ನವದೆಹಲಿ:ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಜ. 22ರವರೆಗೆ 11 ದಿನಗಳ ಕಾಲ ವಿಶೇಷ ಅನುಷ್ಠಾನ ಆರಂಭಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉಪವಾಸ, ನೆಲದ ಮೇಲೆ ಮಲಗುವುದು, ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಧರಿಸದೇ ಇರುವುದು ಮುಂತಾದ ವಿಧಿಗಳನ್ನು ಇದು ಒಳಗೊಂಡಿರುತ್ತದೆ. ‘ಎಕ್ಸ್’ ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿರುವ ತಮ್ಮ ಆಡಿಯೋ ಸಂದೇಶದಲ್ಲಿ ಮೋದಿ ತಮ್ಮ ಅನುಷ್ಠಾನದ ವಿಷಯವನ್ನು ಘೊಷಿಸಿದ್ದು, ಅತ್ಯಂತ ಭಾವುಕ ನುಡಿಗಳನ್ನಾಡಿದ್ದಾರೆ.
‘ಎಲ್ಲ ಭಾರತೀಯರ ಪರವಾಗಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ದೇವರೇ ನನ್ನನ್ನು ಆರಿಸಿದ್ದಾನೆ. ಈ ರೀತಿಯ ಭಕ್ತಿಭಾವವನ್ನು ಜೀವನದಲ್ಲಿ ಮೊದಲ ಬಾರಿ ಅನುಭವಿಸುತ್ತಿದ್ದೇನೆ. ಭಾವಯಾತ್ರೆಯ ಈ ಕ್ಷಣವು ಅಭಿವ್ಯಕ್ತಿಯದಲ್ಲ, ಸಾಕ್ಷಾತ್ಕಾರದ್ದು. ಇದರ ಆಳ, ತೀವ್ರತೆಯನ್ನು ಪದಗಳಲ್ಲಿ ಬಣ್ಣಿಸಲಾಗದು. ನನ್ನ ಸ್ಥಿತಿ ನಿಮಗೆ ಅರ್ಥವಾಗಬಲ್ಲದು. ಇಂತಹ ಐತಿಹಾಸಿಕ, ಮಂಗಳಕರ ಕಾರ್ಯದಲ್ಲಿ ಭಾಗಿಯಾಗುತ್ತಿರುವ ನಾನೇ ಧನ್ಯ. ಹಲವು ತಲೆಮಾರುಗಳ ಕನಸು ನನಸಾಗುತ್ತಿದೆ. ಜನರು ದೇವರ ಇನ್ನೊಂದು ರೂಪವಿದ್ದಂತೆ. ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದವಿರಲಿ. ನನ್ನ ಮನಸ್ಸು, ಮಾತು, ಕೃತಿಗಳಲ್ಲಿ ಯಾವುದೇ ಚ್ಯುತಿ ಆಗದಿರಲಿ’ ಎಂದು ಹೇಳಿದ್ದಾರೆ.
‘ಎಷ್ಟೇ ಜವಾಬ್ದಾರಿ, ಬಿಜಿ ಷೆಡ್ಯೂಲ್ ಇದ್ದರೂ ಕಠಿಣ ಧಾರ್ವಿುಕ ವಿಧಿಗಳನ್ನು ತಪ್ಪದೇ ಪರಿಪಾಲಿಸಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಧಾರ್ವಿುಕ ಗುರುಗಳ ಮಾರ್ಗದರ್ಶನ ಪಡೆದಿದ್ದೇನೆ. ಅನುಷ್ಠಾನವನ್ನು ನಾಶಿಕ್ ಧಾಮ- ಪಂಚವಟಿಯಿಂದ ಆರಂಭಿಸುತ್ತಿರುವುದು ಸಂತಸ ತಂದಿದೆ. ಶ್ರೀರಾಮ ಹೆಚ್ಚು ಸಮಯ ಕಳೆದ ಪವಿತ್ರ ಸ್ಥಳವಿದು’ ಎಂದು ಮೋದಿ ಹೇಳಿದ್ದಾರೆ.
ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಧಾನಿ:ಮಹಾರಾಷ್ಟ್ರದ ನಾಶಿಕ್​ನ ಪಂಚವಟಿ ಪ್ರದೇಶದಲ್ಲಿರುವ, ಗೋದಾವರಿ ನದಿ ದಂಡೆ ಮೇಲಿನ ಶ್ರೀ ಕಾಳಾರಾಮ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಆವರಣವನ್ನು ಅವರು ಸ್ವಚ್ಛಗೊಳಿಸಿದರು. ‘ದೇಶಾದ್ಯಂತ ಎಲ್ಲ ದೇವಸ್ಥಾನ ಮತ್ತು ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವಂತೆ ಜ. 8ರಂದು ನಾನು ಕರೆ ನೀಡಿದ್ದೆ. ಜ. 14ರಿಂದ ಆರಂಭವಾಗಿ 22ರೊಳಗೆ ಈ ಅಭಿಯಾನ ಪೂರ್ಣಗೊಳ್ಳಬೇಕು’ ಎಂದು ಮೋದಿ ಕರೆ ನೀಡಿದರು.
ಬಾಲರಾಮನಿಗೆ 2.5 ಕೆಜಿಯ ರತ್ನಖಚಿತ ಬಿಲ್ಲು:ಅಯೋಧ್ಯೆಯ ಬಾಲರಾಮನಿಗೆ ಎರಡೂವರೆ ಕೆಜಿ ತೂಕದ ಬಿಲ್ಲನ್ನು ಉಡುಗೊರೆಯಾಗಿ ನೀಡಲು ಅಮವಾ ರಾಮ ದೇವಸ್ಥಾನ ಮುಂದಾಗಿದೆ. ಈ ಬಿಲ್ಲು ಬಾಣಗಳನ್ನು ಚೆನ್ನೈನಲ್ಲಿ ತಯಾರಿಸಿ ತರಿಸಲಾಗುತ್ತಿದ್ದು, ಜ. 19ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗೆ ಹಸ್ತಾಂತರಿಸಲಾಗುವುದು ಎಂದು ಅಮವಾ ರಾಮ ದೇವಸ್ಥಾನದ ಟ್ರಸ್ಟಿ ಶಯನ್ ಕುನಾಲ್ ತಿಳಿಸಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ವಿವರಿಸಿರುವಂತೆ ಈ ಬಿಲ್ಲು ಮತ್ತು ಬಾಣಗಳನ್ನು ತಯಾರಿಸಲಾಗಿದೆ. 200 ವರ್ಷಗಳಿಂದ ಕರಕುಶಲ ಕೆಲಸದಲ್ಲಿ ತೊಡಗಿರುವ ಚೆನ್ನೈನ ಕುಟುಂಬದ ಕುಶಲಕರ್ವಿುಗಳು ಇವುಗಳನ್ನು ತಯಾರಿಸಿದ್ದಾರೆ. ಒಟ್ಟು 2.5 ಕೆಜಿ ತೂಕದ ಬಿಲ್ಲಿನಲ್ಲಿ ಸುಮಾರು 700 ಗ್ರಾಮ್ಷ್ಟು 24 ಕ್ಯಾರಟ್ ಚಿನ್ನ ಬಳಸಲಾಗಿದೆ ಎಂದು ವಿವರಿಸಿದ್ದಾರೆ.
ಅಯೋಧ್ಯೆಯಲ್ಲಿ ಕೇಸರಿ ಧ್ವಜಗಳಿಗೆ ಭಾರಿ ಬೇಡಿಕೆ:ಶ್ರೀರಾಮ, ಹನುಮಾನ್ ಚಿತ್ರವಿರುವ, ‘ಜೈಶ್ರೀರಾಂ’ ಎಂಬ ಘೊಷಣೆ ಮುದ್ರಿಸಿರುವ ಕೇಸರಿ ಧ್ವಜಗಳಿಗೆ ಭಾರಿ ಬೇಡಿಕೆ ಕುದುರಿದೆ. ಸಮೀಪದ ಜಿಲ್ಲೆಗಳ ಜನರು ಈಗಲೇ ದೊಡ್ಡ ಸಂಖ್ಯೆಯಲ್ಲಿ ಮಂದಿರ ವೀಕ್ಷಿಸಲು ಪ್ರತಿದಿನ ಆಗಮಿಸುತ್ತಿದ್ದಾರೆ. ಕೆಲವರು ಶೋಭಾಯಾತ್ರೆ, ಯಜ್ಞ, ಕಥೆ-ಭಾಗವತ ಶ್ರವಣಗಳನ್ನು ನಡೆಸುತ್ತಿದ್ದಾರೆ. ಅವರೆಲ್ಲರೂ ಇತರ ವಸ್ತುಗಳ ಜತೆ ಈ ಕೇಸರಿ ಧ್ವಜಗಳನ್ನೂ ಖರೀದಿಸುತ್ತಿದ್ದಾರೆ. ಜನರು ಮೊದಲು ಅಂಗಡಿ- ಮನೆಗಳ ಮೇಲೆ ಈ ಧ್ವಜಗಳನ್ನು ಹಾರಿಸುತ್ತಿರಲಿಲ್ಲ. ಬದಲಾದ ಪರಿಸ್ಥಿತಿಯಿಂದಾಗಿ, ಈಗ ಬಹುತೇಕ ಎಲ್ಲ ಅಂಗಡಿ- ಮನೆಗಳ ಮೇಲೂ ಕೇಸರಿ ಧ್ವಜಗಳು ರಾರಾಜಿಸತೊಡಗಿವೆ. 13 ಕಿಮೀ ಉದ್ದದ ರಾಮಪಥ, ಲತಾ ಮಂಗೇಶ್ಕರ್ ಚೌಕ್ ಮುಂತಾದೆಡೆ ಅಂಗಡಿಗಳಲ್ಲಿ ಕೇಸರಿ ಧ್ವಜಗಳ ವ್ಯಾಪಾರ ಭರದಿಂದ ಸಾಗಿದೆ. ಪ್ರತಿ ಧ್ವಜದ ಬೆಲೆ ಅವುಗಳ ಗಾತ್ರ ಆಧರಿಸಿ, 50 ರೂ.ನಿಂದ ಸಾವಿರ ರೂ.ವರೆಗೂ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + sixteen =
Remember me
