| ಡಾ. ವಿಜಯ ಸಂಕೇಶ್ವರ
ನರೇಂದ್ರ ದಾಮೋದರ ದಾಸ್ ಮೋದಿ. ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ನಾಯಕ. ಅಸಾಧ್ಯಗಳನ್ನು ಸಾಧ್ಯವಾಗಿಸಿ, ಕಷ್ಟದ ಸಂದರ್ಭಗಳನ್ನೂ ಅನುಕೂಲಕರವಾಗಿ ಪರಿವರ್ತಿಸಿ, ಸವಾಲುಗಳನ್ನು ಮೆಟ್ಟಿನಿಂತ ವಿಶಿಷ್ಟ ವ್ಯಕ್ತಿತ್ವ. ನಾಯಕತ್ವದ ಸಾಮರ್ಥ್ಯ ಹೇಗಿರುತ್ತದೆ ಎಂಬುದನ್ನು ವಿಶ್ವ ಪ್ರಭಾವಿಯಾಗಿ ಕಂಡಿದ್ದು ಮೋದಿಯವರ ಮೂಲಕವೇ.
ಸವಾಲುಗಳು ಬಂದರೆ ಬೆಚ್ಚಿಬೀಳುವವರೇ ಜಾಸ್ತಿ. ಆ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಜಾಗತಿಕ ನಾಯಕರಾಗಿ ಮೋದಿ ಬೆಳೆದು ಬಂದು ಬಗೆ ನಿಜಕ್ಕೂ ಪ್ರೇರಣಾದಾಯಿ. ಹಿಂದೊಮ್ಮೆ ಮೋದಿಯವರಿಗೆ ವೀಸಾ ನೀಡುವುದಿಲ್ಲ ಎಂದಿತ್ತು ಅಮೆರಿಕ. ಈಗ ಆ ದೇಶದ ಅಧ್ಯಕ್ಷರೇ ‘ಮೋದಿ ನನ್ನ ಆತ್ಮೀಯ ಸ್ನೇಹಿತ’ ಎಂದು ಮತ್ತೆಮತ್ತೆ ಹೇಳುತ್ತಿದ್ದಾರೆ. ಹೀಗೆ ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ, ನಮ್ಮ ದೇಶದಲ್ಲಿ ವಿರೋಧ, ಟೀಕೆಗಳನ್ನು ಜೀರ್ಣಿಸಿಕೊಂಡು, ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡು ಸದಾ ಕೆಲಸದಲ್ಲಿ ನಿರತ ಪ್ರಧಾನಿ ವಿರೋಧಿಗಳಿಗೂ ಕಾರ್ಯದಕ್ಷತೆಯ ಮೂಲಕವೇ ಉತ್ತರ ನೀಡಿದ್ದಾರೆ.
ದಿಟ್ಟ ನಿರ್ಧಾರಗಳನ್ನು ತಳೆಯುವ ನಾಯಕ:ಮೋದಿಯವರು ಪ್ರಧಾನಿಯಾಗಿ ಆರು ವರ್ಷಗಳಾಗಿವೆ. ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದ್ದಾರೆ. ದೇಶದಲ್ಲಿ ಇಷ್ಟೆಲ್ಲ ಬದಲಾವಣೆ ಹಾಗೂ ಬೆಳವಣಿಗೆ ಹೇಗೆ ಸಾಧ್ಯವಾಯಿತು ಎಂದು ಯೋಚಿಸಿದರೆ ಮೋದಿ ಪ್ರಧಾನಿಯಾದ ದಿನದಿಂದಲೂ ಕಠಿಣ ಮತ್ತು ದಿಟ್ಟ ನಿರ್ಧಾರಗಳನ್ನೇ ತಳೆಯುತ್ತಿದ್ದಾರೆ. ಆ ಪೈಕಿ ಎಷ್ಟೋ ನಿರ್ಧಾರಗಳಂತೂ ಯಾರೂ ಊಹಿಸಿರಲಿಲ್ಲ. 2016 ನವೆಂಬರ್​ನಲ್ಲಿ ನೋಟು ಅಮಾನ್ಯೀಕರಣದ ನಿರ್ಧಾರ ಪ್ರಕಟಿಸಿದಾಗ ಹಲವು ಆರ್ಥಿಕ ತಜ್ಞರೂ ‘ತಪು್ಪನಿರ್ಧಾರ’ ಎಂದೇ ಜರಿದರು. ಆದರೆ, ನಕಲಿ ನೋಟಿನ ಹಾವಳಿ ತಡೆಯಲು, ಉಗ್ರರ ಹಣಕಾಸಿನ ಮೂಲಗಳನ್ನು ಸದೆಬಡಿಯಲು, ಕಾಳಧನವನ್ನು ಹೊರಗೆ ತರಲು ಇದುವೇ ದಿವ್ಯಾಸ್ತ್ರ ಎಂಬುದು ಕೆಲ ಸಮಯದ ನಂತರ ಸಾಬೀತಾಯಿತು. ಅವರು ಕೈಗೊಂಡ ನಿರ್ಧಾರಗಳು ಆರಂಭದಲ್ಲಿ ತೊಡಕು ಅಥವಾ ಕಡಿಮೆ ಪರಿಣಾಮದ್ದು ಎನಿಸಿದರೂ, ದೀರ್ಘಾವಧಿಯಲ್ಲಿ ಬಹುದೊಡ್ಡ ಬದಲಾವಣೆ ಮತ್ತು ಪರಿಣಾಮವನ್ನು ಸೃಷ್ಟಿಸಬಲ್ಲಂಥವು. ಆ ದೂರದೃಷ್ಟಿಯನ್ನು ಇರಿಸಿಕೊಂಡೇ ಆರ್ಥಿಕ, ರಕ್ಷಣೆ, ಕೈಗಾರಿಕೆ, ಕೃಷಿ, ವಾಣಿಜ್ಯ, ಮೂಲಸೌಕರ್ಯ, ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಸಾಧ್ಯವಾಗಿದೆ.
ಯೋಜನೆಗಳ ಪರಿಣಾಮಕಾರಿ ಅನುಷ್ಠಾನ:ಸರ್ಕಾರಿ ಯೋಜನೆಗಳೇನೋ ಉತ್ಸಾಹದಲ್ಲಿ ಘೋಷಿಸಲಾಗುತ್ತದೆ. ಅವುಗಳ ಅನುಷ್ಠಾನದ ವಿಷಯ ಬಂದಾಗ ನಿರಾಸೆಯೇ ಕಾಣಿಸಿಕೊಳ್ಳುತ್ತದೆ. ಈ ವಿಷಯದಲ್ಲಿ ಮೋದಿ ನೇತೃತ್ವದ ಸರ್ಕಾರ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ಯೋಜನೆ ರೂಪಿಸುವಾಗಲೇ, ಅದನ್ನು ತಲುಪಿಸಬೇಕಾದ ದಾರಿ, ಬೀರುವ ಪರಿಣಾಮ, ಅದರ ಪ್ರಯೋಜನ ಎಲ್ಲವನ್ನೂ ಅವಲೋಕಿಸಿತು. ಸ್ವಾತಂತ್ರ್ಯಪ್ರಾಪ್ತಿಯ ಏಳು ದಶಕಗಳ ನಂತರವೂ ದೇಶದ ಕೋಟ್ಯಂತರ ಜನರು ಬ್ಯಾಂಕ್ ಖಾತೆಗಳಿಂದ ವಂಚಿತರಾಗಿದ್ದರು. 2014ರಲ್ಲಿ ಜಾರಿಗೆ ತಂದ ಜನಧನ ಯೋಜನೆಯಿಂದ 40 ಕೋಟಿಗೂ ಅಧಿಕ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಹಣಕಾಸು ಒಳಗೊಳ್ಳುವಿಕೆಗೆ ಮಹತ್ವದ ಯೋಜನೆಯಾಗಿ ಪರಿಣಮಿಸಿದ ಇದು, ಕೋಟ್ಯಂತರ ಜನರಿಗೆ ಪ್ರಯೋಜನಕಾರಿಯಾಗಿದೆ.
ಕೃಷಿಗೆ ಕಾಯಕಲ್ಪ:ಹಿಂದೆ ಸರ್ಕಾರದ 1 ರೂ. ಬಿಡುಗಡೆಯಾದರೆ ಅದು ಫಲಾನುಭವಿವರೆಗೆ ಹೋಗಿ ತಲುಪುವುದು 10 ಪೈಸೆ ಮಾತ್ರ ಎಂದು ಒಬ್ಬ ಪ್ರಧಾನಿ ಹೇಳಿದ್ದರು. ಪ್ರಸಕ್ತ, ಮಧ್ಯವರ್ತಿಗಳ ಹಾವಳಿ ಇಲ್ಲದೆ, ಸರ್ಕಾರದ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿರುವುದರಿಂದ ಭ್ರಷ್ಟಾಚಾರದ ದೊಡ್ಡ ಮಾರ್ಗ ಕಾಯಂ ಆಗಿ ಬಂದ್ ಆಗಿದೆ. ಇಂಥ ನೇರ ನಗದು ವರ್ಗಾವಣೆಯ ದೊಡ್ಡ ಯಶಸ್ಸನ್ನು ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯಲ್ಲಿ ಕಾಣಬಹುದು. ಫಲಾನುಭವಿ ರೈತನ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ನೆರವಿನ ಹಣ ಬಂದು ಸೇರುತ್ತಿದೆ. ರೈತರಿಗೆ ಇಳಿವಯಸ್ಸಿನಲ್ಲಿ (60 ವರ್ಷದ ನಂತರ) ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ ಒದಗಿಸುವ ಕಿಸಾನ್ ಮಾನಧನ್ ಯೋಜನೆ ಶ್ಲಾಘನೀಯವಾದದ್ದು. ಸಣ್ಣ ವ್ಯಾಪಾರಿಗಳಿಗೂ ಇದೇ ರೀತಿ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಜತೆಗೆ ಕೈಗಾರಿಕೆಗಳ ಸ್ಥಾಪನೆಗೂ ಅಷ್ಟೇ ಒತ್ತು ನೀಡಲಾಗಿರುವುದು ‘ಸಮತೋಲಿತ ಅಭಿವೃದ್ಧಿ’ಗೆ ಸಾಕ್ಷಿ. ಇಂಥ ಸುಧಾರಣೆಗಳೆಲ್ಲ ಹಿಂದೆಯೇ ತರಬಹುದಿತ್ತು. ಆದರೆ, ನಾಯಕನಾದವನಿಗೆ ಅಂಥ ಪ್ರಬಲ ಇಚ್ಛಾಶಕ್ತಿ ಇರಬೇಕು. ತಾಜಾ ಚಿಂತನೆ, ಅದನ್ನು ಅನುಷ್ಠಾನಕ್ಕೆ ತರುವ ದಾರಿಯನ್ನು ಅರಿತಿರುವ ಮೋದಿ ಇಂಥ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರು. ‘ಉಜ್ವಲಾ’ ಯೋಜನೆ ಮೂಲಕ ಬಡವರ ಮನೆಬಾಗಿಲಿಗೆ ಎಲ್​ಪಿಜಿ ಸಿಲಿಂಡರ್ ತಲುಪುವಂತೆ ಮಾಡಿದರೆ, ಜಿಎಸ್​ಟಿ ಮೂಲಕ ತೆರಿಗೆ ಸುಧಾರಣೆಯ ಹಾದಿಯನ್ನು ಅನಾವರಣಗೊಳಿಸಿದರು.
ಉಗ್ರರ ವಿರುದ್ಧ ಪ್ರಹಾರ:ಹಿಂದೆಲ್ಲ ಭಯೋತ್ಪಾದಕ ದಾಳಿಗಳು ನಡೆದಾಗ ಕ್ರಮ ಕೈಗೊಳ್ಳುವ ಮಾತು ಖಂಡನೆಯ ಹೇಳಿಕೆಗಷ್ಟೇ ಸೀಮಿತವಾಗಿರುತ್ತಿತ್ತು. ಮೋದಿ ಅವರು ಹಾಗೆ ಮಾಡದೆ, ಭಯೋತ್ಪಾದಕ ಸಂಘಟನೆಗಳಿಗೆ, ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನೆ ಮಾಡಿದರು. ಪಠಾಣ್​ಕೋಟ್ ಸೇನಾನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ‘ಪಾಕಿಸ್ತಾನ ಇದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ’ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ ಮೋದಿ ಸರ್ಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿತು. ಆನಂತರದ ದಿನಗಳಲ್ಲಿ ಪಾಕಿಸ್ತಾನದ ಉಗ್ರತಾಣಗಳ ಮೇಲೂ ವಾಯುದಾಳಿ ನಡೆಸಲಾಯಿತು. ಪಾಕಿಸ್ತಾನದ ಮುಖವಾಡವನ್ನು ಅಂತಾರಾಷ್ಟ್ರೀಯ ವಲಯ ದೆದುರು ತೆರೆದಿಡುವಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧ ಸಮರವನ್ನು ಮತ್ತಷ್ಟು ತೀವ್ರ ಮತ್ತು ಸಂಘಟಿತಗೊಳಿಸಿದ್ದು ಸಾಧಾರಣ ಸಂಗತಿಯೇನಲ್ಲ.
ವಿದೇಶಾಂಗ ನೀತಿಗೆ ಬಲ:ಆರು ವರ್ಷಗಳ ಹಿಂದೆ ಕೆಲವರು, ‘ಮೋದಿಯವರಿಗೆ ವಿದೇಶಾಂಗ ನೀತಿಯ ಅನುಭವವಿಲ್ಲ’ ಎಂದು ಟೀಕಿಸಿದರು. ಅದಕ್ಕೆ ಪ್ರತ್ಯುತ್ತರವನ್ನು ಕೆಲಸದ ಮೂಲಕವೇ ನೀಡಿದ ಅವರು ಭಾರತದ ವಿದೇಶಾಂಗ ನೀತಿಯನ್ನು ಬಲಶಾಲಿಗೊಳಿಸಿರುವುದಷ್ಟೇ ಅಲ್ಲದೆ, ಜಾಗತಿಕ ವಲಯ ಭಾರತದ ದನಿಯನ್ನು ಗಂಭೀರವಾಗಿ ಆಲಿಸುವಂತೆ, ಗೌರವಿಸುವಂತೆ ಮಾಡಿದ್ದಾರೆ. ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲ ಈಗ ಭಾರತದ ಸ್ನೇಹಕ್ಕಾಗಿ ಹಾತೊರೆಯುತ್ತಿವೆ. ಅಂತಾರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೋದಿಯವರು, ಕಠಿಣ ಸಂದರ್ಭಗಳಲ್ಲಿ ರಾಜತಾಂತ್ರಿಕ ಜಾಣ್ಮೆ ಮೆರೆದರು, ಡೋಕ್ಲಾಂನಲ್ಲಿ ಚೀನಾ ಸೇನೆ ಹಿಂದಕ್ಕೆ ಹೋಗುವಂತೆ ಮಾಡಿದ್ದು, ಪೂರ್ವ ಲಡಾಖ್​ನಲ್ಲಿ ಚೀನಿ ಪುಂಡಾಟಕ್ಕೆ ಕಡಿವಾಣ ಹಾಕಿದ್ದು, ಪಾಕ್​ನ ಮೋಸದಾಟಗಳನ್ನು ಬಯಲಿಗೆಳೆದಿದ್ದು, ನೆರೆರಾಷ್ಟ್ರಗಳೊಂದಿಗೆ ವಿಶ್ವಾಸ ವೃದ್ಧಿಸಿಕೊಂಡಿದೆಲ್ಲ ಗಮನ ಸೆಳೆಯುವಂಥ ಸಾಧನೆಗಳೇ. ವಿದೇಶಗಳಲ್ಲೂ ಅನುಯಾಯಿಗಳ ದೊಡ್ಡ ಪಡೆಯನ್ನು ಹೊಂದಿರುವ ಮೋದಿ, ಭಾರತದ ಅಭಿವೃದ್ಧಿ ಯಾತ್ರೆಯಲ್ಲಿ ಅನಿವಾಸಿ ಭಾರತೀಯರೂ ತೊಡಗಿಕೊಳ್ಳುವಂತೆ ಮಾಡಿದ್ದಾರೆ.
ಕಾಶ್ಮೀರ ಸಮಸ್ಯೆಗೆ ಮದ್ದು:ಏಳು ದಶಕಗಳಿಂದ ಕಾಶ್ಮೀರ ಸಮಸ್ಯೆ ಕಗ್ಗಂಟಾಗಿತ್ತು. 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದರಲ್ಲದೆ, ಲಡಾಖ್ ಹಾಗೂ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದರು. ತುಷ್ಟೀಕರಣ ನೀತಿಗಾಗಿ ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿ ಇರಿಸಿಕೊಂಡು ಬರಲಾಗಿತ್ತು. ಅಲ್ಲಿ ರಾಷ್ಟ್ರವಾದಿ ಭಾವನೆಗಳು ಗಟ್ಟಿಗೊಳ್ಳಲು ಮೋದಿ ಸರ್ಕಾರ ಐತಿಹಾಸಿಕ ಎನಿಸುವಂಥ ನಿರ್ಧಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅಭಿವೃದ್ಧಿಯ ಪಥದಲ್ಲಿ ಮುಂದೆ ಬರಲು ಶಕ್ಯವಾಗಲಿದೆ.
ಶಿಕ್ಷಣ ನೀತಿ:ದೇಶ ಹಲವು ದಶಕಗಳಿಂದ ಕಾಯುತ್ತಿದ್ದ ಹೊಸ ಶಿಕ್ಷಣ ನೀತಿಯನ್ನು ಮೋದಿ ಸರ್ಕಾರ ಬಿಡುಗಡೆಗೊಳಿಸಿದೆ. ಜ್ಞಾನದ ಜತೆಗೆ ಕೌಶಲಕ್ಕೂ ಅಷ್ಟೇ ಒತ್ತು ನೀಡಲಾಗಿದ್ದು, ಶಿಕ್ಷಣದ ಗುಣಮಟ್ಟದ ಸುಧಾರಣೆ ಜತೆಗೆ, ಭಾರತೀಯತ್ವದ ಅನುಷ್ಠಾನ ಈ ಹೊಸನೀತಿಯ ಮೂಲಕ ಸಾಧ್ಯವಾಗಲಿದೆ.
ದೇಶದ ಹಿತಕ್ಕಾಗಿ ದುಡಿಯಬೇಕು ಎಂಬ ಸಂಕಲ್ಪ, ಮಹತ್ವದ ಸುಧಾರಣೆಗಳನ್ನು ಸಾಕಾರಗೊಳಿಸಬೇಕು ಎಂಬ ತುಡಿತ, ಎಲ್ಲಕ್ಕಿಂತ ದೇಶವೇ ಮೊದಲು ಎಂಬ ಸಮರ್ಪಣಾ ಭಾವ, ಅನೀತಿ, ಅನ್ಯಾಯಗಳನ್ನು ಅಂತ್ಯಗೊಳಿಸುವ ಛಲ ಒಂದೇ ನಾಯಕನಲ್ಲಿದ್ದರೆ ಅದು ಮೋದಿಯವರಲ್ಲಿ ಮಾತ್ರ. ಅದಕ್ಕೆಂದೆ ಜಾಗತಿಕ ವಲಯ ಕೂಡ ಭಾರತದತ್ತ ಮತ್ತೆ ವಿಶ್ವಾಸದಿಂದ, ಆಶಾವಾದದಿಂದ ನೋಡುತ್ತಿದೆ. ಅಭಿವೃದ್ಧಿಯ ನೈಜ ಬೆಳಕು ಮತ್ತೆ ಭಾರತದಿಂದಲೇ ಪ್ರಕಾಶಿಸಲಿದೆ. ಆ ಒಳ್ಳೆಯ ದಿನಗಳು ಬೇಗನೆ ಬರಲಿ. ಮೋದಿಯವರು ಹೇಳಿದಂತೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ’ ಸಾಕಾರಗೊಳ್ಳಲಿ.
(ಲೇಖಕರು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್)
ಭಾರತನಾಶ ಯತ್ನದ ಹಿಂದಿನ, ಇಂದಿನ ಉದಾಹರಣೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
