ಭಾರತದ ರಾಜಕೀಯವು ನಾಟಕೀಯತೆ, ವಾಗ್ದಾಳಿ- ವಾಕ್ಚಾತುರ್ಯ, ಬೃಹತ್ ರ್ಯಾಲಿ, ರೋಡ್ ಶೋಗಳಿಗೆ ಹೆಸರುವಾಸಿಯಾಗಿದೆ. 2022ನೇ ವರ್ಷವೂ ಈ ಎಲ್ಲ ರೋಚಕ ಅಂಶಗಳಿಂದ ತುಂಬಿತ್ತು. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವಂತೆ ಸದ್ದು ಮಾಡಿದ್ದು ವಿಶೇಷ. ಎರಡು ವರ್ಷ ಕಾಡಿದ ಕೋವಿಡ್ ಹೆಮ್ಮಾರಿ ತೆರೆಮರೆಗೆ ಸರಿಯುತ್ತಿದ್ದಂತೆಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯೊಂದಿಗೆ 2022ರ ರಾಜಕೀಯ ಋತು ಪ್ರಾರಂಭವಾಗಿ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್​ನಲ್ಲಿ ಬಿಜೆಪಿ ದಾಖಲೆ ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸುವ ಮೂಲಕ ತೆರೆ ಕಂಡಿತು. ಈ ಸಾಲಿನಲ್ಲಿ ಪ್ರಮುಖವಾಗಿ ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೆರೇಷನ್ (ಎಂಸಿಡಿ) ಚುನಾವಣೆಗಳು ನಡೆದವು. ಗೋವಾ, ಉತ್ತರಾಖಂಡ, ಮಣಿಪುರ, ಉತ್ತರ ಪ್ರದೇಶ ಮತ್ತು ಗುಜರಾತ್​ಗಳಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿತು. ಕಾಂಗ್ರೆಸ್​ಗೆ ಹಿಮಾಚಲ ಪ್ರದೇಶ ಮಾತ್ರ ಕೈಸೇರಿತು. ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್​ನಲ್ಲಿ ಗೆದ್ದು ಅಚ್ಚರಿ ಫಲಿತಾಂಶ ನೀಡಿತು.
ದ್ರೌಪದಿ ಮುರ್ಮು ಜಗದೀಪ್ ಆಗಮನ:ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಸೋಲಿಸುವ ಮೂಲಕ 15ನೇ ರಾಷ್ಟ್ರಪತಿಯಾಗಿ ಜುಲೈ 25ರಂದು ಅಧಿಕಾರ ವಹಿಸಿಕೊಂಡರು. ಈ ಸ್ಥಾನ ಅಲಂಕರಿಸಿದ ಮೊಟ್ಟಮೊದಲ ದಲಿತ ಮಹಿಳೆಯಾಗಿ ಹೊರಹೊಮ್ಮಿದರು. ಎನ್​ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರನ್ನು ಸೋಲಿಸಿ 14ನೇ ಉಪರಾಷ್ಟ್ರಪತಿಯಾಗಿ ಆಗಸ್ಟ್ 11ರಂದು ಕಾರ್ಯಭಾರ ವಹಿಸಿಕೊಂಡರು.
ಕಾಂಗ್ರೆಸ್​ಗೆ ಖರ್ಗೆ ಖದರ್:ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷಗಳ ನಂತರ ಆಂತರಿಕ ಚುನಾವಣೆ ನಡೆಯಿತು. ಗಾಂಧಿ ಕುಟುಂಬದ ನಿಷ್ಠಾವಂತ ಅಶೋಕ್ ಗೆಹ್ಲೋಟ್ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಅವರು ರಾಜಸ್ತಾನದ ಮುಖ್ಯಮಂತ್ರಿ ಸ್ಥಾನವನ್ನು ಸಚಿನ್ ಪೈಲಟ್ ಅವರಿಗೆ ಹಸ್ತಾಂತರಿಸಲು ನಿರಾಕರಿಸಿದರು. ಅಂತಿಮವಾಗಿ ಗಾಂಧಿ ಕುಟುಂಬದ ಪ್ರತಿನಿಧಿ ಎಂದೇ ಬಿಂಬಿಸಲಾದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​ನಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಬಯಸಿದ ಜಿ -23 ಸದಸ್ಯರಲ್ಲಿ (ಕಾಂಗ್ರೆಸ್​ನ 23 ಹಿರಿಯ ನಾಯಕರು) ಒಬ್ಬರಾದ ಶಶಿ ತರೂರ್ ನಡುವೆ ಸ್ಪರ್ಧೆ ನಡೆಯಿತು. ಅಕ್ಟೋಬರ್ 17ರಂದು ನಡೆದ ಈ ಚುನಾವಣೆಯಲ್ಲಿ ಖರ್ಗೆ 7,897 ಮತಗಳನ್ನು ಪಡೆದು ಜಯಶಾಲಿಯಾದರು. ತರೂರ್​ಗೆ ದೊರೆತಿದ್ದು 1,072 ಮತಗಳು.
ರಾಹುಲ್ ಪಾದಯಾತ್ರೆ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಸೆ. 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಈ ಪಾದಯಾತ್ರೆ 150 ದಿನ ನಡೆಯಲಿದ್ದು, ವಿವಿಧ ರಾಜ್ಯಗಳ ಮೂಲಕ ಸಾಗಿ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿಲೋಮೀಟರ್​ಗಳಷ್ಟು ಮಾರ್ಗವನ್ನು ಕ್ರಮಿಸಲಿದೆ. ಈ ಯಾತ್ರೆಯ ಪರಿಣಾಮವನ್ನು ಕಾದುನೋಡಬೇಕಿದೆ.
ಕಮಲ ದಾಖಲೆ ಕಮಾಲ್:ಫೆಬ್ರುವರಿ – ಮಾರ್ಚ್​ನಲ್ಲಿ ಜರುಗಿದ ಉತ್ತರ ಪ್ರದೇಶ ಮತ್ತು ನವೆಂಬರ್​ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವುಗಳು ಹೊಸ ದಾಖಲೆಯನ್ನೇ ಬರೆದವು. 37 ವರ್ಷಗಳ ನಂತರ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಆಡಳಿತ ಪಕ್ಷವೊಂದು ಅಧಿಕಾರಕ್ಕೆ ಮರಳಿತು. ನಾರಾಯಣ ದತ್ ತಿವಾರಿ ಅವರು 1985ರಲ್ಲಿ ಸತತವಾಗಿ ಗೆದ್ದ ಈ ಹಿಂದಿನ ಕೊನೆಯ ಯುಪಿ ಸಿಎಂ ಆಗಿದ್ದರು. ಈಗ ಯೋಗಿ ಆದಿತ್ಯನಾಥ ಆ ದಾಖಲೆ ಸರಿಗಟ್ಟಿದರು. ಗುಜರಾತ್​ನಲ್ಲಿ ಬಿಜೆಪಿ ಸತತ ಏಳನೇ ಬಾರಿಗೆ ಸರ್ಕಾರ ರಚಿಸಿತು. ಅಲ್ಲದೆ, 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆಯನ್ನು ಬರೆಯಿತು. ಆಮ್ ಆದ್ಮಿ ಪಾರ್ಟಿ ಮೊದಲ ಬಾರಿಗೆ ಗುಜರಾತ್ ಕೋಟೆಗೆ ನುಗ್ಗಿ 5 ಸ್ಥಾನಗಳನ್ನು ಗೆದ್ದಿತು. ಇದೇ ವೇಳೆ ಆ ಪಕ್ಷವು ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ (ಎಂಸಿಡಿ) ಜಯ ಗಳಿಸಿ, ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು.
ರಾಷ್ಟ್ರೀಯ ಪಕ್ಷವಾಯ್ತು ಆಪ್:ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್​ಗೆ ಇದು ಮಹತ್ವದ ವರ್ಷವಾಗಿತ್ತು. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶೇ. 13 ಮತಗಳನ್ನು ಗಳಿಸಿದ ನಂತರ ಆಪ್ ರಾಷ್ಟ್ರೀಯ ಪಕ್ಷವಾಯಿತು. ಈ ರಾಜ್ಯದಲ್ಲಿ 5 ಸ್ಥಾನಗಳನ್ನು ಗೆದ್ದು ಖಾತೆ ತೆರೆಯಿತು. ಫೆಬ್ರವರಿ ತಿಂಗಳಲ್ಲಿ ಜರುಗಿದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಎಎಪಿ ಸರ್ಕಾರ ರಚಿಸಿತು. ಭಗವಂತ್ ಮಾನ್ ಮುಖ್ಯಮಂತ್ರಿಯಾದರು. ಡಿಸೆಂಬರ್ ಆರಂಭದಲ್ಲಿ ಜರುಗಿದ ದೆಹಲಿಯ ಮುನ್ಸಿಪಲ್ ಕಾರ್ಪೆರೇಷನ್ ಚುನಾವಣೆಯಲ್ಲಿ ಆಪ್ ಗೆಲ್ಲುವ ಮೂಲಕ ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು.
ಇಡಿ, ಸಿಬಿಐನಿಂದ ಹಲವರ ಬಂಧನ:ಕೇಂದ್ರ ತನಿಖಾ ಸಂಸ್ಥೆಗಳಾದ ಇ.ಡಿ. ಮತ್ತು ಸಿಬಿಐ ಸದಾ ಸುದ್ದಿಯಲ್ಲಿದ್ದ ವರ್ಷ ಇದಾಗಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಷ್ ಸಿಸೋಡಿಯಾ, ಡಿಕೆ ಶಿವಕುಮಾರ್ ಮತ್ತು ಇತರ ಹಲವು ಉನ್ನತ ನಾಯಕರನ್ನು ಈ ಸಂಸ್ಥೆಗಳು ವಿಚಾರಣೆ ನಡೆಸಿದವು. ಶಿವಸೇನೆಯ ಸಂಸದ ಸಂಜಯ್ ರಾವುತ್, ಆಪ್ ಸಚಿವ ಸತ್ಯೇಂದ್ರ ಜೈನ್ ಮತ್ತು ಮಹಾರಾಷ್ಟ್ರದ ಮಾಜಿ ಸಚಿವರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಅವರನ್ನು ಇ.ಡಿ. ಬಂಧಿಸಿತು. ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ವಿಪಕ್ಷಗಳ ಆರೋಪ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ಈ ವರ್ಷವೂ ಗಾಂಧಿ ಕುಟುಂಬವನ್ನು ಕಾಡಿತು. ಸೋನಿಯಾ ಮತ್ತು ರಾಹುಲ್ ಮೊದಲ ಬಾರಿಗೆ ಇ.ಡಿ. ಕಚೇರಿಗೆ ಹಾಜರಾದರು. ಇ.ಡಿ. ಕ್ರಮದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿದರು.
ಸಂತಸದ ನಡುವೆ ಆಪ್​ತ್ತು:ಕೇಜ್ರಿವಾಲ್ ಸಂಪುಟದ ಸಚಿವರು ವರ್ಷವಿಡೀ ಸುದ್ದಿಯ ಲ್ಲಿದ್ದರು. ದೆಹಲಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದರು. ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿ ಮಸಾಜ್ ಮಾಡಿಸಿ ಕೊಳ್ಳುವ ವಿಡಿಯೋ ಲೀಕ್ ಆಯಿತು.
ಕಣ್ಮರೆಯಾದ ಮುಲಾಯಂ:ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನದೊಂದಿಗೆ ಪ್ರಮುಖ ನಾಯಕನೊಬ್ಬನ ನಿರ್ಗಮನವಾಯಿತು. ಅವರು ಅಕ್ಟೋಬರ್ 10 ರಂದು ಕೊನೆಯುಸಿರೆಳೆದರು. ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಒಮ್ಮೆ ಕೇಂದ್ರ ಸಚಿವರಾಗಿದ್ದರು.
ನಿತೀಶ್ ಕುಮಾರ್ ಚದುರಂಗ:ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯು) ನಾಯಕ ನಿತೀಶ್ ಕುಮಾರ್ ಅವರ ನಾಟಕೀಯ ರಾಜಕೀಯ ನಿಲುವಿನ ಮನೋಭಾವ ಮತ್ತೊಮ್ಮೆ ಕಂಡುಬಂತು. ಅವರು ಮಹಾಘಟಬಂಧನ್​ಗೆ ಸೇರುವ ಮೂಲಕ ನಿಷ್ಠೆ ಬದಲಿಸಿದರು. ಆಗಸ್ಟ್​ನಲ್ಲಿ ಅವರು ಎನ್​ಡಿಎ ತೊರೆದು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ ಎಂದು ಘೋಷಿಸುವ ಮೂಲಕ ತೇಜಸ್ವಿ ಯಾದವ್ ಉತ್ತರಾಧಿಕಾರಿ ಎಂದು ಈಗ ಪರೋಕ್ಷವಾಗಿ ಬಿಂಬಿಸಿರುವುದು ಕುತೂಹಲ ಮೂಡಿಸಿದೆ.
ತುಂಡಾಯಿತು ಬಿಲ್ಲು ಬಾಣ, ಅಧಿಕಾರಕ್ಕೆ ಏಕನಾಥ ಶಿಂಧೆ ಬಣ:ಜೂನ್​ನಲ್ಲಿ ಶಿವಸೇನೆ ಎರಡು ಗುಂಪಾಗಿ ವಿಭಜನೆಯಾಯಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್​ಸಿಪಿ ಬೆಂಬಲದ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಆಘಾಡಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ಶಿವಸೇನೆ ನಾಯಕ ಏಕನಾಥ ಶಿಂಧೆ ಬಂಡಾಯವೆದ್ದರು. ಉದ್ಧವ್ ಠಾಕ್ರೆ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಮಹಾರಾಷ್ಟ್ರ ಸಿಎಂ ಆದರು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು. ಶಿವಸೇನೆ ಪಕ್ಷದ ಮಾಲೀಕತ್ವದ ವಿಷಯ ಈಗ ಸುಪ್ರೀಂ ಕೋರ್ಟ್​ನಲ್ಲಿದೆ. ಇದಾದ ನಂತರ ಶಿವಸೇನಾ ಸಂಸದ ಸಂಜಯ್ ರಾವತ್, ಮಾಜಿ ಸಚಿವರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಸೇರಿದಂತೆ ಹಲವು ನಾಯಕರ ಬಂಧನದ ಬೆಳವಣಿಗೆಗಳು ನಡೆದವು.
ಬರಹ:ಜಗದೀಶ ಬುರ್ಲಬಡ್ಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
