ನವದೆಹಲಿ:ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧನವಾಗಿರುವ ಸುದ್ದಿ ವೆಬ್​ಸೈಟ್ ‘ನ್ಯೂಸ್​ಕ್ಲಿಕ್’ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಬುಧವಾರ (ಮೇ 15) ಆದೇಶ ಹೊರಡಿಸಿದೆ.
ಯುಎಪಿಎ ಅಡಿಯಲ್ಲಿ ಪ್ರಬೀರ್ ಪುರಕಾಯಸ್ಥರನ್ನು ಬಂಧನ ಮಾಡಿದ್ದ ದೆಹಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್​. ಗವಾಯಿ ಮತ್ತು ಸಂದೀಪ್​ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಬಿಡುಗಡೆ ಮಾಡಲು ಆದೇಶಿಸಿದೆ. ಈ ಪ್ರಕರಣದಲ್ಲಿ ರಿಮಾಂಡ್ ಪ್ರತಿಯನ್ನು ಒದಗಿಸಿಲ್ಲ. ಹೀಗಾಗಿ ಈ ಬಂಧನ ಅಮಾನ್ಯವಾಗಿದ್ದು, ಕೂಡಲೇ ಪ್ರಬೀರ್ ಪುರಕಾಯಸ್ಥರನ್ನು ಬಿಡುಗಡೆ ಮಾಡಿ ಎಂದು ನ್ಯಾಯಾಲಯ ಹೇಳಿದೆ.
ಜಾಮೀನು ಬಾಂಡ್‌ಗಳನ್ನು ಒದಗಿಸುವ ವಿಚಾರಣಾ ನ್ಯಾಯಾಲಯದ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ಪ್ರಕರಣದ ಆರೋಪಪಟ್ಟಿ ಸಲ್ಲಿಕೆಯಾದ ಕಾರಣ ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿದೆ. ವಿಚಾರಣಾ ನ್ಯಾಯಾಲಯವು ಜಾಮೀನು ಶ್ಯೂರಿಟಿ ಷರತ್ತುಗಳನ್ನು ವಿಧಿಸಲಿದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.
ನ್ಯೂಸ್‌ಕ್ಲಿಕ್ ಸಂಪಾದಕರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಆತುರದ ನಿರ್ಧಾರಕ್ಕೂ ಮುನ್ನ ಪುರಕಾಯಸ್ಥ ವಕೀಲರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರನ್ನು ಪ್ರಶ್ನೆ ಮಾಡಿದ ಎರಡು ವಾರಗಳ ಬೆನ್ನಲ್ಲೇ ಉನ್ನತ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ಪುರಕಾಯಸ್ಥರನ್ನು ಬಂಧಿಸಿದ್ದೇಕೆ?2023ರ ಅಕ್ಟೋಬರ್​ 4ರಂದು ನ್ಯೂಸ್​ಕ್ಲಿಕ್​ ಸಂಸ್ಥಾಪಕ ಪ್ರಬೀರ್​ ಪುರಕಾಯಸ್ಥ ಮತ್ತು ಎಚ್​ಆರ್​ ಹೆಡ್​​ ಅಮಿತ್​ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದರು. ನ್ಯೂಸ್​ಕ್ಲಿಕ್​​ ಕಚೇರಿ ಮತ್ತು ಅದಕ್ಕೆ ಸಂಬಂಧಿಸಿದ ಪತ್ರಕರ್ತರು ಹಾಗೂ ಉದ್ಯೋಗಿಗಳ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ ಬಳಿಕ ಸಂಸ್ಥಾಪಕ ಪ್ರಬೀರ್​ ಮತ್ತು ಎಚ್​ಆರ್​ ಹೆಡ್ ಚಕ್ರವರ್ತಿಯನ್ನು​ ಬಂಧಿಸಲಾಯಿತು. ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು “ವಿವಾದಿತ ಪ್ರದೇಶಗಳು” ಎಂದು ತೋರಿಸುವ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಎಂಬುದರ ಕುರಿತು ಪ್ರಬೀರ್ ಪುರಕಾಯಸ್ಥ ಮತ್ತು ಅಮೆರಿಕನ್ ಟೆಕ್ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ನಡುವೆ ಇಮೇಲ್ ಮೂಲಕ ಮಾತುಕತೆ ನಡೆದಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಅರುಣಾಚಲ ಪ್ರದೇಶ ಮತ್ತು ಕಾಶ್ಮೀರವು ಭಾರತದ ಭಾಗವಲ್ಲ ಎಂದು ಬಿಂಬಿಸುವುದೇ ಸುದ್ದಿ ವೆಬ್​ಸೈಟ್ ‘ನ್ಯೂಸ್​ಕ್ಲಿಕ್’​ ನ ಜಾಗತಿಕ ಕಾರ್ಯಸೂಚಿ ಆಗಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕವೇ ನ್ಯೂಸ್​ಕ್ಲಿಕ್​ ಸಂಸ್ಥಾಪಕ ಬೀರ್ ಪುರಕಾಯಸ್ಥರನ್ನು ಬಂಧಿಸಿದ್ದಾಗಿ ದೆಹಲಿ ಪೊಲೀಸರು ಸಮರ್ಥನೆ ನೀಡಿದ್ದರು.
ನ್ಯೂಸ್​ಕ್ಲಿಕ್​ ಷೇರುದಾರರಾಗಿರುವ ಗೌತಮ್​ ನಾವ್ಲಖ, ನಿಷೇಧಿತ ನಕ್ಸಲ್​ ಸಂಘಟನೆ ಜತೆ ಕೆಲಸ ಮಾಡಿದ್ದ ಮತ್ತು ಐಎಸ್‌ಐ ಏಜೆಂಟ್ ಗುಲಾಂ ನಬಿ ಫೈ ಜೊತೆ ದೇಶವಿರೋಧಿ ನಂಟು ಹೊಂದಿದ್ದ. ಪ್ರಬೀರ್ ಪುರಕಾಯಸ್ಥ ಪಡೆದ ವಿದೇಶಿ ಹಣವನ್ನು ಕಾರ್ಯಕರ್ತ ತೀಸ್ತಾ ಸೆಟಲ್ವಾಡ್ ಸೇರಿದಂತೆ ಗೌತಮ್ ನವ್ಲಾಖಾ ಮತ್ತು ಇತರರಿಗೆ ರವಾನಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದರು. ಇದಿಷ್ಟೇ ಅಲ್ಲದೆ, ಪ್ರಬೀರ್ ಪುರಕಾಯಸ್ಥ ಅವರು 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪಿತೂರಿಯಲ್ಲಿ ತೊಡಗಿದ್ದರು ಮತ್ತು ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಅಪಖ್ಯಾತಿಗೊಳಿಸಲು ನ್ಯೂಸ್‌ಕ್ಲಿಕ್ “ಸುಳ್ಳು ನಿರೂಪಣೆ” ಯನ್ನು ಸಹ ಪ್ರಚಾರ ಮಾಡಿದೆ. ಈ ಸುಳ್ಳು ನಿರೂಪಣೆಗಳನ್ನು ಕಾನೂನುಬಾಹಿರವಾಗಿ ರವಾನೆಯಾದ ವಿದೇಶಿ ನಿಧಿಯನ್ನು ಬಳಸಿಕೊಂಡು ನ್ಯೂಸ್‌ಕ್ಲಿಕ್ ಒಡೆತನದಲ್ಲಿ ನಿರ್ವಹಿಸುತ್ತಿದ್ದ ಪೀಪಲ್ಸ್ ಡಿಸ್ಪ್ಯಾಚ್ ಪೋರ್ಟಲ್ ಮೂಲಕ ಹರಡಲಾಗುತ್ತಿತ್ತು ಎಂದು ದೆಹಲಿ ಪೊಲೀಸರು ಆರೋಪ ಮಾಡಿದ್ದರು.(ಏಜೆನ್ಸೀಸ್​)
ಅರುಣಾಚಲ ಪ್ರದೇಶ, ಕಾಶ್ಮೀರ ಭಾರತದ ಭಾಗವಲ್ಲ ಎಂಬುದೇ ನ್ಯೂಸ್​ಕ್ಲಿಕ್ ಕಾರ್ಯಸೂಚಿ: ನಕ್ಷೆ ರಚನೆಗೂ ನಡೆದಿತ್ತು ಮಾತುಕತೆ

ಚೀನಾ ಪರ ಪ್ರಚಾರಕ್ಕೆ ಹಣ ಪಡೆದ ಆರೋಪ: ನ್ಯೂಸ್​ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
