ಅಪ್ಘಾನಿಸ್ತಾನ ತಾಲಿಬಾನ್ ಕೈವಶವಾಗುವುದರೊಂದಿಗೆ 1996-2001ರ ಕರಾಳ ದಿನಗಳು ಮತ್ತೆ ಮರುಕಳಿಸುವ ಆತಂಕ ತಲೆದೋರಿದೆ. ಅದರಲ್ಲೂ, ಚೀನಾದ ಕಿರಿಕಿರಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುತ್ತಿರುವ ಭಾರತ ಪ್ರಸಕ್ತ ಹೊಸ ಆತಂಕ ಎದುರಿಸುವಂತಾಗಿದೆ. ಚೀನಾ ಮತ್ತು ಪಾಕಿಸ್ತಾನ ಎರಡೂ ತಾಲಿಬಾನ್ ಮೂಲಕ ಅಪ್ಘಾನ್ ನೆಲವನ್ನು ಭಾರತವಿರೋಧಿ ಚಟುವಟಿಕೆಗಳಿಗೆ ಬಳಸಿದರೆ, ಭಯೋತ್ಪಾದಕ ಸಂಘಟನೆಗಳು ಬಲಗೊಂಡರೆ ಸುರಕ್ಷೆ ನಿಟ್ಟಿನಲ್ಲಿ ಭಾರತ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಹೀಗಾಗಿಯೇ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ತಾಲಿಬಾನ್ ಆಡಳಿತದಿಂದ ಮುಂದೆ ಲಷ್ಕರ್-ಇ-ತೊಯ್ಬಾ, ಜೈಶ್-ಎ-ಮೊಹಮ್ಮದ್​ನಂಥ ಉಗ್ರಗಾಮಿ ಸಂಘಟನೆಗಳಿಗೆ ನಿಸ್ಸಂಶಯವಾಗಿ ನೆರವಾಗಲಿದೆ. ಅಲ್ಲದೆ, ಈ ವರ್ಷದ ಏಪ್ರಿಲ್-ಜೂನ್​ನಲ್ಲಿ ಲಷ್ಕರ್-ಇ-ತೋಯ್ಬಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ಜಾಂಗ್ವಿ ಮುಂತಾದ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಹತ್ತುಸಾವಿರ ಭಯೋತ್ಪಾಕರು ಅಫ್ಘಾನಿಸ್ತಾನವನ್ನು ಪ್ರವೇಶಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಘಟನೆ ‘ಐಎಸ್​ಐ’ನ ಅಡಿಯಲ್ಲಿ ಕೆಲಸ ಮಾಡುವ ಇವರ ಉದ್ದೇಶ ಅಫ್ಘಾನಿಸ್ತಾನದಲ್ಲಿ ಭಾರತೀಯರ ಜೀವಕ್ಕೆ ಅಪಾಯವೊಡ್ಡುವುದು ಮತ್ತು ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯೊದಗಿಸುವುದು. ತಾಲಿಬಾನ್ ಆಡಳಿತದ ಪರಿಣಾಮ ಶಿಕ್ಷಣ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಹಾಗೂ ಮಹಿಳಾ ಸ್ವಾತಂತ್ರ್ಯಗಳಿಗೆ ಸಂಬಂಧಿಸಿದಂತೆ ಕಳೆದೆರಡು ದಶಕಗಳಲ್ಲಿ ಅಫ್ಘನ್ನರು ಗಳಿಸಿದ್ದೆಲ್ಲವೂ ವ್ಯರ್ಥವಾಗಲಿದೆ.
ಪರಿಸ್ಥಿತಿ ಸುಧಾರಿಸಿತ್ತು:ಅಮೆರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ನಂತರ ಹಲವು ಬದಲಾವಣೆಗಳಾಗಿದ್ದವು. ಅಲ್ಲಿ ಚುನಾವಣೆ ನಡೆದು ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಫ್ಘಾನ್ ಜನರ ಜೀವನ ಉನ್ನತ ಸ್ತರಕ್ಕೇರಲಾರಂಭಿಸಿತ್ತು. ತಾಲಿಬಾನಿಗಳ ಕಟ್ಟರ್ ಇಸ್ಲಾಮೀಯತೆಯ ಕಪಿಮುಷ್ಟಿಯಿಂದ ಹೊರಬಂದಿದ್ದ ಜನರು ಅಭಿವೃದ್ಧಿಯತ್ತ ಮುಖ ಮಾಡಿದ್ದರು. ಹೆಣ್ಣುಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದರು. ಅವರ ಬದುಕು ಮುಕ್ತವಾದ ವಾತಾವರಣದಲ್ಲಿ ಚೆನ್ನಾಗಿಯೇ ನಡೆದಿತ್ತು. ಆದರೆ, ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇನೆಯನ್ನು ಮರಳಿ ಕರೆಸಿಕೊಳ್ಳುವ ಮಾತುಗಳನ್ನಾಡುತ್ತಿದ್ದಂತೆ ಅಫ್ಘಾನಿಸ್ತಾನಿಯರ ಕನಸುಗಳು ಭಗ್ನವಾದವು. ಈ ವರ್ಷದ ಜನವರಿಯಲ್ಲಿ ಜೋ ಬೈಡೆನ್ ಅಧ್ಯಕ್ಷರಾದ ಬಳಿಕ ಅಫ್ಘಾನ್​ನಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ವೇಗ ನೀಡಿದರು. ಆದರೆ, ಈಗ ತಾಲಿಬಾನಿಯರ ಕರಾಳ ಆಡಳಿತದ ಛಾಯೆ ಮತ್ತೊಮ್ಮೆ ವ್ಯಾಪಿಸಿಕೊಂಡಿದೆ.
ಪುನರ್ನಿರ್ಮಾಣದಲ್ಲಿ ಭಾರತದ ಕೊಡುಗೆ:ಅಫ್ಘಾನಿಸ್ತಾನದ ಪುನರ್ನಿರ್ವಣದಲ್ಲಿ ಭಾರತದ ಕೊಡುಗೆ ಮಹತ್ವದ್ದು. 2003ರಿಂದೀಚೆಗೆ ಅಫ್ಘಾನಿಸ್ತಾನದ ಜತೆ ಭಾರತದ ಸಂಬಂಧಗಳು ದಿನದಿನಕ್ಕೂ ಉತ್ತಮಗೊಳ್ಳುತ್ತ ಸಾಗಿದ್ದವು. ಎರಡೂವರೆ ದಶಕಗಳ ಅಂತಃಕಲಹ, ಅರಾಜಕತೆ ಹಾಗೂ ಯುದ್ಧಗಳಿಂದ ನಲುಗಿಹೋಗಿದ್ದ ಅಫ್ಘಾನಿಸ್ತಾನವನ್ನು ಪುನರ್ನಿಮಿಸಲು ಹಮೀದ್ ಕರ್ಜಾಯ್ ಮತ್ತು ಅಶ್ರಫ್ ಘನಿ ಸರ್ಕಾರಗಳ ಬೆನ್ನಿಗೆ ಭಾರತ ನಿಂತಿತ್ತು. ಇದುವರೆಗೆ ಅಫ್ಘಾನಿಸ್ತಾನದ ಪುನರ್ನಿಮಾಣಕ್ಕಾಗಿ ಭಾರತ ಮೂರು ಬಿಲಿಯನ್ ಡಾಲರ್​ಗಳ ಅಗಾಧ ಮೊತ್ತವನ್ನು ವ್ಯಯಿಸಿದೆ. ಕಾಬೂಲ್​ನಲ್ಲಿ ಭವ್ಯ ಪಾರ್ಲಿಮೆಂಟ್ ಭವನ, ದೇಶಾದ್ಯಂತ ಹಲವಾರು ಸರ್ಕಾರಿ ಕಚೇರಿಕಟ್ಟಡಗಳು, ಅಣೆಕಟ್ಟೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಹಾಗೂ ರಸ್ತೆಗಳನ್ನು ಭಾರತ ನಿರ್ವಿುಸಿದೆ. ಅಣೆಕಟ್ಟಿನ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ಗೌರವದಿಂದ ಸ್ವಾಗತಿಸಿದ್ದರು. ಕೋವಿಡ್ ಲಸಿಕೆಗಳನ್ನು ಭಾರತ ಮೊದಲು ಕಳುಹಿಸಿದ್ದು ಅಫ್ಘಾನಿಸ್ತಾನಕ್ಕೇ. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಿಯಾಗಿ ನಿಂತ ಭಾರತ ಕಟ್ಟಿಕೊಟ್ಟ ಗ್ರಂಥಾಲಯಗಳ ಕುರಿತಂತೆ ಈಗಲೂ ಅಲ್ಲಿಯ ಜನ ಗೌರವದ ಮಾತುಗಳನ್ನಾಡುತ್ತಾರೆ.
ಹೀಗಿತ್ತು ತಾಲಿಬಾನ್ ಆಡಳಿತ:1996ರಲ್ಲಿ ಅಫ್ಘಾನ್ ಆಡಳಿತವನ್ನು ತಾಲಿಬಾನಿಗಳು ಕೈಗೆತ್ತಿಕೊಂಡಾಗ 2001ರವರೆಗೆ ಇಡೀ ದೇಶ ದಾರುಣ ಸ್ಥಿತಿ ಅನುಭವಿಸಿತು. ಕಟ್ಟಾ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತಂದ ತಾಲಿಬಾನ್ ಸರ್ಕಾರ ಮಹಿಳೆಯರು, ಅಲ್ಪಸಂಖ್ಯಾತರ ಹಲವು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿತು. ಆಧುನಿಕ ಶಿಕ್ಷಣಕ್ರಮವನ್ನು ಇಸ್ಲಾಂ-ವಿರೋಧಿ ಎಂದು ತೀರ್ವನಿಸಿ, ಶಾಲೆ-ಕಾಲೇಜುಗಳನ್ನು ಮುಚ್ಚಿತು ಅಥವಾ ಹಾಳುಗೆಡವಿ ವಿದ್ಯಾಭ್ಯಾಸವನ್ನೇ ಸರಿಸುಮಾರು ನಿಲುಗಡೆಗೆ ತಂದಿತು.
ಪಾಕ್ ಕುಮ್ಮಕ್ಕು:ಪಾಕಿಸ್ತಾನ ಮತ್ತು ತಾಲಿಬಾನಿಗಳ ನಂಟು ಹೊಸತೇನು ಅಲ್ಲ. ಪಾಕಿಸ್ತಾನದ 10 ಸಾವಿರ ಸೈನಿಕರು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಗಡಿಗೆ ಹೊಂದಿಕೊಂಡಂತೆ ತಾಲಿಬಾನಿಗಳು ಅಡಗಿರುವ ಸ್ಥಳದಲ್ಲಿ ಅಫ್ಘಾನಿಸ್ತಾನ ವಾಯುದಾಳಿ ನಡೆಸಿದ್ದೇ ಆದರೆ ಅಫ್ಘನ್ ಸೇನೆಯ ವಿರುದ್ಧ ಪಾಕಿಸ್ತಾನ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಪಾಕ್​ನ ಹಕ್ಕಾನಿ ಗುಂಪು ತಾಲಿಬಾನಿಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ.
ಪಾಕಿಸ್ತಾನ ಬಯಸುತ್ತಿರುವುದೇನು?:ಅಫ್ಘನ್​ನಲ್ಲಿ 1990ರ ದಶಕದಲ್ಲಿ ತಾಲಿಬಾನ್ ಆಡಳಿತವನ್ನು ಅಂಗೀಕರಿಸಿದ ಮೂರು ರಾಷ್ಟ್ರಗಳ ಪೈಕಿ ಪಾಕಿಸ್ತಾನ ಒಂದು. ಪಾಕ್​ನ ಐಎಸ್​ಐ ನೆರವಿನೊಂದಿಗೆ ತಾಲಿಬಾನ್ ಅಫ್ಘನ್​ನ ಬಹುಭಾಗವನ್ನು ವಶಪಡಿಸಿಕೊಂಡಿತ್ತು. 9/11 ಉಗ್ರ ದಾಳಿ ನಂತರದಲ್ಲಿ ಪಾಕ್ ಸೇನಾ ಸರ್ವಾಧಿಕಾರಿ ಪರ್ವೆಜ್ ಮುಷರಫ್ ಅಮೆರಿಕ ಅಧ್ಯಕ್ಷ ಬುಷ್ ಒತ್ತಡಕ್ಕೆ ಮಣಿದು ತಾಲಿಬಾನ್ ಜತೆಗಿನ ಸಂಬಂಧ ಕಡಿದುಕೊಂಡು ಅಮೆರಿಕದ ಜತೆಗೆ ಸೇರಿಕೊಂಡಿದ್ದರು. ಆದರೆ, ಪಾಕಿಸ್ತಾನ ಡಬಲ್ ಗೇಮ್ ಆಡಿತ್ತು. ತಾಲಿಬಾನಿಗಳಿಗೆ ತನ್ನದೇ ನೆಲದಲ್ಲಿ ಆಶ್ರಯ ನೀಡಿತ್ತು. ಈಗ ತಾಲಿಬಾನಿಗಳು ಮತ್ತೆ ಪ್ರಾಬಲ್ಯ ಪಡೆದುಕೊಂಡಿದ್ದು, ಭಾರತದ ಪ್ರಭಾವ ಅಫ್ಘನ್ ಮೇಲೆ ಇಲ್ಲದಂತೆ ನೋಡಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.
ದೂತಾವಾಸ ಕಚೇರಿಯಿಂದ ಹೊಗೆ:ಕಾಬೂಲ್​ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯ ಮಹಡಿ ಮೇಲಿಂದ ಹೊಗೆ ಬರುತ್ತಿದ್ದುದು ಗಮನಕ್ಕೆ ಬಂದಿದೆ. ಮಹತ್ವದ ದಾಖಲೆಗಳನ್ನು ನಾಶಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಅವುಗಳನ್ನು ಸುಟ್ಟಿದ್ದರಿಂದ ಹೊಗೆ ಹೊಮ್ಮಿರಬಹುದು ಎನ್ನಲಾಗಿದೆ. ಈ ನಡುವೆ, ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಹಲವು ಹೆಲಿಕಾಪ್ಟರ್​ಗಳು ಇಳಿದಿವೆ. ಅನೇಕ ವಾಹನಗಳು ಆವರಣದಿಂದ ಹೊರ ಹೋಗಿವೆ.
ಅಧ್ಯಕ್ಷ ಘನಿ ಪಲಾಯನ:ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ ಪ್ರವೇಶದೊಂದಿಗೆ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್​ಗೆ ಸರ್ಕಾರ ಭಾನುವಾರ ಶರಣಾಗಿರುವ ಸ್ಪಷ್ಟ ಲಕ್ಷಣ ಕಂಡು ಬಂದಿದ್ದು ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ರಾಜೀನಾಮೆ ನೀಡಲಿದ್ದಾರೆ ಎಂದ ವದಂತಿ ಹರಡಿತ್ತು. ತಾಲಿಬಾನ್ ಭಯೋತ್ಪಾದಕರು ಕಾಬೂಲ್ ಪ್ರವೇಶಿಸಿದ್ದು ಅಧ್ಯಕ್ಷ ಘನಿ ನೆರೆಯ ತಾಜಿಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಘನ್​ನ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘನಿ ಎಲ್ಲಿದ್ದಾರೆನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಾಲಿಬಾನ್ ಹೇಳಿದೆ.
ಮುಲ್ಲಾ ಬರಾದಾರ್ ಹೊಸ ಅಧ್ಯಕ್ಷ?:ಅಫ್ಘನ್ ಸರ್ಕಾರ ಮತ್ತು ತಾಲಿಬಾನ್ ನಡುವಿನ ಮಾತುಕತೆ ನಂತರ ಹೊಸ ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಲಾಗಿದೆ. ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೊಸ ಮಧ್ಯಂತರ ಸರ್ಕಾರದ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ಸ್ವದೇಶಕ್ಕೆ 129 ಭಾರತೀಯರು:129 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾದ ವಿಮಾನ ಕಾಬೂಲ್​ನಿಂದ ಪ್ರಯಾಣ ಆರಂಭಿಸಿ ಭಾನುವಾರ ರಾತ್ರಿ ದೆಹಲಿ ತಲುಪಿತು. ಏರ್ ಇಂಡಿಯಾ ವಿಮಾನ ವಾರಕ್ಕೆ ಮೂರು ಬಾರಿ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸುತ್ತದೆ. ಆದರೆ, ಭಯೋತ್ಪಾದಕರು ದೇಶದ ಮೇಲೆ ಹಿಡಿತ ಸಾಧಿಸಿರುವುದರಿಂದ ಮುಂದೆ ಸಂಚಾರ ಸಾಧ್ಯವಾದೀತೇ ಎನ್ನುವ ಬಗ್ಗೆ ಅನುಮಾನ ಮೂಡಿದೆ.
ಲ್ಯಾಂಡಿಂಗ್ ವಿಳಂಬ:ಇದಕ್ಕೂ ಮುನ್ನ, ಭಾನುವಾರ ಬೆಳಗ್ಗೆ ದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಕಾಬೂಲ್​ನಲ್ಲಿ ಏರ್ ಟ್ರಾಫಿಕ್ ನಿಯಂತ್ರಣ (ಎಟಿಸಿ) ಅಲಭ್ಯವಾದ್ದರಿಂದ ಇಳಿಯುವುದು ವಿಳಂಬವಾಯಿತು. ಪೈಲಟ್ ವಿಮಾನವನ್ನು ಬಹಳ ಹೊತ್ತು ಆಗಸದಲ್ಲೇ ಸುತ್ತಾಡಿಸುವುದು ಅನಿವಾರ್ಯವಾಯಿತು.’

ಹೈಬತುಲ್ಲಾ ಅಖುಂದ್​ಜದಾ:ಈತ ತಾಲಿಬಾನ್​ನ ಸುಪ್ರೀಂ ಕಮಾಂಡರ್. 2016ರಲ್ಲಿ ಮುಲ್ಲಾ ಮನ್ಸೂರ್ ಅಖ್ತರ್​ನನ್ನು ಅಮೆರಿಕ ಪಡೆಗಳು ಡ್ರೋನ್ ದಾಳಿಯಲ್ಲಿ ಸಾಯಿಸಿದ ನಂತರ ಆತನ ಉತ್ತರಾಧಿಕಾರಿಯಾಗಿ ಅಖುಂದ್​ಜದಾ ನೇಮಕವಾಗಿದ್ದ.
ಅಬ್ದುಲ್ ಘನಿ ಬರಾದಾರ್:ತಾಲಿಬಾನ್ ಚಳವಳಿ ಹುಟ್ಟಿದ ಕಂದಹಾರ್​ನಲ್ಲಿ ಬೆಳೆದ ಮುಲ್ಲಾ ಬರಾದಾರ್, ಮುಲ್ಲಾ ಓಮರ್ ಜೊತೆ ಸಂಘಟನೆಯ ಸಹ-ಸಂಸ್ಥಾಪಕ. 1970ರ ದಶಕದ ಕೊನೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಒಕ್ಕೂಟದ ಆಕ್ರಮಣ ಬರಾದಾರ್ ಜೀವನದಲ್ಲಿ ಮಹತ್ವದ ತಿರುವು. ? ಸಿರಾಜುದ್ದಿನ್ ಹಕ್ಕಾನಿ: ಸೋವಿಯತ್-ವಿರೋಧಿ ಜಿಹಾದ್ ಹೋರಾಟಗಾರ ಜಲಾಲುದ್ದಿನ್ ಹಕ್ಕಾನಿಯ ಮಗನೇ ಸಿರಾಜುದ್ದಿನ್ ಹಕ್ಕಾನಿ. ಈತ ತಾಲಿಬಾನ್​ನ ಉಪ ಮುಖ್ಯಸ್ಥ ಮಾತ್ರವಲ್ಲದೆ ಅಫ್ಘನ್​ನಲ್ಲಿ ವಿದೇಶಿ ಪಡೆಗಳ ವಿರುದ್ಧ ಸೆಣಸಿದ ಸಂಘ ಟನೆಗಳಲ್ಲಿ ಒಂದಾದ ಹಕ್ಕಾನಿ ನೆಟ್​ವರ್ಕ್​ನ ಮುಖ್ಯಸ್ಥನೂ ಆಗಿದ್ದಾನೆ.
ಶಾಂತಿಯುತ ಹಸ್ತಾಂತರ:ಮಧ್ಯಂತರ ಸರ್ಕಾರಕ್ಕೆ ‘ಅಧಿಕಾರ ಹಸ್ತಾಂತರ ಪ್ರಕ್ರಿಯೆ ಶಾಂತಿಯುತವಾಗಿರುತ್ತದೆ’ ಎಂದು ಅಫ್ಘನ್ ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮೀರ್​ರೆಕ್ವಲಾ ಭಾನುವಾರ ಸ್ಪಷ್ಟಪಡಿಸಿ ದ್ದಾರೆ. ‘ನಾಗರಿಕರು ಹೆದರಬೇಕಿಲ್ಲ. ಬಂಡುಕೋರರು ರಾಜಧಾನಿ ಮೇಲೆ ಆಕ್ರಮಣ ಮಾಡುವುದಿಲ್ಲ’ ಎಂದು ಧ್ವನಿಮುದ್ರಿತ ಹೇಳಿಕೆ ಯೊಂದರಲ್ಲಿ ಅವರು ಹೇಳಿದ್ದಾರೆ. ಕಾಬೂಲ್​ನಲ್ಲಿರುವ ದೂತಾವಾಸ ಕಚೇರಿಯ ಸಿಬ್ಬಂದಿಯನ್ನು ತೆರವುಗೊಳಿಸುವ ಯೋಜನೆಯಿಲ್ಲ ಎಂದು ರಷ್ಯಾ ಹೇಳಿದೆ.
ತಾಲಿಬಾನ್ ಮಿಂಚಿನ ವೇಗದಲ್ಲಿ ಕಾಬೂಲ್​ವರೆಗೆ ಆಕ್ರಮಿಸಿಕೊಂಡಿರುವುದು ಆಶ್ಚರ್ಯಕರವಾದದ್ದೇನೂ ಇಲ್ಲ. ಅಮೆರಿಕ ಅಫ್ಘಾನ್​ನಲ್ಲಿ 20 ವರ್ಷ ತನ್ನ ಸೇನೆಯನ್ನು ನಿಯೋಜಿಸಿದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ವಿಫಲವಾಗಿದೆ. ಇದ್ದಕ್ಕಿದ್ದಂತೆ ಸೇನೆಯನ್ನು ಹಿಂಪಡೆದು, ಅಫ್ಘಾನಿಸ್ತಾನವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಜಾಗತಿಕ ವಲಯ ಮೂಕಪ್ರೇಕ್ಷಕನಾಗುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂಬುದು ವಿಷಾದನೀಯ. ತಾಲಿಬಾನ್​ಗೆ ಐಎಸ್​ಐ, ಪಾಕ್ ಸೇನೆಯ ಬೆಂಬಲ ಇದೆ. ಭಾರತದ ದೃಷ್ಟಿಯಿಂದ ನೋಡುವುದಾದರೆ, ಸದ್ಯಕ್ಕೆ ನೇರವಾಗಿ ಯಾವುದೇ ತೊಂದರೆ ಇಲ್ಲ. ಭಾರತವು ಅಫ್ಘಾನಿಸ್ತಾನದಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿ ಶಾಲೆ, ಆಸ್ಪತ್ರೆ, ಜಲಾಶಯ ನಿರ್ವಿುಸಿದೆ, ಬಸ್, ಹೆಲಿಕಾಪ್ಟರ್​ಗಳನ್ನೂ ನೀಡಿದೆ. ಈ ಬಗ್ಗೆ ಅಲ್ಲಿನ ಜನರಲ್ಲಿ ಭಾರತದ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಇದರಿಂದಾಗಿ, ತಾಲಿಬಾನಿಗಳೂ ಈ ನಿರ್ವಣಗಳನ್ನು ಹಾಳುಮಾಡುವ ಸಾಧ್ಯತೆ ಇಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಂಡು, ಅಫ್ಘಾನಿಸ್ತಾನದಲ್ಲಿರುವ ಇತರ ಭಯೋತ್ಪಾದಕ ಸಂಘಟನೆಗಳ ಮೂಲಕ ಕಾಶ್ಮೀರದಲ್ಲಿ ಕಿರಿಕಿರಿ ಮಾಡಲು ಪಾಕಿಸ್ತಾನ ಮುಂದಾಗಬಹುದು. ಆದರೆ ಕಾಶ್ಮೀರ ಇದೀಗ ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿದ್ದು, ತಕ್ಕ ಉತ್ತರ ನೀಡಲು ಸಮರ್ಥವಾಗಿರುವುದರಿಂದ ನೇರ ಅಪಾಯವಿಲ್ಲ. ತಾಲಿಬಾನ್​ನ ಮುಂದಿನ ನಡೆ ಆಧರಿಸಿ ಭಾರತ ನಿರ್ಧಾರ ಕೈಗೊಳ್ಳಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
