|ರಾಘವ ಶರ್ಮ ನಿಡ್ಲೆನವದೆಹಲಿ
ದೇಶದ ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಐತಿಹಾಸಿಕ ದಿನ 1996 ಆಗಸ್ಟ್ 15. ಉತ್ತರಾಖಂಡಕ್ಕೂ ಅಷ್ಟೇ ಮಹತ್ವದ ದಿನವದು. ಏಕೆಂದರೆ, ಉತ್ತರಾಖಂಡ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಹಲವು ದಶಕಗಳ ಬೇಡಿಕೆಗೆ ಅಂದು ಈಡೇರಿತು. ‘ಉತ್ತರ ಪ್ರದೇಶದಿಂದ ಉತ್ತರಾಂಚಲ ಭಾಗವನ್ನು ಬೇರ್ಪಡಿಸಿ ಹೊಸ ರಾಜ್ಯವನ್ನಾಗಿ ಮಾಡಲಿದ್ದೇವೆ’ ಎಂದು ದೇವೇಗೌಡರು ಘೋಷಿಸಿದ್ದರು. ಇದೇ ಕಾರಣಕ್ಕಾಗಿ, ಉತ್ತರಾಖಂಡ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟ ಹೋರಾಟಗಾರರು ಈಗಲೂ ದೇವೇಗೌಡರನ್ನು ನೆನೆಯುತ್ತಾರೆ. ಹಾಗಂತ ಉತ್ತರಾಂಚಲ ವಿಧೇಯಕ ಜಾರಿ ಮಾಡಿ ಪ್ರತ್ಯೇಕ ರಾಜ್ಯ ರಚನೆಗೆ ಕ್ರಮಗಳನ್ನು ಕೈಗೊಂಡಿದ್ದು ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಎನ್ನುವುದನ್ನೂ ಮರೆಯುವಂತಿಲ್ಲ. 1998ರಲ್ಲಿ ಎನ್​ಡಿಎ ಸರ್ಕಾರ ‘ಉತ್ತರಾಂಚಲ ವಿಧೇಯಕ’ವನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಕಳುಹಿಸಿಕೊಟ್ಟಿತು. ಈ ವಿಧೇಯಕದಲ್ಲಿ 26 ತಿದ್ದುಪಡಿಗಳನ್ನು ಮಾಡಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅನುಮೋದಿಸಲಾಯಿತು. ನಂತರ, ಅದು ಸಂಸತ್ತಿನಲ್ಲಿ ಅನುಮೋದನೆಗೊಂಡು 2000ದ ನವೆಂಬರ್ 9ರಂದು ದೇಶದ 27ನೇ ರಾಜ್ಯವಾಗಿ ಉತ್ತರಾಖಂಡ ಉದಯವಾಯಿತು.
ದೇವಭೂಮಿ, ಸಾವಿರಾರು ಮಂದಿರಗಳ ಬೀಡು ಉತ್ತರಾಖಂಡಕ್ಕೀಗ 22 ವರ್ಷ. ಇದುವರೆಗೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಕಂಡಿರುವ ಬೆಟ್ಟ ರಾಜ್ಯ ಮತ್ತೊಂದು ಚುನಾವಣೆಗೆ ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ! 2017ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೇರಿ ರಜಪೂತ ಸಮುದಾಯದ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾದರೂ ಅವರ ವಿರುದ್ಧ ಒಳಗಿಂದೊಳಗೇ ಪಕ್ಷದಲ್ಲಿ ಕುದಿಯುತ್ತಿದ್ದ ಬೇಗುದಿ ಸರ್ಕಾರ ನಾಲ್ಕನೇ ವರ್ಷ ತಲುಪುವ ವೇಳೆ ಸಿಎಂ ಬದಲಾವಣೆಗೆ ನಾಂದಿ ಹಾಡಿತು. ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ತೀರ್ಥ ಸಿಂಗ್ ರಾವತ್ ಸಿಎಂ ಕುರ್ಚಿಯೇರಿದರು. ಕೆಲವೇ ದಿನಗಳಲ್ಲಿ ದೆಹಲಿ ಬಿಜೆಪಿ ನಾಯಕರಿಗೆ ‘ಯಾಕಾದ್ರೂ ಇವರನ್ನು ಸಿಎಂ ಮಾಡಿದೆವು’ ಎಂದು ಅನಿಸತೊಡಗಿತು. ಪಕ್ಷ ಮತ್ತು ಸರ್ಕಾರ ಎರಡೂ ತೀರ್ಥ ಸಿಂಗ್​ಗೆ ಭಾರವಾಗಿತ್ತು ಮತ್ತು ದೆಹಲಿ ನಾಯಕರಿಗೂ ಅವರನ್ನು ಮುಂದುವರಿಸಿದಲ್ಲಿ ಚುನಾವಣೆಯಲ್ಲಿ ಹಿನ್ನಡೆ ಖಚಿತ ಎನ್ನುವುದೂ ಗೊತ್ತಾಗಿತ್ತು. ಜನಪ್ರತಿನಿಧಿಗಳು ಪ್ರಾಮಾಣಿಕತೆ ಕಾಯ್ದುಕೊಂಡರೂ, ಅಂತಿಮವಾಗಿ ಕೌಶಲ, ಸಾಮರ್ಥ್ಯ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಕಲೆಯೇ ಅವರನ್ನು ಸಮರ್ಥ ನಾಯಕನನ್ನಾಗಿ ರೂಪಿಸುತ್ತವೆ. ಆದರೆ, ತೀರ್ಥ ಸಿಂಗ್ ರಾವತ್​ರಲ್ಲಿ ಇದ್ಯಾವುದೂ ಕಾಣಲಿಲ್ಲ. ಪರಿಣಾಮವಾಗಿ, ಶಾಸಕ ಪುಷ್ಕರ್ ಸಿಂಗ್ ಧಾಮಿ ಸಿಎಂ ಸ್ಥಾನಕ್ಕೇರಿದರು. ಸದ್ಯಕ್ಕೆ ಧಾಮಿ ‘ಮೂವರೊಳಗುತ್ತಮನು’ ಎಂಬ ಕೀರ್ತಿ ಸಂಪಾದಿಸಿದ್ದಾರೆ. ಹೀಗಾಗಿ, ಹಾಲಿ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಲಾಗುತ್ತಿದೆ.
ಹಾಗೆ ನೋಡಿದರೆ ಆಗಾಗ್ಗೆ ಮುಖ್ಯಮಂತ್ರಿಗಳು ಬದಲಾಗುವುದು ಈ ರಾಜ್ಯಕ್ಕೆ ಹೊಸತೇನಲ್ಲ. ರಾಜ್ಯ ರಚನೆ ವೇಳೆ ಉತ್ತರ ಪ್ರದೇಶದಲ್ಲಿ ಉತ್ತರಾಖಂಡ ಮೂಲದ 30 (22 ಎಂಎಲ್​ಎ, 8 ಎಂಎಲ್​ಸಿ) ಬಿಜೆಪಿ ಶಾಸಕರಿದ್ದರು. ಉತ್ತರ ಪ್ರದೇಶಕ್ಕೆ ಬಿಜೆಪಿಯ ರಾಜನಾಥ್ ಸಿಂಗ್ ಸಿಎಂ ಆಗಿದ್ದರು. ಪಕ್ಕದ ಉತ್ತರಾಖಂಡದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ವಿಧಾನಪರಿಷತ್ ಸದಸ್ಯ ನಿತ್ಯಾನಂದ ಸ್ವಾಮಿಯವರನ್ನು ಸಿಎಂ ಆಗಿ ನೇಮಿಸಲಾಯಿತು. 2002ರ ವಿಧಾನಸಭೆ ಚುನಾವಣೆಗೆ 4 ತಿಂಗಳಿಗೆ ಮುನ್ನ ರಾಜ್ಯ ಬಿಜೆಪಿ ಅಧ್ಯಕ್ಷ ಭಗತ್ ಸಿಂಗ್ ಕೋಶಿಯಾರಿ (ಮಹಾರಾಷ್ಟ್ರದ ಈಗಿನ ರಾಜ್ಯಪಾಲ) ಅವರನ್ನು ಮುಖ್ಯಮಂತ್ರಿಯನ್ನಾಗಿ ಬದಲಾಯಿಸಲಾಯಿತು.
ಉತ್ತರಾಖಂಡ ರಾಜ್ಯ ರಚನೆಯಲ್ಲಿ ಬಿಜೆಪಿ ಪ್ರಮುಖ ಪಾತ್ರವಹಿಸಿತ್ತಾದರೂ, 2002ರ ಮೊದಲ ಚುನಾವಣೆಯನ್ನು ಗೆದ್ದಿದ್ದು ಮಾತ್ರ ಕಾಂಗ್ರೆಸ್. 70 ಸೀಟುಗಳಲ್ಲಿ 36ನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ತನ್ನ ಹಿರಿಯ ನಾಯಕ, ಅದಾಗಲೇ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಡಿ. ತಿವಾರಿಯವರನ್ನು ರಾಜ್ಯದ ನೂತನ ಸಿಎಂರನ್ನಾಗಿ ಘೋಷಿಸಿತು. ಮೊದಲ ಚುನಾವಣೆಯನ್ನು ಹರೀಶ್ ರಾವತ್ ನಾಯಕತ್ವದಲ್ಲಿ ಎದುರಿಸಲಾಗಿತ್ತಾದರೂ, ವಿರೋಧಿ ಗುಂಪಿನ ಲಾಬಿಯಿಂದಾಗಿ ರಾವತ್ ಸಿಎಂ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಅಧ್ಯಕ್ಷೆ ಸೋನಿಯಾ ಗಾಂಧಿ ತಿವಾರಿಯವರನ್ನು ನೆಚ್ಚಿಕೊಂಡರು. ಸಿಎಂ ಎನ್.ಡಿ. ತಿವಾರಿ 5 ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು ಮತ್ತು ರಾಜ್ಯದ ಪೂರ್ಣಾವಧಿಯ ಸಿಎಂ ಎಂಬ ದಾಖಲೆ ಇರುವುದು ಅವರ ಹೆಸರಲ್ಲಿ ಮಾತ್ರ!
2007ರಲ್ಲಿ ಬಿಜೆಪಿಯ ಅದೃಷ್ಟ ಖುಲಾಯಿಸಿತು. 34 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡ ಕೇಸರಿಪಡೆ, ಇತರ ಪಕ್ಷಗಳ ಬೆಂಬಲ ಗಳಿಸಿ ಸೇನೆಯ ನಿವೃತ್ತ ಮೇಜರ್ ಜನರಲ್ ಬಿ.ಸಿ. ಖಂಡೂರಿ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆದರೆ, ಎರಡೂವರೆ ವರ್ಷಗಳಲ್ಲೇ ಖಂಡೂರಿಯವರನ್ನು ಬದಲಿಸಿದ ದೆಹಲಿ ನಾಯಕರು, ಸಿಎಂ ಸ್ಥಾನದಲ್ಲಿ ರಮೇಶ್ ನಿಷಾಂಕ್ ಪೋಖ್ರಿಯಾಲ್​ರನ್ನು ತಂದು ಕೂರಿಸಿದರು. ಆದರೆ, ಪಕ್ಷದೊಳಗೆ ಮತ್ತೆ ಖಂಡೂರಿ ಪರ ಲಾಬಿ ಪ್ರಬಲಗೊಂಡಿದ್ದರಿಂದ 2012ರ ಚುನಾವಣೆಗೆ 5 ತಿಂಗಳಿಗೆ ಮುನ್ನ ಮತ್ತೆ ಬಿ.ಸಿ. ಖಂಡೂರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಹಾಗಂತ, ಖಂಡೂರಿ ನಾಯಕತ್ವದಿಂದಾಗಿ ಬಿಜೆಪಿಗೆ ಮತ್ತೊಂದು ಚುನಾವಣೆ ಗೆಲ್ಲಲಾಗಲಿಲ್ಲ. ರಾಜ್ಯದ ಬಹುಪಾಲು ಮತದಾರರು ಕಾಂಗ್ರೆಸ್​ನ್ನು ಆಯ್ಕೆ ಮಾಡಿದರು. 2012ರಲ್ಲಿ ಬಿಜೆಪಿ 31 ಸ್ಥಾನ ಗೆದ್ದರೂ, ಕಾಂಗ್ರೆಸ್ 32 ಸೀಟುಗಳನ್ನು ಗೆದ್ದಿದ್ದರಿಂದ ಸಣ್ಣ ಪಕ್ಷಗಳು ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದವು. ಮೇಲಾಗಿ, ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಸಿ. ಖಂಡೂರಿ ಕೂಡ ಕೊಟ್​ದ್ವಾರ ಕ್ಷೇತ್ರದಿಂದ ಸೋತಿದ್ದರು. ಕಾಂಗ್ರೆಸ್​ನ ವಿಜಯ್ ಬಹುಗುಣ ಮುಖ್ಯಮಂತ್ರಿಯಾದರು. ಆದರೆ, 2013ರ ಕೇದಾರನಾಥ ಪ್ರವಾಹ ಪರಿಸ್ಥಿತಿಯ ಕಳಪೆ ನಿರ್ವಹಣೆ ಆರೋಪದ ಹಿನ್ನೆಲೆಯಲ್ಲಿ ಬಹುಗುಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಇದರಿಂದ ಕೊನೆಗೂ ಕಾಂಗ್ರೆಸ್​ನ ರಜಪೂತ ನಾಯಕ ಹರೀಶ್ ರಾವತ್ ಭಾಗ್ಯದ ಬಾಗಿಲು ತೆರೆದಿತ್ತು. 2014ರ ಫೆಬ್ರವರಿ 1ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಅದಾಗಲೇ ರಾವತ್ ವಿರುದ್ಧ ಬಹುಗುಣ ಗುಂಪು ಬಂಡಾಯದ ಲಕ್ಷಣಗಳನ್ನು ತೋರಿಸಿತು. 2016ರಲ್ಲಿ ಬಹುಗುಣ ನೇತೃತ್ವದಲ್ಲಿ 9 ಕಾಂಗ್ರೆಸ್ ಶಾಸಕರು ರಾವತ್ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ಸಲ್ಲಿಸಿದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್​ಡಿಎ ಸರ್ಕಾರ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟಿತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತು, ಕೇಂದ್ರ ಸರ್ಕಾರದ ವಿರುದ್ಧ ರಾವತ್ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಯಿತು. ಸುಪ್ರೀಂಕೋರ್ಟ್ ವಿಶ್ವಾಸಮತ ಸಾಬೀತಿಗೆ ಆದೇಶಿಸಿತು. ವಿಶ್ವಾಸಮತ ಗೆದ್ದು ರಾವತ್ ಮತ್ತೆ ಸಿಎಂ ಆದರು. ಆದರೆ, ಈ ಎಲ್ಲ ಬೆಳವಣಿಗೆಗಳು ರಾಜಕೀಯವಾಗಿ ಬಿಜೆಪಿಯನ್ನು ಬಲಿಷ್ಠಗೊಳಿಸಿತು. 2017ರ ಚುನಾವಣೆಯಲ್ಲಿ ಪ್ರತಿಫಲಿಸಿದ್ದು ಕೂಡ ಅದೇ. ಒಂದೆಡೆ ಪಿಎಂ ಮೋದಿ ಅಲೆ, ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ಬಿಕ್ಕಟ್ಟಿನಿಂದ ಆಕ್ರೋಶಗೊಂಡಿದ್ದ ಮತದಾರರು, ಬಿಜೆಪಿಗೆ ಪ್ರಚಂಡ ಬಹುಮತ (70ರಲ್ಲಿ 57 ಸೀಟು) ನೀಡಿ ಗೆಲ್ಲಿಸಿದರು.
ತ್ರಿವೇಂದ್ರ ಸಿಂಗ್ ರಾವತ್​ರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಆದರೆ, ಪಕ್ಷದ ಶಾಸಕರ ವಿಶ್ವಾಸ ಗಳಿಸುವಲ್ಲಿ ತ್ರಿವೇಂದ್ರ ಯಶಸ್ವಿಯಾಗಲಿಲ್ಲ. ತ್ರಿವೇಂದ್ರ ಸ್ಥಾನ ತುಂಬಿದ ತೀರ್ಥ ಸಿಂಗ್ ರಾವತ್ ವಿವಾದಗಳಿಂದಲೇ ಸುದ್ದಿಯಾಗಿದ್ದರಿಂದ ಪಕ್ಷಕ್ಕೆ ಭಾರೀ ಹಾನಿಯಾಯಿತು. ಹೀಗಾಗಿ, 45 ವರ್ಷದ ಪುಷ್ಕರ್ ಸಿಂಗ್ ಧಾಮಿಗೆ (11ನೇ ಸಿಎಂ) ಸರ್ಕಾರದ ಜವಾಬ್ದಾರಿ ವಹಿಸಲಾಯ್ತು. ವಿಶೇಷ ಎಂದರೆ, ಇಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗಿದೆ. ಅದೇ ಲೆಕ್ಕಾಚಾರದಲ್ಲಿ ನೋಡಿದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಬೇಕು! ಆಡಳಿತ ವಿರೋಧಿ ಅಲೆ ಮುಂದಿದ್ದರೂ, ಮೋದಿ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರದ ಕೆಲ ಮಹತ್ವದ ಯೋಜನೆಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ ‘ಹೊಸ ಇತಿಹಾಸ’ ಸೃಷ್ಟಿಸುವ ವಿಶ್ವಾಸದಲ್ಲಿದೆ. ಹರೀಶ್ ರಾವತ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ರಾವತ್​ರನ್ನು ಸಿಎಂ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸದಿರುವುದು ‘ಕೈ’ಯೊಳಗಿನ ಅಸಮಾಧಾನ ಹೆಚ್ಚಿಸಿದೆ.
ಪ್ರಬಲ ಜಾತಿಗಳು:ಉತ್ತರಾಖಂಡದಲ್ಲಿ ರಜಪೂತ ಸಮುದಾಯದ ಜನಸಂಖ್ಯೆ ಶೇಕಡ 35ರಷ್ಟಿದ್ದರೆ, ಬ್ರಾಹ್ಮಣರು ಶೇ.25ಕ್ಕಿಂತಲೂ ಹೆಚ್ಚಿದ್ದಾರೆ. ರಾಜ್ಯ ರಾಜಕೀಯದಲ್ಲೂ ಈ ಸಮುದಾಯಗಳದ್ದೇ ಪ್ರಾಬಲ್ಯ. ಹೀಗಾಗಿ, ಎರಡೂ ರಾಷ್ಟ್ರೀಯ ಪಕ್ಷಗಳು ನಾಯಕತ್ವವನ್ನು ಈ ಎರಡು ಸಮುದಾಯಗಳ ಮಧ್ಯೆಯೇ ಹಂಚಿಕೆ ಮಾಡಿರುವುದನ್ನು ಕಾಣಬಹುದು. ಉತ್ತರಾಖಂಡದಲ್ಲಿರುವಷ್ಟು ಬ್ರಾಹ್ಮಣರ ಸಂಖ್ಯೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಈ ಬಾರಿ ಚುನಾವಣಾ ಕಣದಲ್ಲಿ ಆಮ್ ಆದ್ಮಿ ಪಕ್ಷವಿದ್ದು, ಎರಡೂ ಪಕ್ಷಗಳ ಕೆಲವೊಂದಿಷ್ಟು ಮತಗಳನ್ನು ತನ್ನೆಡೆ ಸೆಳೆದುಕೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
