ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಶನಿವಾರ ಕರೆನೀಡಿದ್ದ ಹೆದ್ದಾರಿ ತಡೆ (ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಯಿತು. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಪೊಲೀಸರ ಜತೆಗೆ ರೈತರೂ ಎಚ್ಚರ ವಹಿಸಿದ ಪರಿಣಾಮ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ.
ರೈತ ಪ್ರತಿಭಟನೆಯ ಕೇಂದ್ರ ಸ್ಥಾನವಾದ ರಾಜಧಾನಿ ದೆಹಲಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು. ಪೊಲೀಸ್, ಅರೆಸೇನಾ ಪಡೆ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಮೂರು ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಡ್ರೋನ್ ಕ್ಯಾಮರಾ ಮೂಲಕ ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಅನುಮತಿ ಇಲ್ಲದಿದ್ದರೂ ರಸ್ತೆ ತಡೆ ನಡೆಸಿದ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದಾಗಿ ಗಡಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಂಜಾಬ್ ಹಾಗೂ ಹರಿಯಾಣದಲ್ಲಿ ಹೆದ್ದಾರಿ ತಡೆ ಹೆಚ್ಚು ಪರಿಣಾಮ ಬೀರಿತು. ಉಳಿದಂತೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕಕ್ಕೂ ಕೊಂಚ ಮಟ್ಟಿಗೆ ಬಿಸಿ ತಟ್ಟಿತು. ಮತ್ತೊಂದೆಡೆ ತಮ್ಮ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ರೈತ ಸಂಘಟನೆಗಳು ಅ.2ರವರೆಗೆ ಗಡುವು ನೀಡಿವೆ. ಅಲ್ಲಿಯವರೆಗೆ ಶಾಂತಿಯುತ ಹೋರಾಟ ಮುಂದುವರಿಸುವುದಾಗಿ ಘೋಷಿಸಿವೆ.
ರೈತ ಪ್ರತಿಭಟನೆ ಅ.2ರ ತನಕ ಮುಂದುವರಿಯಲಿದೆ. ಈ ಪ್ರತಿಭಟನೆಯ ಮೂಲಕ ಪ್ರತಿಯೊಂದು ಗ್ರಾಮಕ್ಕೂ ತಲುಪುವ ಪ್ರಯತ್ನವನ್ನು ಮಾಡಲಾಗುವುದು. ರೈತರು ಮತ್ತು ಯೋಧರು ನಮ್ಮ ನೆಲ ಕಾಯುವ ಕೆಲಸವನ್ನು ಮಾಡುತ್ತಾರೆ.
|ರಾಕೇಶ್ ಟಿಕಾಯತ್ಸಂಯುಕ್ತ ಕಿಸಾನ್ ಮೋರ್ಚಾ ನಾಯಕ
ಅ.2ರವರೆಗೆ ಪ್ರತಿಭಟನೆ:ಕೃಷಿ ಕಾನೂನು ವಿಚಾರದಲ್ಲಿನ ಸಮಸ್ಯೆ ಬಗೆಹರಿಸಲು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅ.2ರವರೆಗೆ ಕಾಲಾವಕಾಶ ನೀಡಿವೆ.
ಬೆಂಗಳೂರು:ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ಶನಿವಾರ ಕರೆ ನೀಡಲಾಗಿದ್ದ ದೇಶವ್ಯಾಪಿ ಹೆದ್ದಾರಿ ಬಂದ್​ನ ಪರಿಣಾಮ ರಾಜ್ಯದಲ್ಲೂ ಗೋಚರಿಸಿತು. ಹೆದ್ದಾರಿಯಲ್ಲೇ ಅಡುಗೆ, ಭಜನೆ, ಉರುಳುಸೇವೆ ಮಾಡಿದ ಪ್ರತಿಭಟನಾಕಾರರು, ಮುಳ್ಳಿನ ಬೇಲಿ ನಿರ್ವಣ, ರಸ್ತೆಗೆ ಮೊಳೆ ಇಡುವ ವಿಭಿನ್ನ ರೂಪದಲ್ಲಿ ಗಮನ ಸೆಳೆದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಂಯುಕ್ತ ರೈತ ಸಂಘಟನೆಗಳ ಹೋರಾಟ ಸಮಿತಿ, ರೈತ ಮತ್ತು ಕಾರ್ವಿುಕರ ಹೋರಾಟ ಸಮಿತಿ, ಆಮ್ ಆದ್ಮಿ ಪಕ್ಷ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಕೈಜೋಡಿಸಿದ್ದರು. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲೇ ಅಡುಗೆ ಮಾಡಿದರೆ, ಹಾವೇರಿಯಲ್ಲಿ ಸಂಗೀತ ಗೋಷ್ಠಿ, ಚಿತ್ರದುರ್ಗದಲ್ಲಿ ಮುಳ್ಳಿನ ಬೇಲಿ, ಕೋಲಾರ ಮತ್ತು ಬೆಂಗಳೂರಿನ ಸಾದಹಳ್ಳಿ ಗೇಟ್​ನಲ್ಲಿ ಎತ್ತಿನ ಗಾಡಿಗಳನ್ನು ರಸ್ತೆಗಿಳಿಸಲಾಗಿತ್ತು.
ಯಲಹಂಕ ಗೇಟ್​ನಲ್ಲಿ ಕಲ್ಲಂಗಡಿ, ಬಾಳೆಹಣ್ಣು ಮಾರಾಟ ಮಾಡಿದರು. ಬೆಳಗಾವಿಯಲ್ಲಿ ಧರಣಿ ಕುಳಿತಿದ್ದ ರೈತ ಮಹಿಳೆಯರು ಪೊಲೀಸರು ವಶಕ್ಕೆ ಪಡೆಯಲು ಬಂದಾಗ ಉರುಳುಸೇವೆ ನಡೆಸಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕು ಮಾಕನೂರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಹೋಮ ಮಾಡಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಸರಿ ಶಾಲು, ಲುಂಗಿ ಧರಿಸಿದ್ದ ರೈತರು, ಹೋರಾಟಕ್ಕೆ ಯಶ ಸಿಗಲಿ ಎಂದು ಪ್ರಾರ್ಥಿಸಿದರು.
ಕಾಡಿದ ಟ್ರಾಫಿಕ್:ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ತಲುಪುವ ಮಾರ್ಗ ಯಲಹಂಕದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11.30ಕ್ಕೆ ಪ್ರತಿಭಟನೆ ಆರಂಭವಾಯಿತು. ಒಂದೂವರೆ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಕಂಡುಬಂದಿತು. ಕೂಡಲೇ ಪೊಲೀಸರು ಕುರುಬೂರು ಶಾಂತಕುಮಾರ್ ಸೇರಿ ಸುಮಾರು 100ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಳಿಕ ರೈತ ಮುಖಂಡ ಚಂದ್ರಶೇಖರ್ ನೇತೃತ್ವದ ರೈತರ ತಂಡ ಪ್ರತಿಭಟನೆ ಮುಂದುವರಿಸಿತು.
ಏರ್​ಪೋರ್ಟ್ ಧಾವಂತ:ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಹೆದ್ದಾರಿ ಬಂದ್ ಭಯದಿಂದಾಗಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಗಿರುವ ವಿಮಾನಕ್ಕೆ 8 ಗಂಟೆಗೆಲ್ಲ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಯಲಹಂಕ, ದೇವನಹಳ್ಳಿ, ಸಾದಹಳ್ಳಿ ಗೇಟ್​ಗಳ ಬಳಿ ಹೆದ್ದಾರಿಗಿಳಿದ ರೈತರಿಂದ ಸುಮಾರು 10 ಕಿ.ಮೀ. ಗೂ ಅಧಿಕ ಉದ್ದ ಟ್ರಾಫಿಕ್ ಉಂಟಾಗಿತ್ತು. ಕಾರು, ಬಸ್, ಲಾರಿಗಳು, ಮಿನಿ ಬಸ್, ಬೈಕ್​ಗಳು ಹಾಗೂ ಗೂಡ್ಸ್ ಟ್ರಕ್​ಗಳು ಸೇರಿ ಸಾವಿರಾರು ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದವು.
ಒಂದೇ ತಾಸಿಗೆ ಸೀಮಿತ:ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೆದ್ದಾರಿ ಬಂದ್​ಗೆ ಯೋಜನೆ ರೂಪಿಸಲಾಗಿತ್ತು. ಮಧ್ಯಾಹ್ನ ಪ್ರತಿಭಟನೆ ಕಾವೇರುತ್ತಿದ್ದಂತೆ ಬೆಂಗಳೂರಿನ ಯಲಹಂಕ, ಬೆಳಗಾವಿ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ರಸ್ತೆ ಬಂದ್ ಬಹುತೇಕ ಕಡೆ 1 ಗಂಟೆಗಷ್ಟೇ ಸೀಮಿತವಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 10 =
Remember me
