ಸತತವಾಗಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವ ನರೇಂದ್ರ ದಾಮೋದರ್ ದಾಸ್ ಮೋದಿ ಭಾರತೀಯ ರಾಜಕೀಯ ರಂಗದಲ್ಲೇ ವಿಶಿಷ್ಟ ದಾಖಲೆ ಬರೆದಿದ್ದಾರೆ. ಮಾತ್ರವಲ್ಲ, ಈ ಅವಧಿಯಲ್ಲಿ ಜಾಗತಿಕ ನಾಯಕರಾಗಿಯೂ ಹೊಮ್ಮಿದ್ದಾರೆ. ಗುಜರಾತ್​ನಿಂದ ಹೊರಟ ಚಾಯ್ವಾಲಾ ಹುಡುಗ ಮೋದಿ ಬ್ರಾ್ಯಂಡ್ ಆಗಿ ಬೆಳೆದ ಪರಿ ರೋಚಕ ಹಾಗೂ ಪ್ರೇರಣಾದಾಯಿ. 73ರ ವಯಸ್ಸಿನಲ್ಲೂ 18ರ ನವಯುವಕರಂತೆ ಕಾರ್ಯನಿರ್ವಹಿಸುವ ಮೋದಿ ಸಾಗಿಬಂದ ಪಯಣ ಚೇತೋಹಾರಿ. ಪ್ರಖರ ಮಾತುಗಾರಿಕೆ, ದಣಿವರಿಯದೆ ಕೆಲಸ ಮಾಡುವ ಬದ್ಧತೆ, ಗೆಲುವು-ಸೋಲು, ಪ್ರಶಂಸೆ, ಟೀಕೆಯನ್ನು ಜೀರ್ಣಿಸಿಕೊಳ್ಳುವ ಎದೆಗಾರಿಕೆ, ರಾಜಕೀಯದ ಗೊಂದಲಗಳಲ್ಲೂ ಮರೆಯದ ಅಧ್ಯಾತ್ಮದ ದಿವ್ಯತೆ… ಹೀಗೆ ಮೋದಿ ವ್ಯಕ್ತಿತ್ವವೇ ವಿಶಿಷ್ಟ. ಅವರ ಜೀವನದ ಮಹತ್ವದ ಘಟನೆಗಳು ಹಾಗೂ ನರೇಂದ್ರ ‘ಮೋದಿ ಬ್ರ್ಯಾಂಡ್’ ಆಗಿ ಬೆಳೆದ ಹಾದಿಯನ್ನು ಅವಲೋಕಿಸಿದ್ದಾರೆ ರವೀಂದ್ರ ಎಸ್.ದೇಶಮುಖ್.
ಟಿಡಿಪಿಗೆ 4, ಜೆಡಿಯುಗೆ 2, ಜೆಡಿಎಸ್​ಗೆ 1
ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಸ್ಥಾನ ಸಿಗಬಹುದು ಎಂಬ ಕುತೂಹಲ ಸಹಜ. ಟಿಡಿಪಿಗೆ ನಾಲ್ಕು, ಜೆಡಿಯುಗೆ ಎರಡು ಸಚಿವ ಸ್ಥಾನಗಳು ಮೊದಲ ಹಂತದಲ್ಲಿ ಲಭಿಸಲಿವೆ ಎಂದು ಮೂಲಗಳು ತಿಳಿಸಿವೆ. ರಾಜನಾಥ್ ಸಿಂಗ್​ಗೆ ರಕ್ಷಣೆ, ಅಮಿತ್ ಷಾಗೆ ಗೃಹ ಖಾತೆ ಮುಂದುವರಿಯಬಹುದು. ಜೆಡಿಎಸ್​ನ ಎಚ್.ಡಿ. ಕುಮಾರಸ್ವಾಮಿಗೆ ಕೃಷಿ ಖಾತೆ ಒಲಿಯುವ ನಿರೀಕ್ಷೆ ಇದೆ. ಚಂದ್ರಬಾಬು ನಾಯ್ಡು ಐ.ಟಿ. ಮತ್ತು ರೈಲ್ವೆ ಖಾತೆ ಕೇಳಿದ್ದು, ಟಿಡಿಪಿಗೆ ಆ ಖಾತೆಗಳು ಸಿಗುವ ಸಾಧ್ಯತೆ ಇದೆ. ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ, ದಗ್ಗುಮಲ್ಲ ಪ್ರಸಾದ್ ಟಿಡಿಪಿ ಕೋಟಾದಲ್ಲಿ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಜೆಡಿಯುನಿಂದ ಲಲನ್ ಸಿಂಗ್, ರಾಮನಾಥ್ ಠಾಕೂರ್ ಹೆಸರು ಕೇಳಿಬರುತ್ತಿದೆ.
ವಿಪಕ್ಷ ಒಕ್ಕೂಟಕ್ಕೆ ಆಹ್ವಾನವಿಲ್ಲ
ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಐಎನ್​ಡಿಐಎ ಒಕ್ಕೂಟಕ್ಕೆ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ನಾಯಕರನ್ನು ಮಾತ್ರ ಆಹ್ವಾನಿಸಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಈವರೆಗೆ ಆಮಂತ್ರಿಸಿಲ್ಲ. ಒಂದು ವೇಳೆ, ಆಮಂತ್ರಣ ಬಂದರೆ ನಂತರ ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು
ಶಾಖೆಯಲ್ಲಿನ ಆ ಮಾತು…
ಮಹಾತ್ಮ ಗಾಂಧೀಜಿ ಹತ್ಯೆಯ ಬಳಿಕ 1948ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿ, 20 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ಬಂಧಿಸಿತು. 1949ರಲ್ಲಿ ಆರ್​ಎಸ್​ಎಸ್ ಮೇಲಿನ ನಿಷೇಧ ಹಿಂಪಡೆದ ಬಳಿಕ, ಸಂಘಟನೆಯನ್ನು ವಿಸ್ತಾರಗೊಳಿಸಲು ನಿರ್ಧರಿಸಲಾಯಿತು. ಗುಜರಾತ್​ನಲ್ಲಿ ಇದರ ಜವಾಬ್ದಾರಿ ಲಕ್ಷ್ಮಣರಾವ್ ಇನಾಮದಾರ್ ಅವರಿಗೆ ನೀಡಲಾಯಿತು. ಅವರನ್ನು ಜನರು ‘ವಕೀಲ್ ಸಾಹಬ್’ ಎಂದೇ ಪ್ರೀತಿ, ಗೌರವದಿಂದ ಕರೆಯುತ್ತಿದ್ದರು. ಅದು 1958ರ ದೀಪಾವಳಿಯ ದಿನ. ವಕೀಲ ಸಾಹೇಬರು ವಡ್ ನಗರದಲ್ಲಿ ಆರ್​ಎಸ್​ಎಸ್​ನ ನೂತನ ಬಾಲ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತ, ಭಾರತದ ಹಿರಿಮೆಗರಿಮೆ ಜತೆಗೆ ರಾಷ್ಟ್ರನಿರ್ವಣದಲ್ಲಿ ನಮ್ಮ ಪಾತ್ರವೇನು ಎಂಬುದರ ಕುರಿತು ಮನೋಜ್ಞವಾಗಿ ವಿವರಿಸಿದರು. ಆ ಮಾತುಗಳು ಎಂಟು ವರ್ಷದ ಓರ್ವ ಬಾಲಕನ ಮೇಲೆ ಎಷ್ಟು ಪ್ರಭಾವ ಬೀರಿದವು ಎಂದರೆ ಶಾಖೆ ಮುಗಿದ ಮೇಲೆ ಆತ ಲಕ್ಷ್ಮಣ್ ರಾವ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತನಾಡಿದ. ಈತನ ಉತ್ಸಾಹ ಕಂಡು ಇನಾಮದಾರ್ ಬೆನ್ನು ತಟ್ಟಿದರು. ಆ ಬಾಲಕನ ಹೆಸರೇ ‘ನರೇಂದ್ರ ಮೋದಿ’. ನರೇಂದ್ರನ ತಂದೆ ದಾಮೋದರದಾಸ್ ಮೂಲಚಂದ್ ಮೋದಿ ವಡ್ ನಗರದ ರೈಲ್ವೆ ನಿಲ್ದಾಣದಲ್ಲಿ ಚಹಾದ ಪುಟ್ಟ ಅಂಗಡಿ ಇಟ್ಟುಕೊಂಡಿದ್ದರು. ಬಾಲಕ ನರೇಂದ್ರ ಚಹಾ ಮಾಡಲು ಹಾಗೂ ಗ್ರಾಹಕರಿಗೆ ನೀಡಲು ತಂದೆಗೆ ನೆರವಾಗುತ್ತಿದ್ದ. ತಾಯಿ ಹೀರಾ ಬೇನ್ ಅಕ್ಕಪಕ್ಕದ ಮನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು.
ತಿರುವು: ಲಕ್ಷ್ಮಣರಾವ್ ಇನಾಮದಾರ್ ಅವರ ಮಾತು ಮೋದಿ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಾಮಾಜಿಕ ಜೀವನದೆಡೆಗೆ ಆಕರ್ಷಿಸಿತು.
ಜ್ಯೋತಿಷಿ ಹೇಳಿದ್ದು ನಿಜವಾಯಿತು
ನರೇಂದ್ರ ಹೈಸ್ಕೂಲ್ ಮೆಟ್ಟಿಲು ಹತ್ತುವ ಮುನ್ನವೇ ಅಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡರು. ಕೆಲವೊಮ್ಮೆ ಉಪು್ಪ, ಮಗದೊಮ್ಮೆ ಕರಿದ ಪದಾರ್ಥಗಳನ್ನು ಬಿಟ್ಟುಬಿಡುತ್ತಿದ್ದರು. ಮನೆಯವರಿಗೆ ಏನೂ ಅರ್ಥವಾಗುತ್ತಿರಲಿಲ್ಲ. ನರೇಂದ್ರ 14ನೇ ವರ್ಷದವರಿದ್ದಾಗ ಒಬ್ಬ ಜ್ಯೋತಿಷಿ ಇವರ ಜಾತಕ ನೋಡಿ ಖಡಾಖಂಡಿತವಾಗಿ ಹೇಳಿಬಿಟ್ಟರು- ‘ಈ ಹುಡುಗ ಮುಂದೆ ದೊಡ್ಡ ಸಂನ್ಯಾಸಿ, ಆಧ್ಯಾತ್ಮಿಕ ಗುರು ಆಗುತ್ತಾನೆ. ಇಲ್ಲವೆ ರಾಜಕೀಯ ನಾಯಕನಾಗುತ್ತಾನೆ’ ಎಂದು. ಅದೊಮ್ಮೆ ಆಟವಾಡಲು ಸ್ನೇಹಿತರ ಜತೆ ಕೆರೆಗೆ ಹೋಗಿದ್ದಾಗ ಮೊಸಳೆ ದಾಳಿ ಮಾಡಿತು. ಕಾಲಿಗೆ ತೀವ್ರ ಸ್ವರೂಪದ ಗಾಯಗಳಾದರೂ, ಮೊಸಳೆ ಜತೆಯೂ ಹೋರಾಡಿ, ಗೆದ್ದರು.
ತಿರುವು: ಹೈಸ್ಕೂಲ್​ಗೆ ಬರುತ್ತಿದ್ದಂತೆ ಮೋದಿ ಮತ್ತಷ್ಟು ಅಂತಮುಖಿಯಾದರು ಮತ್ತು ಜೀವನದ ಉದ್ದೇಶವೇನು ಎಂಬ ಹುಡುಕಾಟದಲ್ಲಿ ತೊಡಗಿದರು.
ಸಂನ್ಯಾಸಿಯಾಗಲು ಹೊರಟರು
ಹದಿನೇಳನೇ ವಯಸ್ಸು. ಉಳಿದ ತರುಣರು ಈ ವಯಸ್ಸಿನಲ್ಲಿ ಬಣ್ಣಬಣ್ಣದ ಕನಸುಗಳನ್ನು ಕಂಡರೆ, ನರೇಂದ್ರ ಸತ್ಯ ಸಾಕ್ಷಾತ್ಕಾರದ ಹಂಬಲದಿಂದ ತಮ್ಮ ಹೆಸರನ್ನು ‘ಅನಿಕೇತ’ (ಯಾವುದೇ ಮನೆ, ನೆಲೆ ಇಲ್ಲದವ ಎಂದರ್ಥ) ಎಂದು ಬದಲಿಸಿಕೊಂಡು, ಮನೆಬಿಟ್ಟು ಸಂನ್ಯಾಸಿಯಾಗಲು ರಾಮಕೃಷ್ಣ ಮಿಶನ್​ನ ಬೇಲೂರು ಮಠಕ್ಕೆ (ಪಶ್ಚಿಮ ಬಂಗಾಳ) ಹೋದರು. ಆದರೆ, ಶೈಕ್ಷಣಿಕ ಪದವಿ ಪೂರ್ಣಗೊಳಿಸದ ಕಾರಣ ಇವರಿಗೆ ಸಂನ್ಯಾಸತ್ವ ನೀಡಲು ಮಠ ನಿರಾಕರಿಸಿತು. ಆದರೂ, ಹುಡುಕಾಟ ನಿಲ್ಲಲಿಲ್ಲ. ಒಬ್ಬ ಸಮರ್ಥ ಗುರು ಸಿಕ್ಕರೆ ಸಂನ್ಯಾಸ ದೀಕ್ಷೆ ಪಡೆದು ಅಧ್ಯಾತ್ಮ ಬದುಕು ಆರಂಭಿಸಿದರಾಯಿತು ಎಂದುಕೊಂಡು ದೆಹಲಿ, ರಾಜಸ್ಥಾನನಲ್ಲಿ ಸಂಚರಿಸಿ ಆ ಬಳಿಕ ಹಿಮಾಲಯ ಪ್ರವೇಶಿಸಿದರು. ಆರು ತಿಂಗಳಿಗೂ ಹೆಚ್ಚು ಕಾಲ ಅವರು ಹಿಮಾಲಯದ ಗರುಡಚಟ್ಟಿಯಲ್ಲಿ ಕಳೆದರು. ಈ ಸಂಚಾರದಲ್ಲಿ ಎರಡು ವರ್ಷ ಪೂರ್ಣಗೊಂಡಿತ್ತು. ಯಾರೂ ಗುರುಗಳು ಸಿಗದೆ ವಡ್ ನಗರ ಮನೆಗೆ ವಾಪಸ್ ಆದರೂ, 17 ದಿನದಲ್ಲೇ ಮನೆ ಬಿಟ್ಟು ಅಹಮದಾಬಾದ್​ನಲ್ಲಿ ಅವರ ಸಂಬಂಧಿಯ ಕ್ಯಾಂಟಿನ್​ನಲ್ಲಿ ಕೆಲಸ ಮಾಡತೊಡಗಿದರು.
ತಿರುವು: ಎರಡು ವರ್ಷಗಳ ಸಂಚಾರ ಅವರಿಗೆ ಅನೇಕ ಅನುಭವಗಳನ್ನು ದೊರಕಿಸಿಕೊಟ್ಟಿತು. ಅಧ್ಯಾತ್ಮದ ಸೆಳೆತವನ್ನು ಮತ್ತಷ್ಟು ಹೆಚ್ಚಿಸಿತು.
ಗುರು-ಶಿಷ್ಯರ ಸಮಾಗಮ
ಅಹಮದಾಬಾದ್​ನಲ್ಲಿ ಮತ್ತೆ ಲಕ್ಷ್ಮಣರಾವ್ ಇನಾಮದಾರ್ ಅವರ ಭೇಟಿಯಾಯಿತು. ಅವರು ‘ಡಾ.ಹೆಡಗೆವಾರ್ ಭವನ’ದಲ್ಲಿ ನರೇಂದ್ರ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟು, ಪುತ್ರನಂತೆ ನೋಡಿಕೊಂಡರು. ಮೋದಿ ಕೂಡ ಇನಾಮದಾರ್​ರನ್ನು ಗುರುವಾಗಿ ಕಂಡರು. ಈ ಅವಧಿಯಲ್ಲಿ ಮೊದಲಿಗೆ ಸಂಘದ ಸಕ್ರಿಯ ಸ್ವಯಂಸೇವಕರಾದರು. ಇನಾಮದಾರ್ ಅವರ ಸಹಾಯಕ, ನಂತರ ಶಾಖೆಗಳ ಪ್ರಭಾರಿಯಾದ ನರೇಂದ್ರ ಸಂಘದ ಪ್ರಚಾರಕರಾಗಿ ಸಾಮಾಜಿಕ ಜೀವನ ಆರಂಭಿಸಿದರು.
ತಿರುವು: ಸಾಮಾಜಿಕ ಜೀವನದ ಆರಂಭ ಇವರಲ್ಲಿ ಅತೀವ ದೇಶಪ್ರೇಮ ಮತ್ತು ರಾಷ್ಟ್ರಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತವನ್ನು ಜಾಗೃತಗೊಳಿಸಿತು.
ದಿಟ್ಟ ಹೋರಾಟದ ಬದುಕು
ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಸ್​ನ ಶುಲ್ಕವನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ನಡೆಯುತ್ತಿದ್ದ ವಿದ್ಯಾರ್ಥಿ ಆಂದೋಲದಲ್ಲಿ ಸಕ್ರಿಯವಾಗಿ ಭಾಗಿಯಾದರು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಪ್ರತಿಪಕ್ಷಗಳ ನೆರವಿಗೆ ನಿಂತರು. ಬಂಧನದಿಂದ ತಪ್ಪಿಸಿಕೊಳ್ಳಲು ಸರ್ದಾರ್​ಜೀ ವೇಶ ಹಾಕಿ ಓಡಾಡುತ್ತಿದ್ದರು. ಈ ಅವಧಿಯಲ್ಲಿ ಸರ್ಕಾರ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಸೇರಿದಂತೆ ಹಲವರನ್ನು ಬಂಧಿಸಿತ್ತು.
ತಿರುವು: ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟ, ಸೇವೆ 2 ಪ್ರಬಲ ಅಸ್ತ್ರಗಳು ಎಂಬುದು ಮನದಟ್ಟಾಗಿ, ವ್ಯಕ್ತಿತ್ವದ ಭಾಗವಾಗಿಸಿಕೊಂಡರು.
ಸೇವೆಯಲ್ಲಿ ಕಂಡ ಸಾರ್ಥಕತೆ
ಗುಜರಾತಿನ ಮೊರ್ಬಿ ಮಛ್ಛು ನದಿಯ ಅಣೆಕಟ್ಟೆ 1979ರಲ್ಲಿ ಒಡೆದ ಪರಿಣಾಮ, ಭಾರಿ ಹಾನಿಯಾಯಿತು. ಮೋದಿ ಅನೇಕ ಸ್ವಯಂಸೇವಕರೊಡನೆ ಹಲವು ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ಸೇವಾಕಾರ್ಯದಲ್ಲಿ ತೊಡಗಿದರು. ಮನುಷ್ಯರ ಮತ್ತು ಪ್ರಾಣಿಗಳ ಶವಗಳನ್ನು ಹೊರತೆಗೆದು, ಅಂತ್ಯಸಂಸ್ಕಾರ ಮಾಡಿದರು. ಇವರ ನಾಯಕತ್ವ ಹಾಗೂ ಸಮರ್ಪಿತ ಗುಣವನ್ನು ನೋಡಿ 1981ರಲ್ಲಿ ಆರ್​ಎಸ್​ಎಸ್ ಮೋದಿ ಅವರನ್ನು ಪ್ರಾಂತ ಪ್ರಚಾರಕರನ್ನಾಗಿಸಿತು.
ತಿರುವು: ಜನರ ಕಣ್ಣೀರನ್ನು ಒರೆಸುವುದು, ಮಾನವೀಯ ಕಾರ್ಯದಲ್ಲಿ ತೊಡಗುವುದು ಶ್ರೇಷ್ಠ ಕೈಂಕರ್ಯ ಎಂಬ ಭಾವ ಗಟ್ಟಿಯಾಯಿತು.
ಬಿಜೆಪಿ ಪ್ರವೇಶದಿಂದ ರಾಜಕೀಯ ಜೀವನ
ಬಿಜೆಪಿ 1980ರಲ್ಲಿ ಅಸ್ತಿತ್ವಕ್ಕೆ ಬಂತು ಮತ್ತು 1986ರಲ್ಲಿ ಲಾಲಕೃಷ್ಣ ಆಡ್ವಾಣಿ ರಾಷ್ಟ್ರೀಯ ಅಧ್ಯಕ್ಷರಾದರು. ಆಡ್ವಾಣಿ ಮೋದಿ ಅವರನ್ನು ಗುಜರಾತ್ ಬಿಜೆಪಿ ಘಟಕದ ಸಂಘಟನಾ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಮಾಡಿದರು. ಈ ಮೂಲಕ ಮೋದಿ ಯವರ ರಾಜಕೀಯ ಜೀವನ ಆರಂಭಗೊಂಡಿತು. 1987ರಲ್ಲಿ ನಡೆದ ಅಹಮದಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆಯ ನಿರ್ವಹಣೆಯ ಮೊದಲ ಸವಾಲನ್ನು ತಮ್ಮ ಸಂಘಟನಾ ಸಾಮರ್ಥ್ಯದಿಂದ ಮೋದಿ ಗೆದ್ದರು. 127 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಪಡೆದುಕೊಂಡಿತು. ಇದೇ ಕಾರ್ಯತಂತ್ರವನ್ನು ಬಳಸಿ ಸೂರತ್, ವಡೋದರಾ, ರಾಜಕೋಟ್ ಸ್ಥಳೀಯ ಚುನಾವಣೆಯಲ್ಲೂ ವಿಜಯ ಸಾಧಿಸಿತು.
ತಿರುವು: ಮೋದಿ ಜನರೊಂದಿಗೆ ಹೊಂದಿರುವ ನಿಕಟ ಸಂಪರ್ಕ, ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಹೋಗುವ ಜಾಣ್ಮೆ ಮತ್ತು ಸಂಘಟನೆಯನ್ನು ಬಲಗೊಳಿಸುವ ಕೌಶಲ ಕಂಡು ಬಿಜೆಪಿ ಹಿರಿಯ ನಾಯಕರೇ ನಿಬ್ಬೆರಗಾದರು.
ಆಸಕ್ತಿಕರ ಸಂಗತಿಗಳು
ರಾಜಕೀಯ ಯಾತ್ರೆಗಳ ಮ್ಯಾನೇಜ್​ವೆುಂಟ್ ಗುರು
ದೇಶದಲ್ಲಿ ಶ್ರೀರಾಮ ಜನ್ಮಭೂಮಿ ಆಂದೋಲನ ತೀವ್ರ ಸ್ವರೂಪ ಪಡೆದಿದ್ದ ಕಾಲವದು. 1990ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಲಾಲಕೃಷ್ಣ ಆಡ್ವಾಣಿ ಸೋಮನಾಥದಿಂದ ಅಯೋಧ್ಯೆವರೆಗೆ ರಾಮ ರಥಯಾತ್ರೆಯನ್ನು ಆರಂಭಿಸಿದಾಗ, ಗುಜರಾತಿನಲ್ಲಿ ಯಾತ್ರೆ ನೋಡಿಕೊಳ್ಳುವ ಜವಾಬ್ದಾರಿ ಮೋದಿ ಹೆಗಲಿಗೇರಿತು. ರಥಯಾತ್ರೆಯ ಮಾರ್ಗ, ಅಡಚಣೆಗಳು, ಮಾಡಬೇಕಾದ ವ್ಯವಸ್ಥೆ ಇದೆಲ್ಲದರ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿದ ಮೋದಿ, ಮೈಕ್ರೋ ಮ್ಯಾನೇಜ್​ವೆುಂಟ್ ಮೂಲಕವೇ ಅಪಾರ ಜನಸ್ತೋಮ ವನ್ನು ಸೇರಿಸಿದರು. ಗುಜರಾತ್​ನಲ್ಲಿ ರಾಮ ರಥಯಾತ್ರೆಗೆ ಸಿಕ್ಕ ಭಾರಿ ಸ್ಪಂದನೆಯನ್ನು ನೋಡಿದ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಮಹಾಜನ್ ಆಡ್ವಾಣಿ ಅವರನ್ನು ಉದ್ದೇಶಿಸಿ, ‘ಮಹಾರಾಷ್ಟ್ರದಲ್ಲಿ ಇಷ್ಟು ಬೆಂಬಲ, ಪ್ರತಿಕ್ರಿಯೆ ನಿರೀಕ್ಷಿಸಬೇಡಿ’ ಎಂದು ತಮಾಷೆ ಧಾಟಿಯಲ್ಲೇ ಹೇಳಿದ್ದರು.
ತಿರುವು: ರಾಮ ರಥಯಾತ್ರೆಯಿಂದ ಮೋದಿಯವರ ಸಂಘಟನಾತ್ಮಕ ಶಕ್ತಿ ಮತ್ತೊಮ್ಮೆ ಪ್ರಕಟಗೊಳ್ಳುವ ಜತೆಗೆ, ಆಡ್ವಾಣಿ ಸೇರಿ ಹಲವು ನಾಯಕರಿಗೆ ಆಪ್ತವಾದರು.
ಬಂದೂಕು, ಬಾಂಬ್ ಸಿದ್ಧ ಮಾಡಿಟ್ಟುಕೊಳ್ಳಿ
ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್ ಚೌಕ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸದಿರುವಂತೆ ಭಯೋತ್ಪಾದಕರು ಬೆದರಿಕೆ ಒಡ್ಡಿದ್ದರು. ಇದನ್ನು ಸವಾಲಾಗಿ ಪರಿಗಣಿಸಿದ ಬಿಜೆಪಿ ಹಿರಿಯ ನಾಯಕ ಡಾ.ಮುರಳಿ ಮನೋಹರ್ ಜೋಶಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ‘ಏಕತಾ ಯಾತ್ರೆ’ ಆರಂಭಿಸಿದರು. ಇದರ ಸಮನ್ವಯ, ನಿರ್ವಹಣೆ ಮತ್ತು ಮಾರ್ಗ ನಿರ್ಣಯಿಸುವ ಜಬಾಬ್ದಾರಿ ಮೋದಿ ಅವರದ್ದಾಗಿತ್ತು. 1992 ಜನವರಿ 24ರಂದು ಶ್ರೀನಗರದಲ್ಲಿ ಜನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಯೋತ್ಪಾದಕರ ಬೆದರಿಕೆಗಳಿಗೆ ಹೆದರುವುದಿಲ್ಲ. ನಿಮ್ಮ ಬಂದೂಕು, ಬಾಂಬ್ ಸಿದ್ಧ ಮಾಡಿಟ್ಟುಕೊಳ್ಳಿ. 26ರಂದು ತಿರಂಗಾ ಹಾರಿಸಿಯೇ ಸಿದ್ಧ’ ಎಂದು ಪ್ರತಿಸವಾಲು ಹಾಕಿದರು. ಹಾಗೂ 1992ರ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಜೋಶಿ ಮತ್ತು ಮೋದಿ ಲಾಲ್ ಚೌಕ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದಾಗ ಇಡೀ ದೇಶವೇ ಸಂಭ್ರಮಿಸಿತು.
ತಿರುವು: ಏಕತಾ ಯಾತ್ರೆ ಮತ್ತು ಅದರ ಯಶಸ್ಸಿನಿಂದ ಮೋದಿ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡರು.
ಗುಜರಾತ್​ನಿಂದ ದೆಹಲಿಗೆ
1995ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯಿತು. ಕೇಶುಭಾಯಿ ಪಟೇಲ್ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಆದರೆ, ಕೇಶುಭಾಯಿ ಮತ್ತು ಶಂಕರ್​ಸಿಂಗ್ ವಘೇಲಾ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ವಾಜಪೇಯಿ ಅವರೇ ಅಹಮದಾಬಾದ್​ನಲ್ಲಿ 2 ದಿನ ವಾಸ್ತವ್ಯ ಹೂಡಿದರು ಮತ್ತು ಮೋದಿಯವರಿಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿಸಿ, ಗುಜರಾತ್​ನಿಂದ ದೆಹಲಿಗೆ ಕರೆಸಿಕೊಂಡರು.
ತಿರುವು: ಗುಜರಾತ್ ಬಿಡುವುದು ಮೋದಿ ಅವರಿಗೆ ಇಷ್ಟವಿಲ್ಲದಿದ್ದರೂ, ವಾಜಪೇಯಿ ನಿರ್ಣಯದಂತೆ ದೆಹಲಿಗೆ ಬಂದಿದ್ದು, ರಾಜಕೀಯದಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸಲು ಅನುವು ಮಾಡಿಕೊಟ್ಟಿತು.
ಬ್ಯಾಗ್ ಪ್ಯಾಕ್ ಮಾಡಿಕೋ
ಅಂದು 2001ರ ಅಕ್ಟೋಬರ್ 1. ‘ಪ್ರಧಾನಿ ಭೇಟಿಗೆ ಕರೆದಿದ್ದಾರೆ’ ಎಂದು ಮೋದಿಯವರಿಗೆ ಪ್ರಧಾನಿ ನಿವಾಸದಿಂದ ಫೋನ್ ಕರೆ ಬಂತು. ಮೋದಿ ಅಲ್ಲಿ ತಲುಪುತ್ತಿದ್ದಂತೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದಿನ ತಮ್ಮ ಹಾಸ್ಯಭರಿತ ಶೈಲಿಯಲ್ಲಿ, ‘ದಿಲ್ಲಿಯಲ್ಲಿ ಪಂಜಾಬಿ ಊಟ ತಿಂದು ದಪ್ಪ ಆಗಿದ್ದಿಯ, ಗುಜರಾತ್​ಗೆ ಮರಳಿ ಹೋಗು. ಬ್ಯಾಗ್ ಪ್ಯಾಕ್ ಮಾಡಿಕೋ. ತಡಮಾಡಬೇಡ’ ಎಂದರು. ಆದರೆ, ತಮ್ಮನ್ನು ಗುಜರಾತ್ ಮುಖ್ಯಮಂತ್ರಿಯಾಗಿಸಲು ವಾಜಪೇಯಿ ಇಲ್ಲಿಗೆ ಕರೆದಿದ್ದಾರೆ ಎಂಬುದು ಅಲ್ಲಿಯವರೆಗೂ ಮೋದಿಯವರಿಗೆ ಗೊತ್ತಿರಲಿಲ್ಲ. 2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಗುಜರಾತಿನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಶಾಸಕ, ಮಂತ್ರಿ ಆಗದೆ ನೇರ ಸಿಎಂ ಆದ ಹೆಗ್ಗಳಿಕೆ ಮೋದಿ ಅವರದ್ದು. ಇಲ್ಲಿಂದ ಮೋದಿಯವರ ಚುನಾವಣಾ ರಾಜಕೀಯ ಪಯಣ ಆರಂಭಗೊಂಡಿತು.
ತಿರುವು: ಮೋದಿ ಮೊದಲ ಅವಧಿಯಲ್ಲೇ ಅಭಿವೃದ್ಧಿ ಕಾರ್ಯಗಳಿಂದ ಗಮನ ಸೆಳೆದರು. ಭೂಕಂಪದಿಂದ ಹಾನಿ ಗೀಡಾಗಿದ್ದ ಗುಜರಾತಿನ ಹಲವು ನಗರಗಳನ್ನು ಪುನರ್ ನಿರ್ವಿುಸಿದ್ದು, ಇವರ ಕಾರ್ಯಶೈಲಿಯನ್ನು ಪರಿಚಯಿಸಿತು.
ದ್ವೇಷದ ವಿಷವನ್ನು ಜೀರ್ಣಿಸಿಕೊಂಡರು
ರಾಮಭಕ್ತರು ಪಯಣಿಸುತ್ತಿದ್ದ ಸಾಬರಮತಿ ಎಕ್ಸ್​ಪ್ರೆಸ್ ರೈಲಿಗೆ ಗೋಧ್ರಾದಲ್ಲಿ ದುರುಳರು 2002 ಫೆಬ್ರವರಿ 27ರಂದು ಬೆಂಕಿ ಹಚ್ಚಿದ ಪರಿಣಾಮ, ಗುಜರಾತ್​ನಲ್ಲಿ ದಂಗೆಗಳು ಭುಗಿಲೆದ್ದವು. ಆದರೆ, ಗೋಧ್ರಾ ದುರಂತವನ್ನು ಮರೆಮಾಚಿ, ದಂಗೆಗಳನ್ನೇ ಪ್ರಸ್ತಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರುದ್ಧ ಅಪಪ್ರಚಾರ ಮಾಡಲಾಯಿತು, ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಯಿತು. ವಾಜಪೇಯಿ ಕೂಡ, ‘ರಾಜಧರ್ಮವನ್ನು ಪಾಲಿಸಿ’ ಎಂದು ಸಲಹೆ ನೀಡಿದಾಗ, ‘ಅದನ್ನೇ ಮಾಡುತ್ತಿದ್ದೇವೆ’ ಎಂದು ಸ್ಪಷ್ಟವಾಗಿ ಹೇಳಿದ ಮೋದಿ ಎಲ್ಲ ಟೀಕೆ, ದ್ವೇಷದ ವಿಷವನ್ನು ಜೀರ್ಣಿಸಿಕೊಂಡು, ತಮ್ಮ ರಚನಾತ್ಮಕ ಕೆಲಸಗಳ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡಿದರು.
ತಿರುವು: ಮೋದಿ ಸಮರ್ಥ ನಾಯಕ, ರಾಜಕೀಯ ಟೀಕೆಗಳಿಗೆ ಕುಗ್ಗುವವರಲ್ಲ ಎಂಬುದು ಸಾಬೀತಾಯಿತು.
ಹಿಂದುತ್ವದಿಂದ ವಿಕಾಸ ಪುರುಷನ ಚಹರೆ
ಖ್ಯಾತ ಉದ್ಯಮಿ ರತನ್ ಟಾಟಾ ಪಶ್ಚಿಮ ಬಂಗಾಳದ ಸಿಂಗೂರ್​ನಲ್ಲಿ ಕಾರು ಉತ್ಪಾದನಾ ಘಟಕವನ್ನು ಮುಚ್ಚಿದಾಗ ಅವರಿಗೆ ‘ಗುಜರಾತ್​ಗೆ ಸ್ವಾಗತ’ ಎಂದು ಆಹ್ವಾನಿಸಿದವರು ಮೋದಿ. ಅದರಂತೆ, ಟಾಟಾ ಸಮೂಹ ಗುಜರಾತ್​ನಲ್ಲಿ ನ್ಯಾನೋ ಘಟಕ ಆರಂಭಿಸಿತು. ಗುಜರಾತ್ ಸರ್ಕಾರದ ಬಂಡವಾಳಸ್ನೇಹಿ ವಾತಾವರಣದ ಪರಿಣಾಮ, ಹಲವು ಉದ್ಯಮಗಳು ರಾಜ್ಯದಲ್ಲಿ ಸ್ಥಾಪನೆಗೊಂಡವು. ಮುಖ್ಯಮಂತ್ರಿಯಾದ ಎರಡನೇ ಅವಧಿಯಲ್ಲಿ ಮೋದಿ ಚಹರೆ ಹಿಂದುತ್ವದಿಂದ ವಿಕಾಸ ಪುರುಷಕ್ಕೆ ಬದಲಾಯಿತು. ಸಿಎಂ ಆದ 3ನೇ ಅವಧಿಯಲ್ಲಿ ಸದ್ಭಾವನಾ ಯಾತ್ರೆ ನಡೆಸಿ, ಗಮನ ಸೆಳೆದರು.
ತಿರುವು: ಆರ್ಥಿಕ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಇಡೀ ದೇಶ ‘ಗುಜರಾತ್ ಮಾಡಲ್’ ಅಳವಡಿಸಿಕೊಳ್ಳುವ ವಾತಾವರಣ ಸೃಷ್ಟಿಯಾಯಿತು.
ಅಚ್ಛೇ ದಿನ್ ಮತ್ತು ಮೋದಿ ಗ್ಯಾರಂಟಿ
2013ರ ಸೆಪ್ಟೆಂಬರ್​ನಲ್ಲಿ ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪಷ್ಟ ಬಹುಮತದ ಮೂಲಕ (282 ಸ್ಥಾನಗಳು) ಅಧಿಕಾರಕ್ಕೆ ಬಂತು. ‘ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ’ ಎಂದ ಮೋದಿ ಮೊದಲ ಅವಧಿಯಲ್ಲೇ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು. ಈ ಅಭಿವೃದ್ಧಿ ಕಾರ್ಯಗಳ ಪರಿಣಾಮವೇ 2019ರಲ್ಲಿ ಬಿಜೆಪಿ 303 ಸ್ಥಾನ ಪಡೆದು, ಮೋದಿ ಎರಡನೇ ಬಾರಿಗೆ ಪ್ರಧಾನಿಯಾದರು. 2024ರಲ್ಲಿ ಸ್ಪಷ್ಟ ಬಹುಮತದಿಂದ ಸ್ಪಲ್ಪ ದೂರವಿದ್ದರೂ, ಎನ್​ಡಿಎ ಒಕ್ಕೂಟದ ಸರ್ಕಾರವನ್ನು ನಡೆಸುವ ಕ್ಯಾಪ್ಟನ್ ಆಗಿ ಮೋದಿ ಹೊರಹೊಮ್ಮಿದ್ದಾರೆ.
ತಿರುವು: ದೇಶದಲ್ಲಿ ರಾಜಕೀಯ ಸ್ಥಿರತೆ ಇದ್ದಿದ್ದರಿಂದ ಆರ್ಥಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಕಾಸ ಸಾಧ್ಯವಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
