|ಬಿ.ಎಸ್. ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಸಾಮಾನ್ಯರಲ್ಲಿ ಸಾಮಾನ್ಯನೊಬ್ಬ ಹೇಗೆ ಅಸಾಮಾನ್ಯ ಸಾಧಕನಾಗಬಲ್ಲ, ಇತಿಹಾಸ ನಿರ್ವಿುಸಬಲ, ಈ ದೇಶ ಮರೆಯದ ಯುಗದ ಪುರುಷನಾಗಬಲ್ಲ ಎಂಬ ಉದಾಹರಣೆಯನ್ನು ನೀಡಿ ಎಂದು ಯಾರಾದರೂ ಮುಂದಿನ ಪೀಳಿಗೆಗೆ ಪ್ರಶ್ನಿಸಿದರೆ ಕೇಳಿಬರುವ ಹೆಸರು ನಿಸ್ಸಂಶಯವಾಗಿ ನರೇಂದ್ರ ಮೋದಿಯವರದೇ ಆಗಿರುತ್ತದೆ. ಶಿಸ್ತು, ಬದ್ಧತೆ, ಸಂಘಟನೆಗಾಗಿ ತಪಸ್ಸುಗೈವ ಮನೋಭೂಮಿಕೆ ಒದಗಿಸುವ ಹಾಗೂ ಮಾತೃನೆಲದ ಮಹತ್ವ ತಿಳಿಸಿಕೊಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಂಪರ್ಕಕ್ಕೆ ಬರುವ ದೇಶಪ್ರೇಮಿ ಯುವಜನರಿಗೆ ತಪೋಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಬೆಳೆದ ಅಪರೂಪದ ಸಂಘಟನಾ ಶಿಲ್ಪಿ ಹಾಗೂ ಮಹಾನ್ ಶಕ್ತಿ ಮೋದಿಯವರು.
ಅಂದು ಶೈಶವಾವಸ್ಥೆಯಲ್ಲಿದ್ದ ಬಿಜೆಪಿ ಸಂಘಟನೆಗೆ ದಕ್ಷಿಣ ಭಾರತದಲ್ಲಿ ಮೊದಲ ಹೆಬ್ಬಾಗಿಲು ತೆರೆಸಬೇಕೆಂಬ ಕನಸು ಹಾಗೂ ಸಂಕಲ್ಪ ನನ್ನಂತಹ ಕಾರ್ಯಕರ್ತನಲ್ಲಿ ಮೂಡಲು ಅನೇಕ ಹಿರಿಯರ ಮಾರ್ಗದರ್ಶನ, ಪ್ರೇರಣೆಯನ್ನು ನಾನೆಂದೂ ಮರೆಯುವಂತಿಲ್ಲ. ಅದೇ ಬಗೆಯಲ್ಲಿ ಸಂಘ ಹಾಗೂ ಪಕ್ಷದ ಸೇವೆಗಾಗಿ ಬದುಕನ್ನೇ ಸಮರ್ಪಿಸಿಕೊಂಡಿದ್ದ ಮೋದಿಜಿಯವರ ಗುಜರಾತಿನ ಮಾದರಿ ಆಡಳಿತ ಕರ್ನಾಟಕದಲ್ಲಿನ ನನ್ನ ಆಡಳಿತಾವಧಿಗೆ ಬಹು ಪ್ರೇರಣೆ ನೀಡಿತು. ಈ ಕಾರಣಕ್ಕಾಗಿಯೇ 2009ರಲ್ಲಿ ನರೇಂದ್ರ ಮೋದಿಯವರನ್ನು ಕರ್ನಾಟಕಕ್ಕೆ ಕರೆಯಿಸಿ ನಮ್ಮ ಶಾಸಕರುಗಳಿಗೆ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ದಿನವಿಡೀ ಆಡಳಿತದ ಬಗೆಗಿನ ಮಾರ್ಗದರ್ಶನ ಹಾಗೂ ಉಪದೇಶ ಕೊಡಿಸಿದ ನೆನಪು ನನ್ನ ಮನದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಅಂದು ಯಾರಾದರೂ ಊಹಿಸಿದ್ದರೋ ಇಲ್ಲವೋ ನನಗೆ ತಿಳಿಯದು. ಮೋದಿಯವರ ಕರ್ನಾಟಕ ಪ್ರವಾಸದ ಬೀಳ್ಕೊಡುಗೆ ಕಾರ್ಯಕ್ರಮ ಬೆಂಗಳೂರಿನ ತಾಜ್ ವೆಸ್ಟ್​ಎಂಡ್ ಹೋಟೆಲ್​ನಲ್ಲಿ ನಡೆದ ಸಂದರ್ಭದಲ್ಲಿ ಅದ್ಯಾವ ಅಗೋಚರ ಶಕ್ತಿ ನನ್ನ ಬಾಯಲ್ಲಿ ಹೇಳಿಸಿತೋ ಗೊತ್ತಿಲ್ಲ. ಈ ದೇಶಕ್ಕೆ ಎಂಟೆದೆಯ ಭಂಟನಂಥ ಧೀರ ಪ್ರಧಾನಿ ಬೇಕೆಂಬ ನನ್ನ ತುಡಿತದ ಕಲ್ಪನೆಯಲ್ಲಿ ಪಡಿಮೂಡಿದ್ದ ಏಕೈಕ ವ್ಯಕ್ತಿ ನರೇಂದ್ರ ಮೋದಿಜಿಯವರು ಮಾತ್ರ. ತಡೆದಿಟ್ಟುಕೊಳ್ಳಲಾಗದ ಭಾವನೆಗಳು ಧುಮ್ಮಿಕ್ಕಿದ ಜಲಪಾತದಂತೆ ನನ್ನ ಬಾಯಿಂದ ಅಂದು ಮಾಧ್ಯಮದ ಮುಂದೆ ‘ಈ ದೇಶದ ಪ್ರಧಾನಿಯಾಗುವ ಅರ್ಹತೆ, ಯೋಗ್ಯತೆ ನರೇಂದ್ರ ಮೋದಿಯವರಿಗಿದೆ. ಅವರು ಪ್ರಧಾನಿಯಾಗಬೇಕೆಂಬುದು ನನ್ನಾಸೆ’ ಎಂದು ನುಡಿದುಬಿಟ್ಟೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ಸಂಚಲನ ಉಂಟುಮಾಡಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ಭರವಸೆಯ ಬೆಳಕು ಮೂಡಲು ನಾಂದಿ ಹಾಡಿತು. ಅಂದು ನಾ ಕನಸಿದ್ದ ಪ್ರಧಾನಿ ಇಂದು ಜಗತ್ತು ಕಂಡ ಶ್ರೇಷ್ಠ ಮುಂಚೂಣಿ ನಾಯಕರ ಸಾಲಿನಲ್ಲಿ ನಿಂತಿದ್ದಾರೆ.
ದಣಿವರಿಯದ ನನ್ನ ಹೋರಾಟಗಳು, ಜನಮನದೊಂದಿಗೆ ನಿರಂತರ ಸ್ಪಂದಿಸುವ ನನ್ನ ಹಂಬಲಗಳು ಇಂದಿಗೂ ಕುಗ್ಗದಿರಲು ಹಾಗೂ ನನ್ನ ಆತ್ಮವಿಶ್ವಾಸದ ಬಲವರ್ಧನೆಗೆ ಜತೆಯಾಗಿ ಪ್ರೇರಣೆ ನೀಡಿದವರು ಮೋದಿಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಏಕೆಂದರೆ, ದೇಶ ಕಟ್ಟುವ ಛಲ ಹೊತ್ತ ನೈಜ ನೇತಾರ ಹೇಗಿರುತ್ತಾನೆ ಎಂಬುದಕ್ಕೆ ನಿದ್ದೆ, ಹಸಿವು, ವಿಶ್ರಾಂತಿ ಹಾಗೂ ಸ್ವಂತ ಹಿತವನ್ನು ಲೆಕ್ಕಿಸದೇ ‘ನಾನೊಬ್ಬ ಮಹಾನ್ ನಾಯಕನಲ್ಲ, ದೇಶ ಕಾಯುವ ಕಾವಲುಗಾರ, ನಾನೊಬ್ಬ ಪ್ರಧಾನಿಯಲ್ಲ ಜನರ ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುವ ಮೋದಿಯವರು ಮಾತ್ರ ಉದಾಹರಣೆಯಾಗಿ ನಿಲ್ಲಬಲ್ಲ ವಿಶ್ವದ ಏಕೈಕ ನಾಯಕರಾಗಿ ನಮ್ಮ ಮುಂದೆ ಕಾಣುತ್ತಾರೆ. ರೈತ ಹಾಗೂ ಗ್ರಾಮೀಣರ ಪರವಾದ ನನ್ನ ನಿಲುವು-ಒಲವು, ಮಹಿಳೆಯರ ಹಾಗೂ ಗ್ರಾಮೀಣರ ಪರವಾದ ನನ್ನ ಕಾರ್ಯಕ್ರಮಗಳಿಗೆ ಜನಮಾನಸದ ಗೌರವ-ಮೆಚ್ಚುಗೆ ಲಭಿಸಿದೆ ಎಂಬುದರ ಪ್ರಮಾಣಪತ್ರ ನನಗೆ ದೊರಕಿದ್ದರೆ ಅದು ಮೋದಿಯವರ ಮೂಲಕವೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಏಕೆಂದರೆ ರೈತ ಕೇವಲ ಕೃಷಿಕನಲ್ಲ, ಅವನೊಬ್ಬ ಉತ್ಪನ್ನ ಕ್ಷೇತ್ರದ ಉದ್ಯಮಿಯಂತೆ ತಲೆ ಎತ್ತಿ ನಿಲ್ಲಬೇಕೆಂಬ ಅದಮ್ಯ ಬಯಕೆಯಿಂದ ಮೋದಿಯವರು ರೈತರ ರಕ್ಷಣೆಗಾಗಿ ಫಸಲ್ ಬಿಮಾ ಯೋಜನೆ ಜಾರಿಗೆ ತರುವುದರ ಜೊತೆಗೇ ರೈತ ತಾನು ಬೆಳೆದ ಉತ್ಪನ್ನಗಳಿಗೆ ತಾನೇ ಬೆಲೆ ಕಂಡುಕೊಳ್ಳುವ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಹಾಗೂ ಮಣ್ಣಿನ ಮಗನ ನೆಲವನ್ನು ನೆಲಬಾಕರು ಅಗ್ಗದ ಬೆಲೆಗೆ ಕಬಳಿಸದಂತೆ ನೂತನ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ, ರೈತ ಹೋರಾಟಗಾರನೆಂದು ಗುರುತಿಸಿಕೊಂಡ ನಾನು ಮಂಡಿಸಿದ ಕೃಷಿ ಬಜೆಟ್​ಗೆ ವಿಶೇಷ ಪ್ರಮಾಣಪತ್ರ ದೊರಕಿಸಿಕೊಂಡ ಭಾವನೆ ನನ್ನದಾಗಿದೆ.
ಭಾಗ್ಯಲಕ್ಷ್ಮಿ, ಶಾಲಾ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆಯ ನನ್ನ ಸರ್ಕಾರದ ಯೋಜನೆಗಳು ಈ ನೆಲದ ಸ್ತ್ರೀಕುಲದ ರಕ್ಷಣೆ ಹಾಗೂ ಹೆಣ್ಣು ಮಕ್ಕಳಲ್ಲಿ ನಾಯಕತ್ವದ ಗುಣ ಉತ್ತೇಜಿಸುವ ದೃಷ್ಟಿಯಿಂದ ಕೂಡಿದ್ದರೆ ಅದೇ ಮಾದರಿಯಲ್ಲಿ ಮೋದಿಜೀ ಯವರ ‘ಸುಕನ್ಯಾ ಸಮೃದ್ಧಿ’ ಯೋಜನೆ ಮಹಿಳೆ ಯರ ಸುರಕ್ಷತೆಯ ಕಾಳಜಿಯಿಂದ ಕೂಡಿದೆ. ಜನ್ಮ ಭೂಮಿಯಲ್ಲಿ ವನವಾಸದಲ್ಲಿದ್ದ ಶ್ರೀರಾಮಚಂದ್ರನನ್ನು ಗತಕಾಲದ ಸುದೀರ್ಘ ಹೋರಾಟದಿಂದ ಮುಕ್ತಗೊಳಿಸಿ ಮಂದಿರ ನಿರ್ವಣದ ಕಾರ್ಯಕ್ಕೆ ಚಾಲನೆ ನೀಡುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು ಮೋದಿಜಿಯವರು ಒಬ್ಬ ವ್ಯಕ್ತಿಯಲ್ಲ ಯುಗದ ಪುಣ್ಯಪುರುಷ ಎಂಬುದನ್ನು ಸಾಬೀತುಪಡಿಸಿದೆ.
ಅಂದು ಸರ್ದಾರ್ ವಲ್ಲಭಭಾಯಿ ಪಟೇಲರು ನಿಜಾಮನ ಮುಷ್ಟಿಯಲ್ಲಿ ಸಿಲುಕಿದ್ದ ಹೈದರಾಬಾದ್ ಪ್ರದೇಶವನ್ನು ಮುಕ್ತಗೊಳಿಸಿದಂತೆ ಮೋದಿಜೀಯವರು ಭಾರತದ ಕಿರೀಟವೆನಿಸಿದ ಕಾಶ್ಮೀರದ ಕಣಿವೆಯ ಕುತ್ತಿಗೆಗೆ ಕುಣಿಕೆ ಬಿಗಿದಿದ್ದ ಆರ್ಟಿಕಲ್ 370ನ್ನು ಮೂಲೆಗೆ ಸೇರಿಸಿದ್ದು ಎಂದಿಗೂ ಮರೆಯದ ದಿಟ್ಟ ಕ್ರಮವಾಗಿದೆ. ಮೋದಿಯವರ ನಡೆ-ನುಡಿ, ನಿರ್ಧಾರಗಳು ದೂರದೃಷ್ಟಿ ಆಡಳಿತಗಾರನ ದಕ್ಷತೆಯ ಪ್ರತಿರೂಪವೆನಿಸಿದೆ. ಇಂಥ ಮಹಾನ್ ನಾಯಕ, ತಪಸ್ವಿ ಪುರುಷ ನೂರ್ಕಾಲ ಬಾಳಲಿ, ಭಾರತವನ್ನು ಬೆಳಗಲಿ.
ಹಳೆಯ ಸವಾಲುಗಳಿಗೆ ಮುಕ್ತಿ:ಹತ್ತು ಹಲವು ಸವಾಲುಗಳನ್ನು ಮೆಟ್ಟಿನಿಂತು ದೇಶ ರಕ್ಷಣೆಗಾಗಿ ಯೋಧರೊಂದಿಗೆ ಯೋಧರಾಗಿ ಹಾಗೂ ಕರೊನಾ ಕೆನ್ನಾಲಿಗೆಯಿಂದ ದೇಶದ ಜನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿಜಿಯವರು ಕೈಗೊಂಡ ಕ್ರಮಗಳು ದೇಶದ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ.
ಒಡಿಶಾ ಸಮುದ್ರ ತೀರದಲ್ಲಿ ಸಾಹಸಸಿಂಹನ ಅಲೆ; ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!
ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eleven =
Remember me
