ಬೆಂಗಳೂರು:ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಹಿಂದಡಿ ಇಡುವ ಮೂಲಕ ಪ್ರಾದೇಶಿಕ ಭಾಷಿಕರಿಗೆ ನಿರಾಸೆ ಮೂಡಿಸಿದೆ.
ಬ್ಯಾಂಕ್​ಗಳ ನೇಮಕಾತಿಗೆ ಐಬಿಪಿಎಸ್ (ಇನ್​ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್) ನಡೆಸುವ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ 2019ರಲ್ಲಿ ಪ್ರಕಟಿಸಿತ್ತು. ಆದರೆ ಇದೀಗ ತನ್ನದೇ ನಿಲುವಿಗೆ ತದ್ವಿರುದ್ಧವಾಗಿ 2020ರ ಪೂರ್ವಭಾವಿ ಪರೀಕ್ಷೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಷ್ಟೇ ನಡೆಸಲು ಮುಂದಾಗಿರುವುದು ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಅಭ್ಯರ್ಥಿಗಳಿಗೆ ಬೇಸರ ತರಿಸಿದೆ. ‘ಈ ನಡೆ ದೇಶದ ವೈವಿಧ್ಯತೆ ಹಾಗೂ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾದುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಷೆಡ್ಯೂಲ್-8ರಲ್ಲಿರುವ ಎಲ್ಲ 22 ಭಾರತೀಯ ಭಾಷೆಗಳಲ್ಲೂ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ತಂದಿದ್ದವು. ಈ ಸಂಬಂಧ ಸಂಸತ್ತಿನ ಉಭಯ ಸದನಗಳಲ್ಲೂ ಸಂಸದರು ಧ್ವನಿ ಎತ್ತಿದ್ದರು. ಈ ಬೆಳವಣಿಗೆ ಬಳಿಕ ಬ್ಯಾಂಕ್​ಗಳ ನೇಮಕಾತಿ ಪರೀಕ್ಷೆಯನ್ನು ಇನ್ಮುಂದೆ ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಜುಲೈನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ ವೇಳೆ ಲೋಕಸಭೆಯಲ್ಲಿ ಪ್ರಕಟಿಸಿದ್ದರು. ಅಂದು ಕೊಟ್ಟ ಭರವಸೆಯಂತೆ ಹಣಕಾಸು ಸಚಿವರು ತಮ್ಮ ಆದೇಶ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಹೋರಾಟಗಾರರು, ಚಿಂತಕರು ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಯನ್ನು ಇಂಗ್ಲಿಷ್ ಜತೆಗೆ ಹಿಂದಿ ಭಾಷೆಯಲ್ಲೂ ನಡೆಸಲಾಗುತ್ತದೆ. ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳು ಇಂಗ್ಲಿಷ್​ನಲ್ಲಿ ಬರೆಯಬಹುದೆಂಬುದು ಕೇಂದ್ರದ ನಿಲುವು. ಆದರೆ ವಾಸ್ತವದಲ್ಲಿ ಬೆಂಗಳೂರು ಸೇರಿದಂತೆ, ಉತ್ತರ-ದಕ್ಷಿಣ ಭಾರತದ ಹಿಂದಿಯೇತರ(ಅಸ್ಸಾಂ, ಪಶ್ಚಿಮ ಬಂಗಾಳದಂತಹ) ರಾಜ್ಯಗಳ ನಗರ ಪ್ರದೇಶದ ಅಭ್ಯರ್ಥಿಗಳಷ್ಟೇ ಇಂಗ್ಲಿಷ್​ನಲ್ಲಿ ಪ್ರಾವೀಣ್ಯತೆ ಹೊಂದಿರುತ್ತಾರೆ. ಆದರೆ ನಗರದ ಅಭ್ಯರ್ಥಿಗಳು ಸಾಮಾನ್ಯವಾಗಿ ಬ್ಯಾಂಕಿಂಗ್ ಪರೀಕ್ಷೆಗಳತ್ತ ಒಲವು ತೋರುವುದಿಲ್ಲ. ಕರ್ನಾಟಕದ ಎರಡನೇ ಹಾಗೂ ಮೂರನೇ ಹಂತದ ಪ್ರದೇಶಗಳ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕನ್ನಡದಲ್ಲಿ ಮಾತ್ರ ಹಿಡಿತ ಹೊಂದಿರುತ್ತಾರೆ. ಇಂಗ್ಲಿಷ್​ನಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವಷ್ಟು ಪ್ರಾವೀಣ್ಯತೆ ಇಲ್ಲದೆ ಅನುತ್ತೀರ್ಣವಾಗಬೇಕಾಗುತ್ತದೆ. ಸಹಜವಾಗಿ ಇದರಿಂದ ಹಿಂದಿ ರಾಜ್ಯಗಳು ಹಾಗೂ ಹಿಂದಿಯೇತರ ರಾಜ್ಯಗಳ ನಗರ ಪ್ರದೇಶದ ಅಭ್ಯರ್ಥಿಗಳಿಗಷ್ಟೇ ಅನುಕೂಲವಾಗುತ್ತದೆ. ರಾಜ್ಯಭಾಷೆಗಳ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿ ಕನ್ನಡ ಸೇರಿದಂತೆ ಎಲ್ಲ ರಾಜ್ಯಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಬೇಕು. ಇಲ್ಲವಾದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಅನ್ಯಯವಾಗುತ್ತದೆ ಎಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ.
ಇಂಗ್ಲಿಷ್ ಹಾಗೂ ಹಿಂದಿಯಲ್ಲಷ್ಟೇ ಪರೀಕ್ಷೆ ನಡೆಸುವುದರಿಂದ ಹಿಂದಿಯೇತರ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯ. ಉದಾಹರಣೆಗೆ- ಆಂಧ್ರಪ್ರದೇಶದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಅಭ್ಯರ್ಥಿಗಳನ್ನು ಅಣಿಗೊಳಿಸಲು ಅನೇಕ ನಗರಗಳಲ್ಲಿ ನೂರಾರು ಕೇಂದ್ರಗಳಿವೆ. ಅನ್ಯರಾಜ್ಯಗಳಿಂದಲೂ ತಜ್ಞರು ಆಗಮಿಸಿ ತರಬೇತಿ ನೀಡುತ್ತಾರೆ. ಈ ಕುರಿತ ಜಾಗೃತಿ ಕಡಿಮೆ ಇರುವ ಕರ್ನಾಟಕದಲ್ಲಿ ಅಭ್ಯರ್ಥಿಗಳು ಸ್ವಯಂ ಅಧ್ಯಯನ ನಡೆಸುತ್ತಾರೆ. ಹೀಗಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿಫಲರಾಗುತ್ತಾರೆ.
ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಪ್ರತಿಬಾರಿ ಕನ್ನಡಿಗರು ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ. 2019ರ ಐಬಿಪಿಎಸ್ ಪರೀಕ್ಷೆಯ ಅಧಿಸೂಚನೆಯಲ್ಲಿ ಕನ್ನಡ ಇನ್ನಿತರ ಭಾಷೆಗಳಲ್ಲಿ ಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಲಾಗಿತ್ತು. ಕನ್ನಡಿಗರ ಆಕ್ರೋಶಕ್ಕೆ ಮಣಿದು ಅಂದಿನ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹೇರಿದ ನಂತರ ಇತರ ಭಾಷೆಗಳಲ್ಲೂ ಪರೀಕ್ಷೆ ನಡೆಸುವುದಾಗಿ ಬದಲಾವಣೆ ಮಾಡಿತ್ತು. ಆದರೆ ಈ ವರ್ಷವೂ ಹಳೆಯ ಚಾಳಿಯನ್ನೇ ಮುಂದುವರಿಸಿದೆ.
ಕನ್ನಡದಲ್ಲಿ ಪರೀಕ್ಷೆ ಬರೆದು ಉದ್ಯೋಗ ಪಡೆಯಲು ಅವಕಾಶ ಸಿಗದಿದ್ದರೆ ಕನ್ನಡ ಅನ್ನದ ಭಾಷೆ ಆಗುವುದಿಲ್ಲ. ಬ್ಯಾಂಕುಗಳ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆ ನಡೆಸಬೇಕು. ಈ ವಿಚಾರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಪರಿಗಣಿಸದಿದ್ದರೆ ಹೋರಾಟ ಅನಿವಾರ್ಯ. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ.
|ನಾಡೋಜ ಡಾ. ಮಹೇಶ್ ಜೋಷಿದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ
ಬ್ಯಾಂಕ್​ಗಳ ನೇಮಕಾತಿಗಾಗಿ ಐಬಿಪಿಎಸ್ ನಡೆಸುವ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸುವ ಕುರಿತು ಹಣಕಾಸು ಸಚಿವರು ಲೋಕಸಭೆಯಲ್ಲಿ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು.
|ರಾ.ನಂ. ಚಂದ್ರಶೇಖರಕನ್ನಡ ಗೆಳೆಯರ ಬಳಗ ಸಂಚಾಲಕ
ರಾಜ್ಯಭಾಷೆಗಳ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿ ಕನ್ನಡವೂ ಸೇರಿದಂತೆ ಎಲ್ಲ ರಾಜ್ಯಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಬೇಕು.
|ಟಿ.ಎಸ್. ನಾಗಾಭರಣಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಕೇಂದ್ರದ ಮೇಲೆ ಒತ್ತಡ ಹೇರುವಂತೆ ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆಯಲಾಗಿದೆ.
|ನಾಡೋಜ ಡಾ. ಮನು ಬಳಿಗಾರ್ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ದೇಶಾದ್ಯಂತ ಏಕರೂಪದ ಪರೀಕ್ಷೆ, ಫಲಿತಾಂಶದ ಜತೆಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಯುವಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಇನ್ಸ್​ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೆನಲ್ ಸೆಲೆಕ್ಷನ್-ಐಬಿಪಿಎಸ್) ಪರೀಕ್ಷೆ ನಡೆಸುತ್ತದೆ. ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ 3,517 ಹುದ್ದೆಗಳನ್ನು ಭರ್ತಿ ಮಾಡಲು 2020ರ ಐಬಿಪಿಎಸ್ ಪಿಒ ಪರೀಕ್ಷೆಗೆ ಆನ್​ಲೈನ್ ಮೂಲಕ ನೋಂದಣಿ ಆರಂಭವಾಗಿದೆ.ಪರೀಕ್ಷೆಗೆ ಅರ್ಜಿ ಸಲ್ಲಿಸಲು ನ.11ರವರೆಗೆ ಅವಕಾಶವಿದೆ. 2021ರ ಜ.5-6ರರಂದು ಪೂರ್ವಭಾವಿ ಪರೀಕ್ಷೆಗಳು ನಡೆಯಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
