ನನ್ನ ಮಗನಿಗೆ 24 ವರ್ಷ. ಎಂಬಿಎ ಪದವೀಧರನಾಗಿದ್ದು, ಪ್ರತಿ ತಿಂಗಳು 30 ಸಾವಿರ ರೂ. ಸಂಬಳ ಬರುತ್ತದೆ. ಮ್ಯೂಚವಲ್ ಫಂಡ್ ಎಸ್​ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ)ಯಲ್ಲಿ ಪ್ರತಿ ತಿಂಗಳು 4 ಸಾವಿರ ರೂ. ಹೂಡಿಕೆ ಮಾಡಬೇಕೆಂದು ಆತ ಬಯಸಿದ್ದಾನೆ. ಆದರೆ ನಾನು ಇತ್ತೀಚೆಗೆ ಇನ್ಶೂರೆನ್ಸ್ ಕಂಪನಿಯೊಂದು ಬಿಡುಗಡೆ ಮಾಡಿರುವ ಎಸ್​ಐಐಪಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದೇನೆ. ಯಾವುದು ಸರಿಯಾದ ನಿರ್ಧಾರ?
| ಪ್ರಸನ್ನ ಎಸ್.ಜಿ.ಎಸ್., ತುಮಕೂರು
ಪ್ರಸನ್ನ ಅವರೆ, ಮಗನ ಹೂಡಿಕೆ ಸರಿಯಾಗಿರಬೇಕು ಎಂಬ ನಿಮ್ಮ ಕಾಳಜಿ ಇಷ್ಟವಾಯಿತು. ಹೂಡಿಕೆಗೆ ಮುಂಜಾಗ್ರತೆಯೇ ಮದ್ದು ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಮ್ಯೂಚುವಲ್ ಫಂಡ್ ಎಸ್​ಐಪಿ ಮೂಲಕ ಹೂಡಿಕೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ದೇಶದಲ್ಲಿ ಪ್ರತಿ ತಿಂಗಳು 8,000 ಕೋಟಿ ರೂ.ಗೂ ಹೆಚ್ಚು ಹಣ ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಹೂಡಿಕೆಯಾಗುತ್ತಿದೆ. ಇದೀಗ ಇನ್ಶೂರೆನ್ಸ್ ಕಂಪನಿಗಳೂ ಅದರಲ್ಲಿ ಒಂದಿಷ್ಟು ಪಾಲು ಪಡೆದುಕೊಳ್ಳುವ ಪ್ರಯತ್ನದಲ್ಲಿವೆ. ನೀವು ಹೇಳಿರುವ ಇನ್ಶೂರೆನ್ಸ್ ಕಂಪನಿ ಹೊರತಂದಿರುವ ಎಸ್​ಐಐಪಿ ಹೂಡಿಕೆ ಯೋಜನೆ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾ್ಯನ್ ( ಯುಲಿಪ್) ಆಗಿದೆ. ಇದು ಇನ್ಶೂರೆನ್ಸ್ ಮತ್ತು ಹೂಡಿಕೆಯ ಸಮ್ಮಿಶ್ರಣ. ಎಸ್​ಐಐಪಿ ಪ್ಲಾ್ಯನ್ ನಲ್ಲಿ ಪ್ರೀಮಿಯಂ ಅಲೋಕೇಷನ್ ಚಾರ್ಜ್(ಪಿಎಸಿ) ವಿಧಿಸಲಾಗುತ್ತದೆ. ಎಲ್ಲ ಯುಲಿಪ್​ಗಳಲ್ಲಿ ಇರುವಂತೆ ಎಸ್​ಐಐಪಿ ಯೋಜನೆಯಲ್ಲೂ ಆರಂಭಿಕ 5 ವರ್ಷಗಳಲ್ಲಿ ಪ್ರೀಮಿಯಂ ಅಲೋಕೇಷನ್ ಚಾರ್ಜ್ ಹೆಚ್ಚು (ಏಜೆಂಟ್ ಮೂಲಕ ಖರೀದಿಸಿದರೆ ಶೇ.8 , ಆನ್​ಲೈನ್​ನಲ್ಲಿ ಖರೀದಿಸಿದರೆ ಶೇ.3 ) ಇದೆ. 6ನೇ ವರ್ಷದಿಂದ ಪಿಎಸಿ ಚಾರ್ಜ್ ಏಜೆಂಟ್ ಮೂಲಕ ಖರೀದಿಸಿದ್ದರೆ ಶೇ.3 ಮತ್ತು ಆನ್​ಲೈನ್​ನಲ್ಲಿ ಖರೀದಿಸಿದ್ದರೆ ಶೇ.1 ಇದೆ. ಇದಲ್ಲದೆ ಹೆಚ್ಚುವರಿಯಾಗಿ ನೀವು ಫಂಡ್ ಮ್ಯಾನೇಜ್ಮೆಂಟ್ ದರಗಳನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಂತಿಮವಾಗಿ ಹೂಡಿಕೆ ಮೊತ್ತ ಕಡಿಮೆಯಾಗುತ್ತದೆ. ಉದಾಹರಣೆಗೆ ನೀವು 1 ಲಕ್ಷ ರೂ. ವಾರ್ಷಿಕ ಪ್ರೀಮಿಯಂ ಪಾವತಿಸುತ್ತೀರಿ ಎಂದು ಭಾವಿಸೋಣ. ಈ 1 ಲಕ್ಷ ರೂ.ನಲ್ಲಿ ಎಲ್ಲ ವೆಚ್ಚಗಳನ್ನು ಕಡಿತಗೊಳಿಸಿದರೆ 89,330 ರೂ. ಮಾತ್ರ ಅಂತಿಮ ಹೂಡಿಕೆ ಮೊತ್ತವಾಗುತ್ತದೆ. ಈ ದೊಡ್ಡ ಮೊತ್ತದ ಶುಲ್ಕ ದೀರ್ಘಾವಧಿಯಲ್ಲಿ ಹಣ ಒಟ್ಟುಗೂಡಿಸುವ ನಿಮ್ಮ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡುತ್ತದೆ. ಆದರೆ ಮ್ಯೂಚುವಲ್ ಫಂಡ್​ನಲ್ಲಿ ಈ ಪರಿ ಶುಲ್ಕಗಳಿಲ್ಲ. ಈಕ್ವಿಟಿ ಫಂಡ್​ಗಳಲ್ಲಿ ಹೆಚ್ಚೆಂದರೆ ಶೇ. 2.25 ಮತ್ತು ಡೆಟ್​ಫಂಡ್​ಗಳಲ್ಲಿ ಗರಿಷ್ಠ ಶೇ.2 ಶುಲ್ಕ ವಿಧಿಸಲಾಗುತ್ತದೆ. ಅಂದರೆ ನೀವು 1 ಲಕ್ಷ ರೂ. ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿಕೆ ಮಾಡಿದರೆ ಅಂತಿಮವಾಗಿ 97,750 ರೂ. ಹೂಡಿಕೆಯಾಗುತ್ತದೆ. ನೇರವಾಗಿ (ಡೈರೆಕ್ಟ್) 1 ಲಕ್ಷ ರೂ. ಹೂಡಿಕೆ ಮಾಡಿದರೆ 99,000 ರೂ. ಹೂಡಿಕೆಯಾಗುತ್ತದೆ. ಮೇಲಿನ ಅಂಶಗಳನ್ನು ಪರಿಗಣಿಸಿ ನೋಡಿದಾಗ ಮ್ಯೂಚುವಲ್ ಫಂಡ್ ಎಸ್​ಐಪಿ ಹೂಡಿಕೆಯೇ ಸೂಕ್ತ. ಆದರೆ 4 ಸಾವಿರ ರೂ. ಹೂಡಿಕೆ ಮಾಡಬೇಕೇ? ಅಥವಾ ಕಡಿಮೆ ಹೂಡಿಕೆ ಮಾಡಬೇಕೇ? ಎನ್ನುವುದು ನಿಮ್ಮ ರಿಸ್ಕ್ ಪೊ›ಫೈಲ್ (ನಿಮ್ಮ ಆರ್ಥಿಕ ಸ್ಥಿತಿಗತಿ) ಅವಲಂಬಿಸಿದೆ. ಇನ್ನು ನಿಮ್ಮ ಮಗನಿಗೆ ಒಂದು ಪಿಪಿಎಫ್ ಖಾತೆ ಆರಂಭಿಸಲು ತಿಳಿಸಿ. ಪ್ರಮುಖ ಬ್ಯಾಂಕ್​ಗಳು , ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆ ಆರಂಭಿಸಬಹುದು. ಜತೆಗೆ ಒಂದು ಟಮ್ರ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಮಾಡಿಸಿಕೊಳ್ಳಲು ಹೇಳಿ. ನಿಮ್ಮ ಮಗನ ಭವಿಷ್ಯ ಉಜ್ವಲವಾಗಲಿ.
ಇನ್ಶೂರೆನ್ಸ್ ಕಂಪನಿಯೊಂದು ನನ್ನ ದೂರಿಗೆ ಸಂಬಂಧಪಟ್ಟಂತೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ದೂರು ನೀಡಿ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ?
| ಪ್ರವೀಣ್ ಚಿದಾನಂದ್ ಬಾಗಲಕೋಟೆ
ಇನ್ಶೂರೆನ್ಸ್ ಕಂಪನಿ ಸರಿಯಾದ ಸೇವೆ ಒದಗಿಸುತ್ತಿಲ್ಲ. ಕ್ಲೇಮ್ ಸೆಟಲ್ಮೆಂಟ್ ಮಾಡಲು ನಿರಾಕರಣೆ ಸೇರಿ ಇನ್ಶೂರೆನ್ಸ್ ಗೆ ಸಂಬಂಧಪಟ್ಟ ಸಮಸ್ಯೆಗಳಿದ್ದಲ್ಲಿ ನೀವು ದೂರು ನೀಡಲು ಹಲವು ಮಾರ್ಗಗಳಿವೆ. ಜೀವ ವಿಮೆ( ಲೈಫ್ ಇನ್ಶೂರೆನ್ಸ್) ಕಂಪನಿಗಳಾಗಲಿ ಅಥವಾ ಸಾಮಾನ್ಯ ( ಜನರಲ್ ) ಇನ್ಶೂರೆನ್ಸ್ ಕಂಪನಿಗಳಾಗಲಿ ದೂರು ನೀಡಲು ಅವಕಾಶವಿದೆ. ಇನ್ಶೂರೆನ್ಸ್ ಕಂಪನಿಯು ಸರಿಯಾದ ಸೇವೆ ಒದಗಿಸುತ್ತಿಲ್ಲ ಅಂತಾದರೆ ಆ ನಿರ್ದಿಷ್ಟ ಕಂಪನಿಯ ದೂರು ಪರಿಹಾರ ಅಧಿಕಾರಿಗಳನ್ನು( ಗ್ರಿವೆನ್ಸ್ ರಿಡ್ರೆಸ್ಸಲ್ ಆಫೀಸರ್ಸ್) ಸಂರ್ಪಸಬಹುದು. ಅವರಿಗೆ ಲಿಖಿತ ದೂರು ನೀಡಿ, ಪೂರಕ ದಾಖಲೆ ಪೂರೈಸಿ, ದೂರು ನೀಡಿದ ಬಗ್ಗೆ ಅವರಿಂದ ಹಿಂಬರಹ ಪಡೆದುಕೊಳ್ಳಬೇಕು. ಇಂತಹ ದೂರಿಗೆ 15 ದಿನಗಳ ಒಳಗಾಗಿ ಕಂಪನಿ ಉತ್ತರಿಸಬೇಕಾಗುತ್ತದೆ. ಕಂಪನಿಯು ದೂರಿಗೆ ಸ್ಪಂದಿಸಿದಿದ್ದರೆ ಅಥವಾ ಸರಿಯಾದ ಉತ್ತರ ನೀಡಲಿಲ್ಲ ಎಂದೆನಿಸಿದರೆ ಐಆರ್​ಡಿಎ, ಅಂದರೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಗ್ರಾಹಕ ವಿಭಾಗಕ್ಕೆ ದೂರು ಸಲ್ಲಿಸಬಹುದು. ದೂರು ನೀಡಲು ನಿಮಗಿರುವ ಆಯ್ಕೆಗಳು: ವಿವರವಾಗಿ ದೂರು ಬರೆದು ಇ- ಮೇಲ್ ವಿಳಾಸ complaintsirda.gov.inಗೆ ರವಾನಿಸಬಹುದು. ಐಆರ್​ಡಿಎ ವೆಬ್​ಸೈಟ್​ನಲ್ಲಿನ ದೂರುಗಳ ವಿಭಾಗಕ್ಕೆ ಹೋಗಿ ದೂರು ಅರ್ಜಿಯನ್ನು ಆನ್​ಲೈನ್​ನಲ್ಲಿ ಭರ್ತಿ ಮಾಡಿ ಅಪ್​ಲೋಡ್ ಮಾಡಬಹುದು. ಟೋಲ್ ಫ್ರೀ ನಂಬರ್ 18004254732ಗೆ ಕರೆ ಮಾಡಿ ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ಇನ್ನಿತರ ಪ್ರಾದೇಶಕ ಭಾಷೆಗಳಲ್ಲಿ ದೂರು ದಾಖಲಿಸಬಹುದು. ಐಆರ್​ಡಿಎನ ಸಮಗ್ರ ದೂರು ನಿರ್ವಹಣಾ ವ್ಯವಸ್ಥೆ (ಐಜಿಎಂಎಸ್)ಯನ್ನು ಬಳಸಿ ದೂರು ನೀಡಲು igms.irda.gov.inಗೆ ಲಾಗಿನ್ ಆಗಬೇಕು. ಲಾಗಿನ್ ಬಳಿಕ, ಮಾಹಿತಿ ಭರ್ತಿ ಮಾಡಿದಾಗ ಟೋಕನ್ ನಂಬರ್ ಲಭ್ಯವಾಗುತ್ತದೆ. ಅದರಿಂದ ದೂರಿನ ಸ್ಥಿತಿಗತಿ ಅರಿಯಲು ಸಾಧ್ಯ. ನಂತರದಲ್ಲೂ ನಿಮಗೆ ನ್ಯಾಯ ದೊರಕಿಲ್ಲ ಎನಿಸಿದಲ್ಲಿ ಇನ್ಶೂರೆನ್ಸ್ ಒಂಬುಡ್ಸ್​ಮನ್ ಅಥವಾ ಸಿವಿಲ್ ನ್ಯಾಯಾಲಯಕ್ಕೆ ದಾವೆ ಸಲ್ಲಿಸಬಹುದು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದೇನೆಂದು ಸಿಬಿಲ್ ರಿಪೋರ್ಟ್ ಮಾಹಿತಿಯಲ್ಲಿದೆ. ಆದರೆ, ಅಸಲಿಗೆ ಆ ಸಾಲ ನನಗೆ ಸಂಬಂಧಿಸಿದ್ದೇ ಅಲ್ಲ. ಈ ತಪ್ಪನ್ನು ಸರಿಪಡಿಸುವುದು ಹೇಗೆ?
| ಶಾಸ್ತ್ರಿ ಚಾಮರಾಜನಗರ
ಮೊದಲಿಗೆ ಕ್ರೆಡಿಟ್ ರಿಪೋರ್ಟ್​ನಲ್ಲಿ ಯಾವ ತಪ್ಪಿದೆ ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ ಸಿಬಿಲ್ (ಇಐಆಐಔ) ನ ಆನ್​ಲೈನ್ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು. ಆನ್​ಲೈನ್​ನಲ್ಲಿ ದೂರು ಸಲ್ಲಿಸಿದ ಕೂಡಲೇ ನಿಮಗೆ ವ್ಯಾಜ್ಯ ಪರಿಹಾರ ವೇದಿಕೆಯ ಕಂಪ್ಲೇಂಟ್ ಐಡಿ ನಂಬರ್ ಸಿಗುತ್ತದೆ. ಸಿಬಿಲ್ ನಿಮ್ಮ ಅರ್ಜಿಯನ್ನು ಬ್ಯಾಂಕ್​ಗೆ ಕಳುಹಿಸಿ ಲೋಪಗಳನ್ನು ಸರಿಪಡಿಸುವಂತೆ ಕೋರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 30 ದಿನ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಿಬಿಲ್ ಸಹಾಯವಾಣಿ – 02261404300 , 02266384600 ಕ್ಕೆ ಸಂಪರ್ಕಿಸಿ.
‘ಇಂಡಿಯನ್ ಮನಿ ಡಾಟ್ ಕಾಂ’ನ ಸಿಇಒ ಸಿ.ಎಸ್.ಸುಧೀರ್ ಸಾರಥ್ಯದಲ್ಲಿ ಫೈನಾನ್ಶಿಯಲ್ ಫ್ರೀಡಂ ಆಪ್ ಆರಂಭಿಸಲಾಗಿದೆ. ಹಣಕಾಸು ನಿರ್ವಹಣೆ, ಬಿಜಿನೆಸ್ ಆರಂಭಿಸುವುದು, ಕೃಷಿಯಲ್ಲಿ ಯಶಸ್ವಿಯಾಗುವುದು, ವೃತ್ತಿ ಜೀವನದಲ್ಲಿ ಯಶಸ್ವಿಯಾಗುವುದು ಸೇರಿ ಹತ್ತು ಹಲವು ಕೋರ್ಸ್ ಈ ಆಪ್​ನಲ್ಲಿವೆ. ಕೂಡಲೇ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್​ನಿಂದ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 20 =
Remember me
