ನವದೆಹಲಿ:ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಜಲಪ್ರಳಯದಲ್ಲಿ ಮೂರು ದಿನಗಳಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ನಗರಗಳು ಜಲಾವೃತವಾಗಿವೆ. ರಸ್ತೆಗಳು ನದಿಗಳ ಸ್ವರೂಪ ಪಡೆದುಕೊಂಡಿವೆ. ಕೆಲವು ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಕಟ್ಟಡಗಳಲ್ಲಿ ಎರಡರಿಂದ ಮೂರು ಅಡಿ ನೀರು ನಿಂತಿದೆ. ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆಸರು ಮಿಶ್ರಿತ ನೀರು ವಸತಿ ಪ್ರದೇಶಗಳಿಗೆ ನುಗ್ಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಭಸವಾಗಿ ನೀರು ನುಗ್ಗುತ್ತಿರುವುದರಿಂದ ಕಟ್ಟಡಗಳಿಗೆ ಹಾನಿಯಾಗಿದೆ.
ಆಸ್ತಿ-ಜೀವ ಹಾನಿ ಹಾಗೂ ಪರಿಹಾರ ಕಾರ್ಯ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದರೆ ದಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
10 ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶದಲ್ಲಿ ಅತಿಹೆಚ್ಚು ಹಾನಿ ಅನುಭವಿಸಿದೆ. ಉತ್ತರಾಖಂಡ, ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ರಾಜಸ್ಥಾನ, ದೆಹಲಿಯಲ್ಲಿ ಹೆಚ್ಚು ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಹಿಮಾಚಲದಲ್ಲಿ ಭೂಕುಸಿತ ಮತ್ತು ಪ್ರವಾಹ ಹೆಚ್ಚಳವಾಗಿದೆ. 12 ಜಿಲ್ಲೆಗಳ ಪೈಕಿ 10 ಜಿಲ್ಲೆಯಲ್ಲಿ ನೆರೆ ಹಾವಳಿ ಉಂಟಾಗಿ ಮನೆಗಳಿಗೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮನಾಲಿ, ಕುಲು, ಕಿನ್ನೌರ್, ಚಂಬಾಗಳಲ್ಲಿ ರಾವಿ, ಬಿಯಾಸ್, ಸಟ್ಲೆಜ್, ಸ್ವಾನ್, ಚೆನಾಬ್ ನದಿಗಳು ಭೋರ್ಗರೆದು ಹರಿಯುತ್ತಿವೆ. 72 ತಾಸಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 14 ಕಡೆ ದೊಡ್ಡ ಮಟ್ಟದಲ್ಲಿ ಭೂಕುಸಿತ, 13 ಕಡೆ ಹೊಸದಾಗಿ ಪ್ರವಾಹ, ಮಳೆ ಸಂಬಂಧವಾದ ರಸ್ತೆ ಅವಘಡದಲ್ಲಿ ಕನಿಷ್ಠ 72 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆ, ಸಂಪರ್ಕ ರಸ್ತೆಗಳು ಸೇರಿ 1,300 ಕಿ.ಮೀ. ರಸ್ತೆ ಹಾನಿಗೊಂಡಿದೆ. ಭೂಕುಸಿತದ ಕಾರಣ ಶಿಮ್ಲಾ-ಕಲ್ಕಾ ಪಾರಂಪರಿಕ ರೈಲು ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ 24 ತಾಸು ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ಇರುವ ಕಾರಣ ಮನೆಯಲ್ಲೇ ಇರುವಂತೆ ಜನರಿಗೆ ಸಿಎಂ ಸುಖ್ವಿಂದರ್ ಸಿಂಗ್ ಸುಖು ಮನವಿ ಮಾಡಿದ್ದಾರೆ. ಉತ್ತರಾಖಂಡದಲ್ಲೂ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
ತೇಲಿದ ವಾಹನಗಳು:ಹಿಮಾಚಲದ ಮನಾಲಿ ಜಿಲ್ಲೆಯಲ್ಲಿ ಸೇತುವೆ ಕೊಚ್ಚಿ ಹೋಗಿದ್ದು, ವಾಹನಗಳು ನೀರಿನಲ್ಲಿ ತೇಲಾಡುತ್ತಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕ್ಷಣ ಮಾತ್ರದಲ್ಲಿ ಪ್ರವಾಹದ ಹೊಡೆತಕ್ಕೆ ಸಿಲುಕಿತು. ಮನಾಲಿ ನಗರದಲ್ಲಿ 20 ಜನರನ್ನು ಮತ್ತು 300 ವಾಹನಗಳನ್ನು ರಕ್ಷಿಸಲಾಗಿದೆ. ಭೂಕುಸಿತದ ಕಾರಣ ಚಂಡೀಗಢ-ಮಂಡಿ-ಕುಲು ರಾಷ್ಟ್ರೀಯ ಹೆದ್ದಾರಿ, ಶಿಮ್ಲಾ-ಕಿನೌರ್ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮಳೆ, ಪ್ರವಾಹ ಪೀಡಿತ ರಾಜ್ಯಗಳಿಗೆ ಪಿಎಂ ಕೇರ್ಸ್ ನಿಂದ ನೆರವು ನೀಡಬೇಕು. ಮಳೆಯಿಂದಾಗಿರುವ ಅನಾಹುತದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಜೀವ ಹಾನಿ, ಆಸ್ತಿ ನಷ್ಟ ಉಂಟಾಗಿದೆ. ಈ ಬಗ್ಗೆ ಅಲ್ಲಿನ ಸಿಎಂ ಸುಖ್ವಿಂದರ್ ಜತೆ ರ್ಚಚಿಸಿದ್ದೇನೆ. ಕೇಂದ್ರ ಸರ್ಕಾರ ಶೀಘ್ರದಲ್ಲಿ ಪರಿಹಾರ ಬಿಡುಗಡೆ ಮಾಡಬೇಕು.
| ಎಂ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಅಮರನಾಥ ಯಾತ್ರೆ ಪುನಾರಂಭ:ಭಾರಿ ಮಳೆಯ ಕಾರಣ ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಪಂಜತಾರ್ನಿಯಿಂದ ಸೋಮವಾರ ಪುನಾರಂಭಗೊಂಡಿದೆ. ಆದರೆ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಮಳೆ ಹೆಚ್ಚಿರುವ ಕಾರಣ ಶೇಷನಾಗ್ ಮೂಲ ಶಿಬಿರದಲ್ಲಿ ಮೂರು ದಿನ ಯಾತ್ರೆ ಸ್ಥಗಿತವಾಗಿರಲಿದೆ.
ಸರಾಸರಿ ಮಳೆ ಪ್ರಮಾಣ ಹೆಚ್ಚಳ:ವಾಯವ್ಯ ಭಾರತದಲ್ಲಿ ಐದಾರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯು ದೇಶದಲ್ಲಿ ಕೊರತೆಯಾಗ ಬಹುದಾದ ಮಳೆ ಪ್ರಮಾಣವನ್ನು ಸರಾಸರಿಯಾಗಿ ಸರಿದೂಗಿಸುತ್ತದೆ. ವಾಡಿಕೆಯಂತೆ ಮುಂಗಾರು ಋತುವಿನಲ್ಲಿ ಈವರೆಗೆ 239 ಎಂ.ಎಂ. ಮಳೆಯಾಗಬೇಕಿತ್ತು ಈಗ 243 ಎಂ.ಎಂ.ಗೂ ಹೆಚ್ಚು ಮಳೆ ಸುರಿದಿದೆ. ಜೂನ್ ಅಂತ್ಯದ ಹೊತ್ತಿಗೆ 148.6 ಎಂ.ಎಂ. ಮಳೆ ಆಗಿದ್ದು, ವಾಡಿಕೆಗಿಂತ ಶೇ. 10 ಕಡಿಮೆ ಆಗಿತ್ತು ಎಂದು ಐಎಂಡಿ ಹೇಳಿದೆ. ಪಂಜಾಬ್​ನ ಮೊಹಾಲಿ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಕ್ಕೆ ಸರ್ಕಾರ ಸೇನೆ ನೆರವು ಕೋರಿದೆ. ಎಸ್​ಎಎಸ್ ನಗರದಲ್ಲಿ ಪ್ರವಾಹ ಮೇರೆ ಮೀರಿರುವ ಕಾರಣ ತುಕಡಿ ರವಾನಿಸುವಂತೆ ಸೇನೆಯ ಪಶ್ಚಿಮ ಕಮಾಂಡ್​ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಮಳೆಯಿಂದ ಉಂಟಾಗಿರುವ ಪ್ರವಾಹ, ಭೂಕುಸಿತ, ಜನರು ಸಂಕಷ್ಟಕ್ಕೆ ಸಿಲುಕಿರುವುದು, ಆಸ್ತಿ-ಜೀವ ಹಾನಿ ಹಾಗೂ ಪರಿಹಾರ ಕಾರ್ಯಗಳು ಸ್ಥಿತಿಗತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದರು. ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (ಎನ್​ಡಿಆರ್​ಎಫ್), ರಾಜ್ಯ ವಿಪತ್ತು ಪ್ರತಿಸ್ಪಂದನಾ ಪಡೆ (ಎಸ್​ಡಿಆರ್​ಎಫ್)ಗಳ ನಿಯೋಜನೆ. ಪ್ರಮುಖ ಅಣೆಕಟ್ಟೆಗಳು ನೀರನ ಮಟ್ಟ, ನದಿಗಳ ಒಳಹರಿವು, ಪ್ರವಾಹ ಮುನ್ಸೂಚನೆ, ಸ್ಥಳಾಂತರ ಜನರಿಗೆ ಕಲ್ಪಿಸಿರುವ ಆಶ್ರಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್​ನಿಂದ ಸುಮಾರು ಎರಡು ಲಕ್ಷ ಕ್ಯೂಸೆಕ್ ನೀರನ್ನು ಯಮುನಾ ನದಿಗೆ ಬಿಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಿಎಂ ಅರವಿಂದ ಕೇಜ್ರಿವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. 41 ಸಾವಿರ ಜನರು ನೆರೆಯ ಪ್ರದೇಶದಲ್ಲಿದ್ದು, ಸ್ಥಳಾಂತರಕ್ಕೆ ಕೈಗೊಂಡ ಕ್ರಮಗಳು ಬಗ್ಗೆ ರ್ಚಚಿಸಿದರು. ತಗ್ಗು ಪ್ರದೇಶದಲ್ಲಿ ನೀರು ಹೊರಹಾಲು ಮೊಬೈಲ್ ಪಂಪ್​ಗಳನ್ನು ಬಳಸಲು ಕೇಜ್ರಿವಾಲ್ ಸೂಚಿಸಿದರು. 1971ರ ನಂತರ ದೆಹಲಿಯಲ್ಲಿ ಪ್ರವಾಹ ಉಂಟಾಗಿಲ್ಲ. 2013ರಲ್ಲಿ ಎಂಟು ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿತ್ತಾದರೂ ಅದು ಪ್ರವಾಹವಾಗಿ ತಿರುಗಿಲ್ಲ. ಯಮುನಾ ನದಿ 206 ಮೀಟರ್ ಮೀರಿದರೆ ನೆರೆಹಾವಳಿ ಆಗುತ್ತದೆ. ಸದ್ಯ 204.5 ಮೀಟರ್ ಎತ್ತರದಲ್ಲಿ ನದಿಯ ಹರಿವು ಇದೆ. ಮಳೆ ಮತ್ತು ಪ್ರವಾಹ ಸಂಬಂಧ ತುರ್ತು ಸ್ಪಂದನೆಗೆ 16 ನಿಯಂತ್ರಣ ಕೇಂದ್ರಗಳನ್ನು ತೆರೆಯಲಾಗಿದೆ. ದೆಹಲಿ, ಗುರುಗ್ರಾಮಗಳಲ್ಲಿ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.
ತರಕಾರಿ ಬೆಲೆ ಮತ್ತಷ್ಟು ಏರಿಕೆ:ಮಳೆ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಮತ್ತಷ್ಟು ಏರಿಕೆ ಆಗಿದೆ. ಸವಾಯ್ ಮಾಧೋಪುರ್ ಟೊಮ್ಯಾಟೊ ದರ 200 ರೂ. ಮುಟ್ಟಿದ್ದರೆ, ರಾಜಸ್ಥಾನದ ಚುರುವಿನಲ್ಲಿ 31 ರೂ. ಕನಿಷ್ಠ ಬೆಲೆ ಇದೆ. ಆಖಿಲ ಭಾರತ ಸರಸಾರಿ ಬೆಲೆ 104.38 ರೂ. ಇದೆ ಎಂದು ಆಹಾರ ಪೂರೈಕೆ ಸಚಿವಾಲಯ ಹೇಳಿದೆ. ಮಳೆ, ಪ್ರವಾಹದಿಂದಾಗಿ ಸಂಚಾರ ಅಸ್ತವ್ಯಸ್ತ ಮತ್ತು ಬೆಳೆ ಹಾನಿಯೇ ಬೆಲೆ ಹಚ್ಚಳಕ್ಕೆ ಕಾರಣ. ವಿಶೇಷವಾಗಿ ಈರುಳ್ಳಿ, ಆಲೂಗಡ್ಡೆ, ಶುಂಠಿ ಇನ್ನಿತರ ಬೆಲೆಗಳು ಏರಿದೆ.

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:7 − three =
Remember me
