ಲಖನೌ:ಕೆಲವು ದಿನಗಳಿಂದ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್​​​​ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ಈತನ ಹೆಸರು ಕೇಳಿದರೆ ಸ್ಥಳೀಯ ಜನರು ಬೆಚ್ಚಿ ಬೀಳುವುದೇಕೆ? ರಾಜಕೀಯ ವಲಯದಲ್ಲಿ ಈತನ ಸಂಗತಿ ತುಂಬಾ ಚರ್ಚೆಯಾಗುತ್ತಿರುವುದೇಕೆ? ಕ್ರಿಮಿನಲ್​ ಒಬ್ಬ ಶಾಸಕನಾಗಿದ್ದು ಹೇಗೆ? ಚಿಕ್ಕ ವಯಸ್ಸಿನಲ್ಲೇ ಗ್ಯಾಂಗ್​ ಕಟ್ಟಿ ದೊಡ್ಡ ಗ್ಯಾಂಗ್​ಸ್ಟರ್​ ಆಗಿದ್ದು ಹೇಗೆ? ಈತನ ಕ್ರಿಮಿನಲ್​ ಹಿನ್ನೆಲೆ ಕೇಳಿದರೆ ರಾಜಕಾರಣಿಗಳು ಕೂಡ ಹೆದರುವುದೇಕೆ? ಇಲ್ಲಿದೆ ಮಾಫಿಯ ಡಾನ್​ ಅನ್ಸಾರಿಯ ಕರಾಳ ಹಿನ್ನೆಲೆ.
ಅಂದಹಾಗೆ ಮುಖ್ತಾರ್​ ಅನ್ಸಾರಿ ಗುರುವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಜೈಲಿನಲ್ಲಿದ್ದ ಅನ್ಸಾರಿ ಅವರ ಆರೋಗ್ಯ ಹದಗೆಟ್ಟ ನಂತರ ಬಂದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅನ್ಸಾರಿ ಸಾವಿನೊಂದಿಗೆ ಅಪರಾಧದ ಯುಗ ಮತ್ತು ರಾಜಕೀಯದೊಂದಿಗಿನ ಅದರ ಸಂಬಂಧದ ಒಂದು ಅಧ್ಯಾಯವು ಕೊನೆಗೊಂಡಿದೆ. ಕಳೆದ ಹಲವು ದಶಕಗಳಿಂದ ಅನ್ಸಾರಿ ಅವರ ವಿರುದ್ಧ ಕೊಲೆಯಿಂದ ಹಿಡಿದು ಸುಲಿಗೆವರೆಗಿನ ಅನೇಕ ಇತರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸುಮಾರು 65 ಕ್ರಿಮಿನಲ್​ ಪ್ರಕರಣಗಳು ದಾಖಲಾಗಿವೆ. ವಿವಿಧ ಪಕ್ಷಗಳಿಂದ ಟಿಕೆಟ್​ ಗಿಟ್ಟಿಸಿ ಐದು ಬಾರಿ ಶಾಸಕನಾಗಿಯೂ ರಾಜಕೀಯದಲ್ಲಿ ತನ್ನ ಹೆಗ್ಗುರುತು ಬಿಟ್ಟಿದ್ದಾರೆ.
ಅನ್ಸಾರಿ ಸತ್ತ ನಂತರವೂ ಅವರ ಹೆಸರು ರಾಜಕೀಯ ವಲಯದಲ್ಲಿ ತುಂಬಾ ಚರ್ಚೆಯಾಗುತ್ತದೆ. ಅಲ್ಲದೆ, ಅನ್ಸಾರಿ ಸಾವಿನ ಸುತ್ತ ಸಂಶಯವು ಕೂಡ ಸುಳಿದಾಡುತ್ತಿದೆ. ಜೈಲಿನಲ್ಲಿ ವಿಷವುಣಿಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬವೂ ಆರೋಪಿಸಿದೆ. ಅನೇಕ ರಾಜಕಾರಣಿಗಳು ಕೂಡ ಅನ್ಸಾರಿ ಸಾವಿಗೆ ತನಿಖೆಗೆ ಆಗ್ರಹಿಸಿದ್ದಾರೆ. ಇಷ್ಟೊಂದು ಪ್ರಭಾವ ಹೊಂದಿರುವ ಅನ್ಸಾರಿ ಹಿನ್ನೆಲೆಯನ್ನು ನೋಡುವುದಾದರೆ, 1963ರಲ್ಲಿ ಪ್ರಭಾವಿತ ಕುಟುಂಬದಲ್ಲಿ ಜನಿಸಿದರು. ರಾಜ್ಯದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸರ್ಕಾರಿ ಗುತ್ತಿಗೆ ಮಾಫಿಯಾದಲ್ಲಿ ತಮ್ಮನ್ನು ಮತ್ತು ತಮ್ಮ ಗ್ಯಾಂಗ್ ಅನ್ನು ಸ್ಥಾಪಿಸಲು ಚಿಕ್ಕ ವಯಸ್ಸಿನಲ್ಲೇ ಅಪರಾಧದ ಜಗತ್ತಿಗೆ ಎಂಟ್ರಿ ಕೊಟ್ಟರು. ಅನ್ಸಾರಿಗೆ ಕೇವಲ 15 ವರ್ಷ ವಯಸ್ಸಾಗಿದ್ದಾಗ 1978 ರಲ್ಲಿಯೇ ಅವರ ಕ್ರಿಮಿನಲ್​ ಕೆಲಸಗಳು ಪ್ರಾರಂಭವಾದವು. ಗಾಜಿಪುರದ ಸೈದ್‌ಪುರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಬೆದರಿಕೆಗಾಗಿ ಮೊಟ್ಟ ಮೊದಲ ಪ್ರಕರಣ 15ನೇ ವಯಸ್ಸಿನಲ್ಲೇ ದಾಖಲಾಯಿತು.
ಅನ್ಸಾರಿ ಹೆಸರು ಸಾಮಾನ್ಯವಾಗಿಬಿಟ್ಟಿತುಸುಮಾರು ಒಂದು ದಶಕದ ಬಳಿಕ 1986ರಲ್ಲಿ ಅನ್ಸಾರಿ ಅವರು ಗುತ್ತಿಗೆ ಮಾಫಿಯಾದಲ್ಲಿ ಚಿರಪರಿಚಿತ ಮುಖವಾಗುವ ಹೊತ್ತಿಗೆ, ಗಾಜಿಪುರದ ಮುಹಮ್ಮದ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಿಸಲಾಯಿತು. ಮುಂದಿನ 10 ವರ್ಷಗಳಲ್ಲಿ ಅಪರಾಧದ ಲೋಕದಲ್ಲಿ ಅನ್ಸಾರಿ ಹೆಸರು ಸಾಮಾನ್ಯವಾಗಿಬಿಟ್ಟಿತು. ಏಕೆಂದರೆ, ಅಷ್ಟರಲ್ಲಾಗಲೇ ಅನ್ಸಾರಿ ವಿರುದ್ಧ ಕೊಲೆ ಸೇರಿದಂತೆ ಗಂಭೀರ ಸ್ವರೂಪದ 14 ಪ್ರಕರಣಗಳು ದಾಖಲಾಗಿದ್ದವು. ದಿನಗಳು ಕಳೆದಂತೆ ಅನ್ಸಾರಿಯ ಕ್ರಿಮಿನಲ್ ಗ್ರಾಫ್ ಹೆಚ್ಚಾಯಿತು. ಅವರ ಹೆಸರು ಕೇಳಿದರೂ ಜನರು ಬೆಚ್ಚಿ ಬೀಳುತ್ತಿದ್ದರು. ದೊಡ್ಡ ಡಾನ್​ ಆದರೂ ಕೂಡ ರಾಜಕೀಯ ಪ್ರವೇಶಕ್ಕೆ ಇದು ಅಡ್ಡಿಯಾಗಲಿಲ್ಲ.
ರಾಜಕೀಯ ಪಯಣಉತ್ತರ ಪ್ರದೇಶದ ಅತಿದೊಡ್ಡ ಕ್ರಿಮಿನಲ್​ ಎನಿಸಿಕೊಂಡಿದ್ದ ಅನ್ಸಾರಿ 1996ರಲ್ಲಿ ರಾಜಕೀಯಕ್ಕೆ ಧುಮುಕಿದರು. ಬಹುಜನ ಸಮಾಜ ಪಕ್ಷದಿಂದ ಮಹು ಕ್ಷೇತ್ರದ ಟಿಕೆಟ್​ ಗಿಟ್ಟಿಸಿದ ಅನ್ಸಾರಿ ಗೆಲುವು ಸಹ ದಾಖಲಿಸಿದರು. 2002 ಮತ್ತು 2007ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಯಶಸ್ಸನ್ನು ಮುಂದುವರಿಸಿದರು. ಹೀಗಿರುವಾಗ 2012ರಲ್ಲಿ ಕ್ವಾಮಿ ಏಕತಾ ದಳ (ಕ್ಯೂಇಡಿ) ಹೆಸರಿನ ತಮ್ಮದೇ ಪಕ್ಷವನ್ನು ತೆರೆದು, ಮಹು ಕ್ಷೇತ್ರದಿಂದ ಮತ್ತೆ ಸ್ಫರ್ಧಿಸಿ ಗೆಲುವನ್ನು ಸಹ ದಾಖಲಿಸಿದರು. 2017ರಲ್ಲಿ ಮತ್ತೆ ಗೆಲುವು ದಾಖಲಿಸಿದರು. 2022ರಲ್ಲಿ ತಮ್ಮ ಮಗ ಅಬ್ಬಾಸ್​ ಅನ್ಸಾರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಸುಹೇಲ್​ದೇವ್​ ಭಾರತೀಯ ಸಮಾಜ ಪಕ್ಷದಿಂದ ಅನ್ಸಾತಿ ಪುತ್ರ ಅಬ್ಬಾಸ್​ ಗೆಲುವು ಕಂಡರು.
ಅಪರಾಧ ಜಗತ್ತಿನ ದೊರೆ2005ರಿಂದ ಅನ್ಸಾರಿ ಸಾವಿನವರೆಗೂ ಉತ್ತರ ಪ್ರದೇಶ ಮತ್ತು ಪಂಜಾಬ್​ ವಿವಿಧ ಜೈಲುಗಳಲ್ಲಿ ಅನ್ಸಾರಿಯನ್ನು ಬಂಧಿಸಿ ಇರಿಸಲಾಗಿತ್ತು. ಕೊಲೆ ಸೇರಿದಂತೆ 28 ಪ್ರಕರಣಗಳನ್ನು ಅನ್ಸಾರಿ ವಿರುದ್ಧ ದಾಖಲಿಸಲಾಗಿತ್ತು. 2005ರಿಂದ ಉತ್ತರ ಪ್ರದೇಶದ ಗ್ಯಾಂಗ್​ಸ್ಟರ್​ ಕಾಯ್ದೆ ಅಡಿಯಲ್ಲಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ. 2022ರ ಸೆಪ್ಟೆಂಬರ್​ನಿಂದ ಈವರೆಗೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರು ಮತ್ತು ವಿವಿಧ ನ್ಯಾಯಾಲಯಗಳಲ್ಲಿ 21 ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರು. 37 ವರ್ಷಗಳ ಹಿಂದೆ ಶಸ್ತ್ರಾಸ್ತ್ರ ಪರವಾನಗಿಯನ್ನು ಮೋಸದಿಂದ ಪಡೆದ ಪ್ರಕರಣದಲ್ಲಿ ಅನ್ಸಾರಿಗೆ ಈ ತಿಂಗಳ ಆರಂಭದಲ್ಲಿ ಜೀವಾವಧಿ ಮತ್ತು 2.02 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿತ್ತು. ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಕಳೆದ 18 ತಿಂಗಳ ಅವಧಿಯಲ್ಲಿ ಅನ್ಸಾರಿಗೆ ಶಿಕ್ಷೆ ವಿಧಿಸಿದ ಎಂಟನೇ ಪ್ರಕರಣ ಇದಾಗಿದೆ.
ಬಿಜೆಪಿ ನಾಯಕ ಮತ್ತು ಕಲ್ಲಿದ್ದಲು ವ್ಯಾಪಾರಿ ನಂದ ಕಿಶೋರ್ ರುಂಗ್ತಾ ಅವರ ಅಪಹರಣ ಮತ್ತು 1997ರ ಜನವರಿ 22ರಂದು ನಡೆದ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಮುಂದುವರಿಸದಂತೆ ಮಹಾವೀರ ಪ್ರಸಾದ್ ರುಂಗ್ಟಾ ಅವರಿಗೆ ಜೀವ ಬೆದರಿಕೆ ಹಾಕಿದ್ದಕ್ಕಾಗಿ ವಾರಣಾಸಿಯ ಸಂಸದ/ಶಾಸಕ ನ್ಯಾಯಾಲಯವು ಅನ್ಸಾರಿಗೆ 2023ರ ಡಿಸೆಂಬರ್ 15 ರಂದು ಐದು ವರ್ಷಗಳ ಶಿಕ್ಷೆಯನ್ನು ವಿಧಿಸಿತು. 2023ರ ಅಕ್ಟೋಬರ್ 27ರಂದು, ಗಾಜಿಪುರದ ಸಂಸದ/ಶಾಸಕ ನ್ಯಾಯಾಲಯವು 2010ರಲ್ಲಿ ಅವರ ವಿರುದ್ಧ ದಾಖಲಾದ ದರೋಡೆಕೋರ ಆಕ್ಟ್ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡವನ್ನು ವಿಧಿಸಿತು. ಹೀಗೆ ಸಾಕಷ್ಟು ಪ್ರಕರಣಗಳಲ್ಲಿ ಅನ್ಸಾರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ.
ಕಳೆದ 13 ತಿಂಗಳುಗಳಲ್ಲಿ ಅನ್ಸಾರಿಯವರ ಮೊದಲ ದೋಷಾರೋಪಣೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ನೀಡಿತು. 2003 ರಲ್ಲಿ ಲಖನೌ ಜಿಲ್ಲಾ ಕಾರಾಗೃಹದ ಜೈಲರ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ 2022ರ ಸೆಪ್ಟೆಂಬರ್ 21ರಂದು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಜನವರಿಯಲ್ಲಿ ಬಿಎಸ್‌ಪಿ ಶಾಸಕರಾಗಿದ್ದ ಅನ್ಸಾರಿ ಅವರನ್ನು ರೋಪರ್ ಜೈಲಿನಲ್ಲಿ ಇರಿಸಲಾಗಿತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇದ್ದರು. ಪಂಜಾಬ್‌ನ ರೋಪರ್ ಜೈಲಿನಿಂದ ಅನ್ಸಾರಿಯನ್ನು ರಾಜ್ಯಕ್ಕೆ ಕರೆತರಲು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಯಿತು.
2021ರ ಮಾರ್ಚ್​ ತಿಂಗಳಲ್ಲಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಅನ್ಸಾರಿಯ ಕಸ್ಟಡಿಯನ್ನು ಯುಪಿಗೆ ಹಸ್ತಾಂತರಿಸುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು. 2020ರಿಂದ ಅನ್ಸಾರಿ ಗ್ಯಾಂಗ್ ಪೊಲೀಸರಿಂದ ತೀವ್ರ ಕಾರ್ಯಾಚರಣೆಗೆ ಒಳಗಾಗಿತ್ತು. ಗ್ಯಾಂಗ್‌ಗೆ ಸೇರಿದ 608 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಂಡಿತು. ಈ ಅವಧಿಯಲ್ಲಿ ಗ್ಯಾಂಗ್‌ನ 215 ಕೋಟಿ ರೂ. ಮೊತ್ತದ ಅಕ್ರಮ ವ್ಯವಹಾರ, ಗುತ್ತಿಗೆ ಅಥವಾ ಟೆಂಡರ್‌ಗಳನ್ನು ಸಹ ಪೊಲೀಸರು ತಡೆದರು.
ದೇಶಭಕ್ತಿ ಕುಟುಂಬ ಹಿನ್ನೆಲೆಅಂದಹಾಗೆ ಅನ್ಸಾರಿಯ ತಂದೆಯ ತಂದೆ ಮುಖ್ತಾರ್ ಅಹ್ಮದ್ ಅನ್ಸಾರಿ 1927ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಮುಸ್ಲಿಂ ಲೀಗ್‌ನಲ್ಲಿದ್ದ ಅವರು, ಪ್ರತ್ಯೇಕ ರಾಷ್ಟ್ರ ಕಾರ್ಯಸೂಚಿ ವಿರೋಧಿಸಿ ಅದರಿಂದ ಹೊರಬಂದಿದ್ದರು. 1936ರಲ್ಲಿ ನಿಧನರಾದ ಅವರು, ಆವರೆಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಚಾನ್ಸಲರ್ ಆಗಿದ್ದರು. ಅನ್ಸಾರಿಯ ತಾಯಿಯ ತಂದೆ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್, ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. 1948ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಪಾಕಿಸ್ತಾನದ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾಗಿದ್ದವರು. ‘ನೌಶೆರಾದ ಸಿಂಹ’ ಎಂದೇ ಹೆಸರಾದ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಗೌರವ ನೀಡಲಾಗಿತ್ತು. ಇಂತಹ ಪ್ರತಿಷ್ಠಿತ ಹಾಗೂ ದೇಶಭಕ್ತ ಕುಟುಂಬದ ಹಿನ್ನೆಲೆ ಇದ್ದರೂ ಮುಖ್ತಾರ್ ತುಳಿದ ಹಾದಿ ಅದಕ್ಕೆ ತದ್ವಿರುದ್ಧವಾಗಿತ್ತು.(ಏಜೆನ್ಸೀಸ್​)
ಆರ್​​ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್​ ಶರ್ಮ!? ನಾಯಕತ್ವವೂ ಕೂಡ ಹಿಟ್​ಮ್ಯಾನ್​ ಹೆಗಲಿಗೆ

ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್​ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 10 =
Remember me
