ರಾಘವ ಶರ್ಮ ನಿಡ್ಲೆನವದೆಹಲಿ: ಭಾರತದ ಉತ್ತರಾಖಂಡದ ಕುಮಾವುನ್ ಬೆಟ್ಟ ಸಾಲುಗಳಲ್ಲಿ ಬರುವ ಕಾಲಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರ ಪ್ರದೇಶಗಳು ತನ್ನ ದೇಶಕ್ಕೆ ಸೇರಿದ್ದೆಂದು ನೇಪಾಳ ಸರ್ಕಾರ ಹೊಸ ನಕ್ಷೆ ಬಿಡುಗಡೆ ಮಾಡಿರುವುದು ಭಾರತ-ನೇಪಾಳ ನಡುವಿನ ಗಡಿ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಕ್ಷೆ ಕುರಿತು ನೇಪಾಳದ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ ಸಂಸತ್ತಿನಲ್ಲಿ ವಿಶೇಷ ನಿರ್ಣಯಕ್ಕೆ ಅನುಮೋದನೆ ನೀಡಿದೆ. ‘ಈ ಮೂರು ಪ್ರದೇಶಗಳು ನಮಗೆ ಸೇರಿದ್ದು, ಭಾರತ ಅದು ಹೇಗೆ ಹಕ್ಕು ಸಾಧಿಸುತ್ತದೆ ಎಂಬುದನ್ನು ನಾವೂ ನೋಡುತ್ತೇವೆ’ ಎಂದು ಪ್ರಧಾನಿ ಕೆ.ಪಿ. ಓಲಿ ಖಂಡತುಂಡವಾಗಿ ಹೇಳಿರುವುದರ ಹಿಂದೆ ಚೀನಾದ ಕಮ್ಯುನಿಸ್ಟ್ ಸರ್ಕಾರದ ಕುಮ್ಮಕ್ಕು ಇದೆಯೇ ಎಂಬ ಅನುಮಾನಗಳೂ ಹುಟ್ಟಿಕೊಂಡಿವೆ.
ಏತನ್ಮಧ್ಯೆ, ಕಾಲಪಾನಿ ಭಾರತ-ನೇಪಾಳಕ್ಕೆ ಸಂಬಂಧಿಸಿದ ವಿಷಯ ಎಂದು ಚೀನಾ ಸ್ಪಷ್ಟೀಕರಣ ನೀಡಿದೆ. ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ಅನುಕೂಲವಾಗಲೆಂದೇ ಇತ್ತೀಚಿಗೆ ಭಾರತ ಸರ್ಕಾರ ಲಿಪುಲೇಖ್ ಪಾಸ್​ಗೆ ಸಂರ್ಪಸುವ ಹೊಸ ರಸ್ತೆ ಮಾರ್ಗವನ್ನು ಉದ್ಘಾಟಿಸಿತ್ತು. ಇದಕ್ಕೆ ನೇಪಾಳ ವಿರೋಧಿಸಿದ್ದನ್ನು ಪ್ರಶ್ನಿಸಿದ್ದ ಭಾರತ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನಾರಾವಾನೆ, ಬೇರೊಬ್ಬರ ಪ್ರಭಾವಕ್ಕೊಳಗಾಗಿ ನೇಪಾಳ ಭಾರತದ ರಸ್ತೆ ನಿರ್ಮಾಣ ಯೋಜನೆಗೆ ಕ್ಯಾತೆ ತೆಗೆದಂತಿದೆ ಎಂದು ಪರೋಕ್ಷವಾಗಿ ಚೀನಾ ವಿರುದ್ಧ ಕಿಡಿಕಾರಿದ್ದರು. ಇಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಚೀನಾ ಸ್ಪಷ್ಟೀಕರಣ ನೀಡಿದ್ದರೂ, ನೇಪಾಳ ಕಮ್ಯುನಿಸ್ಟ್ ಪಕ್ಷದ ರಾಜಕೀಯ ವ್ಯವಹಾರ, ಬಿಕ್ಕಟ್ಟುಗಳನ್ನು ಆಂತರಿಕವಾಗಿ ನಿಭಾಯಿಸುವ ಚೀನಾ, ಗಡಿ ವಿವಾದಗಳನ್ನುಮುನ್ನೆಲೆಗೆ ತಂದು ನೇಪಾಳದಲ್ಲಿ ಭಾರತ-ವಿರೋಧಿ ಮನಸ್ಸುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಅನುಮಾನಿಸಲಾಗುತ್ತಿದೆ. ಕಾಲಪಾನಿಯಲ್ಲಿರುವ ಲಿಪುಲೇಖ್ ಪ್ರದೇಶವು ಭಾರತದ ಅತಿ ಮಹತ್ವದ ಭಾಗವಾಗಿದ್ದು, ಚೀನಾ ಸೇನೆಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸೇನೆಗೆ ಇದು ಸಹಕಾರಿಯಾಗಿದೆ. 1962ರಿಂದ ಕಾಲಪಾನಿಯಲ್ಲಿ ಇಂಡೋ-ಟಿಬೆಟ್ ಗಡಿ ಸೇನಾಪಡೆ ಕರ್ತವ್ಯ ನಿರ್ವಹಿಸುತ್ತಿದೆ.
ಕಾಲಪಾನಿ, ಲಿಪುಲೇಖ್ ಎಲ್ಲಿದೆ?:ಭಾರತದ ಉತ್ತರಾಖಂಡದ ಪಿತೋರಾಗಢ ಜಿಲ್ಲೆ ಹಾಗೂ ನೇಪಾಳದ ಸುದುರ್ ಪಶ್ಚಿಮ ಪ್ರದೇಶದ ದರ್ಚುಲಾ ಜಿಲ್ಲೆಯ ಗಡಿಭಾಗದಲ್ಲಿ ಕಾಲಪಾನಿ ಪ್ರದೇಶವಿದೆ. ಇದು ಸಮುದ್ರಮಟ್ಟಕ್ಕಿಂತ 16000 ಅಡಿ ಎತ್ತರದಲ್ಲಿದೆ. ಸದಾ ಹಿಮದಿಂದ ಆವೃತವಾಗಿರುವ ಈ ಗುಡ್ಡಸಾಲಿನಲ್ಲಿರುವ 335 ಚ.ಕಿಮೀ ಸುತ್ತಳತೆಯ ಭೂಮಿ ತನ್ನದೆಂದು ನೇಪಾಳ ಪ್ರತಿಪಾದಿಸುತ್ತಿದೆ. ಭಾರತ, ನೇಪಾಳ ಮತ್ತು ಟಿಬೆಟ್ ಅನ್ನು ಸಂರ್ಪಸುವ ಆಯಕಟ್ಟಿನ ಪ್ರದೇಶದಲ್ಲಿರುವ ಕಾಲಪಾನಿ ಪಕ್ಕದಲ್ಲಿಯೇ ಸುಪ್ರಸಿದ್ಧ ಓಂ ಪರ್ವತವೂ ನೆಲೆಗೊಂಡಿದೆ. ಕಾಲಪಾನಿ ಕಣಿವೆಯ ಮೇಲ್ಭಾಗದಲ್ಲಿರುವ ಲಿಪುಲೇಖ್ ಭಾರತ, ನೇಪಾಳ ಮತ್ತು ಚೀನಾದ ಟ್ರೖೆ ಜಂಕ್ಷನ್ ಎಂದು ಗುರುತಿಸಿಕೊಂಡಿದೆ. ಇದು ಹಿಂದಿನಿಂದಲೂ ವ್ಯಾಪಾರದ ನೆಲೆಯಾಗಿರುವ ಜತೆಗೆ ತೀರ್ಥಯಾತ್ರೆಯ ಮಾರ್ಗವೂ ಆಗಿದೆ. ಈ ಪ್ರದೇಶದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಭುತಿಯಾ ಜನಾಂಗದ ಜನರು ಸ್ಥಳೀಯವಾಗಿ ಪ್ರಸಿದ್ಧರಾಗಿದ್ದಾರೆ. 1962 ರಲ್ಲಿ ಚೀನಾದ ಆಕ್ರಮಣದ ನಂತರ ಭಾರತ ಈ ಮಾರ್ಗವನ್ನು ಮುಚ್ಚಿತ್ತು. ಆದರೆ ಕೆಲ ದಿನಗಳ ಹಿಂದೆ ಹೊಸ 22 ಕಿ.ಮೀ ರಸ್ತೆ ನಿರ್ವಣದ ನಂತರ ಭಾರತವು ಲಿಪುಲೇಖ್ ಪಾಸ್ ಅನ್ನು ಮತ್ತೆ ತೆರೆಯಿತು. ಈ ರಸ್ತೆ ಗುಂಜಿ ಎಂಬ ಗ್ರಾಮದಿಂದ ಆರಂಭಗೊಳ್ಳುತ್ತದೆ. ಆದರೆ ನೇಪಾಳವು ಈ ಗ್ರಾಮ ಮತ್ತು ರಸ್ತೆ ಮಾರ್ಗವನ್ನು ತನ್ನ ಪ್ರದೇಶವೆಂದು ಪ್ರತಿಪಾದಿಸಿದೆ.
ಇದನ್ನೂ ಓದಿ:ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!
ಭಾರತದ ತೀಕ್ಷ್ಣ ಪ್ರತಿಕ್ರಿಯೆ:ನೇಪಾಳ ತಯಾರಿಸಿದ ಕೃತಕ ನಕ್ಷೆಯಿಂದ ಹಕ್ಕನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಖಡಕ್ ಪ್ರತಿಕ್ರಿಯೆ ನೀಡಿದೆ. ನೇಪಾಳದ ಏಕಪಕ್ಷೀಯ ಕ್ರಮವು ಐತಿಹಾಸಿಕ ವಾಸ್ತವ ಮತ್ತು ಸಾಕ್ಷ್ಯಗಳನ್ನು ಉಲ್ಲಂಘಿಸಿದೆ. ಭಾರತದ ಅಖಂಡತೆಯನ್ನು ನೇಪಾಳ ಗೌರವಿಸಬೇಕು. ಅದು ಕೃತಕ ನಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಗಡಿವಿವಾದವನ್ನು ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳುವ ವಿವೇಚನೆಯನ್ನು ಮರೆತಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ನಕ್ಷೆಗೆ ವಿರೋಧ:ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸಿ, ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಭಾರತ ಸರ್ಕಾರ ಹೊಸ ನಕ್ಷೆ ಬಿಡುಗಡೆ ಮಾಡಿತ್ತು. ಇದರಲ್ಲಿ, ಕಾಲಪಾನಿ ಮತ್ತು ಲಿಪುಲೇಖ್ ಪ್ರದೇಶಗಳು ಭಾರತದ ಗಡಿ ವ್ಯಾಪ್ತಿಯಲ್ಲಿವೆ ಎಂದು ತೋರಿಸಲಾಗಿತ್ತು. ಈ ನಕ್ಷೆಗೆ ನೇಪಾಳದಲ್ಲಿ ಅಸಮಾಧಾನ ಎದ್ದಿತ್ತಾದರೂ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಆದರೆ, ಮೇ 8ರಂದು ಕೈಲಾಸ ಮಾನಸ ಸರೋವರ ಯಾತ್ರೆಗೆ ಅನುಕೂಲವಾಗಲು ಲಿಪುಲೇಖ್ ಪಾಸ್ ಸಂರ್ಪಸುವ ರಸ್ತೆಯನ್ನು ನಿರ್ಮಾಣ ಮಾಡಿದ ಭಾರತ ಸರ್ಕಾರದ ಕ್ರಮಕ್ಕೆ ನೇಪಾಳದ ಜನಪ್ರತಿನಿಧಿಗಳು ಭಾರೀ ವಿರೋಧ ಹೊರಹಾಕಿದರು. ನೇಪಾಳ ಸಂಸದರು ಸಂಸತ್ತಿನಲ್ಲಿ ಮೂರೂ ಪ್ರದೇಶಗಳು ನೇಪಾಳದ ವ್ಯಾಪ್ತಿಯಲ್ಲಿವೆ ಎಂಬ ಹೊಸ ನಕ್ಷೆ ಅನುಮೋದಿಸುವ ನಿರ್ಣಯ ಅನುಮೋದಿಸಿದರು.
ಇದನ್ನೂ ಓದಿ:ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಓಲಿ ವೈರಸ್ ಹೇಳಿಕೆಗೆ ಭಾರತ ಆಕ್ರೋಶ:ಚೀನಾ, ಇಟಲಿ ವೈರಸ್​ಗಿಂತ ಭಾರತದ ವೈರಸ್ ಹೆಚ್ಚು ಅಪಾಯಕರ ಎಂದ ನೇಪಾಳ ಪ್ರಧಾನಿ ಗಡಿ ಕ್ಯಾತೆ ಕೆದಕಿದ ನೇಪಾಳ, ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. ಮಂಗಳವಾರ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಕೆ.ಪಿ. ಓಲಿ, ‘ಚೀನಾ ಮತ್ತು ಇಟಲಿ ವೈರಸ್​ಗಿಂತ ಭಾರತದ ವೈರಸ್ ‘ಹೆಚ್ಚು ಅಪಾಯಕರ’ ಎಂಬ ಹೇಳಿಕೆ ನೀಡಿದ್ದಾರೆ. ನೇಪಾಳದಲ್ಲಿ ವೈರಸ್ ಹಬ್ಬಲು ಭಾರತ ಕಾರಣ ಎಂದು ಆರೋಪಿಸಿದ್ದಾರೆ. ‘ಅಕ್ರಮ ಮಾರ್ಗಗಳ ಮೂಲಕ ಬರುವ ಭಾರತೀಯರು ದೇಶದಲ್ಲಿ ವೈರಸ್ ಹಬ್ಬಿಸುತ್ತಿದ್ದಾರೆ. ಸೂಕ್ತ ಪರೀಕ್ಷೆಗಳನ್ನು ನಡೆಸದೆ ಭಾರತದಿಂದ ಜನರನ್ನು ಕರೆತರುವಲ್ಲಿ ಕೆಲವು ಸ್ಥಳೀಯ ಪ್ರತಿನಿಧಿಗಳು ಹಾಗೂ ಪಕ್ಷದ ನಾಯಕರ ಕೈವಾಡವಿದೆ’ ಎಂದು ಓಲಿ ಹೇಳಿದ್ದಾರೆ. ಹೊರಗಡೆಯಿಂದ ಜನರು ಹರಿದು ಬರುತ್ತಿರುವುದರಿಂದ ಕೊವಿಡ್-19 ನಿಯಂತ್ರಿಸಲು ಆಗುತ್ತಿಲ್ಲ. ಈಗ ಚೀನಾ ಮತ್ತು ಇಟಲಿ ವೈರಸ್​ಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿಯಂತೆ ಕಾಣುತ್ತಿದೆ. ಹೆಚ್ಚೆಚ್ಚು ಜನರು ಸೋಂಕಿತರಾಗುತ್ತಿದ್ದಾರೆ ಎಂದು ಭಾಷಣದಲ್ಲಿ ಓಲಿ ಹೇಳಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ವ್ಯಾಪಿಸಿದ ನಂತರ ಓಲಿ ಸಂಸತ್ತಿನಲ್ಲಿ ಮಾಡಿದ ಮೊದಲ ಭಾಷಣ ಇದಾಗಿತ್ತು. ಭಾರತದ ಪ್ರದೇಶಗಳನ್ನು ಸೇರಿಸಿಕೊಂಡ ನಕಾಶೆ ಪ್ರಕಟಿಸಿದ್ದನ್ನು ಸಮರ್ಥಿಸಿಕೊಂಡ ಪ್ರಧಾನಿ, ‘ಕಾಲಪಾನಿ-ಲಿಂಪಿಯಾಧುರ-ಲಿಪುಲೇಖ್ ಪ್ರದೇಶವನ್ನು ಯಾವ ಬೆಲೆ ತೆತ್ತಾದರೂ ನೇಪಾಳಕ್ಕೆ ವಾಪಸ್ ತರಲಾಗುತ್ತದೆ’ ಎಂದು ಹೇಳಿದರು.
ಹಳೇ ಒಪ್ಪಂದಗಳಲ್ಲಿ ಏನಿದೆ?:ಲಿಪುಲೇಖ್ ಪಾಸ್​ನ ದಕ್ಷಿಣದಲ್ಲಿರುವ ಕಾಲಪಾನಿ ಪ್ರದೇಶ ತನ್ನದು ಎಂದು ನೇಪಾಳ ಹೇಳಿಕೊಳ್ಳುತ್ತಿದೆ. ಆಂಗ್ಲೋ-ನೇಪಾಳ ಯುದ್ಧವನ್ನು (1814-1816) ಅಂತ್ಯಗೊಳಿಸಿದ 1816ರ ಸುಗೌಲಿ ಒಪ್ಪಂದವು ಮಹಾಕಾಳಿ ನದಿಯನ್ನು ನೇಪಾಳದ ಪಶ್ಚಿಮ ಗಡಿಯಾಗಿ ಗುರುತಿಸಿದೆ. ಈ ಒಪ್ಪಂದ ಆಧರಿಸಿ ನೇಪಾಳವು ಕಾಲಪಾನಿ ತನ್ನದೆನ್ನುತ್ತಿದೆ. (ಕಾಳಿ ನದಿಯನ್ನು ಶಾರದಾ ನದಿ ಮತ್ತು ಮಹಾಕಾಳಿ ನದಿ ಎಂದೂ ಕರೆಯುತ್ತಾರೆ). ಈ ನದಿಯ ಎಲ್ಲಾ ಉಪನದಿಗಳು ಕಾಲಪಾನಿ ಗ್ರಾಮದಲ್ಲಿ ವಿಲೀನಗೊಳ್ಳುವುದರಿಂದ ನದಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎನ್ನುವುದು ಭಾರತದ ವಾದ. ನೇಪಾಳ ಮಾತ್ರ ಇದು ಲಿಪುಲೇಖ್ ಪಾಸ್​ನಿಂದ ಆರಂಭವಾಗುತ್ತದೆ ಎಂದು ಹೇಳಿದೆ. ಐತಿಹಾಸಿಕ ದಾಖಲೆಯ ಪ್ರಕಾರ, 1865ರ ಸುಮಾರಿಗೆ ಬ್ರಿಟಿಷರು ಕಾಲಪಾನಿ ಬಳಿಯ ಗಡಿಯನ್ನು ನದಿಗೆ ಬದಲಾಗಿ (ಬೇರೆ ಬೇರೆ ಉಪನದಿಗಳಿರುವುದರಿಂದ) ಕಾಲಪಾನಿ ನದಿಯ ಜಲಾನಯನ ಪ್ರದೇಶಕ್ಕೆ ಸ್ಥಳಾಂತರಿಸಿದರು. ಇದರಿಂದಾಗಿ ಈ ಪ್ರದೇಶವನ್ನು ಕಾಲಪಾನಿ ಪ್ರದೇಶ ಎಂದು ಕರೆಯಲಾಗುತ್ತದೆ. ಕಾಳಿ ನದಿಯು ಕಾಲಪಾನಿ ಬುಗ್ಗೆಗಳಿಂದ ಪ್ರಾರಂಭವಾಗುತ್ತದೆ ಎಂಬ ಬ್ರಿಟಿಷ್ ನಿಲುವಿಗೆ ಇದು ಪೂರಕವಾಗಿದೆ. 2015ರಲ್ಲಿ ಭಾರತದ ಪ್ರಧಾನಿ ಚೀನಾಕ್ಕೆ ಭೇಟಿ ನೀಡಿದ್ದಾಗ ಉಭಯ ದೇಶಗಳ ನಾಯಕರು ಲಿಪುಲೇಖ್​ನಲ್ಲಿ ವ್ಯಾಪಾರ ಕೇಂದ್ರ ತೆರೆಯುವ ಬಗ್ಗೆ ಒಪ್ಪಿಕೊಂಡಿದ್ದರು. ಇದಕ್ಕೆ ಆಕ್ಷೇಪಿಸಿದ್ದ ನೇಪಾಳ ಸಂಸತ್ತು, ‘ಇದು ವಿವಾದಿತ ಪ್ರದೇಶದ ಮೇಲೆ ನೇಪಾಳದ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿತ್ತು.
ಇದನ್ನೂ ಓದಿ:ಮನೋಲ್ಲಾಸ: ಆತ್ಮಗುಣಗಳ ಆವಾಹನೆ
ಗುಜ್ರಾಲ್ ತಪ್ಪು ಮಾಡಿದ್ದರೇ?:1997ರಲ್ಲಿ ಅಂದಿನ ಭಾರತ ಪ್ರಧಾನಿ ಐ.ಕೆ. ಗುಜ್ರಾಲ್ ನೇಪಾಳ ಪ್ರವಾಸ ಕೈಗೊಂಡಿದ್ದಾಗಲೂ ಕಾಲಪಾನಿ ವಿವಾದದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ ಗುಜ್ರಾಲ್ ವಿದೇಶಾಂಗ ಸಚಿವರಾಗಿದ್ದರು. ನೆರೆಹೊರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್ ಬೇಡಿಕೆಗಳಿಗೆ ಸಮ್ಮತಿಸಿ ಸಹಕರಿಸಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ನೇಪಾಳ, ಲಿಪುಲೇಖ್ ಮತ್ತು ಕಾಲಪಾನಿ ನೇಪಾಳಕ್ಕೆ ಸೇರಬೇಕು ಮತ್ತು ಭಾರತ ಇದನ್ನು ವಿರೋಧಿಸಬಾರದು ಎಂಬ ಬೇಡಿಕೆ ಮುಂದಿಟ್ಟಿತು. ಅಲ್ಲದೆ, ಮಹಾಕಾಳಿ ನದಿ ಮೂಲ ಇರುವುದು ಕಾಲಪಾನಿಯ ಉತ್ತರ ಭಾಗದಲ್ಲಿರುವ ಲಿಂಪಿಯಾಧುರ ಎಂಬಲ್ಲಿ. ಹೀಗಾಗಿ, ನದಿಯು ಕಾಲಪಾನಿ ಮತ್ತು ಲಿಪುಲೇಖ್​ಗೆ ಪಶ್ಚಿಮಾಭಿಮುಖವಾಗಿ ಹರಿಯುವುದರಿಂದ ಲಿಂಪಿಯಾಧುರದ ಪೂರ್ವ ಭಾಗದಲ್ಲಿರುವ ಎಲ್ಲಾ ಪ್ರದೇಶಗಳು ತನಗೆ ಸೇರುತ್ತದೆ ಎಂಬ ವಾದವನ್ನೂ ಮುಂದಿಟ್ಟಿತು. ಈ ಪ್ರತಿಪಾದನೆಯನ್ನು ಗುಜ್ರಾಲ್ ತಿರಸ್ಕರಿಸಲೂ ಇಲ್ಲ, ಸಮ್ಮತಿಸಲೂ ಇಲ್ಲ. ಬದಲಿಗೆ, ಎರಡೂ ದೇಶಗಳ ಸರ್ವೆಯರ್ ಜನರಲ್​ಗಳನ್ನೊಳಗೊಂಡ ಜಂಟಿ ತಾಂತ್ರಿಕ ಹಂತದ ಗಡಿ ಗುರುತಿಸುವ ಸಮಿತಿಗೆ ಪ್ರಕರಣವನ್ನು ನಿಭಾಯಿಸುವ ಜವಾಬ್ದಾರಿ ನೀಡುವುದಕ್ಕೆ ಒಪ್ಪಿದರು. ನೇಪಾಳದ ಬೇಡಿಕೆಯನ್ನೂ ಸಂಪೂರ್ಣವಾಗಿ ತಿರಸ್ಕರಿಸಿ, ಈ ಮೂರೂ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳು ಎಂದು ಖಂಡತುಂಡವಾಗಿ ಹೇಳುವ ಸಾಹಸವನ್ನು ಗುಜ್ರಾಲ್ ಮಾಡಲಿಲ್ಲ. ಈ ವೈಫಲ್ಯತೆ ಭಾರತವನ್ನು ಈಗಲೂ ಕಾಡುತ್ತಿದೆ ಎಂದು ಅನೇಕರು ವಾದಿಸುತ್ತಾರೆ.
ಹಠಾತ್ ಆಕ್ಷೇಪಣೆ ಬಂದಿದ್ದೇಕೆ?:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಸ್ತೆ ಉದ್ಘಾಟನೆ ಮಾಡಿದಂದೇ ನೇಪಾಳದಲ್ಲಿ ಭಾರೀ ವಿರೋಧ ಕೇಳಿಬಂತು. ಸಂಧಾನದ ಮೂಲಕ ಗಡಿ ವಿವಾದ ಬಗೆಹರಿಸಬೇಕೆಂಬ ಪ್ರಧಾನ ಮಂತ್ರಿಗಳ ಮಟ್ಟದ ಮಾತುಕತೆಯನ್ನು ಭಾರತ ಉಲ್ಲಂಘಿಸಿದೆ ಎಂದು ನೇಪಾಳ ವಿದೇಶಾಂಗ ಇಲಾಖೆ ಹೇಳಿಕೆ ನೀಡಿ, ನೇಪಾಳದ ಭೂಪ್ರದೇಶದೊಳಗೆ ಭಾರತ ತನ್ನ ಚಟುವಟಿಕೆ ನಿಲ್ಲಿಸಬೇಕು ಎಂದು ಕೇಳಿಕೊಂಡಿತು. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿಯನ್ನೂ ನೇಪಾಳ ವಿದೇಶಾಂಗ ಸಚಿವಾಲಯ ಕರೆಸಿ ಮಾತುಕತೆ ನಡೆಸಿತು.
ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + 5 =
Remember me
