ನೇಪಾಳದಲ್ಲಿ ನವೆಂಬರ್ 20ರಂದು ರಾಷ್ಟ್ರೀಯ ಮತ್ತು ಪ್ರಾಂತೀಯ ಚುನಾವಣೆಗಳು ನಡೆಯಲಿವೆ. ಈ ಹಣಾಹಣಿಯಲ್ಲಿ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಪಕ್ಷದ ನೇತೃತ್ವದ ಮೈತ್ರಿಕೂಟವು ಕಮ್ಯುನಿಸ್ಟರ ವಿರುದ್ಧ ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಅಂದಾಜು 1.8 ಕೋಟಿ ಜನರು 275 ಸದಸ್ಯ ಬಲದ ಸಂಸತ್ ಮತ್ತು ಏಳು ಪ್ರಾಂತೀಯ ವಿಧಾನಸಭೆಗಳಿಗೆ 330 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಹಣದುಬ್ಬರ ಸಂಕಷ್ಟ:ಹಂಗಾಮಿ ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಒಲಿ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಶೇರ್ ಬಹಾದ್ದೂರ್ ದೇವುಬಾ ಬಹುಮತ ಸಾಬೀತುಪಡಿಸಲು ವಿಫಲರಾದ ಕಾರಣ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ ಅವರು ಸಂಸತ್ತನ್ನು ವಿಸರ್ಜಿಸಿ, ಚುನಾವಣೆ ಘೋಷಣೆ ಮಾಡಿದ್ದಾರೆ. ಅಲ್ಲಿ ಪ್ರಸ್ತುತ ಹಣದುಬ್ಬರ ದರವು ಆರು ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣ (ಶೇ. 8ಕ್ಕಿಂತ ಹೆಚ್ಚು) ತಲುಪಿದೆ. ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಹಾಗೂ ರಷ್ಯಾ- ಯೂಕ್ರೇನ್ ಯುದ್ಧದ ಪರಿಣಾಮ ಇಂಧನ ಮತ್ತು ಆಹಾರದ ಬೆಲೆಗಳು ಗಗನಕ್ಕೇರಿವೆ. ಹಿಂದಿನ ವರ್ಷಗಳಲ್ಲಿ ಶೇ. 5.84 ಬೆಳವಣಿಗೆ ಕಂಡ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5.1ರಷ್ಟು ಏರಿಕೆ ದಾಖಲಿಸಬಹುದಾಗಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ದೇಶದ ಶೇ. 20ರಷ್ಟು ಜನರು ದಿನಕ್ಕೆ 2 ಡಾಲರ್​ಗಿಂತ (164 ರೂಪಾಯಿ) ಕಡಿಮೆ ಆದಾಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದ ಭರವಸೆ ನೀಡುವ ರಾಜಕಾರಣಿಗಳತ್ತ ಜನರು ಚುನಾವಣೆಯಲ್ಲಿ ಒಲವು ತೋರಬಹುದಾಗಿದೆ.
ರಾಜಕೀಯ ಅಸ್ಥಿರತೆ:ಚೀನಾ ಮತ್ತು ಭಾರತದ ನಡುವೆ ಬೆಸೆದುಕೊಂಡಿರುವ ನೇಪಾಳದ ರಾಜಕೀಯವು ಈಚಿನ ವರ್ಷಗಳಲ್ಲಿ ಅಸ್ಥಿರವಾಗಿಯೇ ಮುಂದುವರಿದಿದೆ. ಇದು ಅನೇಕ ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿದೆ. 2008ರಲ್ಲಿ 239 ವರ್ಷಗಳ ರಾಜಪ್ರಭುತ್ವದ ಆಡಳಿತಕ್ಕೆ ತೆರೆಬಿದ್ದ ನಂತರ ನೇಪಾಳವು 10 ವಿಭಿನ್ನ ಸರ್ಕಾರಗಳ ಆಳ್ವಿಕೆ ಕಾಣುವಂತಾಗಿದೆ. ನೇಪಾಳದಲ್ಲಿ ಮೂರು ಪ್ರಮುಖ ಪಕ್ಷಗಳಿವೆ. ನೇಪಾಳಿ ಕಾಂಗ್ರೆಸ್, ಕಮ್ಯುನಿಸ್ಟ್ ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್ (ಯುಎಂಎಲ್) ಪಕ್ಷ ಮತ್ತು ಮಾವೋವಾದಿ ಸೆಂಟರ್ – ಈ ಮೂರೂ ಪಕ್ಷಗಳು ಈ ಹಿಂದೆ ವಿಭಿನ್ನ ಮೈತ್ರಿಕೂಟ ಸರ್ಕಾರಗಳ ನೇತೃತ್ವ ವಹಿಸಿದ್ದವು. ಆದರೆ, ಅಧಿಕಾರದ ಮೇಲಾಟ ಮತ್ತು ಆಂತರಿಕ ಕಲಹಗಳಿಂದಾಗಿ ಯಾವುದೇ ಮೈತ್ರಿಕೂಟ ಐದು ವರ್ಷಗಳ ಪೂರ್ಣ ಅವಧಿ ಪೂರೈಸಲಿಲ್ಲ. 2006ರಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ನೀಡುವ ಮೊದಲು ಒಂದು ದಶಕದ ಕಾಲ ಸರ್ಕಾರದ ವಿರುದ್ಧ ಹೋರಾಡಿದ ಮಾವೋವಾದಿ ಬಂಡುಕೋರರು ಮುಖ್ಯವಾಹಿನಿ ರಾಜಕೀಯಕ್ಕೆ ಸೇರಿದ್ದಾರೆ.
72 ಗಂಟೆ ಗಡಿ ಸಂಚಾರ ಸ್ಥಗಿತ:ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸಮಾಜವಿರೋಧಿ ಶಕ್ತಿಗಳ ಸಂಚಾರವನ್ನು ತಡೆಯುವ ಉದ್ದೇಶದಿಂದ ಭಾರತ-ನೇಪಾಳ ಗಡಿಯನ್ನು ನವೆಂಬರ್ 17ರಿಂದ 20ರರವರೆಗೆ 72 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಉತ್ತರ ಪ್ರದೇಶವು 599.3 ಕಿ.ಮೀ. ಉದ್ದದ ಮುಕ್ತಗಡಿಯನ್ನು ನೇಪಾಳದೊಂದಿಗೆ ಹಂಚಿಕೊಂಡಿದೆ.
ಸಮೀಕ್ಷೆಗೆ ನಿಷೇಧ:ನೇಪಾಳದಲ್ಲಿ ಚುನಾವಣಾಪೂರ್ವ ಸಮೀಕ್ಷೆಗಳು ನಡೆಯುವುದಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಡಚಣೆ ಉಂಟುಮಾಡುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿನ ಚುನಾವಣಾ ಆಯೋಗವು ಸಮೀಕ್ಷೆಗಳನ್ನು ನಿಷೇಧಿಸಿದೆ.
ಪ್ರಸ್ತುತ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ಮತ್ತು ಯುಎಂಎಲ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ನೇಪಾಳಿ ಕಾಂಗ್ರೆಸ್ ಪ್ರಸ್ತುತ ಆಡಳಿತಾರೂಢ ನಾಲ್ಕು ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿದೆ. ಕಳೆದ ಮೂರು ದಶಕಗಳಿಂದ ಈ ಮೈತ್ರಿಕೂಟವೇ ಹೆಚ್ಚಿನ ಅವಧಿಗೆ ಅಧಿಕಾರದಲ್ಲಿದೆ. ನೇಪಾಳಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಮಾಜಿ ಮಾವೋವಾದಿ ಬಂಡುಕೋರರ ಪ್ರಮುಖ ಗುಂಪು ಮಾವೋವಾದಿ ಸೆಂಟರ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. 76 ವರ್ಷದ ದೇವುಬಾ ಆರನೇ ಬಾರಿಗೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ನೇಪಾಳಿ ಕಾಂಗ್ರೆಸ್ ಭಾರತದ ಜತೆ ಸುಮಧುರ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗಿದೆ. ಯುಎಂಎಲ್ ನಾಯಕ 70 ವರ್ಷ ವಯಸ್ಸಿನ ಕೆ.ಪಿ.ಶರ್ವ ಒಲಿ ಹಿಂದಿನ ಅವಧಿಯಲ್ಲಿ ಚೀನಾ ಪರ ನಿಲುವು ಹೊಂದಿದ್ದಾರೆ. ಈ ಹಿಂದೆ ಎರಡು ಬಾರಿ ಪ್ರಧಾನಿಯಾಗಿದ್ದ ಅವರು ಈ ಬಾರಿ ಯುಎಂಎಲ್ ಮೈತ್ರಿಕೂಟ ಗೆದ್ದರೆ ಮತ್ತೆ ಪ್ರಧಾನಿಯಾಗಬಹುದಾಗಿದೆ.
ಭೌಗೋಳಿಕವಾಗಿ ನೇಪಾಳವು ಭಾರತ ಮತ್ತು ಚೀನಾಗಳ ನಡುವೆ ಇದೆ. ಹೀಗಾಗಿ, ಎರಡೂ ದೇಶಗಳು ಕಠ್ಮಂಡುವಿನಲ್ಲಿ ತಮಗೆ ಸ್ನೇಹಪರವಾದ ಸರ್ಕಾರವನ್ನು ಬಯಸುತ್ತವೆ. ಈ ಪ್ರದೇಶದಲ್ಲಿ ಚೀನಾದೊಂದಿಗೆ ಪೈಪೋಟಿ ನೀಡುತ್ತಿರುವ ಅಮೆರಿಕ ಕೂಡ ಯಾರು ವಿಜೇತರಾಗಿ ಹೊರಹೊಮ್ಮುತ್ತಾರೆ ಎಂಬ ಆಸಕ್ತಿ ಹೊಂದಿದೆ. ಚೀನಾ ಬೆಲ್ಟ್ ರೋಡ್ ಇನಿಶಿಯೇಟಿವ್ ಯೋಜನೆಯಡಿ ನೇಪಾಳದೊಂದಿಗೆ ಮೂಲಸೌಕರ್ಯ ಯೋಜನೆಗಳಿಗೆ ಸಹಿ ಹಾಕಿದೆ. ಟ್ರಾನ್ಸ್-ಹಿಮಾಲಯನ್ ರೈಲ್ವೇ ನೆಟ್​ವರ್ಕ್ ಮೂಲಕ ಕಠ್ಮಂಡುವನ್ನು ಲಾಸಾ ದೊಂದಿಗೆ ಸಂರ್ಪಸಲು ಯೋಜಿಸಿದೆ. ರಸ್ತೆಗಳನ್ನು ನವೀಕರಿಸಲು ಮತ್ತು ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ವಿುಸಲು 4100 ಕೋಟಿ ರೂಪಾಯಿ ಮೊತ್ತದ ಅಮೆರಿಕದ ನೆರವಿಗೆ ಈ ವರ್ಷದ ಆರಂಭದಲ್ಲಿ ನೇಪಾಳ ಅನುಮೋದನೆ ನೀಡಿದೆ. ಹೀಗೆ, ಅಮೆರಿಕ-ನೇಪಾಳ ಸಾಂಗತ್ಯ ಚೀನಾ ಕಣ್ಣನ್ನು ಕೆಂಪಗಾಗಿಸಿದೆ.
ಇತ್ತೀಚಿನ ಆರ್ಥಿಕ ಬಿಕ್ಕಟ್ಟುಗಳು ಮತ್ತು ರಾಜಕೀಯ ಸ್ಥಿರತೆ ಈ ಚುನಾವಣೆಯಲ್ಲಿ ಮತದಾರರು ಪರಿಗಣಿಸುವ ಪ್ರಮುಖ ಸಂಗತಿಗಳಾಗಿವೆ.
|ಜನಾರ್ದನ ಶರ್ಮಾಹಣಕಾಸು ಸಚಿವ (ಮಾವೋವಾದಿ ಗೆರಿಲ್ಲಾ ಮಾಜಿ ಕಮಾಂಡರ್)
ಕಿಂಗ್ ಮೇಕರ್ ಪ್ರಚಂಡ:ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಹೊಮ್ಮಿದರೆ ಪ್ರಚಂಡ ನಾಯಕತ್ವದ ಮಾವೋವಾದಿ ಸೆಂಟರ್ ಪಕ್ಷವು ಕಿಂಗ್ ಮೇಕರ್ ಆಗಿ ಹೊರಹೊಮ್ಮಬಹುದು. ಅವರು ‘ನಾಮ್ ಡಿ ಗೆರೆ’ (ಉಗ್ರ) ಎಂದೇ ಹೆಸರುವಾಸಿಯಾಗಿದ್ದಾರೆ. ಅವರು ಕೂಡ ಉನ್ನತ ಹುದ್ದೆಯ ಆಕಾಂಕ್ಷಿ.
200 ವಾಹನಗಳ ದೇಣಿಗೆ:ಚುನಾವಣೆಯನ್ನು ಸುಗಮವಾಗಿ ನಡೆಸಲು ಭಾರತ ಸರ್ಕಾರವು ನೇಪಾಳದ ವಿವಿಧ ಸಂಸ್ಥೆಗಳಿಗೆ 200 ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. ವಾಹನಗಳನ್ನು ನೀಡುವಂತೆ ನೇಪಾಳವು ಭಾರತಕ್ಕೆ ಮನವಿ ಮಾಡಿತ್ತು. ಈ ಹಿಂದೆ 120 ವಾಹನಗಳನ್ನು ಭದ್ರತಾ ಪಡೆಗಳಿಗೆ ಮತ್ತು 80 ವಾಹನಗಳನ್ನು ನೇಪಾಳದ ಚುನಾವಣಾ ಆಯೋಗಕ್ಕೆ ಒದಗಿಸಲಾಗಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
