ಚೆನ್ನೈ:ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ಮಿಚೌಂಗ್ ಚಂಡಮಾರುತ ಮಂಗಳವಾರ ಆಂಧ್ರಪ್ರದೇಶದ ಬಾಪ್ಟಾಲಾ ಕರಾವಳಿಯನ್ನು ಅಪ್ಪಳಿಸಿತು. ಅದಕ್ಕೂ ಮುನ್ನ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತೀವ್ರ ಮಳೆಯಾಗಿದೆ. ಚೆನ್ನೈ ಮತ್ತು ಸುತ್ತಮುತ್ತ ಮಳೆಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಇತರ 11 ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ 12.30ರಿಂದ 2.30ರ ನಡುವೆ ಸುಮಾರು 100 ಕಿಮೀ ವೇಗದಲ್ಲಿ ಚಂಡಮಾರುತ ಬಾಪ್ಟಾಲಾ ಜಿಲ್ಲೆಯನ್ನು ಹಾದು ಹೋಯಿತು. ಜಿಲ್ಲಾ ವಿಪತ್ತು ಸ್ಪಂದನಾ ತಂಡಗಳು (ಡಿಡಿಆರ್​ಟಿ) ಮಳೆಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. ಜನರನ್ನು ರಕ್ಷಿಸುವ ಕಾರ್ಯದಲ್ಲಿ ಮೀನುಗಾರಿಕೆ ದೋಣಿಗಳು ಮತ್ತು ಕೃಷಿ ಟ್ರಾ್ಯಕ್ಟರ್​ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ದಕ್ಷಿಣ ಆಂಧ್ರ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನೇವಿ ಬೋಟ್​ಗಳು:ಮಿಚೌಂಗ್ ಚಂಡಮಾರುತದ ಪರಿಣಾಮವಾಗಿ ಮಳೆಯಬ್ಬರದಿಂದ ತತ್ತರಿಸಿದ ಚೆನ್ನೈನಲ್ಲಿ ಜನರನ್ನು ರಕ್ಷಿಸಲು ನೌಕಾ ಪಡೆಯ ದೋಣಿಗಳನ್ನು (ತೆಪ್ಪ) ನಿಯೋಜಿಸಲಾಗಿದೆ. ಚೆನ್ನೈನ ಪೆರಿಯಾರ್ ನಗರ ಮತ್ತು ರಾಮ ನಗರದ ಪ್ರವಾಹ ಪೀಡಿತ ಜನರನ್ನು ಅವರ ಮನೆಗಳಿಂದ ನೇವಿ ನೌಕೆಗಳ ಸಿಬ್ಬಂದಿ ಸುರಕ್ಷಿತವಾಗಿ ತೆರವು ಮಾಡಿದರು. ನೇವಿ ಸಿಬ್ಬಂದಿ ಆಳವಾದ ತ್ಯಾಜ್ಯ ನೀರಿನಲ್ಲಿ ದೋಣಿಗಳನ್ನು ಚಲಾಯಿಸಿಕೊಂಡು ಹೋದರು.
ಆಹಾರ ಪೊಟ್ಟಣ ವಿತರಣೆ:ನಗರದ ಕೆಲವು ಜಲಾವೃತ ಪ್ರದೇಶಗಳಲ್ಲಿ ನೇವಿ ಸಿಬ್ಬಂದಿ ದೋಣಿಗಳಲ್ಲಿ ಮನೆಬಾಗಿಲಿಗೆ ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸಿದರು. ಜಲಾವೃತ ರಸ್ತೆಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ವಿದ್ಯುತ್ ಸಂಪರ್ಕ ಮರುಸ್ಥಾಪನೆ:ಚೆನ್ನೈನಲ್ಲಿ ಭಾರಿ ಮಳೆಯಿಂದಾಗಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ಮಂಗಳವಾರ ಶೇಕಡ 80ರಷ್ಟು ಮರುಸ್ಥಾಪನೆಗೊಂಡಿದೆ.
ರೆಡ್ ಅಲರ್ಟ್, ಜಗನ್ ಸಭೆ:ಮಿಚೌಂಗ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರ್ಚಚಿಸಿದರು. ತಿರುಪತಿ, ನೆಲ್ಲೂರು, ಪ್ರಕಾಶಂ, ಬಾಪ್ಟಾಲಾ, ಕೃಷ್ಣಾ, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ ತಮಿಳುನಾಡು, ಆಂಧ್ರ ಮತ್ತು ಪುದುಚೇರಿ ಸಿಎಂಗಳೊಂದಿಗೆ ದೂರವಾಣಿ ಮೂಲಕ ರ್ಚಚಿಸಿ ಕೇಂದ್ರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಯುದ್ಧೋಪಾದಿ ಪರಿಹಾರ:ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಚೆನ್ನೈ ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.
29 ಎನ್​ಡಿಆರ್​ಎಫ್ ತಂಡಗಳು:ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ 29 ತಂಡಗಳನ್ನು ನಿಯೋಜಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
