| ರಾಘವ ಶರ್ಮ ನಿಡ್ಲೆ, ನವದೆಹಲಿಜಿ-20 ದೇಶಗಳಲ್ಲಿ ಯುದ್ಧ ವಿರೋಧಿ ನೀತಿಗಳನ್ನು ಪ್ರಸ್ತಾಪಿಸುವ ವಿಚಾರದ ಬಗ್ಗೆ ಒಮ್ಮತ ಮೂಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿಯೇ, ಯೂಕ್ರೇನ್​ನಲ್ಲಿ ಶಾಂತಿ ನಿರ್ವಣದ ಅತ್ಯಗತ್ಯತೆ ಕುರಿತ ನಿರ್ಣಯ ಹೊರಬಿದ್ದಿದೆ. ಜಿ-20 ಎನ್ನುವುದು ಭೌಗೋಳಿಕ ರಾಜಕೀಯ, ಭದ್ರತೆ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ವೇದಿಕೆಯಲ್ಲ. ಇದು ಆರ್ಥಿಕ ಸುಧಾರಣೆಗೆ ಸಂಬಂಧಿಸಿದ ವೇದಿಕೆ. ಹೀಗಾಗಿ, ರಾಜಕೀಯ, ಸಂಘರ್ಷದ ಕುರಿತ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುವುದು ಬೇಡ ಎಂದು ಚೀನಾ ಮತ್ತು ರಷ್ಯಾ ಎರಡೂ ದೇಶಗಳು ತಮ್ಮ ಅಸಮ್ಮತಿ ಹೊರಹಾಕಿದ್ದವು.
ರಷ್ಯಾ ಪ್ರತಿನಿಧಿಗಳು ಸೇರಿದಂತೆ ಸದಸ್ಯ ರಾಷ್ಟ್ರಗಳ ಸಮ್ಮತಿ ಪಡೆಯುವಲ್ಲಿ ಭಾರತ ಹೇಗೆ ಯಶಸ್ವಿಯಾಯಿತು ಎಂಬ ಬಗ್ಗೆ ಸದ್ಯ ಮಾಹಿತಿ ಇಲ್ಲದಿದ್ದರೂ, ಜಿ-20 ಶೃಂಗಸಭೆಯ ಮೊದಲ ದಿನವೇ ನವದೆಹಲಿ ಘೊಷಣೆ ಬಹಿರಂಗಗೊಳ್ಳುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸಾಮಾನ್ಯವಾಗಿ, ಶೃಂಗಸಭೆಯ ಕೊನೆ ದಿನದಂದು ಘೊಷಣೆಯನ್ನು ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಆದರೆ, ಮೋದಿ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಮೊದಲನೇ ದಿನದ ಸಭೆ ಮುಗಿಯುವ ಮುನ್ನವೇ ಘೊಷಣೆಯನ್ನು ಬಿಡುಗಡೆಗೊಳಿಸಿರುವುದು ಸಹಜವಾಗಿಯೇ ಅಚ್ಚರಿ ತಂದಿದೆ. ಕಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆಯ ನಿರ್ಣಯದಲ್ಲಿ ಬಹುಪಾಲು ದೇಶಗಳು ಯೂಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿವೆ ಎಂದು ದಾಖಲಿಸಲಾಗಿತ್ತು. ಆದರೆ, ಈ ಸಲದ ನವದೆಹಲಿ ಘೊಷಣೆ ರಷ್ಯಾ ಬಗ್ಗೆ ಮೃದು ಧೋರಣೆ ತಾಳಿದೆ. ಸದ್ಯದ ಪರಿಸ್ಥಿತಿ ಬಗ್ಗೆ ಭಿನ್ನ ಅಭಿಪ್ರಾಯ ಹಾಗೂ ವಿಶ್ಲೇಷಣೆಗಳಿವೆ ಎಂದು ಘೊಷಣೆಯಲ್ಲಿ ದಾಖಲಾಗಿದೆ ಎಂದು ವಿದೇಶಿ ಪತ್ರಕರ್ತೆ ಒಬ್ಬರು ವಿಜಯವಾಣಿ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಜಿ-20ಯಲ್ಲಿ ಜಾಗತಿಕ ಭೌಗೋಳಿಕ ರಾಜಕೀಯ, ಭದ್ರತೆ ವಿಷಯಗಳು ಚರ್ಚೆಯಾಗದಿದ್ದರೂ, ಸಂಘರ್ಷದ ವಾತಾವರಣ ಜಾಗತಿಕ ಆರ್ಥಿಕತೆ ಮೇಲೆ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುತ್ತಿರುವುದು ನಿಜ ಎಂದೂ ನವದೆಹಲಿ ಘೊಷಣೆಯಲ್ಲಿ ರಷ್ಯಾ ನಡೆಯನ್ನು ಪರೋಕ್ಷವಾಗಿ ಟೀಕಿಸಲಾಗಿದೆ.
ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ, ಶಾಂತಿ, ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎತ್ತಿಹಿಡಿಯಲು ಎಲ್ಲಾ ದೇಶಗಳಿಗೆ ನಾವು ಮನವಿ ಮಾಡುತ್ತೇವೆ. ಸಂಘರ್ಷಗಳ ಶಾಂತಿಯುತ ಪರಿಹಾರಕ್ಕೆ ರಾಜತಾಂತ್ರಿಕ ಮಾತುಕತೆ, ಸಂವಾದಗಳು ಅತಿಮುಖ್ಯ. ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ನಾವು ಒಂದಾಗುತ್ತೇವೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಘೊಷವಾಕ್ಯ ಮನದಲ್ಲಿಟ್ಟುಕೊಂಡು ರಾಷ್ಟ್ರಗಳ ನಡುವೆ ಶಾಂತಿಯುತ, ಸೌಹಾರ್ದ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಪೋ›ತ್ಸಾಹಿಸಲು ಕರೆ ನೀಡುತ್ತೇವೆ ಎಂದು ಘೊಷಣೆಯಲ್ಲಿ ದಾಖಲಿಸಲಾಗಿದೆ.
ಯಾವುದೇ ಅಡಿಟಿಪ್ಪಣಿ ಅಥವಾ ವಿರೋಧವಿಲ್ಲದ ಜಿ-20 ಘೊಷಣೆ ಮೂಲಕ ನಾವು ಎಲ್ಲರನ್ನೂ ವೇದಿಕೆಯಲ್ಲಿ ಒಗ್ಗೂಡಿಸಿದ್ದೇವೆ ಮತ್ತು ಈ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಹಿರಿಯ ಮಾಜಿ ಅಧಿಕಾರಿ, ಜಿ-20 ಶೆರ್ಪಾ ಅಮಿತಾಭ್ ಕಾಂತ್ ಹೇಳಿದ್ದಾರೆ. ನವದೆಹಲಿ ಘೊಷಣೆಯು ಒಟ್ಟು 83 ಪ್ಯಾರಾಗಳನ್ನು ಹೊಂದಿದ್ದು, ಎಲ್ಲಾ 83 ನಿರ್ಣಯಗಳಿಗೂ ಸಂಪೂರ್ಣ ಸಹಮತ ಸಿಕ್ಕಿದೆ ಎಂದವರು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಜಿ20 ಔತಣಕೂಟದ ಆಮಂತ್ರಣ ಪತ್ರಿಕೆಗಳಲ್ಲಿ, ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ ಎಂದು ಮುದ್ರಿಸಿದಾಗಿನಿಂದಲೂ ದೇಶದ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಲೆದೋರಿದೆ. ಜಿ20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಮೇಜಿನ ಮೇಲಿನ ನಾಮಫಲಕದಲ್ಲಿ ಭಾರತ ಎಂದು ಬರೆಯಲಾಗಿತ್ತು. ಅಲ್ಲದೆ, ವಿದೇಶಿ ಪ್ರತಿನಿಧಿಗಳಿಗೆ ನೀಡಿರುವ ಜಿ20 ಬುಕ್​ಲೆಟ್​ನಲ್ಲಿ ‘ಭಾರತ, ಪ್ರಜಾಪ್ರಭುತ್ವದ ಮಾತೆ’ ಎಂದು ಮುದ್ರಿಸಲಾಗಿತ್ತು. ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ದೇಶದ ಅಧಿಕೃತ ಹೆಸರು ಭಾರತ ಎಂದು ಕಿರುಪುಸ್ತಕದಲ್ಲಿ ಸ್ಪಷ್ಟಪಡಿಸಲಾಗಿದೆ. ಜತೆಗೆ 1946 ರಿಂದ 1948ರವರೆಗೆ ನಡೆದ ಚರ್ಚೆಗಳಲ್ಲೂ ಭಾರತ ಎಂದು ಬಳಸಲಾಗಿದೆ ಎಂದು ಕಿರುಹೊತ್ತಿಗೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ವಿಶ್ವಕ್ಕೆ ಮಹತ್ವದ ಸಂದೇಶ ಕಳುಹಿಸಿದಂತಾಗಿದ್ದು, ಇಂಡಿಯಾ ವರ್ಸಸ್ ಭಾರತದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದು ದೇಶದ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂಬ ವಾದಗಳಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
55 ರಾಷ್ಟ್ರಗಳನ್ನು ಒಳಗೊಂಡ ಆಫ್ರಿಕನ್ ರಾಷ್ಟ್ರಗಳ ಒಕ್ಕೂಟವನ್ನು (ಆಫ್ರಿನಕ್ ಯೂನಿಯನ್) ಜಿ-20 ರಾಷ್ಟ್ರಗಳ ಗುಂಪಿಗೆ ಸೇರ್ಪಡೆಗೊಳಿಸಲು ಭಾರತ ಸರ್ಕಾರ ಮಾಡಿದ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ-20ಯ ಎಲ್ಲಾ ರಾಷ್ಟ್ರಗಳಿಗೆ ಪತ್ರ ಬರೆದು, ಆಫ್ರಿಕನ್ ಯೂನಿಯನ್​ನ್ನು ಜಿ-20 ಗುಂಪಿಗೆ ಸೇರಿಸುವ ಅಗತ್ಯದ ಬಗ್ಗೆ ವಿವರಿಸಿದ್ದರು ಮತ್ತು ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಈ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವ ನೀಡಲಾಗುವುದು ಎಂದು ತಿಳಿಸಿದ್ದರು. ಈ ಮನವಿಗೆ ಎಲ್ಲಾ ರಾಷ್ಟ್ರಗಳು ಸ್ಪಂದಿಸಿರುವುದರಿಂದ ಹಲವು ವರ್ಷಗಳ ಆಫ್ರಿಕನ್ ಯೂನಿಯನ್​ನ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಹೀಗಾಗಿ, ಇದು ಕೇವಲ ಆಫ್ರಿಕನ್ ರಾಷ್ಟ್ರಗಳ ಗೆಲುವು ಮಾತ್ರವಲ್ಲ, ಭಾರತದ ಗೆಲುವೂ ಹೌದು. ಶನಿವಾರದಂದು ಜಿ-20 ಶೃಂಗಸಭೆಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಆಫ್ರಿಕನ್ ಯೂನಿಯನ್ ಅಧ್ಯಕ್ಷರನ್ನು ಸಭೆಗೆ ಕರೆದು, ಸಭೆಯಲ್ಲಿ ಮೀಸಲಿಟ್ಟ ಸ್ಥಳದಲ್ಲಿ ಕುಳಿತುಕೊಳ್ಳಲು ವಿನಂತಿಸಿಕೊಳ್ಳುವ ಮೂಲಕ ಸದಸ್ಯತ್ವವನ್ನು ಅಧಿಕೃತಗೊಳಿಸಿದರು.
ಜನವರಿ ತಿಂಗಳಲ್ಲಿ ನಡೆದಿದ್ದ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲೇ ಆಫ್ರಿಕನ್ ಯೂನಿಯನ್​ಗೆ ಸ್ಥಾನ ನೀಡುವ ಚಿಂತನೆ ನಡೆದಿತ್ತು. ಈ ಸಭೆಯಲ್ಲಿ ಆಫ್ರಿಕಾದ ಖಂಡದ 55 ದೇಶಗಳು ಭಾಗವಹಿಸಿದ್ದವು. ಇದುವರೆಗೆ ಜಿ-20ಯಲ್ಲಿ ದಕ್ಷಿಣಾ ಆಫ್ರಿಕಾ ಬಿಟ್ಟರೆ ಆಫ್ರಿಕಾ ಖಂಡದ ಯಾವ ದೇಶಕ್ಕೂ ಸ್ಥಾನವಿರಲಿಲ್ಲ. ನಾವು ಪ್ರಜ್ಞಾಪೂರ್ವಕವಾಗಿ ಜಿ-20ನ್ನು ಎಲ್ಲರನ್ನೊಳಗೊಂಡ ಮತ್ತು ವಿಶಾಲ ಮನೋಭಾವದ ವೇದಿಕೆಯನ್ನಾಗಿ ರೂಪಿಸಲು ಪ್ರಯತ್ನಿಸಿದ್ದೇವೆ. ಆಫ್ರಿಕನ್ ಯೂನಿಯನ್ ಗೆ ಭಾರತದ ಅಧ್ಯಕ್ಷತೆಯಲ್ಲಿ ಜಿ-20ಯ ಖಾಯಂ ಸದಸ್ಯತ್ವ ಸಿಕ್ಕಿರುವುದು ನಮಗೆ ಸಂತಸದ ವಿಚಾರವಾಗಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಜೈ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಜೈ ಶಂಕರ್ ಅವರೇ ಆಫ್ರಿಕನ್ ಒಕ್ಕೂಟದ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ-20 ಸದಸ್ಯರ ದುಂಡು ಮೇಜಿನ ಸಭೆಯಲ್ಲಿದ್ದ ಸ್ಥಾನಕ್ಕೆ ಕರೆದೊಯ್ದಿದ್ದರು.
ಭಾರತ ಹಾಗೂ ಆಫ್ರಿಕನ್ ಒಕ್ಕೂಟದ ಮನವಿಗೆ ಅಮೆರಿಕ, ಫ್ರಾನ್ಸ್ ದೇಶಗಳು ತಕ್ಷಣವೇ ಒಪ್ಪಿಗೆ ಸೂಚಿಸಿದ್ದವು. ಜಿ-20ಯ ಅಧ್ಯಕ್ಷ ರಾಷ್ಟ್ರವಾದ ದಿನದಿಂದ ಎಲ್ಲಾ ಜಾಗತಿಕ ವೇದಿಕೆಗಳಲ್ಲಿ ಪ್ರಧಾನಿ ಮೋದಿ, ಎಲ್ಲರನ್ನೊಳಗೊಂಡ ಸುಸ್ಥಿರ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಇದಕ್ಕೆ ಪೂರಕವಾಗಿ, ಆಫ್ರಿಕನ್ ದೇಶಗಳ ಆದ್ಯತೆ, ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಗೆ ಈ ರಾಷ್ಟ್ರಗಳನ್ನು ಸೇರುವಂತೆಯೂ ಮಾಡಿದ್ದಾರೆ. ಆಫ್ರಿಕಾ ದೇಶಗಳೊಂದಿಗೆ ಸಂಪರ್ಕ ಸುಧಾರಿಸುವ ಯೋಜನೆಗೆ ಪೂರಕವಾಗಿ, ಮಂತ್ರಿಗಳ ಮಟ್ಟದಲ್ಲಿ ಭಾರತ ಎಲ್ಲಾ ಆಫ್ರಿಕನ್ ದೇಶಗಳಿಗೆ ಭೇಟಿ ನೀಡಿದೆ.
ಜಗತ್ತನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಹವಾಮಾನ ಬದಲಾವಣೆ ಪ್ರಮುಖವಾಗಿದ್ದು, ನಿರೀಕ್ಷೆಯಂತೆ ಜಿ-20 ನಾಯಕರು ಈ ಬಗ್ಗೆ ಭಾರತ ಮಂಟಪದಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ. ಹವಾಮಾನ ಸೇರಿದಂತೆ ವಿವಿಧ ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸುವ ತುರ್ತು ಅಗತ್ಯದ ಬಗ್ಗೆ ವಿಶ್ವ ನಾಯಕರು ಗಮನಸೆಳೆದಿದ್ದಾರೆ. ಇಡೀ ವಿಶ್ವ ಈಗ ಜಿ-20ಯತ್ತ ಪ್ರಖರ ನಾಯಕತ್ವಕ್ಕಾಗಿ ನೋಡುತ್ತಿದೆ. ಹತ್ತಾರು ಸವಾಲುಗಳನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ನಾವು ಒಗ್ಗಟ್ಟಿನ ಧ್ವನಿಯನ್ನು ಮೊಳಗಿಸಬೇಕಿದೆ ಎಂದು ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಅಭಿಪ್ರಾಯಪಟ್ಟಿದ್ದಾರೆ. ಜಿ-20ಯ ಮುಂದಿನ ಅಧ್ಯಕ್ಷ ರಾಷ್ಟ್ರ ಬ್ರೆಜಿಲ್​ಗೆ ಹಸ್ತಾಂತರವಾಗಲಿದ್ದು, ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಬ್ರೆಜಿಲ್ ಹವಾಮಾನ ಬದಲಾವಣೆ ವಿರುದ್ಧ ಜಗತ್ತನ್ನು ಸಜ್ಜುಗೊಳಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲಾ ಡ ಸಿಲ್ವಾ ಹೇಳಿದ್ದಾರೆ. ಜಾಗತಿಕ ತಾಪಮಾನ ತಗ್ಗಿಸುವಿಕೆ, ನಷ್ಟ, ಹಾನಿ ಮತ್ತು ಹಣಕಾಸಿನ ನಡುವೆ ಸಮತೋಲಿತ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡೇ ನಾವು 2025ರಲ್ಲಿ ಹವಾಮಾನ ಬದಲಾವಣೆ ಕುರಿತ ಶೃಂಗಸಭೆ ನಡೆಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರತ-ಮಧ್ಯ ಪ್ರಾಚ್ಯ-ಯುರೋಪ್ ಬೃಹತ್ ಆರ್ಥಿಕ ಕಾರಿಡಾರ್​ಗೆ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಿ-20 ಶೃಂಗ ಸಭೆ ವೇಳೆ ಘೊಷಿಸಿದರು. ‘ಇಂದು ನಾವೆಲ್ಲ ಒಂದು ಪ್ರಮುಖವಾದ ಹಾಗೂ ಐತಿಹಾಸಿಕವಾದ ಪಾಲುದಾರಿಕೆ ಒಪ್ಪಂದಕ್ಕೆ ತಲುಪಿದ್ದೇವೆ. ಮುಂಬರುವ ದಿನಗಳಲ್ಲಿ ಇದು ಭಾರತ, ಪಶ್ಚಿಮ ಏಷ್ಯಾ ಮತ್ತು ಯುರೋಪ್ ನಡುವೆ ಆರ್ಥಿಕ ಸಮಗ್ರತೆಯ ಪ್ರಮುಖ ಮಾಧ್ಯಮವಾಗಲಿದೆ’ ಎಂದು ಮೋದಿ ಹೇಳಿದರು. ಕಾರಿಡಾರ್ ಉಪಕ್ರಮವು ಭಾರತ, ಯುಎಇ, ಸೌದಿ ಅರೇಬಿಯಾ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟೆಲಿ, ಜರ್ಮನಿ ಮತ್ತು ಅಮೆರಿಕವನ್ನು ಒಳಗೊಂಡಿರುತ್ತದೆ.
ಈ ನಡುವೆ, ಜಿ-20 ಕೂಟ ಎದುರಿಸುವ ಸಮಸ್ಯೆಗಳ ವಿಚಾರದಲ್ಲಿ ಶೃಂಗ ಸಭೆ ಸರ್ವಸಮ್ಮತ ಘೊಷಣೆಯೊಂದನ್ನು ಅಂಗೀಕರಿಸಿತು. ಎಲ್ಲ ತಂಡಗಳ ಕಠಿಣ ಪರಿಶ್ರಮದಿಂದ ಜಿ-20 ನಾಯಕರ ಶೃಂಗಸಭೆ ಘೊಷಣೆಯನ್ನು ನಾವು ರೂಪಿಸಿದ್ದು ತಾವು ಅದನ್ನು ಘೊಷಿಸುತ್ತಿರುವುದಾಗಿ ಕೂಟದ ಹಾಲಿ ಅಧ್ಯಕ್ಷ ದೇಶದ ನೇತಾರ ಮೋದಿ ಹೇಳಿದರು.
ಅಭಿವೃದ್ಧಿಯ ಆಧಾರಸ್ತಂಭ:ಬಲಿಷ್ಠವಾದ ಸಂಪರ್ಕ ಸೌಲಭ್ಯ ಮತ್ತು ಮೂಲಸೌಕರ್ಯವು ಮಾನವ ನಾಗರಿಕತೆಯ ಆಧಾರ ಸ್ತಂಭವಾಗಿದೆ. ಈ ಅಭಿವೃದ್ಧಿ ಪಥದಲ್ಲಿ ಭಾರತ ಅದಕ್ಕೆ ಗರಿಷ್ಠ ಪ್ರಾಶಸ್ತ್ಯ ನೀಡಿದೆ ಎಂದು ಮೋದಿ ಹೇಳಿದರು.
ನವದೆಹಲಿ: ಜಿ 20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹೂಡಿಕೆ ಹೆಚ್ಚಿಸುವ ಮಾರ್ಗಗಳ ಕುರಿತು ರ್ಚಚಿಸಿದರು. ‘ದೆಹಲಿಯಲ್ಲಿ ಜಿ20 ಶೃಂಗಸಭೆಯ ಸಂದರ್ಭದಲ್ಲಿ ರಿಷಿ ಸುನಕ್ ಅವರನ್ನು ಭೇಟಿಯಾಗಿರುವುದು ಅದ್ಭುತವಾಗಿದೆ. ನಾವು ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ರ್ಚಚಿಸಿದ್ದೇವೆ. ಭಾರತ ಮತ್ತು ಬ್ರಿಟನ್ ದೇಶಗಳು ಸಮೃದ್ಧ ಮತ್ತು ಸುಸ್ಥಿರ ವಿಶ್ವಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತವೆ’ ಎಂದು ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
21ನೇ ಶತಮಾನದಲ್ಲಿ ಎದುರಿಸುತ್ತಿರುವ ಜಾಗತಿಕ ಸವಾಲುಗಳನ್ನು ನಿಭಾಯಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್​ಗಳನ್ನು (Mಈಆ) ಬಲಪಡಿಸುವತ್ತ ಸದಸ್ಯ ರಾಷ್ಟ್ರಗಳು ಒತ್ತು ನೀಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಜಿ-20 ಸಭೆಯ ಮೊದಲ ದಿನದಂದು ವಿಶ್ವನಾಯಕರೊಂದಿಗೆ ನಡೆಸಿದ ಸಭೆಗಳ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಗಳ ಮಧ್ಯೆ ಸಮ್ಮತ ಮೂಡಿರುವ ಕೆಲ ಅಂಶಗಳ ವಿವರಣೆ ನೀಡಿದ್ದಾರೆ. ಕೆಲ ಪ್ರಮುಖಾಂಶಗಳು ಹೀಗಿವೆ.
ಜಾಗತಿಕ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದರೂ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಇನ್ನೂ ಶಾಶ್ವತ ಸದಸ್ಯತ್ವ ಸಿಕ್ಕಿಲ್ಲ. ಭಾರತದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ಮೋದಿ ಭೇಟಿ ಬಳಿಕ, ಭಾರತದ ಸದಸ್ಯತ್ವಕ್ಕೆ ಬೆಂಬಲಿಸುವುದಾಗಿ ಪುನರುಚ್ಚರಿಸಿದ್ದಾರೆ. ಅಮೆರಿಕ ಈ ರೀತಿಯ ಘೊಷಣೆ ಮಾಡುತ್ತಿರುವುದು ಹೊಸದೇನಲ್ಲ. ಆದರೆ, ಜಿ-20 ಅಧ್ಯಕ್ಷ ರಾಷ್ಟ್ರವಾಗಿ ಭಾರತದ ಒಟ್ಟಾರೆ ನಿರ್ವಹಣೆ ಹಾಗೂ ಜ್ವಲಂತ ವಿಷಯಗಳಲ್ಲಿ ಸದಸ್ಯ ರಾಷ್ಟ್ರಗಳ ಸಮ್ಮತಿ ಪಡೆಯುವಲ್ಲಿ ಯಶಸ್ವಿಯಾಗಿರುವುದರಿಂದ ಹಾಲಿ ಜಿ-20 ಸಭೆ ನೀಡುತ್ತಿರುವ ಸಂದೇಶ ಜಾಗತಿಕವಾಗಿ ಭಾರತವನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡುವ ನಿರೀಕ್ಷೆಯಿದೆ. ಮೇಲಾಗಿ, ಬೈಡೆನ್-ಮೋದಿ ಆಪ್ತತೆ ಮತ್ತಷ್ಟು ಆಳವಾಗುತ್ತಿರುವ ಸೂಚನೆಗಳೂ ಸಿಗುತ್ತಿವೆ.
ನವದೆಹಲಿ: ಶನಿವಾರ ಇಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಸಂಪರ್ಕ, ವಾಣಿಜ್ಯ ಮತ್ತು ಇತರ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ಜಪಾನ್ ಉತ್ಸುಕವಾಗಿವೆ ಎಂದು ಮೋದಿ ಹೇಳಿದರು. ‘ಪಿಎಂ ಕಿಶಿದಾ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದೆವು. ನಾವು ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದ್ದೇವೆ. ನಾವು ಸಂಪರ್ಕ, ವಾಣಿಜ್ಯ ಮತ್ತು ಇತರ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಉತ್ಸುಕರಾಗಿದ್ದೇವೆ’ ಎಂದು ಪ್ರಧಾನಿ ಮೋದಿ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಶುದ್ಧ ಇಂಧನಗಳ ಬಳಕೆ ಉತ್ತೇಜಿಸುವ ಉದ್ದೇಶದಿಂದ ಜಿ20 ಶೃಂಗಸಭೆಯಲ್ಲಿ ಭಾರತ ಜಾಗತಿಕ ಜೈವಿಕ ಇಂಧನ ಒಕ್ಕೂಟ ಪ್ರಾರಂಭಿಸುವುದಾಗಿ ಘೊಷಿಸಿದೆ. ಪೆಟ್ರೋಲ್​ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣವನ್ನು ಸೇರಿಸುವ ಜಾಗತಿಕ ಮಟ್ಟದ ಉಪಕ್ರಮದೊಂದಿಗೆ ಮುಂದುವರಿಯುವುದಾಗಿ ತಿಳಿಸಿದೆ. ಸಸ್ಯ ಮತ್ತು ಪ್ರಾಣಿ ತ್ಯಾಜ್ಯ ಸೇರಿದಂತೆ ವಿವಿಧ ಮೂಲಗಳಿಂದ ಪಡೆದ ಜೈವಿಕ ಇಂಧನಗಳ ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧಿಸುವುದು ಈ ಒಕ್ಕೂಟದ ಉದ್ದೇಶವಾಗಿದೆ.ನಾವು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುತ್ತಿದ್ದೇವೆ. ಇದಕ್ಕೆ ಸೇರಬೇಕೆಂದು ಭಾರತ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಮೊದಲ ದಿನ ಎಲ್ಲಾ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ತಿಳಿಸಿದ್ದಾರೆ. ಇಂಧನ ಮಿಶ್ರಣ ಕ್ಷೇತ್ರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು. ಇದು ಸ್ಥಿರವಾದ ಇಂಧನ ಪೂರೈಕೆ ಖಚಿತಪಡಿಸುತ್ತದೆ ಮತ್ತು ಹವಾಮಾನ ಭದ್ರತೆಗೆ ತನ್ನದೇ ಆದ ಕೊಡುಗೆ ನೀಡಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಒಕ್ಕೂಟಕ್ಕೆ ಅಮೆರಿಕ ಮತ್ತು ಬ್ರೆಜಿಲ್ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿವೆ.
ಮುಂದಿನ ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ; ದಿನಾಂಕವೂ ನಿಗದಿ, ಇಲ್ಲಿದೆ ವಿವರ..

‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 1 =
Remember me
