ನವದೆಹಲಿ/ಪಟನಾ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಆಳುವ ಮಹಾ ಘಟಬಂಧನ್ ಮತ್ತು ಪ್ರತಿಪಕ್ಷಗಳ ಐಎನ್​ಡಿಐಎ (ಇಂಡಿಯಾ) ಮೈತ್ರಿಕೂಟಗಳೆರಡಕ್ಕೂ ಮಹಾ ಆಘಾತ ನೀಡುವ ದೊಡ್ಡ ಹೆಜ್ಜೆಯನ್ನು ಇಟ್ಟಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಕೂಟವನ್ನು ಸೇರಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ. ನಿತೀಶ್ ಕುಮಾರ್ ಗುರುವಾರವೇ, ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸಿದ್ದಲ್ಲದೆ ಇಂಡಿಯಾ ಕೂಟ ತೊರೆದು ಬಿಜೆಪಿ ಶಿಬಿರದತ್ತ ನಿಷ್ಠೆ ಬದಲಾವಣೆಯ ಸುಳಿವು ನೀಡಿದ್ದು ಅದು ದೃಢಪಡುವಂಥ ಇನ್ನಷ್ಟು ವಿದ್ಯಮಾನಗಳು ಶುಕ್ರವಾರ ನಡೆದಿವೆ. ಭಾನುವಾರ ಬಿಜೆಪಿ-ಜೆಡಿಯು ಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ಬಿಜೆಪಿ ಬೆಂಬಲದೊಂದಿಗೆ ಸಿಎಂ ಗಾದಿಯಲ್ಲಿ ಮುಂದುವರಿಯುವ ಸಲುವಾಗಿ ಭಾನುವಾರ ರಾಜೀನಾಮೆ ನೀಡಲಿರುವ ನಿತೀಶ್, ಅದೇ ದಿನ ಮಹಾಘಟಬಂಧನಕ್ಕೆ ಗುಡ್​ಬೈ ಹೇಳಿ ಎನ್​ಡಿಎಯನ್ನು ಅಪ್ಪಿಕೊಳ್ಳುವುದು ನಿಶ್ಚಿತವೆಂಬುದು ರಾಜಕೀಯ ವಲಯದ ಲೆಕ್ಕಾಚಾರವಾಗಿದೆ. ಜೆಡಿಯು ಜೊತೆ ಲಾಲು ಪ್ರಸಾದ್ ನಾಯಕತ್ವದ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮತ್ತು ಕಾಂಗ್ರೆಸ್ ಪ್ರಸಕ್ತ ಮಹಾ ಘಟಬಂಧನ್​ನ ಭಾಗವಾಗಿವೆ. ನಿತೀಶ್ ಜೊತೆಗೆ ಬಿಜೆಪಿಯ ಇಬ್ಬರು ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಇದು 2020ರ ವಿಧಾನಸಭೆ ಚುನಾವಣೆ ನಂತರ ಮಾಡಿಕೊಳ್ಳಲಾದ ಒಪ್ಪಂದಕ್ಕೆ ಅನುಗುಣವಾಗಿರಲಿದೆ.
ವಿಧಾನಸಭೆ ವಿಸರ್ಜನೆ ಇಲ್ಲ:ಹಾಲಿ ಆಳುವ ಕೂಟಕ್ಕೆ ಸಿಎಂ ವಿದಾಯ ಹೇಳಿದರೂ ವಿಧಾನಸಭೆಯನ್ನು ವಿಸರ್ಜಿಸ ಲಾಗುವುದಿಲ್ಲ ಮತ್ತು ಸದ್ಯಕ್ಕೆ ಹೊಸ ಚುನಾವಣೆಯನ್ನು ನಡೆಸಲಾಗುವುದಿಲ್ಲ. 2025ರಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಜೆಡಿಯು ಮತ್ತು ಬಿಜೆಪಿಯಲ್ಲಿ ಯಾವ ಪಕ್ಷಕ್ಕೂ ಈಗಲೇ ಅಸೆಂಬ್ಲಿ ಚುನಾವಣೆಗೆ ಹೋಗುವ ಆತುರ ಕಾಣುತ್ತಿಲ್ಲ. ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಅವು ಗಮನವನ್ನು ಕೇಂದ್ರೀಕರಿಸಲಿವೆ. ಎರಡೂ ಪಕ್ಷಗಳ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಅಧಿಕಾರ ಹಂಚಿಕೆ ಕುರಿತು ಅಧಿಕೃತ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ನಿತೀಶ್ ಮುಂದಿನ ವರ್ಷದ ವಿಧಾನಸಭೆ ಚುನಾವಣೆವರೆಗೆ ಮುಖ್ಯ ಮಂತ್ರಿಯಾಗಿ ಮುಂದು ವರಿದು ಜೆಡಿಯು ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯನ್ನು ಎದುರಿಸಲಿವೆ.
ಚಹಾಕೂಟದಿಂದ ತೇಜಸ್ವಿ ಯಾದವ್ ದೂರ:ಶುಕ್ರವಾರ ಸಂಜೆ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಗಣರಾಜ್ಯ ದಿನದ ಪ್ರಯುಕ್ತ ಏರ್ಪಡಿಸಿದ್ದ ಚಹಾಕೂಟದ ವೇಳೆ ಜೆಡಿಯು ಮತ್ತು ಆರ್​ಜೆಡಿ ನಡುವಿನ ಬಿರುಕು ಮತ್ತಷ್ಟು ಬಹಿರಂಗಕ್ಕೆ ಬಂತು. ಸಿಎಂ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾದರೆ ಡಿಸಿಎಂ ಹಾಗೂ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಕೂಟದಲ್ಲಿ ಭಾಗವಹಿಸಲಿಲ್ಲ. ಶುಕ್ರವಾರದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಒಂದೇ ವೇದಿಕೆಯಲ್ಲಿ ಬಹಳ ಹೊತ್ತು ಇದ್ದರೂ ಒಮ್ಮೆಯೂ ಪರಸ್ಪರ ಮಾತಾಡದೇ ಇದ್ದುದು ಗಮನಾರ್ಹವಾಗಿತ್ತು. ರಾಜಕೀಯ ಮುನಿಸು ಅಲ್ಲಿ ಎದ್ದು ಕಾಣುತ್ತಿತ್ತು.
ಸ್ಪಷ್ಟನೆ ನೀಡುವಂತೆ ಆರ್​ಜೆಡಿ ಆಗ್ರಹ:ಈ ನಡುವೆ, ರಾಜಕೀಯ ಅಸ್ಥಿರತೆ ಮಧ್ಯೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ನಿತೀಶ್ ಕುಮಾರ್​ರನ್ನು ಆರ್​ಜೆಡಿ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೆ, ಭೇಟಿಗೆ ಸಮಯವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಮಹಾ ಘಟಬಂಧನ್​ನಲ್ಲಿ ಮುಂದುವರಿಯುತ್ತೀರಾ ಎಂದು ಸ್ಪಷ್ಟಪಡಿಸುವಂತೆ ಆರ್​ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಕುಮಾರ್​ರನ್ನು ಒತ್ತಾಯಿಸಿದ್ದಾರೆ. ‘ಕುಮಾರ್ ಎಷ್ಟು ಸಲ ಎನ್​ಡಿಎಗೆ ಹೋಗುತ್ತಾರೆ? ಅವರು ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆಯೇ?’ ಎಂದು ತಿವಾರಿ ವ್ಯಂಗ್ಯವಾಡಿದ್ದಾರೆ.
ರೇಣು ದೇವಿಗೆ ಪುನಃ ಡಿಸಿಎಂ ಸ್ಥಾನ ಸಾಧ್ಯತೆ:ಬಿಹಾರದ ಪ್ರಥಮ ಮಹಿಳಾ ಉಪ ಮುಖ್ಯಮಂತ್ರಿಯಾಗಿದ್ದ ರೇಣು ದೇವಿ ಹೊಸ ಮೈತ್ರಿಕೂಟ ಸರ್ಕಾರದಲ್ಲಿ ತಮ್ಮ ಹಳೆಯ ಹುದ್ದೆಯನ್ನು ಮರಳಿ ಪಡೆಯುವುದು ನಿಶ್ಚಿತವೆನಿಸಿದೆ. ರೇಣು ಅತಿ ಹಿಂದುಳಿದ ವರ್ಗದ ನೋನಿಯಾ ಸಮುದಾಯದವರಾಗಿದ್ದಾರೆ.
ಇನ್ನೊಬ್ಬ ಡಿಸಿಎಂ ಯಾರಾಗಬಹುದು?:ಮಾಜಿ ಡಿಸಿಎಂ ಹಾಗೂ ರಾಜ್ಯಸಭೆ ಸದಸ್ಯ ಸುಶೀಲ್ ಕುಮಾರ್ ಮೋದಿ, ವಿಪಕ್ಷ ನಾಯಕ ವಿಜಯ್ ಕುಕುಮಾರ್ ಸಿನ್ಹಾ ಮತ್ತು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೆಸರು ಈ ಹುದ್ದೆಗೆ ಕೇಳಿಬರುತ್ತಿವೆ.
ಪ್ರಧಾನಿ ಮೋದಿ ಮಂತ್ರ:ಪ್ರಧಾನಿ ನರೇಂದ್ರ ಮೋದಿ ಯವರನ್ನು ಕೆಳಗಿಳಿಸುವ ಉತ್ಸಾಹದಿಂದ ಪ್ರತಿಪಕ್ಷಗಳ ಜೊತೆ ಕೈ ಜೋಡಿಸಿದ್ದ ನಿತೀಶ್, ಈಗ ಪುನಃ ಮೋದಿಯತ್ತಲೇ ಸರಿದಿರುವುದು ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ ಶಾಶ್ವತ ಶತ್ರುಗಳೂ ಅಲ್ಲ ಎಂಬ ಮಾತಿಗೆ ಪುಷ್ಟಿ ನೀಡಿದಂತಿದೆ.
2022ರಲ್ಲಿ ಅಂತ್ಯವಾಗಿದ್ದ ಮೈತ್ರಿ:ಎನ್​ಡಿಎ ಜೊತೆಗಿದ್ದ ನಿತೀಶ್, 2022 ಆಗಸ್ಟ್​ನಲ್ಲಿ ಮೈತ್ರಿಯನ್ನು ಕಡಿದುಕೊಂಡು ಮಹಾ ಘಟಬಂಧನ್ ಸೇರಿ ಸಿಎಂ ಆಗಿ ಮುಂದುವರಿದಿದ್ದರು. ಇದೀಗ ಮತ್ತೆ ಘಟಬಂಧನ್​ಗೆ ಕೈಕೊಟ್ಟು ಬಿಜೆಪಿ ಬೆಂಬಲದಿಂದ ಸಿಎಂ ಗಾದಿಯಲ್ಲಿ ಮುಂದುವರಿಯುವತ್ತ ಹೆಜ್ಜೆ ಇಟ್ಟಿದ್ದಾರೆ.
9ನೇ ಸಲ:ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರೆ ನಿತೀಶ್ ಕುಮಾರ್ 9ನೇ ಬಾರಿಗೆ ಬಿಹಾರದ ಚುಕ್ಕಾಣಿ ಹಿಡಿದಂತಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
