ನವದೆಹಲಿ:ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾದ ಮೊದಲ ದಿನವೇ ಸ್ತ್ರೀ ಸಬಲೀಕರಣದತ್ತ ದೊಡ್ಡ ಹೆಜ್ಜೆ ಇಡಲಾಗಿದು, ಮಹಿಳಾ ಮೀಸಲು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಂಸದರಿಗೆ ಮನವಿ ಮಾಡಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡ 33 ಮೀಸಲಾತಿ ಕಲ್ಪಿಸುವ ಮೂಲಕ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸುವ ಗುರಿಹೊಂದಿರುವ ‘ನಾರಿ ಶಕ್ತಿ ವಂದನ್ ಅಧಿನಿಯಮ್​ಅನ್ನು ಒಂದು ಕಾನೂನಾಗಿ ರೂಪಿಸುವುದನ್ನು ಖಾತರಿಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು.
ಸೋಮವಾರ ನಡೆದ ಸಚಿವ ಸಂಪುಟ ಸಭೆ, ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ‘ಮಹಿಳಾ ಮೀಸಲಾತಿ ಕುರಿತು ಅನೇಕ ವರ್ಷಗಳಿಂದ ಹಲವು ಚರ್ಚೆಗಳು ನಡೆದಿವೆ ಮತ್ತು ವಿವಾದಗಳು ಹುಟ್ಟಿಕೊಂಡಿವೆ. ಮಹಿಳಾ ಮೀಸಲಾತಿ ಬಗ್ಗೆ ಈ ಹಿಂದೆಯೂ ಸಂಸತ್ತಿನಲ್ಲಿ ಪ್ರಯತ್ನಗಳು ನಡೆದಿವೆ. 1996ರಲ್ಲಿ ಇದಕ್ಕೆ ಸಂಬಂಧಿಸಿದ ಮೊದಲ ಮಸೂದೆಯನ್ನು ಮಂಡಿಸಲಾಗಿತ್ತು ಎಂದು ಮೋದಿ ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅನೇಕ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದ್ದು ಅಗತ್ಯ ಬೆಂಬಲ ಕ್ರೋಡೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಕನಸು ಇದುವರೆಗೆ ಕನಸಾಗಿಯೇ ಉಳಿದಿದೆ ಎಂದೂ ಮೋದಿ ಹೇಳಿದರು.
ಇತಿಹಾಸದಲ್ಲಿ ಅಚ್ಚಳಿಯದ ದಿನ:ಮಹಿಳೆಯರಿಗೆ ಅಧಿಕಾರ ಹಾಗೂ ಇನ್ನೂ ಅಂಥ ಅನೇಕ ಉದಾತ್ತ ಕೆಲಸಗಳನ್ನು ಮಾಡಲು ನಾನು ದೇವರಿಂದ ಆಯ್ಕೆಯಾಗಿದ್ದೇನೆ. ಮಹಿಳಾ ಮೀಸಲಾತಿ ನಿಟ್ಟಿನಲ್ಲಿ ನಮ್ಮ ಸರ್ಕಾರ ಇನ್ನೊಮ್ಮೆ ಕ್ರಮ ಕೈಗೊಂಡಿದೆ. ಸೋಮವಾರ ನಡೆದ ಸಂಪುಟ ಸಭೆ ಮಸೂದೆಗೆ ಅಂಗೀಕಾರ ನೀಡಿದೆ. ಇಂದು (ಸೆಪ್ಟೆಂಬರ್ 19)ಇತಿಹಾಸದಲ್ಲಿ ಅಚ್ಚಳಿಯದ ದಿನವಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕತ್ವ ನೀಡಿ ಮುನ್ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೀತಿ ನಿರೂಪಣೆಯಲ್ಲೂ ಅವರ ಗರಿಷ್ಠ ಕೊಡುಗೆಯಿರಬೇಕು ಎಂದು ಹೊಸ ಸಂಸತ್ ಭವನ ಕಟ್ಟಡದ ಲೋಕಸಭೆ ಚೇಂಬರ್​ನಲ್ಲಿ ಮೋದಿ ಹೇಳಿದರು. ಮಹಿಳೆಯರು ಕೊಡುಗೆ ನೀಡುವುದು ಮಾತ್ರವಲ್ಲ, ನೀತಿ ನಿರೂಪಣೆಯಲ್ಲಿ ಅವರು ನಿರ್ಣಾಯಕ ಪಾತ್ರವನ್ನೂ ವಹಿಸಬೇಕು ಎಂದು ಆಶಿಸಿದರು. ಮಹಿಳೆಯರೇ ಮುಂಚೂಣಿಯಲ್ಲಿರುವ ಅಭಿವೃದ್ಧಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ಸರ್ಕಾರ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸುತ್ತಿದೆ, ಇದಕ್ಕಾಗಿ ಮಾತೆಯರು, ಸೋದರಿಯರು ಮತ್ತು ಪುತ್ರಿಯರನ್ನು ಅಭಿನಂದಿಸುತ್ತೇನೆ ಎಂದ ಪ್ರಧಾನಿ, ಈ ಮಸೂದೆಯನ್ನು ಒಮ್ಮತದಿಂದ ಅಂಗೀಕರಿಸಿ ಎಂದು ಉಭಯ ಸದನಗಳ ಎಲ್ಲ ಸದಸ್ಯರಿಗೆ ಮನವಿ ಮಾಡಿದರು.
ಮಹಾ ದ್ರೋಹವೆಂದ ಕಾಂಗ್ರೆಸ್ ನಾಯಕರು:ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಒಂದು ಚುನಾವಣಾ ಜುಮ್ಲಾ (ಪೊಳ್ಳು ಭರವಸೆ) ಆಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಇದು ಮಹಿಳಾ ಆಶೋತ್ತರಗಳಿಗೆ ಎಸಗಿದ ಮಹಾ ದ್ರೋಹ ಎಂದು ಆರೋಪಿಸಿದೆ. ಮಸೂದೆ ಕಾನೂನಾಗಿ ಅಂಗೀಕಾರವಾದ ಮೇಲೆ ನಡೆಸಲಾಗುವ ಜನಗಣತಿ ಮತ್ತು ಕ್ಷೇತ್ರ ಪುನರ್​ವಿಂಗಡಣೆ ಪ್ರಕ್ರಿಯೆ ನಂತರವಷ್ಟೇ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ತರಲಾಗುವುದೆಂದು ಸರ್ಕಾರ ಹೇಳಿರುವುದು ಮಹಾ ವಂಚನೆಯಾಗಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಇದು ನಮ್ಮದೇ ಮಸೂದೆ ಸೋನಿಯಾ:ಇದರಲ್ಲಿ ಹೊಸದೇನಿದೆ? ಇದು ನಮ್ಮದೇ ಮಸೂದೆ. ನೂತನ ಸಂಸತ್ ಭವನಕ್ಕೆ ಆಗಮಿಸುವ ವೇಳೆ, ಮಹಿಳಾ ಮೀಸಲಾತಿ ಮಸೂದೆ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಪ್ರತಿಕ್ರಿಯೆಯಿದು.
ಗಣತಿಯನ್ನೇ ಮಾಡದ ಸರ್ಕಾರ:2024ರ ಸಾರ್ವತ್ರಿಕ ಚುನಾವಣೆಗಳ ಮುಂಚೆಯೇ ಗಣತಿ ಮತ್ತು ಕ್ಷೇತ್ರ ಪುನರ್​ವಿಂಗಡಣೆ ಮಾಡಲಾಗುವುದೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. 2021ರಲ್ಲಿ ನಡೆಸಬೇಕಿದ್ದ, ದಶಕಕ್ಕೊಮ್ಮೆ ಮಾಡಬೇಕಾದ ಜನಗಣತಿಯನ್ನೇ ನರೇಂದ್ರ ಮೋದಿ ಸರ್ಕಾರ ಇನ್ನೂ ನಡೆಸಿಲ್ಲ ಎಂದು ರಮೇಶ್ ವ್ಯಂಗ್ಯವಾಡಿದ್ದಾರೆ. ಚುನಾವಣಾ ಜುಮ್ಲಾಗಳ ಈ ಸೀಸನ್​ನಲ್ಲಿ ಇದು (ಮಹಿಳಾ ಮೀಸಲು) ಅವುಗಳಲ್ಲೆಲ್ಲ ಅತಿ ದೊಡ್ಡ ಜುಮ್ಲಾ ಆಗಿದೆ. ಕೋಟ್ಯಂತರ ಭಾರತೀಯ ಮಹಿಳೆಯರು ಮತ್ತು ಹುಡುಗಿಯರ ಆಶಯಗಳಿಗೆ ಮಹಾ ದ್ರೋಹವಾಗಿದೆ ಎಂದು ಎಕ್ಸ್ ಪೋಸ್ಟ್​ನಲ್ಲಿ ರಮೇಶ್ ಬರೆದಿದ್ದಾರೆ. ನಿಯಮಿತ ಜನಗಣತಿ ನಡೆಸಲು ವಿಫಲವಾಗಿರುವ ಜಿ-20 ಕೂಟದ ಏಕೈಕ ದೇಶ ಭಾರತ ಎಂದು ಗೇಲಿ ಮಾಡಿರುವ ಕಾಂಗ್ರೆಸ್ ಮುಖಂಡ, ಅನುಷ್ಠಾನ ದಿನಾಂಕದ ಕುರಿತ ಅಸ್ಪಷ್ಟ ಭರವಸೆಯೊಂದಿಗೆ ಮಸೂದೆಯನ್ನು ಮಂಡಿಸಲಾಗಿದೆ. ಇದೊಂದು ಇವಿಎಂ; ಅಂದರೆ ಈವೆಂಟ್ ಮ್ಯಾನೇಜ್ಮೆಂಟ್ ಅಲ್ಲದೆ ಬೇರೇನೂ ಅಲ್ಲ ಎಂದು ಟೀಕಿಸಿದ್ದಾರೆ.
ಶಿವಸೇನೆ ಪ್ರತಿಕ್ರಿಯೆ:ಈ ಮಸೂದೆ ಬಹಳ ಹಿಂದೆಯೇ ತರಬೇಕಿತ್ತು ಎಂದು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕ ಚತುರ್ವೆದಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ 2014ರ ಚುನಾವಣಾ ಪ್ರಣಾಳಿಕೆ ಯಲ್ಲೇ ಈ ಅಂಶ ಇತ್ತು. ಆದರೆ ಮೋದಿ ಸರ್ಕಾರ 9.5 ವರ್ಷದ ನಂತರ ಮಸೂದೆ ತಂದಿದೆ ಎಂದಿದ್ದಾರೆ.
ನಿರ್ಮಲಾ ಖರ್ಗೆ:ಹೊಸ ಸಂಸತ್ ಭವನದಲ್ಲಿ ನಡೆದ ಅಧಿವೇಶನದ ಮೊದಲ ದಿನವೇ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಖರ್ಗೆಯವರು ಜಿಎಸ್​ಟಿ ವಿಚಾರ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಗಳು ನಿಗದಿತ ಸಮಯಕ್ಕೆ ಜಿಎಸ್​ಟಿ ಮೊತ್ತವನ್ನು ಪಡೆಯುತ್ತಿಲ್ಲ. ಕೆಲವು ರಾಜ್ಯಗಳು ಕೃಷಿ, ನೀರಾವರಿ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಮಯಕ್ಕೆ ಅನುದಾನ ಪಡೆಯುವುದಿಲ್ಲ. ಇದು ರಾಜ್ಯಗಳನ್ನು ದುರ್ಬಲಗೊಳಿಸುತ್ತದೆ. ನಂತರ ಪರಿಶಿಷ್ಟ ಜಾತಿ ಮಹಿಳೆಯರ ಸಾಕ್ಷರತೆ ಪ್ರಮಾಣ ಕಡಿಮೆಯಾಗಿದೆ.ಇದರಿಂದಾಗಿ ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಅಭ್ಯಾಸ ಹೊಂದಿವೆ ಎಂದರು.
ವಿತ್ತ ಸಚಿವ ಸೀತಾರಾಮನ್ ತಿರುಗೇಟು ನೀಡಿದ್ದು, ವಿರೋಧ ಪಕ್ಷದ ನಾಯಕರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ. ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಗಳಿಗೆ ಜಿಎಸ್​ಟಿ ಪಾವತಿಸಿದೆ. ಪ್ರತಿ ಬಾರಿಯೂ ಒಂದು ಅಥವಾ ಎರಡು ತಿಂಗಳು ಮುಂಚಿತವಾಗಿ ರಾಜ್ಯಗಳಿಗೆ ಜಿಎಸ್​ಟಿ ಪಾವತಿಸಲಾಗುತ್ತಿದೆ. ನಾವು ವಿರೋಧ ಪಕ್ಷದ ನಾಯಕನನ್ನು ಗೌರವಿಸುತ್ತೇವೆ. ಪಕ್ಷಗಳು ಪರಿಣಾಮಕಾರಿಯಲ್ಲದ ಮಹಿಳೆಯರನ್ನು ಆಯ್ಕೆ ಮಾಡುತ್ತವೆ ಎಂಬ ಹೇಳಿಕೆಯನ್ನು ಒಪ್ಪಲಾಗುವುದಿಲ್ಲ ಎಂದರು. ನಂತರ ಸಭಾಪತಿ ಜಗದೀಪ್ ಧನಕರ್ ಇಬ್ಬರೂ ನಾಯಕರನ್ನು ಸಮಾಧಾನಪಡಿಸಿದರು.
ಬೆಂಗಳೂರು: ಶಾಸನ ಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಅವಶ್ಯ ಎಂದು ಪ್ರತಿಪಾದಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಾವು ಪ್ರಧಾನಿಯಾಗಿದ್ದ ವೇಳೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಯಾಗಿದ್ದನ್ನು ಹಾಗೂ ಮಹಿಳಾ ಮೀಸಲು ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದನ್ನು ನೆನಪಿಸಿದ್ದಾರೆ. ಒಟ್ಟು ಮತದಾರರಲ್ಲಿ ಶೇ.50 ಮಹಿಳೆಯರು ಇರುವುದು ಶಾಸಕಾಂಗ ಸಭೆಗಳು ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಯ ಕಲ್ಪನೆಯನ್ನು ಮರುಪರಿಶೀಲಿಸುವಂತೆ ಮಾಡಿದೆ. 1996ರಲ್ಲಿ ತಾವು ಪ್ರಧಾನ ಮಂತ್ರಿಯಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿಗೆ ತಂದಿದ್ದರೂ ವಿಧೇಯಕ ಅಂಗೀಕಾರ ಪಡೆಯಲು ಯಶಸ್ವಿಯಾಗಲಿಲ್ಲ. ನಾನು 1995ರಲ್ಲಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಅವರೊಂದಿಗೆ ಮುಖ್ಯಮಂತ್ರಿಯಾಗಿಯೂ ಮಹಿಳಾ ಮೀಸಲಾತಿಗೆ ಒತ್ತಾಯಿಸಿದ್ದೆ. ನಂತರ 2008ರಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಪ್ರಯತ್ನಗಳು ರ್ತಾಕ ಅಂತ್ಯವನ್ನು ತಲುಪಲಿಲ್ಲ. ಎರಡೂ ಬಾರಿ ಮಸೂದೆಗೆ ಅಂಗೀಕಾರ ಪಡೆಯಲು ಪ್ರಯತ್ನಿಸಿದಾಗ ಸರ್ಕಾರಗಳು ಬಹುಮತವನ್ನು ಹೊಂದಿರಲಿಲ್ಲ. ನೀವು ಸಂಸತ್ತಿನಲ್ಲಿ ಬಹುಮತವನ್ನು ಹೊಂದಲು ಅದೃಷ್ಟವಂತರು ಮತ್ತು ಅದನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಬಹುದು ಎಂದು ದೇವೇಗೌಡರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದನ್ನು ಪ್ರಸ್ತಾಪಿಸಿದ್ದಾರೆ.
ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೇ 1996ರ ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಬಿಲ್ ಮಂಡಿಸಲಾಗಿತ್ತು. ಆದರೆ, ಸಂಯುಕ್ತರಂಗ ಸರ್ಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ನಾಯಕರೇ ಅಂದು ಈ ಮಸೂದೆಗೆ ತಡೆಯೊಡ್ಡಿದ್ದರು.
| ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ.
ಕ್ರೆಡಿಟ್​ಗಾಗಿ ಪೈಪೋಟಿ:ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆ ಕ್ರೆಡಿಟ್ ವಾರ್ ಆರಂಭವಾಗಿದೆ. ಬಿಜೆಪಿ ನಾಯಕರು ಪ್ರಧಾನಿಗೆ ಜೈಕಾರ ಹಾಕಿದರೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ನಾಯಕರ ಪ್ರಯತ್ನದಿಂದ ಇದು ಸಾಕಾರವಾಗಿದೆ ಎಂದು ಸಂಭ್ರಮಿಸಿದ್ದು, ಪರಸ್ಪರ ಟೀಕೆ-ಟಿಪ್ಪಣಿ ಮಾಡಿದ್ದಾರೆ. ಸೋನಿಯಾಗಾಂಧಿ ‘ಇದು ನಮ್ಮ ಬಿಲ್ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿರುವುದಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಮುಂದೇನು? ಸೂರ್ಯ, ಚಂದ್ರ, ನಕ್ಷತ್ರಗಳೇ’ ಎಂದು ವ್ಯಂಗ್ಯವಾಡಿದ್ದಾರೆ. ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಲಿ ಎಂದು ಕಾಯುತ್ತಿದ್ದೇವೆ. ಇದು ಸೋನಿಯಾ ಗಾಂಧಿ, ರಾಜೀವ್ ಗಾಂಧಿಯವರ ಪ್ರಯತ್ನದ ಫಲ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಇದು ಮಹಿಳೆಯರಿಗೆ ಅವಕಾಶ ಮಾಡಿಕೊಡುವ ವಿಧೇಯಕ. ವಿಧೇಯಕ ಮಂಡನೆಯನ್ನು ಸ್ವಾಗತಿಸುತ್ತೇನೆ. ಇದರಿಂದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಈ ಬಿಲ್ ಪಾಸ್ ಆಗಿತ್ತು. ಆದರೆ, ಲೋಕಸಭೆಯಲ್ಲಿ ಆಗಿರಲಿಲ್ಲ. ಈಗ ರಾಜಕೀಯ ಕಾರಣಕ್ಕೆ ಬಿಲ್ ಪಾಸ್ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಬಿಲ್ ಪಾಸ್ ಮಾಡುತ್ತಿದ್ದಾರೆ. ಈ ಬಿಲ್ ಪಾಸ್ ಆದರೆ ಬಿಜೆಪಿಗೆ ಕ್ರೆಡಿಟ್ ಸಿಗಲ್ಲ. ಕಾಂಗ್ರೆಸ್ ಮಾಡಿದ್ದನ್ನು ಮೊದಲು ಟೀಕೆ ಮಾಡುತ್ತಾರೆ, ಆಡಳಿತಕ್ಕೆ ಬಂದಾಗ ಕಾಂಗ್ರೆಸ್ ಕೆಲಸವನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಕ್ಷೇತ್ರ ಮರುವಿಂಗಡಣೆ ಬಳಿಕ ಜಾರಿ:ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿರುವ ತಿದ್ದುಪಡಿ ಮಸೂದೆ, 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ಹೋಲುವಂತಿದೆ. ಈ ಮಸೂದೆಯ ವಿಶೇಷ ಏನೆಂದರೆ – ಅದು 2026ರ ಕ್ಷೇತ್ರ ಮರುವಿಂಗಡಣೆ ಬಳಿಕ ಸೃಷ್ಟಿಯಾಗುವ ಒಟ್ಟು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಿಗೆ ಅನ್ವಯವಾಗಲಿದೆ. ಏತನ್ಮಧ್ಯೆ, 2029ರ ಲೋಕಸಭೆ ಚುನಾವಣೆಗೆ ಅನ್ವಯವಾಗುವಂತೆ ವಿಧೇಯಕ ಮಂಡಿಸಲಾಗಿದೆ ಎಂದು ವಿಪಕ್ಷಗಳು ಆಕ್ರೋಶ ಹೊರಹಾಕಿದ್ದು, 2024 ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇದು ಬರೀ ಜನರನ್ನು ಮೂರ್ಖರನ್ನಾಗಿಸುವ ಮಸೂದೆ ಎಂದು ಕಿಡಿಕಾರಿವೆ. ಮಸೂದೆ ಕುರಿತು ಹೊಸ ಸಂಸತ್ ಕಟ್ಟಡದಲ್ಲಿ ಮಾತನಾಡಿದ ಮೋದಿ, ಹೊಸ ಸಂಸತ್ತಿಗೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಮೊದಲ ದಿನದ ಮೊದಲ ಕಾರ್ಯಸೂಚಿಯಾಗಿ, ನಾವು ಪರಿವರ್ತನೆಗೆ ಕರೆ ನೀಡಿದ್ದೇವೆ. ನಾರಿಶಕ್ತಿಯ ಸಬಲೀಕರಣದ ಬಾಗಿಲು ತೆರೆಯಲು ನಾವೆಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು. ಪ್ರತಿಪಕ್ಷಗಳ ಸಂಖ್ಯೆ ಹೆಚ್ಚಿರುವ ರಾಜ್ಯಸಭೆಯಲ್ಲಿ, ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಬೇಕು. ಬುಧವಾರ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗ ಲಿದ್ದು, ನಂತರ ರಾಜ್ಯಸಭೆಗೆ ಬರಲಿದೆ. ಸರ್ವಾನುಮತದಿಂದ ನೀವು ಮಸೂದೆಯನ್ನು ಮುಂದಕ್ಕೆ ಕೊಂಡೊಯ್ದರೆ, ಅದು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯದಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳುವ ಬಗ್ಗೆ ಸ್ವಾತಂತ್ರ್ಯದ ಮೊದಲು ಹಾಗೂ ಸಂವಿಧಾನ ಸಭೆಯಲ್ಲೂ ಚರ್ಚೆಯಾಗಿತ್ತು. ಸ್ವತಂತ್ರ ಭಾರತದಲ್ಲಿ, ಈ ವಿಷಯಕ್ಕೆ 1970ರ ದಶಕದ ನಂತರ ಹೊಸ ವೇಗ ಸಿಕ್ಕಿತು. 1971ರಲ್ಲಿ, ಮಹಿಳೆಯರ ಸ್ಥಿತಿಯ ಕುರಿತು ವರದಿ ನೀಡುವಂತೆ ವಿಶ್ವಸಂಸ್ಥೆ ಭಾರತಕ್ಕೆ ವಿನಂತಿ ಮಾಡಿತ್ತು. ವಿನಂತಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವಾಲಯವು ಭಾರತದಲ್ಲಿ ಮಹಿಳೆಯರ ಸ್ಥಿತಿಯನ್ನು ಪರಿಶೀಲಿಸಲು ಸಮಿತಿ ನೇಮಿಸಿತ್ತು. ಮಹಿಳೆಯರ ಸಾಮಾಜಿಕ ಸ್ಥಾನಮಾನ, ಶಿಕ್ಷಣ ಮತ್ತು ಉದ್ಯೋಗದ ಮೇಲೆ ಪ್ರಭಾವ ಬೀರುವ ಸಾಂವಿಧಾನಿಕ, ಆಡಳಿತಾತ್ಮಕ ಮತ್ತು ಕಾನೂನು ನಿಬಂಧನೆಗಳ ಬಗ್ಗೆ ಅಧ್ಯಯನ ನಡೆಸುವುದು ಸಮಿತಿ ಉದ್ದೇಶವಾಗಿತ್ತು. ಸಮಾನತೆಯ ಕಡೆಗೆ ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಲಿಂಗ ಸಮಾನತೆಯನ್ನು ಖಾತ್ರಿಪಡಿಸುವ ತನ್ನ ಸಾಂವಿಧಾನಿಕ ಜವಾಬ್ದಾರಿಯಲ್ಲಿ ಭಾರತ ವಿಫಲವಾಗಿದೆ ಎಂದು ದಾಖಲಿಸಲಾಗಿತ್ತು. ಇದಾದ ಬಳಿಕ, ಹಲವು ರಾಜ್ಯಗಳು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಘೊಷಿಸಲು ಶುರು ಮಾಡಿದವು.
ದೇವೇಗೌಡರಿಂದ ಮೇಲ್ಪಂಕ್ತಿ:ಮಹಿಳಾ ಮೀಸಲು ಮಸೂದೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರ 1996ರ ಸೆಪ್ಟೆಂಬರ್ ತಿಂಗಳಲ್ಲಿ ಸಂವಿಧಾನದ 81ನೇ ತಿದ್ದುಪಡಿ ಮಸೂದೆಯಾಗಿ ಲೋಕಸಭೆಯಲ್ಲಿ ಮೊದಲು ಪರಿಚಯಿಸಿತ್ತು. ಆದರೆ, ಮಸೂದೆಯು ಸದನದ ಅನುಮೋದನೆಯನ್ನು ಪಡೆಯುವಲ್ಲಿ ವಿಫಲವಾಯಿತು. ನಂತರ, ಈ ವಿಚಾರವನ್ನು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಸಮಿತಿ 1996ರ ಡಿಸೆಂಬರ್​ನಲ್ಲಿ ಲೋಕಸಭೆಗೆ ತನ್ನ ವರದಿ ಸಲ್ಲಿಸಿತು. ಆದರೆ ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆಯು ನಿಷ್ಕ್ರಿಯವಾಗಿತ್ತು
2008ರಲ್ಲಿ ಮಂಡನೆಯಾಗಿತ್ತು:ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2008ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮಸೂದೆಯನ್ನು ಮಂಡಿಸಿತ್ತು. 2010ರ ಮಾರ್ಚ್ 9ರಂದು ರಾಜ್ಯಸಭೆ ಮಸೂದೆಯನ್ನು ಅನುಮೋದಿಸಿತ್ತು. ಆದರೆ, ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಲಿಲ್ಲ. ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿದ್ದ ಬಿಹಾರದ ರಾಷ್ಟ್ರೀಯ ಜನತಾದಳ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷಗಳು ಮಹಿಳಾ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ. ಜೆಡಿಯು ನಾಯಕರಾಗಿದ್ದ ಶರದ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿ, ಸಣ್ಣ ಕೂದಲಿನ ಮಹಿಳೆಯರು (ನಗರದವರು) ನಮ್ಮ ಮಹಿಳೆಯರನ್ನು (ಗ್ರಾಮೀಣ ಪ್ರದೇಶದ ಮಹಿಳೆಯರು) ಹೇಗೆ ಪ್ರತಿನಿಧಿಸಬಹುದು ಎಂದು ಪ್ರಶ್ನಿಸಿದ್ದರು.
ಈ ಮಗುವಿಗೆ ಕೈಯಲ್ಲಿ 14, ಕಾಲಲ್ಲಿ 12 ಬೆರಳುಗಳು; ಇದು ದೇವರ ಅವತಾರ ಎಂದು ಮನೆಯವರ ಭಾವನೆ!

ಚೈತ್ರಾ ಕುಂದಾಪುರ ರಿಲ್ಯಾಕ್ಸ್, ಹಾಲಶ್ರೀ ಸ್ವಾಮೀಜಿಗೆ ಫುಲ್ ಟೆನ್ಷನ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
