೂ ಪೂರಕ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕರೊನಾ ನಿರ್ವಹಣೆ ಉಸ್ತುವಾರಿಯನ್ನು ಖುದ್ದು ಪ್ರಧಾನಿ ಕಾರ್ಯಾಲಯವೇ ಕೈಗೆತ್ತಿಕೊಂಡದ್ದು ವಿಶೇಷ.
ಆರ್ಥಿಕತೆಗೆ ಟಾನಿಕ್:ಕರೊನಾ ನಂತರದ ಆರ್ಥಿಕ ಸವಾಲುಗಳನ್ನು ಎದುರಿಸಲು ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ವಿವಿಧ ಮಾದರಿಯ ಅನುದಾನಗಳನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯಗಳ ಪಾಲಿನ ಜಿಎಸ್​ಟಿ ಹಣ ಹಂಚಿಕೆಯಲ್ಲಿ ವಿಳಂಬವಾಗುತ್ತಿದ್ದರೂ, ವಿವಿಧ ಕಂತಿನಲ್ಲಿ ಹಣ ಹಂಚಿಕೆಯಾಗುತ್ತಿದೆ. ಆತ್ಮನಿರ್ಭರ ಯೋಜನೆ ಮೂಲಕ ದೇಶವನ್ನು ಸ್ವಾವಲಂಬಿಗೊಳಿಸುವುದು. ಆಮದು ತಗ್ಗಿಸಿ, ರಫ್ತು ಹೆಚ್ಚಳದ ಮಂತ್ರದೊಂದಿಗೆ ಹಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 16 =
Remember me
