ಹವಾಮಾನದ ದೃಷ್ಟಿಯಿಂದ ಎರಡು ಮಹತ್ವದ ಬೆಳವಣಿಗೆಗಳು. ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ. ಅಲ್ಲದೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉತ್ತಮ ಮಾನ್ಸೂನ್ ಸೂಚನೆ ಹಿನ್ನೆಲೆಯಲ್ಲಿ ದೇಶದ ರೈತರಿಂದ ಹಿಡಿದು ಆರ್ಥಿಕ ತಜ್ಞರವರೆಗೆ ಬಹುತೇಕರ ಮೊಗದಲ್ಲಿ ನಗು ಅರಳಿದೆ. ಏಕೆಂದರೆ, ಮಾನ್ಸೂನ್ ಎಂದರೆ ಬರೀ ಮಳೆಯಲ್ಲ! ನಮ್ಮ ದೇಶದ ಆರ್ಥಿಕತೆಯ ಚಾಲಕಶಕ್ತಿ. ಶ್ರೀಸಾಮಾನ್ಯರ ಜನಜೀವನ, ಕೃಷಿ, ಆರ್ಥಿಕತೆಯ ಬೆಳವಣಿಗೆ ಅಷ್ಟೇ ಅಲ್ಲ ರಾಜಕೀಯ ಸಮೀಕರಣಗಳು ಕೂಡ ಈ ಮಾನ್ಸೂನ್​ನೊಂದಿಗೆ ಬೆಸೆದುಕೊಂಡಿವೆ.
ಮುಂಗಾರು ಮಳೆ!ಇದಿಲ್ಲದೆ ಏನೂ ಇಲ್ಲ. ನಮ್ಮೆಲ್ಲರ ಊಟದ ತಟ್ಟೆ ತುಂಬಬೇಕಾದರೆ ಮುಂಗಾರು ಸಕಾಲಕ್ಕೆ ಆಗಮಿಸಬೇಕು, ಆರ್ಭಟಿಸಬೇಕು. ಆಗಲೇ, ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ, ಆಹಾರ ಉತ್ಪಾದನೆ ಗುರಿ ತಲುಪುತ್ತದೆ. ಬೆಲೆಯೇರಿಕೆ ನಿಯಂತ್ರಣಕ್ಕೆ ಬರುತ್ತದೆ. ಜಿಡಿಪಿ ಏರುಮುಖವಾಗುತ್ತದೆ. ಜನಸಾಮಾನ್ಯರ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ.
ಹೌದು, ಈ ಬಾರಿ ಮುಂಗಾರು ಮೇ 30ರಂದು ಕೇರಳಕ್ಕೆ ಅಡಿಇಟ್ಟಿತ್ತು. ಕೆಲವೇ ದಿನಗಳಲ್ಲಿ ಅಂದರೆ ಜೂನ್ ಮೊದಲ ವಾರದಲ್ಲಿ ಕರ್ನಾಟಕ ಪ್ರವೇಶಿಸಿತು. ಕೊನೆಯ ಹಂತದಲ್ಲಿ ಮಂಗಳವಾರದಂದು, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳನ್ನು ಪ್ರವೇಶಿಸುವ ಮೂಲಕ ಜುಲೈ 2ರಂದು ಮುಂಗಾರು ಇಡೀ ದೇಶವನ್ನು ವ್ಯಾಪಿಸಿದಂತಾಗಿದೆ. ಸಾಮಾನ್ಯವಾಗಿ ಜುಲೈ 8ರಂದು ಮುಂಗಾರು ದೇಶಾದ್ಯಂತ ವ್ಯಾಪಿಸುತ್ತಿತ್ತು. ಈ ವರ್ಷ ಆರು ದಿನ ಮೊದಲೇ ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಭಾರಿ ಮಳೆಯಿಂದಾಗಿ ಪಶ್ಚಿಮ ಹಿಮಾಲಯದ ರಾಜ್ಯಗಳ ಮತ್ತು ದೇಶದ ಮಧ್ಯ ಭಾಗಗಳಲ್ಲಿರುವ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶಾದಲ್ಲಾಗುವ ಮಳೆಯಿಂದಲೇ (ಸೌತ್-ವೆಸ್ಟ್ ಮಾನ್ಸೂನ್) ಭಾರತದ ಶೇಕಡ 75ರಷ್ಟು ಜಲಬೇಡಿಕೆ ಪೂರ್ತಿಗೊಳ್ಳುತ್ತದೆ. ಮತ್ತು ಶೇಕಡ 50ಕ್ಕಿಂತ ಅಧಿಕ ಬೆಳೆಗಳು ಕಟಾವುಗೊಳ್ಳುತ್ತವೆ. ಹೆಚ್ಚು ನೀರು ಬೇಕಾಗುವ ಭತ್ತ, ಹತ್ತಿ, ಬೇಳೆಕಾಳು, ಸೊಯಾಬಿನ್ ಸೇರಿದಂತೆ ಹಲವು ಬೆಳೆಗಳು ಹೆಚ್ಚಾಗಿ ಮುಂಗಾರಿನ ಅವಧಿಯಲ್ಲೇ ಬರುತ್ತವೆ.
ಜೂನ್​ನಲ್ಲಿ ಹೇಗಿತ್ತು?:ದೇಶದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇಕಡ 11ರಷ್ಟು ಕಡಿಮೆ ಮಳೆಯಾಗಿದೆ. ಈ ಮಳೆಕೊರತೆ ಕಳೆದ ಐದು ವರ್ಷಗಳಲ್ಲೇ ಹೆಚ್ಚು. ಜೂನ್ ತಿಂಗಳ ವಾಡಿಕೆ ಮಳೆ 165.3 ಮಿ.ಮೀ ಆಗಿದ್ದು, ಈ ಬಾರಿ ಸರಾಸರಿ 147.2 ಮಿ.ಮೀ. ಮಳೆಯಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಶೇಕಡ 14ರಷ್ಟು ಹೆಚ್ಚು ಮಳೆ ಸುರಿದಿದೆ. ವಾಯವ್ಯ ಭಾರತದಲ್ಲಿ ಶೇ.33, ಕೇಂದ್ರ ಭಾರತದಲ್ಲಿ ಶೇ.14 ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.13ರಷ್ಟು ಮಳೆ ಕೊರತೆ ಉಂಟಾಗಿದೆ.
ಜಿಡಿಪಿಗೆ ನೇರ ಸಂಬಂಧ:ಮುಂಗಾರು ದುರ್ಬಲವಾಗಿದ್ದಲ್ಲಿ ಅದರ ನೇರ ಹೊಡೆತ ಆರ್ಥಿಕತೆಯ ಮೇಲೆ ಬೀಳುತ್ತದೆ. 2019ರಲ್ಲಿ ದೇಶ ಭೀಕರ ಬರಗಾಲಕ್ಕೆ ಸಾಕ್ಷಿಯಾಯಿತು. ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆ ಸ್ತಬ್ಧಗೊಂಡವು. 2018ರಲ್ಲಿ ಶೇಕಡ 6.4ರಷ್ಟಿದ್ದ ಜಿಡಿಪಿ, ಅನಾವೃಷ್ಟಿಯ ಪರಿಣಾಮ 2019ರಲ್ಲಿ ಶೇ.3.8ಕ್ಕೆ ಕುಸಿಯಿತು. ಇದರ ಅಡ್ಡಪರಿಣಾಮ ದೇಶದ ಇತರ ವಲಯಗಳ ಮೇಲೂ ಆಯಿತು. ಮುಂಗಾರು ಆಶಾದಾಯಕವಾಗಿದ್ದರೆ, ದೇಶದ ಜಿಡಿಪಿ ಶೇಕಡ 2.5ರಿಂದ 3ರಷ್ಟು ಏರಿಕೆ ಕಾಣುವ ನಿರೀಕ್ಷೆ ಗರಿಗೆದರುತ್ತದೆ. ಹಾಗಾಗಿಯೇ, ಆರ್ಥಿಕ ತಜ್ಞರು ಜಿಡಿಪಿ ಭವಿಷ್ಯ ಹೇಳಬೇಕಾದರೆ ಹವಾಮಾನ ಇಲಾಖೆಯ ವರದಿಯನ್ನು, ಮಾನ್ಸೂನ್ ಕುರಿತಾದ ಎಲ್ಲ ವಿವರಗಳನ್ನು ಅವಲೋಕಿಸುತ್ತಾರೆ. 2017 ಮತ್ತು 2018ರಲ್ಲಿ ಮುಂಗಾರು ವಾಡಿಕೆ ಅನುಸಾರ ಸುರಿದಿದ್ದರಿಂದ ಜಿಡಿಪಿ ಕೂಡ ಏರಿಕೆ ಕಂಡಿತ್ತು ಎಂಬುದು ಗಮನಾರ್ಹ. 2020ರಲ್ಲಿ ಕೋವಿಡ್ ಪರಿಣಾಮ ಜಿಡಿಪಿ ಭಾರಿ ಕುಸಿತ ಕಂಡಿತು.
ಕೃಷಿಗೆ ನವಚೈತನ್ಯ:ಮುಂಗಾರು ಮತ್ತು ಹಿಂಗಾರು ಮಳೆ ಇಲ್ಲದೆ ದೇಶದ ಕೃಷಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದರಲ್ಲೂ, ಬೇಳೆಕಾಳು, ಎಣ್ಣೆಕಾಳು ಹಾಗೂ ಇತರ ವಾಣಿಜ್ಯ ಬೆಳೆಗಳಿಗೂ ಮುಂಗಾರು ಮಳೆಯೇ ಪ್ರಶಸ್ತ. 2022-23ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಶೇಕಡ 65ರಷ್ಟು ಜನಸಂಖ್ಯೆ ಗ್ರಾಮಗಳಲ್ಲಿ ವಾಸಿಸುತ್ತಿದೆ. ದೇಶದ ಶೇಕಡ 47ರಷ್ಟು ಜನಸಂಖ್ಯೆ ಕೃಷಿ ಮೇಲೆ ಅವಲಂಬಿತವಾಗಿದೆ (ಕೆಲವೇ ದಶಕಗಳ ಮುನ್ನ ಈ ಸಂಖ್ಯೆ ಶೇ.70ರಷ್ಟಿತ್ತು). ಹೀಗಾಗಿ ಭಾರತದ ಸಮೃದ್ಧಿಗೆ ಅದರಲ್ಲೂ ಹಳ್ಳಿಗಳು ನೆಮ್ಮದಿಯಿಂದ ಇರಲು ಮಾನ್ಸೂನ್ ನವಚೈತನ್ಯ ದಂತೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಿಜರ್ವ್ ಬ್ಯಾಂಕ್ (ಆರ್​ಬಿಐ) ಪ್ರಕಾರ, ಜಿಡಿಪಿಯ ಶೇಕಡ 15 ಕೃಷಿ ಕ್ಷೇತ್ರವನ್ನೇ ಅವಲಂಬಿಸಿದೆ.
ಮಳೆಯ ಪ್ರಮಾಣ ಕಡಿಮೆಯಾದಾಗ ಅದರ ನೇರ ಪರಿಣಾಮ ಕೃಷಿ ಉತ್ಪಾದನೆಗಳ ಮೇಲಾಗುತ್ತದೆ. ಕೃಷಿಕರು ಮತ್ತು ಗ್ರಾಮೀಣವಾಸಿಗಳ ಹಣ ಖರ್ಚು ಮಾಡುವ ಶಕ್ತಿ ಕ್ಷೀಣಿಸುವುದರಿಂದ, ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಮಳೆ ಕಡಿಮೆಯಾದಾಗ, ರೈತರು ಕೃಷಿ ಚಟುವಟಿಕೆಗಳ ಮೇಲಿನ ಖರ್ಚನ್ನು ಮತ್ತು ದೈನಂದಿನ ಜೀವನದ ವೆಚ್ಚವನ್ನೂ ತಗ್ಗಿಸಿಬಿಡುತ್ತಾರೆ. ಟ್ರಾ್ಯಕ್ಟರ್ ಹಾಗೂ ಇತರ ಆಧುನಿಕ ಕೃಷಿ ಸಲಕರಣೆಗಳಿಗೆ ಮಾಡುವ ಖರ್ಚನ್ನು ನಿಲ್ಲಿಸಿ, ಕೇವಲ ಅತ್ಯವಶ್ಯಕ ಚಟುವಟಿಕೆಗಳಿಗೆ (ಬಿತ್ತನೆ ಬೀಜ, ಕಳೆ ತೆಗೆಯುವುದುಮ ಗೊಬ್ಬರ ಇತ್ಯಾದಿ) ವೆಚ್ಚ ಮಾಡುತ್ತಾರೆ. ಪರಿಣಾಮ, ಕೃಷಿ ಕ್ಷೇತ್ರದಿಂದ ಆದಾಯ ಗಳಿಸುತ್ತಿದ್ದ ಇತರ ಕ್ಷೇತ್ರಗಳೂ ನಷ್ಟಕ್ಕೆ ದೂಡಲ್ಪಡುತ್ತವೆ.
ಹಾಗಾಗಿಯೇ, ಕೃಷಿ ಆರ್ಥಿಕತೆ ಎಂಬುದು ಬಹುವೈಶಾಲ್ಯದ ಮತ್ತ ಅಷ್ಟೇ ಶಕ್ತಿಶಾಲಿಯಾದ ಅಭಿವೃದ್ಧಿ ಸಾಧನ. ಆದರೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಾಹ್ಯಪ್ರಯತ್ನ ಎಷ್ಟೇ ಮಾಡಿದರೂ, ಅದರ ಸಂಪೂರ್ಣ ಪ್ರಯೋಜನ ಸಿಗುವುದು ಉತ್ತಮ ಮುಂಗಾರು ದೇಶಾದ್ಯಂತ ವ್ಯಾಪಿಸಿಕೊಂಡಾಗ ಮಾತ್ರ. ಕಳೆದ ವರ್ಷವಷ್ಟೇ ಕರ್ನಾಟಕ ಭೀಕರ ಬರವನ್ನು, ಅದರಿಂದ ಜಲಕ್ಷಾಮವನ್ನೂ ಎದುರಿಸಿದೆ. ಐಟಿ ಸಿಟಿ ಬೆಂಗಳೂರು ‘ಟ್ಯಾಂಕರ್ ಸಿಟಿ’ ಎಂಬ ದಯನೀಯ ಹಣೆಪಟ್ಟಿಯನ್ನು ಈ ಅವಧಿಯನ್ನು ಕಟ್ಟಿಕೊಳ್ಳಬೇಕಾಯಿತು. ಈ ವರ್ಷ ಉತ್ತಮ ಮುಂಗಾರು ಕಳೆದ ವರ್ಷದ ಕಹಿಯನ್ನು ಮರೆಸುವ ಭರವಸೆ ಮೂಡಿಸಿದೆ. ಅಲ್ಲದೆ, ಮುಂಗಾರು ದೇಶಾದ್ಯಂತ ವ್ಯಾಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯಲಿವೆ.
ಬೆಲೆಯೇರಿಕೆಯ ಪೆಡಂಭೂತ:ದೇಶದಲ್ಲಿ 2019ರಲ್ಲಿ ವಾಡಿಕೆಗಿಂತ ಶೇಕಡ 33ರಷ್ಟು ಕಡಿಮೆ ಮಳೆಯಾದ ಪರಿಣಾಮ ಆದ ಹಾನಿ ಅಷ್ಟಿಷ್ಟಲ್ಲ. ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಬೆಲೆಯೇರಿಕೆ ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿತು. ಸಗಟು ಮಾರುಕಟ್ಟೆಯಲ್ಲೇ ಗೋಧಿಯ ಬೆಲೆ ಶೇಕಡ 7.5ರಷ್ಟು ಹೆಚ್ಚಾಗಿತ್ತು. 2018ರಲ್ಲಿ ಇದು ಶೇ.3ರ ಆಸುಪಾಸಿನಲ್ಲಿತ್ತು. 2021ರಲ್ಲಿ ಗೋಧಿಯ ದರ ಇಳಿಕೆ ಕಂಡಿತು. ಆದರೆ, 2022ರಲ್ಲಿ ದೇಶದ ಹಲವು ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಂದಿದ್ದರಿಂದ ಗೋಧಿಯ ದರ ಶೇ.14ರಷ್ಟು ಹೆಚ್ಚಿತು. ಇದು ಉದಾಹರಣೆಯಷ್ಟೇ. ಮಳೆ ಕಡಿಮೆಯಾದರೆ ಅಕ್ಕಿ, ಬೇಳೆಕಾಳು, ತರಕಾರಿ ಎಲ್ಲದರ ದರಗಳೂ ಏರುತ್ತವೆ. ಕೃಷಿ ಉತ್ಪನ್ನಗಳ ಉತ್ಪಾದನೆ ಕಡಿಮೆಯಾದರೆ ಸ್ವಾಭಾವಿಕವಾಗಿಯೇ ಆಹಾರಧಾನ್ಯಗಳ ಬೆಲೆ ಹೆಚ್ಚುತ್ತದೆ. ಇದರಿಂದ ಆಹಾರ ಹಣದುಬ್ಬರ ಪ್ರಮಾಣವೂ ಏರಿಕೆ ಕಂಡು, ಆರ್ಥಿಕತೆ ಹಲವು ಸವಾಲುಗಳೊಂದಿಗೆ ಹೋರಾಡಬೇಕಾಗುತ್ತದೆ. ಮುಂಗಾರು ವಿಫಲವಾದರೆ ಕಾಡುವ ಇನ್ನೊಂದು ದೊಡ್ಡ ಸಮಸ್ಯೆ ವಲಸೆಯದ್ದು. ಕೃಷಿ ಚಟುವಟಿಕೆಗಳು ಸ್ಥಬ್ಧವಾಗುವುದರಿಂದ ಹಳ್ಳಿಗರು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಬರುತ್ತಾರೆ. ಮತ್ತು ಪೇಟೆಗಳಲ್ಲಿ ಜೀವನೋಪಾಯ ಕಂಡುಕೊಳ್ಳಲು ಪರದಾಡುತ್ತಾರೆ. ಇವರು ಸ್ವಗ್ರಾಮಗಳಿಗೆ ಮರಳುವುದು ಮತ್ತೆ ಮುಂಗಾರು ಆರ್ಭಟಿಸಿದ ಬಳಿಕವೇ.
ಸರ್ಕಾರದ ಭವಿಷ್ಯ:ಮಾನ್ಸೂನ್ ಸಾಮಾನ್ಯವಾಗಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ನಿಟ್ಟುಸಿರು ಬಿಡುತ್ತವೆ. ಒಂದು ವೇಳೆ ಮಳೆಯ ಕೊರತೆ ಕಾಡಿದರೆ, ಅದರಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ, ರೈತರ ನೆರವಿಗಾಗಿ (ಬಡ್ಡಿಮನ್ನಾ, ಸಾಲಮನ್ನಾ, ಇತರ ಆರ್ಥಿಕ ನೆರವು) ಭಾರಿ ಮೊತ್ತವನ್ನು ವೆಚ್ಚ ಮಾಡಬೇಕಾಗುತ್ತದೆ. ಮಾನ್ಸೂನ್ ಸಾಮಾನ್ಯವಾಗಿದ್ದ ಅವಧಿಯಲ್ಲಿ ಇದೇ ಮೊತ್ತವನ್ನು ಇತರ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಬಹುದು. ದೇಶದ ಶೇಕಡ 50ಕ್ಕಿಂತ ಅಧಿಕ ವರ್ಕ್​ಫೋರ್ಸ್ ಕೃಷಿಗೆ ಸಂಬಂಧಿಸಿದ್ದು. ಹೀಗಾಗಿ, ಮಾನ್ಸೂನ್ ಬದಲಾವಣೆಯ ನೇರ ಪರಿಣಾಮ ಚುನಾವಣೆಯ ಮೇಲಾಗುತ್ತದೆ. ಹಿಂದೊಮ್ಮೆ, ದೆಹಲಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಸೃಷ್ಟಿಯಾದ ಅಸಮಾಧಾನದಿಂದಲೇ ಬಿಜೆಪಿ ಹಿರಿಯ ನಾಯಕಿ ದಿ.ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ರೈತರ ಸಾಲಮನ್ನಾ ಭರವಸೆಯನ್ನೇ ಅಸ್ತ್ರವಾಗಿಸಿಕೊಳ್ಳಬೇಕಾಯಿತು ಮತ್ತು ಅಧಿಕಾರಕ್ಕೆ ಬಂದ ಮೇಲೆ ಈ ಭರವಸೆ ಈಡೇರಿಸಲು ದೊಡ್ಡ ಮೊತ್ತವನ್ನು ವಿನಿಯೋಗಿಸಬೇಕಾಯಿತು.
ಸಂಸ್ಕೃತಿಗೂ ಶೋಭೆ:ನಮ್ಮ ಗ್ರಾಮೀಣ ಭಾಗದ ಆಚರಣೆಗಳು, ಬಹುತೇಕ ಹಬ್ಬಗಳು ಸುಗ್ಗಿಗೆ ಸಂಬಂಧಿಸಿದವುಗಳೇ. ಉತ್ತಮ ಮಳೆ-ಬೆಳೆಯಾದ ನಂತರ ಭಗವಂತನಿಗೆ ಕೃತಜ್ಞತೆಯನ್ನು ಸಮರ್ಪಿಸಿ, ಹಾಡಿಕುಣಿದು ನಲಿದಾಡುವ ರೈತಾಪಿ ವರ್ಗ, ಈ ಮೂಲಕ ಸಂಸ್ಕೃತಿಯ ಶಕ್ತಿಯನ್ನೂ ಹೆಚ್ಚಿಸುತ್ತಿದೆ. ಮುಂಗಾರು ಸಕ್ಸಸ್ ಆಗಿಬಿಟ್ಟರೆ ಗ್ರಾಮೀಣ ಭಾರತ ಹಲವು ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಅಷ್ಟೇ ಅಲ್ಲ ಕೃಷಿ ಆರ್ಥಿಕತೆಯ ಮೂಲಕ ಸ್ವಾವಲಂಬನೆಯತ್ತಲೂ ದಾಪುಗಾಲು ಹಾಕುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
