| ರಾಘವ ಶರ್ಮ ನಿಡ್ಲೆ, ನವದೆಹಲಿ
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ರಾಜ್ಯಗಳಲ್ಲಿ ಸಂಘಟನಾ ಕೌಶಲ ಮತ್ತು ರಣನೀತಿಗಳ ಪ್ರಖರ ಅನುಷ್ಠಾನದ ಮೂಲಕ ವಿಧಾನಸಭೆ ಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿ, ಈ ಮೂರೂ ರಾಜ್ಯಗಳಲ್ಲಿ ಪಕ್ಷದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನಾಯಕತ್ವಕ್ಕೆ ಅವಕಾಶ ನೀಡಿದೆ.
ಮಧ್ಯಪ್ರದೇಶದಲ್ಲಿ 160ಕ್ಕಿಂತ ಹೆಚ್ಚು ಸೀಟು ಗೆದ್ದರೂ ಶಿವರಾಜ್ ಸಿಂಗ್ ಚೌಹಾಣ್ ಬದಲಿಗೆ ಶಿಕ್ಷಣ ಸಚಿವರಾಗಿದ್ದ ಒಬಿಸಿ ಸಮುದಾಯದ ಡಾ.ಮೋಹನ್ ಯಾದವ್, ಛತ್ತೀಸ್​ಗಢದಲ್ಲಿ ಬುಡಕಟ್ಟು ಸಮುದಾಯದ ವಿಷ್ಣುದೇವ ಸಾಯ್ ಮತ್ತು ರಾಜಸ್ಥಾನದಲ್ಲಿ ರಾಜಕೀಯವಾಗಿ ಪ್ರಭಾವಶಾಲಿಯಲ್ಲದ ಬ್ರಾಹ್ಮಣ ಸಮುದಾಯದ, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಭಜನ್​ಲಾಲ್ ಶರ್ಮರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಗಳ ನಾಯಕತ್ವವನ್ನು ಹಳೆಯ ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಶಿಫ್ಟ್ ಮಾಡಿ, ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.
ಪಕ್ಷದ ಹೈಕಮಾಂಡ್ ಸಮರ್ಥ ಮತ್ತು ಬಲಿಷ್ಠವಿದ್ದಾಗ ಮಾತ್ರ ಇಂಥದ್ದೊಂದು ಪ್ರಯೋಗ ಮಾಡಲು ಸಾಧ್ಯ. ವರಿಷ್ಠರೇ ದುರ್ಬಲರಾಗಿದ್ದರೆ ರಾಜ್ಯಗಳಲ್ಲಿ ನಾಯಕತ್ವ ಬದಲಿಸಿದರೆ, ಅದು ರಾಜ್ಯ ಘಟಕವನ್ನೇ ಇಬ್ಭಾಗ ಮಾಡಬಲ್ಲದು. ಆದರೆ, ಈ ಮೂರೂ ರಾಜ್ಯಗಳಲ್ಲಿ ಮೋದಿ-ಷಾ ತೀರ್ವನವನ್ನು ಯಾರೂ ಪ್ರಶ್ನಿಸುವ ಹಂತದಲ್ಲಿಲ್ಲ. ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಸಿಂಧಿಯಾ ಭಾರವಾದ ಮನಸ್ಸಿನಿಂದ ಮುಖ್ಯಮಂತ್ರಿ ಹುದ್ದೆಯನ್ನು ಇತರರಿಗೆ ಬಿಟ್ಟುಕೊಟ್ಟಿದ್ದಾರೆ.
ಈ ಮೂರೂ ರಾಜ್ಯಗಳಲ್ಲಿ ಹೊಸ ನಾಯಕತ್ವ ಬೆಳೆಸಬೇಕು ಎನ್ನುವುದನ್ನು ಮೊದಲೇ ತೀರ್ವನಿಸಿದ್ದ ದೆಹಲಿ ನಾಯಕರು, ಆ ಕಾರಣಕ್ಕೇ ಸಿಎಂ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಮೇಲಾಗಿ, ಕೇಂದ್ರ ಸಚಿವರು ಮತ್ತು ಸಂಸತ್ತಿನಿಂದ ಕೆಲ ಸದಸ್ಯರನ್ನೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿ, ಸಿಎಂ ಹುದ್ದೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದರು. ಪಕ್ಷಕ್ಕಾಗಿ ಶ್ರಮಿಸಿದರೆ ಫಲ ಕಟ್ಟಿಟ್ಟಬುತ್ತಿ ಎಂಬ ಸಂದೇಶ ರವಾನಿಸಿದ್ದರಿಂದ ಒಂದು ತಂಡವಾಗಿ ಎದುರಾಳಿ ವಿರುದ್ಧ ಹೋರಾಡಲು ಸಾಧ್ಯವಾಯಿತು.
ಕೆಲ ದಿನಗಳ ಹಿಂದೆ ನಡೆದ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲೂ, ಪ್ರಧಾನಿ ನರೇಂದ್ರ ಮೋದಿ, ‘ಇದು ನಮ್ಮೆಲ್ಲರ ಗೆಲುವು. ನಾವು ಒಂದು ತಂಡವಾಗಿ ಕೆಲಸ ಮಾಡಿದ್ದಕ್ಕೆ ಗೆದ್ದಿದ್ದೇವೆ. ಮುಂದೆಯೂ ಹೀಗೆ ಶ್ರಮಿಸಬೇಕು’ ಎಂದು ಸಂಸದರೊಂದಿಗೆ ಮಾತನಾಡುತ್ತ ಹೇಳಿದ್ದರು. ಒಂದುವೇಳೆ ಮಧ್ಯಪ್ರದೇಶಕ್ಕೆ ಶಿವರಾಜ್ ಸಿಂಗ್, ಛತ್ತೀಸ್​ಗಢಕ್ಕೆ ರಮಣ್ ಸಿಂಗ್ ಮತ್ತು ರಾಜಸ್ಥಾನಕ್ಕೆ ವಸುಂಧರಾ ರಾಜೆ ಎಂದು ಘೋಷಿಸುತ್ತಿದ್ದರೆ ಬಹುಶಃ ಇಂಥದ್ದೊಂದು ಫಲಿತಾಂಶ ದುಸ್ಸಾಧ್ಯವಾಗುತ್ತಿತ್ತು. ಏಕೆಂದರೆ, ಈ ನಾಯಕತ್ವ ವಿರೋಧಿಸುವ ಗುಂಪು ಕೂಡ ಪಕ್ಷದಲ್ಲಿ ಪ್ರಭಾವಶಾಲಿಯಾಗಿದ್ದು, ಅದು ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು. ಈ ಅಪಾಯವನ್ನರಿತ ವರಿಷ್ಠರು, ನಾಯಕತ್ವದ ಘೋಷಣೆಯೇ ಬೇಡ. ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಬೇಕು ಎಂಬ ಸಂದೇಶ ಕೊಟ್ಟರು.

ಹಾಗೆ ನೋಡಿದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಮಸ್ಯೆ ಕೂಡ ಬಿಜೆಪಿಗಿಂತ ಭಿನ್ನವಾಗಿರಲಿಲ್ಲ. ರಾಜಸ್ಥಾನದಲ್ಲಿ ನಿರ್ಗಮಿತ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬದಲಿಗೆ ಯುವ ನಾಯಕ ಸಚಿನ್ ಪೈಲಟ್ ಮತ್ತು ಮಧ್ಯಪ್ರದೇಶದಲ್ಲಿ ಕಮಲ್​ನಾಥ್ ಮತ್ತು ದಿಗ್ವಿಜಯ ಸಿಂಗ್ ಹೊರತುಪಡಿಸಿ ಇತರ ನಾಯಕರನ್ನು ಬೆಳೆಸುವ ಅನಿವಾರ್ಯತೆಯಿತ್ತು. ಆದರೆ, ದೆಹಲಿ ನಾಯಕರಿಗೆ ಈ ಹಳೆಯ ತಲೆಮಾರಿನ ನಾಯಕರಾಚೆ ಬೇರ್ಯಾರೂ ಕಾಣಲೇ ಇಲ್ಲ. ‘ಕಮಲ್​ನಾಥ್, ದಿಗ್ವಿಜಯ ಸಿಂಗ್ ಕಾರಣದಿಂದಲೇ ರಾಜ್ಯ ಕಾಂಗ್ರೆಸ್​ನಲ್ಲಿ ಕಡೆಗಣನೆಗೆ ಒಳಗಾಗಿದ್ದೇನೆ’ ಎಂದೇ ಯುವ ನಾಯಕ, ಹಾಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2014ರ ಬಳಿಕ ಶಕ್ತಿಹೀನವಾಗಿರುವ ಕಾಂಗ್ರೆಸ್ ಹೈಕಮಾಂಡ್, ಪ್ರಾದೇಶಿಕ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿಯಲ್ಲಿದೆ. ಪಂಜಾಬ್​ನಲ್ಲಿ ನವಜೋತ್ ಸಿಂಗ್ ಸಿಧು ಜನಪ್ರಿಯತೆ ಗಳಿಸಿರುವುದು ಮಾಜಿ ಕ್ರಿಕೆಟ್ ಆಟಗಾರ ಮತ್ತು ರಿಯಾಲಿಟಿ ಶೋಗಳಿಂದಾಗಿ ಎಂಬ ವಾಸ್ತವ ಹೈಕಮಾಂಡ್​ಗೆ (ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ) ಅರ್ಥವಾಗಲೇ ಇಲ್ಲ. ಸಿಧು ಪ್ರಭಾವಕ್ಕೊಳಗಾದ ಈ ಇಬ್ಬರು, ಕ್ಯಾಪ್ಟನ್ ಅಮರಿಂದರ್ ಸಿಂಗ್​ರನ್ನು ಬದಿಗೆ ಸರಿಸಿದರು. ಪರಿಣಾಮ ಏನಾಯಿತು ಎಂಬುದು ಕಣ್ಣಮುಂದಿದೆ. ಕಾಂಗ್ರೆಸ್ಸಿಗರ ಗೊಂದಲದ ಸ್ಥಿತಿ ಆಮ್ ಆದ್ಮಿ ಪಕ್ಷದ ಅಧಿಪತ್ಯಕ್ಕೆ ನಾಂದಿ ಹಾಡಿತು. 2000ದಲ್ಲಿ ಉತ್ತರಾಖಂಡ ಹೊಸ ರಾಜ್ಯವಾದಲ್ಲಿಂದ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗಿದೆ. ಆದರೆ, 2022ರಲ್ಲಿ ಈ ಪರಂಪರೆ ಬದಲಿಸಿದ ಬಿಜೆಪಿ, ಸತತ 2ನೇ ಬಾರಿಗೆ ಅಧಿಕಾರಕ್ಕೇರಿತು. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ವಿರುದ್ಧ ಚುನಾವಣಾ ರಾಜಕೀಯದಲ್ಲಿ ಗೆಲ್ಲಲು ಅಸಾಧ್ಯವಾದಾಗ ಹೈಕಮಾಂಡ್ ದುರ್ಬಲಗೊಂಡು, ಹೈರಾಣಾದ ಪರಿಸ್ಥಿತಿ ನಿರ್ವಣವಾಗುವುದು ಸಹಜ. ದುರಂತ ಎಂದರೆ, ಈ ಶೋಚನೀಯ ಸ್ಥಿತಿಯಿಂದ ಹೊರಬರಲು ಕಾಂಗ್ರೆಸ್​ಗೆ ಸಾಧ್ಯವಾಗಿಯೇ ಇಲ್ಲ. ಪಕ್ಷದ ನೀತಿನಿರೂಪಣೆಯಲ್ಲೂ ಗೊಂದಲ, ಬಹುಸಂಖ್ಯಾತರನ್ನು ಕಡೆಗಣಿಸುವ ಪ್ರತಿಪಾದನೆಗಳಿಂದಾಗಿ ದೇಶದ ದೊಡ್ಡ ಮತವರ್ಗ ಕಾಂಗ್ರೆಸ್​ನಿಂದ ದೂರ ಸರಿದಿದೆ. ಅವರನ್ನು ಹತ್ತಿರ ಸೇರಿಸಿಕೊಳ್ಳುವ ಯಾವ ಪ್ರಯತ್ನವೂ ಫಲ ಕೊಡುತ್ತಿಲ್ಲ.
ಪ್ರತಿಯೊಂದು ರಾಜಕೀಯ ನಿರ್ಧಾರಕ್ಕೆ ಮುನ್ನ ಬಿಜೆಪಿ ಎಷ್ಟೆಲ್ಲ ಲೆಕ್ಕಾಚಾರ ಹಾಕುತ್ತದೆ ಎನ್ನುವುದಕ್ಕೆ ಈ ಮೂರೂ ಸಿಎಂಗಳ ಆಯ್ಕೆಯೇ ತಾಜಾ ನಿದರ್ಶನ. ಛತ್ತೀಸ್​ಗಢದಲ್ಲಿ ಈ ಬಾರಿ ಬುಡಕಟ್ಟು ಸಮುದಾಯ ಬಿಜೆಪಿಯನ್ನು ಬಲವಾಗಿ ಬೆಂಬಲಿಸಿದೆ. ಬುಡಕಟ್ಟು ಮಂದಿ ಹೆಚ್ಚಿನ ಸಂಖ್ಯೆಯಲ್ಲಿರುವ ಸುರ್ಗಜಾ ಮತ್ತು ಬಸ್ತಾರ್ ವಲಯದ 26 ಸೀಟುಗಳಲ್ಲಿ ಬಿಜೆಪಿ 22ನ್ನು ಗೆದ್ದುಕೊಂಡಿದೆ. ಈ ಕಾರಣಕ್ಕಾಗಿಯೇ, ಬುಡಕಟ್ಟು ಸಮುದಾಯದ ವಿಷ್ಣುದೇವ ಸಾಯ್ಗೆ ಸಿಎಂ ಸ್ಥಾನ ಒಲಿದಿದ್ದು, ಇಡೀ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಇದು ಪಕ್ಕದ ಮಧ್ಯಪ್ರದೇಶ (22% ಜನಸಂಖ್ಯೆ), ಜಾರ್ಖಂಡ್ (26% ಜನಸಂಖ್ಯೆ) ರಾಜ್ಯಗಳ ಬುಡಕಟ್ಟು ಮತಗಳನ್ನೂ ಬಿಜೆಪಿ ಕಡೆ ಸೆಳೆಯುವಂತೆ ಮಾಡಬಹುದು. ಒಡಿಶಾದ ಬುಡಕಟ್ಟು ಸಮಾಜದ ದ್ರೌಪದಿ ಮುಮು ಅವರನ್ನು ರಾಷ್ಟ್ರಪತಿ ಮಾಡಿದ ವಿಚಾರಗಳೂ ಚುನಾವಣೆಯಲ್ಲಿ ಧ್ವನಿಸಿದ್ದು, ಈ ಸಮಾಜಕ್ಕೆ ಬಿಜೆಪಿ ಮೇಲೆ ನಂಬಿಕೆ ಹೆಚ್ಚಿರುವುದನ್ನು ಫಲಿತಾಂಶವೇ ತೋರಿಸುತ್ತದೆ. ಒಬಿಸಿ ಸಮಾಜದ ಅರುಣ್ ಸಾವೋ ಮತ್ತು ಬ್ರಾಹ್ಮಣ ಸಮುದಾಯದ ವಿಜಯ್ ಶರ್ಮರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ, ಜಾತಿ ಸಮೀಕರಣದ ಸಮತೋಲನ ಕಾಪಾಡಲಾಗಿದೆ.
ಮಧ್ಯಪ್ರದೇಶದಲ್ಲಿ ಒಬಿಸಿ ನಾಯಕ ಶಿವರಾಜ್ ಚೌಹಾಣ್ ಬದಲಿಗೆ ಅದೇ ಸಮುದಾಯದ ಮೋಹನ್ ಯಾದವ್​ರನ್ನು ಆಯ್ಕೆ ಮಾಡಲಾಗಿದೆ. ಯಾದವ್ ಹೆಸರು ಪಕ್ಕದ ಉತ್ತರಪ್ರದೇಶದಲ್ಲೂ ಪರಿಣಾಮ ಬೀರಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಪ್ರಬಲ ಸವಾಲೊಡ್ಡುವ ನಿರೀಕ್ಷೆಯಿದ್ದು, ಮಧ್ಯಪ್ರದೇಶದಲ್ಲಿ ಯಾದವ ಸಿಎಂ ನೇಮಿಸುವ ಮೂಲಕ ಯಾದವ ಸಮಾಜಕ್ಕೊಂದು ಸಂದೇಶ ರವಾನಿಸಲಾಗಿದೆ. ಅದೇ ರೀತಿ, ಬ್ರಾಹ್ಮಣ ಸಮುದಾಯದ ರಾಜೇಂದ್ರ ಶುಕ್ಲಾ ಮತ್ತು ದಲಿತ ಮುಖಂಡ ಜಗದೀಶ್ ದೇವ್ಡಾರನ್ನು ಡಿಸಿಎಂಗಳನ್ನಾಗಿ ಮಾಡಿ, ಇತರ ಪ್ರಬಲ ಜಾತಿಗಳನ್ನು ಸಮಾಧಾನಪಡಿಸಲಾಗಿದೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಭಜನ್​ಲಾಲ್ ಶರ್ಮರಿಗೆ ಡಿಸಿಎಂಗಳಾಗಿ ದಲಿತ ನಾಯಕ ಪ್ರೇಮ್ಂದ್ ಭೈರ್ವಾ ಮತ್ತು ರಜಪೂತ ಸಮುದಾಯದ ದಿಯಾ ಕುಮಾರಿ ಸಾಥ್ ನೀಡಲಿದ್ದಾರೆ. ವಸುಂಧರಾ ರಾಜೆ ಸಿಂಧಿಯಾರಂತೆ ದಿಯಾ ಕುಮಾರಿ ಕೂಡ ರಾಜಮನೆತನದ ಹಿನ್ನೆಲೆಯುಳ್ಳವರಾದ್ದರಿಂದ ಪ್ರಬಲ ರಜಪೂತರನ್ನು ಸಮಾಧಾನಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ವಸುಂಧರಾ ಬೆಂಬಲಿಸುವ ಮತವರ್ಗಕ್ಕೆ ದಿಯಾ ಕುಮಾರಿ ಭವಿಷ್ಯದ ನಾಯಕಿಯಾಗಿ ಕಾಣಬಹುದು.
ನಾಯಕತ್ವ ಬದಲಾವಣೆ ಎನ್ನುವುದು ಒಂದೊಮ್ಮೆ ನಿಮ್ಮ ಕೈ ಸುಡಲೂಬಹುದು, ಮಗದೊಮ್ಮೆ ಫಲ ಕೊಡಲೂಬಹುದು. ಅದು ಸಂದರ್ಭ, ಸನ್ನಿವೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿಗೆ ಈ ನಿರ್ಧಾರದಿಂದ ಹೆಚ್ಚು ಅನುಕೂಲವಾಗಬಹುದು. ಕರ್ನಾಟಕದಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸಿದ್ದಕ್ಕೆ ಬಿಜೆಪಿ ಭಾರೀ ಬೆಲೆ ತೆರಬೇಕಾಗಿಬಂತು. ಹಾಗಾಗಿ, ರಾಜಸ್ಥಾನದ ವಸುಂಧರಾ ರಾಜೆ ಸುಮ್ಮನಿರುವರಾ ಎಂಬ ಪ್ರಶ್ನೆ ಕಾಡುವುದು ಸಹಜವೇ.
ಪ್ರಯಾಣಿಕರ ಗಮನಕ್ಕೆ… ನೈರುತ್ಯ ರೈಲ್ವೇಯ 22 ರೈಲುಗಳು ಡಿ.14ರಿಂದ ಸ್ಥಗಿತ; ಇಲ್ಲಿವೆ ಪೂರ್ಣ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
