|ತೇಜಸ್ವಿ ಸೂರ್ಯಬೆಂಗಳೂರು ದಕ್ಷಿಣ ಸಂಸದ
ಪ್ರಧಾನ ಸೇವಕರ ಹುಟ್ಟುಹಬ್ಬವಿಂದು. ಹೌದು, ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದಂದು ಎಲ್ಲೆಲ್ಲೂ ಹಾರೈಕೆಗಳ ಸುರಿಮಳೆ. ಇದರ ಜೊತೆಗೆ ಕರ್ನಾಟಕದವರು, ಕನ್ನಡಿಗರೂ ಸಂಭ್ರಮಿಸುತ್ತಿದ್ದಾರೆ. ಕಾರಣ, ರಾಜ್ಯಕ್ಕೆ ಪ್ರಧಾನಿ ಮೋದಿ ಕೊಟ್ಟಿರುವ ಕೊಡುಗೆ.
ಉದಾಹರಣೆಗೆ ರಸ್ತೆ ಅಭಿವೃದ್ಧಿಯನ್ನೇ ನೋಡೋಣ. 1,14,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ 46 ರಾಷ್ಟ್ರೀಯ ಹೆದ್ದಾರಿಗಳು ಕರ್ನಾಟಕವನ್ನು ದೇಶದ ಇತರ ಭಾಗಗಳೊಂದಿಗೆ ಸಂರ್ಪಸಲಿವೆ. ಕೇವಲ ಬೆಂಗಳೂರಿಗೆ, ಮಹತ್ವಾಕಾಂಕ್ಷೆಯ ಭಾರತಮಾಲಾ ಪರಿಯೋಜನಾ ಭಾಗವಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್​ಗೆ 15 ಸಾವಿರ ಕೋಟಿ ರೂ.ಗಳನ್ನು ಮೋದಿ ಸರ್ಕಾರ ನೀಡಿದೆ ಎಂದರೆ, ರಸ್ತೆ ಸಂಪರ್ಕದ ಬಗ್ಗೆ ಪ್ರಧಾನಿಗಳಿಗಿರುವ ಕಾಳಜಿ ಗಮನಿಸಬಹುದು.
ಇವತ್ತಿಗೂ ರೈಲ್ವೆ ಭಾರತೀಯರ ಜೀವನಾಡಿ ಎಂದರೆ ಅತಿಶಯೋಕ್ತಿಯಲ್ಲ. ದುರಂತ ಏನ್ ಗೊತ್ತಾ? 2014 ಯು.ಪಿ.ಎ ಆಡಳಿತದ ಕೊನೆಯ ಅವಧಿಯವರೆಗೆ ಇಡೀ ದೇಶದಲ್ಲಿ ಕೇವಲ 610 ಕಿಮೀವರೆಗೆ ಮಾತ್ರ ರೇಲ್ವೆ ಮಾರ್ಗದ ವಿದ್ಯುದೀಕರಣಗೊಂಡಿದ್ದು, 2014ರ ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಡೀ ಭಾರತದಲ್ಲಿ ವಿದ್ಯುದೀಕರಣಗೊಂಡಿರುವ ರೈಲು ಮಾರ್ಗ 6,015 ಕಿಮೀ.ವರೆಗೆ. ಎಲ್ಲಿಯ 610 ಕಿಮೀ ಹಾಗೂ ಎಲ್ಲಿಯ 6,015 ಕಿಮೀ? ಅಷ್ಟೇ ಅಲ್ಲ, ಕರ್ನಾಟಕಕ್ಕೆ ರೈಲ್ವೆ ಬಜೆಟ್ ಅನುದಾನ ಶೇ. 92ರಷ್ಟು ಹೆಚ್ಚಾಗಿದ್ದು, ಹೊಸ ಮಾರ್ಗದ ಕಾಮಗಾರಿಗಳು ಸುಮಾರು ಮೂರು ಪಟ್ಟು ಹೆಚ್ಚಳವಾಗಿರುವುದರ ಜೊತೆಗೆ ಶೇ. 190 ರಷ್ಟು ಏರಿಕೆಯಾಗಿದೆ. ಇನ್ನು 800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣ ಪುನರಾಭಿವೃದ್ಧಿ ಕಾರ್ಯವೂ ಜಾರಿಯಲ್ಲಿದೆ.
ಬೆಂಗಳೂರಿನ ಸಬ್-ಅರ್ಬನ್ ರೈಲಿನ ಬಗ್ಗೆಯೂ ಹೇಳಬೇಕು. ಜೂನ್ 2022ರಲ್ಲಿ, ಮೋದಿಯವರು 148 ಕಿಮೀಗಳನ್ನು ಸಂರ್ಪಸುವ 4 ಕಾರಿಡಾರ್​ಗಳಿಗೆ 15,000 ಕೋಟಿ ರೂ.ಗಿಂತ ಹೆಚ್ಚು ಮಂಜೂರು ವೆಚ್ಚದೊಂದಿಗೆ ಅಡಿಪಾಯ ಹಾಕಿದ್ದಾರೆ. ವಿಶೇಷವೇನೆಂದರೆ, 40 ವರ್ಷಗಳಿಂದ ಬಾಕಿ ಇರುವ ಯೋಜನೆಯನ್ನು 40 ತಿಂಗಳೊಳಗೆ ಪೂರ್ಣಗೊಳಿಸಲು ಗಡುವನ್ನು ನೀಡಿದ್ದಾರೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್-2ಕ್ಕೆ ಪ್ರಾಥಮಿಕ ಕಾಮಗಾರಿ ಆದೇಶ ಹೊರಡಿಸಲಾಗಿದೆ. ಅಷ್ಟಲ್ಲದೇ ಹೇಳುತ್ತಾರಾ? ‘ಮೋದಿ ಹೈ ತೊ ಮುಮ್ಕಿನ್ ಹೈ’ ಎಂದು?
ಭೂಮಿ ನೋಡಾಯ್ತು. ಇನ್ನು ಆಕಾಶದತ್ತ ನೋಡೋಣವೇ? 2014ರ ಮೊದಲು, ಭಾರತದ ಕೈಗಾರಿಕಾ ಶಕ್ತಿ ಕೇಂದ್ರಗಳಲ್ಲಿ ಒಂದಾದ ಮತ್ತು ಶ್ರೀಮಂತ ಪ್ರವಾಸೋದ್ಯಮ ಸಾಮರ್ಥ್ಯ ಹೊಂದಿರುವ ನಮ್ಮ ರಾಜ್ಯವು ಕೇವಲ ಏಳು ವಿಮಾನ ನಿಲ್ದಾಣಗಳನ್ನು ಹೊಂದಿದ್ದು ನಾಡಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಸಮರ್ಥವಾಗಿತ್ತು. ಆದರೆ, ಮೋದಿ ಸರ್ಕಾರ ಕೇವಲ 8 ವರ್ಷಗಳಲ್ಲಿ 7 ವಿಮಾನ ನಿಲ್ದಾಣಗಳನ್ನು ನೀಡಿದೆ. ಇನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಟರ್ವಿುನಲ್ ಹಾಗೂ ರನ್​ವೇಗಳು 13 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಿರ್ವಣಗೊಳ್ಳುತ್ತಿದೆ. ಕರ್ನಾಟಕವು ಮೋದಿಯವರ ಹುಟ್ಟುಹಬ್ಬಕ್ಕೆ ಹಾರೈಸುತ್ತಾ ‘ಥ್ಯಾಂಕ್ಯು ಮೋದಿ ಜೀ’ ಎಂದು ಹೇಳಲಿಕ್ಕೆ ಇನ್ನೇನು ಬೇಕು ಅಲ್ಲವೇ? ಆದರೆ, ಮೋದಿಯವರಿಗೆ ಕರ್ನಾಟಕದ ಮೇಲಿನ ಪ್ರೀತಿ ಇಷ್ಟಕ್ಕೇ ಮುಗಿದಿಲ್ಲ ಎಂಬುದು ಮಾತ್ರ ಸತ್ಯ.
ಏಕೆಂದರೆ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಿಂದ ಇ-ಶ್ರಮವರೆಗೆ, ಪ್ರಧಾನಮಂತ್ರಿ ಜೀವನ್ ಜ್ಯೋತಿಯಿಂದ ಸುರಕ್ಷಾ ಬಿಮಾ ಯೋಜನೆವರೆಗೆ, ಸ್ಟಾ್ಯಂಡ್-ಅಪ್ ಇಂಡಿಯಾದಿಂದ ಮುದ್ರಾ ಯೋಜನೆವರೆಗೆ, ಅಟಲ್ ಪಿಂಚಣಿ ಯೋಜನೆಯಿಂದ ಪಿಎಂ ಶ್ರಮ ಯೋಗಿ ಮಂದನ್ ಯೋಜನೆವರೆಗೆ ಪ್ರಧಾನ ಮಂತ್ರಿಯವರ ಕ್ರಾಂತಿಕಾರಿ ಪ್ರಮುಖ ಯೋಜನೆಗಳಿಂದ ಪ್ರಯೋಜನ ಪಡೆದವರು ಕೋಟಿಗೂ ಅಧಿಕ.
ಇಷ್ಟು ವರ್ಷ ನಮ್ಮನ್ನು ಆಳಿದ ಕಾಂಗ್ರೆಸ್​ನ ಕಣ್ಣಿನಲ್ಲಿ ಕರ್ನಾಟಕದ ಜನತೆ ಕೇವಲ ಮದ್ರಾಸಿಗಳಾಗಿದ್ದರು. ದಕ್ಷಿಣ ಭಾರತದ ಜನರನ್ನು ಕೇವಲ ಮದ್ರಾಸಿಗಳೆಂದು ಉತ್ತರ ಭಾರತದವರು ಪರಿಗಣಿಸುತ್ತಿದ್ದರು. ಅಂದರೆ, ನಮಗೆ ಅಸ್ತಿತ್ವವೇ ಇಲ್ಲವೆಂಬಂತೆ ಕಾಣುತ್ತಿದ್ದರು. ಕರ್ನಾಟಕಕ್ಕೆ ಅದರದ್ದೇ ಆದ ಇತಿಹಾಸವಿದ್ದು, ಅಸ್ಮಿತೆಯಿದೆ. ಈಗ ಉತ್ತರ ಭಾರತೀಯರೂ ನಮ್ಮ ರಾಜ್ಯವನ್ನು, ಬೆಂಗಳೂರನ್ನು ಗುರುತಿಸುತ್ತಿದ್ದಾರೆ. ಇಲ್ಲಿ ಮೋದಿ ಸರ್ಕಾರದ ಕಾಲದಲ್ಲಾದ ಅಭಿವೃದ್ಧಿಯ ಕೊಡುಗೆ ಅಪಾರ. ಇದು ಬಡವರನ್ನೂ ಜೊತೆ ಸೇರಿಸಿಕೊಂಡು ಬಂದ ಅಭಿವೃದ್ಧಿ. ಇದಕ್ಕೆ ಉದಾಹರಣೆಯೇ ಮನೆ ಮತ್ತು ಆರೋಗ್ಯ ಕೊಡುಗೆಗಳು!
ಬಡವರಿಗೆ/ಮಧ್ಯಮವರ್ಗದವರಿಗೆ ಮುಖ್ಯವಾಗಿ ಬೇಕಿರುವುದು ಎರಡು – ಇರೋದಕ್ಕೆ ಮನೆ, ಆರೋಗ್ಯ ಹದಗೆಟ್ಟಾಗ ಆಸ್ಪತ್ರೆ ವೆಚ್ಚ. ಚಹಾ ಮಾರುತ್ತಿದ್ದ ಪ್ರಧಾನಿಗೆ ಬಡವರ ನಾಡಿಮಿಡಿತ ತಿಳಿಯದೇ ಇದ್ದೀತೇ? ಇದಕ್ಕಾಗಿಯೇ ಅವರು ತಲೆ ಮೇಲೆ ಸೂರು, ಕುಡಿಯುವುದಕ್ಕೆ ನೀರು, ಸರ್ಕಾರದಿಂದ ಬರುವ ಅನುದಾನಗಳು ಜನರಿಗೆ ನೇರ ತಲುಪಲಿಕ್ಕೆ ಬ್ಯಾಂಕ್ ಖಾತೆಯನ್ನೆಲ್ಲ ಮಾಡಿಕೊಟ್ಟರು.
ಪ್ರಧಾನಮಂತ್ರಿ ಆವಾಸ್ ಯೋಜನೆಯು ಬಡವರನ್ನು ಮೇಲೆತ್ತಲು ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ನಂಬಿದ್ದಾರೆ. ಈ ಯೋಜನೆ ಅಡಿಯಲ್ಲಿ, ಕರ್ನಾಟಕದಲ್ಲಿ 11,494 ಕೋಟಿ ರೂಪಾಯಿಗೂ ಹೆಚ್ಚು ಸಹಾಯದೊಂದಿಗೆ 7,00,578 ಮನೆಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರಿನಲ್ಲಿ 1,90,646 ಮನೆಗಳಿಗೆ ಮಂಜೂರಾದ ಮೊತ್ತ ಸುಮಾರು 3,239 ಕೋಟಿ ರೂಪಾಯಿ.
ಇವತ್ತಿಗೂ ಮನೆಯಲ್ಲಿ ಒಬ್ಬನಿಗೆ ಆರೋಗ್ಯ ಹದಗೆಟ್ಟರೂ ಕುಟುಂಬ ಕಂಗಾಲಾಗುತ್ತದೆ. ಇದನ್ನು ಅರಿತಿರುವ ಮೋದಿ ತಮ್ಮ ನಾಯಕತ್ವದಲ್ಲಿ ಆಯುಷ್ಮಾನ್ ಭಾರತ್ ಪರಿಚಯಿಸಿದರು. ಬೆಂಗಳೂರಿನಲ್ಲಿ, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ 1,96,156 ನಾಗರಿಕರು ಪ್ರಯೋಜನಗಳನ್ನು ಪಡೆದಿದ್ದು 24,18,744 ಎಬಿಎಚ್ (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಕಾರ್ಡ್​ಗಳನ್ನು ನೀಡಲಾಗಿದೆ. ಪರಿಣಾಮ, ಬಡವರಿಗೆ ಹೊರೆ ಇಳಿದಂತಾಗಿದೆ.
ಆಸ್ಪತ್ರೆ ಖರ್ಚೇನೋ ನೋಡ್ಕೊಂಡ್ರಿ, ಆದರೆ ವೈದ್ಯರು ಬರೆಯೋ ದೊಡ್ಡ ದೊಡ್ಡ ಔಷಧಿಗಳ ಬಿಲ್ ಸಹ ನೋಡಿದ್ದಾರೆ ಪ್ರಧಾನಿ ಮೋದಿ. ಇದಕ್ಕಾಗಿಯೇ ಜಾರಿಗೆ ಬಂದಿದ್ದು ಜನೌಷಧಿ ಕೇಂದ್ರಗಳು. ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ 75 ಜನೌಷಧಿ ಕೇಂದ್ರಗಳ ಮೈಲಿಗಲ್ಲನ್ನು ಸ್ಥಾಪಿಸಲಾಗಿದೆ. ಇದರ ಪರಿಣಾಮವಾಗಿ ಬೆಂಗಳೂರು ದಕ್ಷಿಣವೊಂದರಲ್ಲೇ 1,06,400 ಫಲಾನುಭವಿಗಳಿದ್ದಾರೆ. ಸಾವಿರ ರೂಪಾಯಿಗಳಿದ್ದ ಔಷಧ ಕೇವಲ ನೂರು ಇನ್ನೂರು ರುಪಾಯಿಯಲ್ಲಿ ಸಿಗುವಂತಾಗಿದೆ. ಆಸ್ಪತ್ರೆ ಬಿಲ್ ಕಟ್ಟಿ ರೋಸಿ ಹೋಗುವ ಜನರಿಗೆ ಇದಕ್ಕಿಂತ ಹೆಚ್ಚು ರಿಲೀಫ್ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಎಷ್ಟೋ ಮನೆಗಳಲ್ಲಿ ನಿತ್ಯ ಗುಳಿಗೆಗಳ ಮೇಲೇ ಜೀವನ ಸಾಗಿಸುತ್ತಿರುವ ವಯೋವೃದ್ಧರಿಗೆ ನೂರಾರು ರುಪಾಯಿಗಳ ಔಷಧಿಗಳು ಹತ್ತಿಪ್ಪತ್ತು ರುಪಾಯಿಗೆ ಸಿಕ್ಕು, ಅವರು ಮೋದಿಯವರಿಗೆ ಆಶೀರ್ವದಿಸುವುದಕ್ಕಿಂತ ಇನ್ಯಾವ ಶ್ರೀರಕ್ಷೆ ಬೇಕು ಹೇಳಿ? ಕರ್ನಾಟಕವನ್ನು ಇಷ್ಟು ಪ್ರೀತಿಸಿದ ಇನ್ನೊಬ್ಬ ಪ್ರಧಾನಿಯನ್ನು ತೋರಿಸಿಬಿಡಿ ನೋಡೋಣ.
ನಮಗಾಗಿ ಇಷ್ಟೆಲ್ಲ ಶ್ರಮಿಸುತ್ತಿರುವ ಮೋದಿಯವರ ಪರವಾಗಿ ಮಾಡಬೇಕಿರುವುದು ಇಷ್ಟೇ – ಅವರಿಗೆ ಇನ್ನಷ್ಟು ವರ್ಷ ಆಯಸ್ಸು ನೀಡಿ, ನಮ್ಮ ದೇಶದ ಪ್ರಧಾನ ಸೇವಕರಾಗಿ ಸೇವೆ ಸಲ್ಲಿಸಲು ಶಕ್ತಿ ಕೊಡು ತಾಯಿ ಭಾರತಿ ಎಂದು ಒಟ್ಟಾಗಿ ಪ್ರಾರ್ಥಿಸೋಣ.
ವಿಶ್ವಗುರುವಾಗಿಸುವ ಹಂಬಲ:ಮೋದಿಯವರು ಇಲ್ಲಿ ಜೀವನಪರ್ಯಂತ ಅಧಿಕಾರ ಮಾಡುವುದಕ್ಕೆ ಬಂದಿಲ್ಲ. ಅಥವಾ ಹಣ ಮಾಡಿ ಹೋಗಬೇಕೆನ್ನುವ ಆಸೆಯಂತೂ ಹತ್ತಿರವೂ ಸುಳಿಯಲ್ಲ. ತಮಗೆ ಕಾರ್ಯಕ್ರಮದಲ್ಲಿ ಬಂದಿರುವ ಉಡುಗೊರೆಯನ್ನೆಲ್ಲ ಆನ್​ಲೈನ್​ನಲ್ಲಿ ಹರಾಜಿಗಿಟ್ಟು, ಹೆಣ್ಣು ಮಕ್ಕಳ ನಿಧಿಗೆ ಅದನ್ನು ಹಾಕುವ ಸಂನ್ಯಾಸಿಗೆ ಅಧಿಕಾರದ ಹಂಬಲವಿರಲು ಸಾಧ್ಯವಿಲ್ಲ. ಆದರೆ, ದೇಶವನ್ನು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತೆ ಮಾಡಬೇಕು, ವಿಶ್ವಗುರುವನ್ನಾಗಿಸಬೇಕು, ಅಭಿವೃದ್ಧಿಯ ಮಾದರಿಯೇ ಭಾರತವೆಂದಾಗಬೇಕೆಂಬ ಧ್ಯೇಯ ಮಾತ್ರ ಅಚಲವಾಗಿದೆ.
ಸ್ನೇಹಿತನ ಜತೆ ಸೇರಿ ಗಂಡನ ಕೊಂದಾಕೆ ತಮ್ಮನಿಂದಲೇ ಕೊಲೆಯಾದ್ಲು; ಆಕೆಯನ್ನು ಕೊಂದು ಸಹೋದರ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
