ನವದೆಹಲಿ:ಹೊಸ ಟೆಲಿಕಾಂ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಟೆಲಿಕಾಂ ಸೇವೆಗಳ ಮೇಲೆ ತಾತ್ಕಾಲಿಕವಾಗಿ ನಿಯಂತ್ರಣ ತೆಗೆದುಕೊಳ್ಳಲು ಈ ಮಸೂದೆ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಟೆಲಿಕಾಂ ಸೇವೆಗಳ ವ್ಯಾಖ್ಯಾನದಲ್ಲಿ ಒಟಿಟಿ ಕೈಬಿಡಲಾಗಿದ್ದು, ಉಪಗ್ರಹ ತರಂಗಾಂತರ ಹಂಚಿಕೆ ಕುರಿತ ನಿಯಮಗಳನ್ನೂ ಇದು ಒಳಗೊಂಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಅಪರಾಧಕ್ಕೆ ಪ್ರಚೋದನೆ ತಡೆಗಟ್ಟಲು ಕೇಂದ್ರ ಸರ್ಕಾರವು ಯಾವುದೇ ಟೆಲಿಕಾಂ ನೆಟ್​ವರ್ಕ್ ಅನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಸಂದೇಶ ರವಾನೆ, ದೂರವಾಣಿ ಕರೆ ಇನ್ನಿತರ ಚಟುವಟಿಕೆಯನ್ನು ನಿಯಂತ್ರಣ ಮಾಡಬಹುದಾಗಿದೆ. ವಿಪತ್ತು ನಿರ್ವಹಣೆ ಸೇರಿ ಸಾರ್ವಜನಿಕ ತುರ್ತು ಸ್ಥಿತಿ ಎದುರಿಸಲು ಇದರಿಂದ ಸಹಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಪರವಾಗಿ ವಿಶೇಷ ಅಧಿಕಾರ ಹೊಂದಿರುವ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲಾಗುತ್ತದೆ. ದೂರಸಂಪರ್ಕ ಜಾಲ ತಾತ್ಕಾಲಿಕ ನಿಯಂತ್ರಣ ಬಗ್ಗೆ ಅವರಿಗೆ ಅಧಿಕಾರ ನೀಡಲಾಗುತ್ತದೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲ ನಡುವೆಯೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆಯನ್ನು ಮಂಡಿಸಿದರು. ಉಪಗ್ರಹ ಸಂವಹನ ಕಂಪನಿಗಳಿಗೆ ಆಡಳಿತಾತ್ಮಕ ವಿಧಾನದ ಮೂಲಕ ತರಂಗಾಂತರ ಹಂಚಿಕೆ ಮಾಡುವ ಕ್ರಮವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕ್ರಮವು ಜಾಗತಿಕ ಉಪಗ್ರಹ ಸೇವಾ ಕಂಪನಿಗಳ ಬೇಡಿಕೆಗೆ ಅನುಗುಣವಾಗಿದೆ. ವೈರ್ ಅಥವಾ ವೈರ್​ಲೆಸ್ ತಂತ್ರಜ್ಞಾನಗಳ ಮೂಲಕ ಸಂದೇಶಗಳ ರವಾನೆಯನ್ನೂ ದೂರಸಂಪರ್ಕ ಎಂದು ವ್ಯಾಖ್ಯಾನ ಮಾಡಲಾಗಿದೆ. ಈ ವ್ಯಾಖ್ಯಾನವು ಹಳೆಯ ಕಾಯಿದೆಯಂತೆಯೇ ಇದೆ. ಆದರೆ ಇಂಟರ್ನೆಟ್ ಆಧಾರಿತ ಸಂದೇಶ ಕಳುಹಿಸುವಿಕೆ ಮತ್ತು ಕರೆ ಮಾಡುವ ಅಪ್ಲಿಕೇಶನ್​ಗಳಾದ ವಾಟ್ಸ್​ಆಪ್, ಟೆಲಿಗ್ರಾಮ್ ಗೂಗಲ್ ಮೀಟ್ ಇತ್ಯಾದಿ ಆಪ್​ಗಳು ಈ ಕಾಯ್ದೆಯ ಅಡಿ ಬರುತ್ತವೆ. ಓವರ್-ದ-ಟಾಪ್ (ಒಟಿಟಿ) ಅಪ್ಲಿಕೇಶನ್​ಗಳು ಇನ್ನು ಮುಂದೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವ್ಯಾಪ್ತಿಗೆ ಒಳಪಡುವುದಿಲ್ಲ.
ಪ್ರತಿಪಕ್ಷಗಳ ಆಕ್ರೋಶ:ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸಂಸದರ ಅಮಾನತು ವಿಚಾರವಾಗಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಸರ್ವಾಧಿಕಾರ ಜಾರಿಯಲ್ಲಿದೆ. ಪ್ರಜಾಪ್ರಭುತ್ವವನ್ನೇ ಅಮಾನತುಗೊಳಿಸಲಾಗಿದೆ ಎಂದು ಪಕ್ಷ ಆರೋಪ ಮಾಡಿದೆ. ನಿರಂಕುಶ ಸರ್ಕಾರವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಸದ ಬುಟ್ಟಿಗೆ ಎಸೆದಿದೆ. ಮೊದಲು ಆಗಂತುಕರು ಸಂಸತ್ತಿನ ಮೇಲೆ ದಾಳಿ ಮಾಡಿದರು. ನಂತರ ಮೋದಿ ಸರ್ಕಾರ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿತು. ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ನಿರಂಕುಶ ಅಧಿಕಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ. ಎರಡು ಸರಳ ಮತ್ತು ನೈಜ ಬೇಡಿಕೆಗಳನ್ನು ಮಂಡಿಸಿದ್ದೇವೆ. ಸಂಸತ್ತಿನ ಭದ್ರತೆಯ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು. ಅದರ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು. ಪ್ರಧಾನಿಯವರು ಪತ್ರಿಕೆಗೆ ಮತ್ತು ಗೃಹ ಸಚಿವರು ಟಿವಿ ಚಾನೆಲ್​ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆದರೆ ಅವರು ಸಂಸತ್ತಿನಲ್ಲಿ ಶೂನ್ಯ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಸಂಸದರ ಅಮಾನತು ಬಳಿಕ ಮೋದಿ ಸರ್ಕಾರ ಬಾಕಿ ಇರುವ ಪ್ರಮುಖ ವಿಧೇಯಕಗಳಿಗೆ ಒಪ್ಪಿಗೆ ಪಡೆಯಬಹುದು. ಯಾವುದೇ ಭಿನ್ನಾಭಿಪ್ರಾಯ, ಚರ್ಚೆಯಿಲ್ಲದೆ ಇವು ಅಂಗೀಕಾರ ಆಗಬಹುದು ಎಂದು ಖರ್ಗೆ ಹೇಳಿದರು.
ಮಸೂದೆಗೆ ಒಪ್ಪಿಗೆ:ಭಾರತೀಯ ಅಂಚೆಯನ್ನು ನಾಗರಿಕ ಕೇಂದ್ರಿತ ಸೇವಾ ಜಾಲವಾಗಿ ವಿಕಸನಗೊಳಿಸಲು ಅನುಕೂಲವಾಗುವಂತೆ ರೂಪಿಸಲಾಗಿರುವ ಅಂಚೆ ಕಚೇರಿ ಮಸೂದೆಯನ್ನು ಸಂಸತ್ತು ಸೋಮವಾರ ಅಂಗೀಕರಿಸಿದೆ.
ನಾಲ್ಕು ವರ್ಷಗಳಲ್ಲಿ 5,095 ಕೋಟಿ ರೂ. ಆಸ್ತಿ ವಶಕ್ಕೆ:ಆದಾಯ ತೆರಿಗೆ ಇಲಾಖೆಯು ಕಳೆದ ನಾಲ್ಕು ವರ್ಷಗಳಲ್ಲಿ 2,980 ಕಡೆ ಶೋಧ ಕಾರ್ಯ ನಡೆಸಿ, 5,095.45 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸಂಸತ್ತಿಗೆ ಸರ್ಕಾರ ಮಾಹಿತಿ ನೀಡಲಾಗಿದೆ. 2022-23ರ ಅವಧಿಯಲ್ಲಿ 741 ಕಡೆ ದಾಳಿ ನಡೆಸಲಾಗಿದೆ. 1765.56 ಕೋಟಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. 97 ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
3 ವರ್ಷ ಜೈಲು, ರೂ. 2 ಕೋಟಿ ದಂಡ:ಕಾನೂನುಬಾಹಿರವಾಗಿ ದೂರವಾಣಿ ಸಂವಹನ ತಡೆಹಿಡಿಯುವುದು, ಅನಧಿಕೃತ ಡೇಟಾ ವರ್ಗಾವಣೆ, ದೂರಸಂಪರ್ಕ ನೆಟ್​ವರ್ಕ್​ಗೆ ಅಕ್ರಮ ಪ್ರವೇಶ, ಪೋನ್ ಕದ್ದಾಲಿಕೆ ಇನ್ನಿತರ ಅಕ್ರಮಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 2 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಹೊಸ ದೂರಸಂಪರ್ಕ ಮಸೂದೆಯಲ್ಲಿ ಈ ಅಂಶ ಉಲ್ಲೇಖವಾಗಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲು ದೂರಸಂಪರ್ಕ ಉಪಕರಣಗಳನ್ನು ಅಕ್ರಮವಾಗಿ ಬಳಸಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವ್ಯಕ್ತಿಯ ದೂರಸಂಪರ್ಕ ಸೇವೆಯನ್ನು ಅಮಾನತುಗೊಳಿಸುವ ಅಧಿಕಾರವೂ ಸರ್ಕಾರದ ಬಳಿ ಇರಲಿದೆ.
2,500 ಸಾಲದ ಆಪ್ ತೆರವು:ಏಪ್ರಿಲ್ 2021 ಮತ್ತು ಜುಲೈ 2022ರ ನಡುವೆ ಗೂಗಲ್ ಪ್ಲೇಸ್ಟೋರ್​ನಿಂದ 2,500ಕ್ಕೂ ಹೆಚ್ಚು ಸಾಲ ನೀಡುವ ಅಕ್ರಮ ಅಪ್ಲಿಕೇಶನ್​ಗಳನ್ನು ತೆಗೆದುಹಾಕಲಾಗಿದೆ ಎಂದು ಸರ್ಕಾರ ತಿಳಿಸಿದೆ. ವಂಚನೆಯ ಸಾಲದ ಅಪ್ಲಿಕೇಶನ್​ಗಳನ್ನು ನಿಯಂತ್ರಿಸಲು ಸರ್ಕಾರವು ಆರ್​ಬಿಐ, ಇತರ ನಿಯಂತ್ರಕರು, ಮಧ್ಯಸ್ಥಗಾರರೊಂದಿಗೆ ನಿರಂತರವಾಗಿ ಯತ್ನಿಸುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − six =
Remember me
