ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ನಿರಾಳತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಘೋಷಿಸಿದ್ದಾರೆ. ವೇತನದಾರರ ಸ್ಟ್ಯಾಂಡರ್ಡ್ ಡಿಡಕ್ಷನ್​ನಲ್ಲಿ ಶೇಕಡ 50ರಷ್ಟು ಹೆಚ್ಚಳ ಮಾಡಿದ್ದು 75,000 ರೂಪಾಯಿಗೆ ಏರಿಸಲಾಗಿದೆ. ಹೊಸ ಆದಾಯ ತೆರಿಗೆ ವ್ಯವಸ್ಥೆಯಡಿ ತೆರಿಗೆ ಸ್ಲ್ಯಾಬ್​ಗಳನ್ನು ಬದಲಾಯಿಸಲಾಗಿದ್ದು ವೇತನದಾರ ವರ್ಗದ ಜನರ ಕೈಯಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡಿ ಖರೀದಿಯನ್ನು ಅಧಿಕಗೊಳಿಸುವುದು ಇದರ ಉದ್ದೇಶವಾಗಿದೆ.
17,500 ರೂ. ಉಳಿತಾಯ: ಬಜೆಟ್​ನಲ್ಲಿ ಮಂಡಿಸಿದ ಬದಲಾವಣೆಗಳ ಫಲವಾಗಿ ಹೊಸ ತೆರಿಗೆ ವ್ಯವಸ್ಥೆಯಡಿ ತೆರಿಗೆದಾರ ನೌಕರರು ಪ್ರತಿ ವರ್ಷ ತೆರಿಗೆಯಲ್ಲಿ ಗರಿಷ್ಠ 17,500 ರೂಪಾಯಿವರೆಗೆ ಉಳಿತಾಯ ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು.
ವೇತನದಾರ ನೌಕರರಿಗೆ ವಾರ್ಷಿಕ ಸ್ಟ್ಯಾಂಡರ್ಡ್​ ಡಿಡಕ್ಷನ್​ಅನ್ನು 50,000ದಿಂದ 75,000 ರೂಪಾಯಿಗೆ ಏರಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿಯಲ್ಲಿ ಕಡಿತವನ್ನು 15,000ದಿಂದ 25,000 ರೂಪಾಯಿಗೆ ಏರಿಸಲಾಗುತ್ತದೆ.
4 ಕೋಟಿ ಜನರಿಗೆ ಲಾಭ:ಸ್ಟ್ಯಾಂಡರ್ಡ್​ ಡಿಡಕ್ಷನ್ ಕಡಿತ ಮಿತಿಯನ್ನು ಏರಿಸಿರುವುದರಿಂದ ಸುಮಾರು ನಾಲ್ಕು ಕೋಟಿ ವೇತನದಾರ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಲಾಭವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು.
ಕಳೆದ ವಿತ್ತ ವರ್ಷದಲ್ಲಿ, ಮೂರನೇ ಎರಡಕ್ಕಿಂತ ಅಧಿಕ ವೈಯಕ್ತಿಕ ತೆರಿಗೆದಾರರು ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯ ಸೌಲಭ್ಯ ಪಡೆದಿದ್ದರು. 2023-24ರ ವಿತ್ತ ವರ್ಷದಲ್ಲಿ 8.61 ಕೋಟಿಗೂ ಅಧಿಕ ಐಟಿ ರಿಟರ್ನ್ಸ್​ಗಳನ್ನು ಸಲ್ಲಿಸಲಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯಡಿ ಹೊಸ ತೆರಿಗೆ ಸ್ಲ್ಯಾಬ್​ಗಳು ಇದೇ ವರ್ಷದ ಏಪ್ರಿಲ್ 1ರಿಂದ ಅನ್ವಯವಾಗಲಿದೆ (ಅಸೆಸ್​ವೆುಂಟ್ ವರ್ಷ 2025-26).
ಟಿಡಿಎಸ್ ತಪು್ಪಗಳಿಗೆ ಎಸ್​ಒಪಿ:ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡುವುದರಲ್ಲಿ ತಪು್ಪವ ವಿಚಾರದಲ್ಲಿ ಸ್ಟಾ್ಯಂಡರ್ಡ್ ಆಪರೇಟಿಂಗ್ ಪ್ರೊಸೀಜರ್​ಗಳನ್ನು (ಎಸ್​ಒಪಿ) ಸರ್ಕಾರ ರೂಪಿಸಲಿದೆ. ಮತ್ತು ಇಂಥ ಅಪರಾಧಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಲು ನಿಯಮಗಳನ್ನು ಸರಳೀಕರಿಸಲಾಗುತ್ತದೆ ಹಾಗೂ ಸುಧಾರಿಸಲಾಗುತ್ತದೆ ಎಂದೂ ಹೇಳಿದರು. ಚಾರಿಟೇಬಲ್ ಟ್ರಸ್ಟ್​ಗಳಿಗೆ ತೆರಿಗೆ ವಿನಾಯಿತಿ ನೀಡುವಂಥ ಎರಡು ಪ್ರತ್ಯೇಕ ನಿಯಮಗಳನ್ನು ಒಂದೇ ನಿಯಮವಾಗಿ ವಿಲೀನಗೊಳಿಸಲಾಗುತ್ತದೆ ಎಂದು ಪ್ರಕಟಿಸಿದರು. 2023ರ ಹಣಕಾಸು ವರ್ಷದಲ್ಲಿ ಆಕರವಾದ ಕಾರ್ಪೆರೇಟ್ ತೆರಿಗೆಯಲ್ಲಿ ಶೇಕಡ 58ರಷ್ಟು ತೆರಿಗೆ ಸರಳೀಕೃತ ನಿಯಮದಿಂದ ಬಂದಿದ್ದಾಗಿದೆ ಎಂದು ಸಚಿವರು ಲೋಕಸಭೆಎಗೆ ವಿವರಿಸಿದರು.
ಮುದ್ರಾಂಕ ಶುಲ್ಕ ಕಡಿತಕ್ಕೆ ಉತ್ತೇಜನ:ಆಸ್ತಿಪಾಸ್ತಿಗಳ ಖರೀದಿ ಮೇಲೆ ರಾಜ್ಯ ಸರ್ಕಾರಗಳು ವಿಧಿಸುವ ಮುದ್ರಾಂಕ ಶುಲ್ಕದ (ಸ್ಟಾ್ಯಂಪ್ ಡ್ಯೂಟಿ) ದರ ಅತಿಯಾಗಿದ್ದು ಅವುಗಳನ್ನು ಕಡಿತ ಮಾಡಲು ರಾಜ್ಯಗಳಿಗೆ ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸ್ಟಾ್ಯಂಪ್ ಡ್ಯೂಟಿಯನ್ನು ಇಳಿಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಆಯವ್ಯಯ ಪತ್ರದಲ್ಲಿ ಸಚಿವೆ ಹೇಳಿದ್ದಾರೆ. ನಗರಾಭಿವೃದ್ಧಿ ಯೋಜನೆಗಳಲ್ಲಿ ಇದು ಮಹತ್ವದ ಅಂಶವಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ಏಂಜಲ್ ತೆರಿಗೆ ರದ್ದು:ಷೇರು ಮಾರುಕಟ್ಟೆಗಳಲ್ಲಿ ನೋಂದಾವಣೆಯಾಗದ (ಅನ್​ಲಿಸ್ಟೆಡ್) ಕಂಪನಿಗಳ ಮತ್ತು ಸ್ಟಾರ್ಟಪ್​ಗಳ ಷೇರುಗಳ ಮೇಲಿನ ತೆರಿಗೆಯನ್ನು (ಏಂಜಲ್ ಟ್ಯಾಕ್ಸ್) ತೆಗೆದು ಹಾಕುವುದಾಗಿ ಸರ್ಕಾರ ಬಜೆಟ್​ನಲ್ಲಿ ಘೋಷಿಸುವ ಮೂಲಕ ಸ್ಟಾರ್ಟಪ್​ಗಳಿಗೆ ದೊಡ್ಡ ಸಹಾಯ ಹಸ್ತವನ್ನು ಚಾಚಿದೆ. ಇದು ಎಲ್ಲ ವರ್ಗಗಳ ಹೂಡಿಕೆದಾರರಿಗೆ ಅನ್ವಯವಾಗಲಿದ್ದು ದೇಶದ ಉದಯೋನ್ಮುಖ ಉದ್ಯಮಿಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಅನ್​ಲಿಸ್ಟೆಡ್ ಕಂಪನಿಗಳು ಅಥವಾ ಸ್ಟಾರ್ಟಪ್​ಗಳು ಸಂಗ್ರಹ ಮಾಡುವ ಬಂಡವಾಳದ ಮೊತ್ತವು ಕಂಪನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕವಾಗಿದ್ದರೆ ಅದರ ಮೇಲೆ ಸರ್ಕಾರ ವಿಧಿಸುವ ತೆರಿಗೆಯನ್ನು ಏಂಜಲ್ ಟ್ಯಾಕ್ಸ್ ಎನ್ನಲಾಗುತ್ತದೆ. ಭಾರತದಲ್ಲಿ ಸ್ಟಾರ್ಟಪ್ ಪರಿಸರಕ್ಕೆ ಉತ್ತೇಜನ ನೀಡಲು, ಔದ್ಯಮಿಕ ಉತ್ಸಾಹವನ್ನು ಹೆಚ್ಚಿಸಲು ಹಾಗೂ ಆವಿಷ್ಕಾರಕ್ಕೆ ಬೆಂಬಲ ಒದಗಿಸುವ ಉದ್ದೇಶದಿಂದ ಎಲ್ಲ ವರ್ಗಗಳ ಹೂಡಿಕೆದಾರರಿಗೆ ಏಂಜಲ್ ತೆರಿಗೆಯನ್ನು ರದ್ದು ಪಡಿಸುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಸ್ಟಾರ್ಟಪ್​ಗಳ ಮೇಲಿನ ಈ ತೆರಿಗೆಯನ್ನು ತೆಗೆದು ಹಾಕುವಂತೆ ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಪ್ರವರ್ತನೆ ಇಲಾಖೆ (ಡಿಪಿಐಐಟಿ) ಕೇಂದ್ರ ಬಜೆಟ್​ಗೂ ಮುನ್ನ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಹೊಸ ಏಂಜಲ್ ಟ್ಯಾಕ್ಸ್ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿತ್ತು.
ತೆರಿಗೆ ಸ್ಲ್ಯಾಬ್ ಅಲ್ಪ ಬದಲಾವಣೆ: ಹೊಸ ವ್ಯವಸ್ಥೆಯಡಿ 3 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿಕೆ ಮುಂದುವರಿಯಲಿದೆ ಎಂದು ವಿತ್ತ ಸಚಿವರು ತಿಳಿಸಿದರು. 3ರಿಂದ 7 ಲಕ್ಷ ರೂಪಾಯಿ ನಡುವಿನ ಆದಾಯಕ್ಕೆ ಶೇಕಡ 5 ತೆರಿಗೆ, 7ರಿಂದ 10 ಲಕ್ಷ ರೂಪಾಯಿ ನಡುವಿನ ಆದಾಯಕ್ಕೆ ಶೇ. 10 ಮತ್ತು 10ರಿಂದ 12 ಲಕ್ಷ ರೂಪಾಯಿ ನಡುವಿನ ಆದಾಯಕ್ಕೆ ಶೇ. 15 ತೆರಿಗೆ ವಿಧಿಸಲಾಗುತ್ತದೆ. ಆದರೆ, 12-15 ಲಕ್ಷ ರೂಪಾಯಿ ಮಧ್ಯದ ಆದಾಯಕ್ಕೆ ಶೇ. 20 ಹಾಗೂ 15 ಲಕ್ಷ ರೂಪಾಯಿಗಿಂತ ಮೇಲಿನ ಆದಾಯಕ್ಕೆ ಶೇ. 30 ತೆರಿಗೆ ಹೇರುವುದು ಮುಂದುವರಿಯಲಿದೆ. ಈಗ ಅಸ್ತಿತ್ವದಲ್ಲಿರುವ ಹೊಸ ಐ-ಟಿ ವ್ಯವಸ್ಥೆಯಡಿ 3ರಿಂದ 6 ಲಕ್ಷ ರೂಪಾಯಿ ನಡುವಿನ ಆದಾಯಕ್ಕೆ ಶೇ. 5, 6ರಿಂದ 9 ಲಕ್ಷ ರೂ. ಆದಾಯಕ್ಕೆ ಶೇ. 10 ತೆರಿಗೆ ಹೇರಲಾಗುತ್ತಿದೆ. 9-12 ಲಕ್ಷ ರೂಪಾಯಿಗೆ ಶೇ. 15 ಹಾಗೂ 12-15 ಲಕ್ಷ ರೂ. ಆದಾಯಕ್ಕೆ ಶೇ. 20 ತೆರಿಗೆ ಹೇರಲಾಗುತ್ತಿದೆ.

ಮಹಿಳೆಯರಿಗೆ ಆದ್ಯತೆ: ವಿಶೇಷವಾಗಿ ಮಹಿಳೆಯರು ಖರೀದಿಸುವ ಆಸ್ತಿಗಳಿಗೆ ಮುದ್ರಾಂಕ ಶುಲ್ಕಗಳನ್ನು ಇನ್ನಷ್ಟು ಇಳಿಸುವುದನ್ನು ಪರಿಶೀಲಿಸುವಂತೆಯೂ ಅವರು ರಾಜ್ಯಗಳಿಗೆ ಮನವಿ ಮಾಡಿದರು. ಮುದ್ರಾಂಕ ಶುಲ್ಕವು ಆಸ್ತಿ ಅಥವಾ ಆಸ್ತಿ ಮಾಲೀಕತ್ವದ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಹೇರುವ ತೆರಿಗೆಯಾಗಿದೆ. 1899ರ ಭಾರತೀಯ ಮುದ್ರಾಂಕ ಕಾನೂನಿನ ಸೆಕ್ಷನ್ 3ರ ಅನ್ವಯ ಇದನ್ನು ಪಾವತಿಸಬೇಕಾಗುತ್ತದೆ. ಸೇಲ್ ಡೀಡ್ ಅಥವಾ ಕನ್ವೇಯನ್ಸ್ ಡೀಡ್ ಅಥವಾ ಗಿಫ್ಟ್ ಡೀಡ್ ವಿಧಾನದಿಂದ ಪಡೆದುಕೊಳ್ಳುವ ಆಸ್ತಿಯ ನೋಂದಣಿ ವೇಳೆ ಸ್ಟಾ್ಯಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಮುದ್ರಾಂಕ ಶುಲ್ಕವು ಒಂದು ಪ್ರಮುಖ ಆದಾಯ ಮೂಲವಾಗಿದೆ.
ತೆರಿಗೆ ಕಾನೂನಿನ ಪರಿಶೀಲನೆ:ಆದಾಯ ತೆರಿಗೆ ಕಾನೂನನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಅದರ ಸಮಗ್ರ ಪರಿಶೀಲನೆಗೆ ಉದ್ದೇಶಿಸಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

1.17 ಲಕ್ಷ ಸ್ಟಾರ್ಟಪ್​ಗಳು: ಸುಮಾರು 1.17 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್​ಗಳು ಸರ್ಕಾರದೊಂದಿಗೆ ನೋಂದಣಿ ಮಾಡಿಕೊಂಡಿವೆ. ಸರ್ಕಾರದ ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ ನಾನಾ ಉತ್ತೇಜನಗಳನ್ನು ಪಡೆಯಲು ಅವು ಅರ್ಹವಾಗಿವೆ.
ಉದ್ಯಮ ವಲಯದ ಹರ್ಷ:ಏಂಜಲ್ ತೆರಿಗೆ ರದ್ದುಗೊಳಿಸುವ ಬಜೆಟ್ ಘೋಷಣೆಗೆ ಉದ್ಯಮ ವಲಯದವರು ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟಪ್​ಗಳಲ್ಲಿ ಹೂಡಿಕೆ ಮಾಡುವವರ ವೆಚ್ಚದ ಲೆಕ್ಕಾಚಾರವನ್ನು ಬದಲಾಯಿಸುವುದರ ಜತೆಯಲ್ಲಿ ಪ್ರಮುಖ ವಿದೇಶಿ ಹೂಡಿಕೆದಾರರಿಗೆ ಕೂಡ ಇದರಿಂದ ಅನುಕೂಲವಾಗಲಿದೆ ಎಂದು ಡಿಲಾಯ್್ಟ ಇಂಡಿಯಾದ ಪಾಲುದಾರ ಸುಮಿತ್ ಸಿಂಘಾನಿಯಾ ವಿಶ್ಲೇಷಿಸಿದ್ದಾರೆ. ಇದೊಂದು ಮಹತ್ವದ ಪ್ರಕಟಣೆಯಾಗಿದೆ ಎಂದಿರುವ ಇಂಡಸ್​ಲಾ ಪಾಲುದಾರ ಲೋಕೇಶ್ ಷಾ, ಇದು ವಿಶೇಷವಾಗಿ ಸ್ಟಾರ್ಟಪ್​ಗಳ ಸಹಿತ ಭಾರತೀಯ ಕಂಪನಿಗಳಿಗೆ ದೊಡ್ಡ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಏಡ್ಸ್​ನಿಂದ ಪ್ರತಿ ನಿಮಿಷಕ್ಕೂ ಒಬ್ಬರ ಸಾವು: ವಿಶ್ವಸಂಸ್ಥೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
