ರಾಘವ ಶರ್ಮ ನಿಡ್ಲೆ, ನವದೆಹಲಿ
1990ರ ನಂತರದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ 2020ರಲ್ಲಿ ಬಿಹಾರ ಮತದಾರರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 30 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು (ಬಿಜೆಪಿ) ರಾಜ್ಯ ಚುನಾವಣೆಯಲ್ಲಿ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿದೆ. ಏಕೆಂದರೆ, ಆರ್​ಜೆಡಿ (75) ಬಿಜೆಪಿಗಿಂತ (74) ಒಂದು ಸೀಟು ಹೆಚ್ಚು ಗೆದ್ದರೂ, ಆರ್​ಜೆಡಿ ಸ್ಪರ್ಧಿಸಿದ್ದು 144 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ ಸ್ಪರ್ಧಿಸಿದ್ದು 110 ಕ್ಷೇತ್ರಗಳಲ್ಲಿ. ಸರಾಸರಿ ಆಧಾರದಲ್ಲಿ ಆರ್​ಜೆಡಿಗಿಂತ ಬಿಜೆಪಿ ಎಷ್ಟೋ ಮುಂದಿರುವುದು ಇದರಲ್ಲೇ ದೃಢವಾಗುತ್ತದೆ.
-ತಗ್ಗಿದ ನಿತೀಶ್ ಬಲ-ಆರ್​ಜೆಡಿ ಕನಸಿಗೆ ಕೈ ಕೊಳ್ಳಿ-ಎಡಪಕ್ಷಗಳಿಗೆ ಸಮಾಧಾನಕರ
ಬಿಹಾರ ವಿಧಾನಸಭೆ ಚುನಾವಣೆಗಳ ಇತಿಹಾಸದಲ್ಲೇ ಅತೀವ ಪೈಪೋಟಿಗೆ ಸಾಕ್ಷಿಯಾಗಿದ್ದ ಮತಸಮರದಲ್ಲಿ ಎನ್​ಡಿಎ ಹರಸಾಹಸ ಪಟ್ಟು ಮಹಾಘಟಬಂಧನವನ್ನು ಹಿಂದಿಕ್ಕಿ ಎದ್ದೂಬಿದ್ದೂ ಗೆಲುವಿನ ದಡ ಸೇರಿದೆ. 3 ದಶಕಗಳಿಂದ ಜನತಾದಳ ಮತ್ತು ಜೆಡಿಯು ಎಂಬ ಎರಡು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮುಂದಿನ 5 ವರ್ಷಗಳ ಮಟ್ಟಿಗೆ ಬಿಜೆಪಿಗೆ ಹಿರಿಯಣ್ಣನ ಸ್ಥಾನ ಪ್ರಾಪ್ತಿಯಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಎನ್​ಡಿಎ ಮೈತ್ರಿಕೂಟದ ನಾಯಕತ್ವ ವಹಿಸಿದರೂ, ಬಿಹಾರದಲ್ಲಿ ಜೆಡಿಯುನ ನಿತೀಶ್ ಕುಮಾರ್ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದ ಬಿಜೆಪಿಯ ದಿಲ್ಲಿ ನಾಯಕರು, ಈ ಬಾರಿ ತಮ್ಮ ತಾಳಕ್ಕೆ ನಿತೀಶ್ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ನಿತೀಶ್ ನಾಯಕತ್ವವನ್ನು ಅನುಮೋದಿಸಿದರೂ, ಅತ್ಯಧಿಕ ಸೀಟುಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿ ರಾಜ್ಯ ಸರ್ಕಾರದಲ್ಲಿ ಹಕ್ಕು, ಪ್ರಾಬಲ್ಯ ಸಾಧಿಸಬೇಕೆಂಬ ಬಿಜೆಪಿ ಆಶಯ ಈಡೇರಿದೆ. ಜೆಡಿಯುಗೆ ಬಿಜೆಪಿಗಿಂತ 31 ಸೀಟು ಕಡಿಮೆ ಬಂದಿದೆ. ಆದರೆ, ಇದನ್ನು ನಿತೀಶ್​ವಿರೋಧಿ ಅಲೆ ಎನ್ನಬೇಕೋ ಅಥವಾ ಎಲ್​ಜೆಪಿಯ ದ್ವೇಷ ರಾಜಕಾರಣಕ್ಕೆ ನಿತೀಶ್ ಬಲಿಪಶುವಾದರೋ ಎಂಬ ಚರ್ಚೆಗಳಂತೂ ನಡೆಯುತ್ತಿವೆ.
ಜೆಡಿಯು-ಬಿಜೆಪಿ ಸಮಾನವಾಗಿ ಸೀಟು ಹಂಚಿಕೊಂಡಿದ್ದವು ಮತ್ತು ತಮ್ಮ ಸೀಟುಗಳಲ್ಲೇ ಮಿತ್ರಪಕ್ಷಗಳಾದ ಹಿಂದುಸ್ತಾನಿ ಅವಾಮಿ ಮೋರ್ಚಾ ಮತ್ತು ವಿಕಾಸ್​ಶೀಲ್ ಇನ್ಸಾನ್ ಪಾರ್ಟಿಗಳಿಗೆ ಹಂಚಿಕೆ ಮಾಡಿದ್ದವು. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನೇ ಅವಲಂಬಿಸಿದ್ದ ಬಿಜೆಪಿಗೆ, ಬಹುಪಾಲು ಮತದಾರರು ಒಲವು ತೋರಿದ್ದಾರೆ. ಆದರೆ, ಸದೃಢ ನಾಯಕತ್ವ ಮತ್ತು 15 ವರ್ಷಗಳ ಸುಶಾಸನದ ಹೆಸರಲ್ಲಿ ಮತ ಯಾಚಿಸಿದ್ದ ನಿತೀಶ್ ಕುಮಾರ್​ರನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಲ್ಲ. ಅವರ ನಾಯಕತ್ವವನ್ನು ಪ್ರಶ್ನಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಂತ ಈ ಆಡಳಿತ-ವಿರೋಧಿ ಅಲೆ ನಿತೀಶ್ ಮೇಲಿತ್ತೇ ವಿನಾ ಸರ್ಕಾರದ ಪಾಲುದಾರ ಪಕ್ಷ ಬಿಜೆಪಿ ಮೇಲಿರಲಿಲ್ಲ. ಬಿಜೆಪಿಯನ್ನು ಬೆಂಬಲಿಸಿದ ಮತದಾರ ಅಭಿವೃದ್ಧಿ ರಾಜಕಾರಣಕ್ಕೆ ಬಿಜೆಪಿ ಸಾರಥ್ಯವೇ ಸೂಕ್ತ ಎಂಬ ಸಂದೇಶ ರವಾನಿಸಿದ್ದಾನೆ. ಚುನಾವಣೆಯ ಪ್ರಚಾರದುದ್ದಕ್ಕೂ ತಮ್ಮ ಬಗ್ಗೆ ಜನರಲ್ಲಿ ಹಿಂದಿದ್ದ ವಿಶ್ವಾಸ ಈಗ ಉಳಿದಿಲ್ಲ ಎಂಬುದು ನಿತೀಶ್​ಗೆ ಅರ್ಥವಾಗಿತ್ತು ಮತ್ತು ಕೊನೆಯ ಹಂತದಲ್ಲಿ ಹತಾಶರಾದವರಂತೆ ಕಂಡುಬಂದಿದ್ದ ಅವರು, ‘ಇದು ನನ್ನ ಕೊನೆಯ ಚುನಾವಣೆ. ಮತ್ತೊಂದು ಅವಕಾಶ ಕೊಡಿ’ ಎಂದಿದ್ದು ಉಲ್ಲೇಖಾರ್ಹ.
ಎಲ್​ಜೆಪಿ ಕಾರಣಎನ್​ಡಿಎ ಮೈತ್ರಿಕೂಟದಲ್ಲಿ ಜೆಡಿಯುಗಿಂತ ಹೆಚ್ಚು ಸೀಟುಗಳನ್ನು ಗೆದ್ದುಕೊಳ್ಳುವಲ್ಲಿ ಎಲ್​ಜೆಪಿಯ ‘ಮತವಿಭಜನೆ ತಂತ್ರ’ ಬಿಜೆಪಿಗೆ ಹೆಚ್ಚು ನೆರವಾಗಿದೆ. ಉದಾಹರಣೆಗೆ- ದರ್ಭಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್​ಜೆಡಿಯ ಲಲಿತ್ ಕುಮಾರ್ ಜೆಡಿಯುನ ಫರಾಜ್ ಫತ್ಮಿ ವಿರುದ್ಧ ಕೇವಲ 2141 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇಲ್ಲಿ ಎಲ್​ಜೆಪಿ ಪಡೆದ ಮತಗಳು 17,605. ಸಾಹೇಬ್​ಪುರ್ ಕಮಲ್ ಕ್ಷೇತ್ರದಲ್ಲಿ ಸತಾನಂದ್ ಸಂಬುಧ್ ಜೆಡಿಯುನ ಶಶಿಕಾಂತ್ ಕುಮಾರ್ ವಿರುದ್ಧ 14,225 ಮತಗಳ ಅಂತರದಲ್ಲಿ ಗೆದ್ದರು. ಇಲ್ಲಿ ಎಲ್​ಜೆಪಿಗೆ ಸಿಕ್ಕ ಮತಗಳು 22,871. ಮಹಾರಾಜ್​ಗಂಜ್ ಕ್ಷೇತ್ರದಲ್ಲಿ ಆರ್​ಜೆಡಿ ಗೆಲುವಿನ ಅಂತರ 1976 ಮತಗಳು. ಎಲ್​ಜೆಪಿಗೆ ಸಿಕ್ಕಿದ್ದು 18,278. ದಿನಾರಾ ಕ್ಷೇತ್ರದಲ್ಲಿ ಆರ್​ಜೆಡಿ 32,289 ಮತಗಳ ಅಂತರದಲ್ಲಿ ಗೆದ್ದಿತು. ಇಲ್ಲಿ ಎಲ್​ಜೆಪಿ ಬರೋಬ್ಬರಿ 51,313 ಮತಗಳನ್ನು ಬಾಚಿಕೊಂಡಿತು. ಹೀಗೆ ಹಲವು ಕ್ಷೇತ್ರಗಳಲ್ಲಿ ಆರ್​ಜೆಡಿ ವಿರುದ್ಧ ನೇರಾನೇರ ಸ್ಪರ್ಧೆ ಎದುರಿಸಬೇಕಿದ್ದ ಜೆಡಿಯುಗೆ ಎಲ್​ಜೆಪಿ ಮತವಿಭಜನೆ ತಂತ್ರ ಮುಳುವಾಯಿತು. ಚುನಾವಣಾಪೂರ್ವದಲ್ಲಿ ಈ ಬಗ್ಗೆ ಬಿಜೆಪಿಗೆ ಅರಿವಿರಲಿಲ್ಲವೇ? ಬಿಹಾರದಲ್ಲಿ ಪ್ರಮುಖ ಮಿತ್ರಪಕ್ಷವನ್ನು ಹಣಿಯುವ ತಂತ್ರಗಾರಿಕೆ ಅನುಸರಿಸಿದ್ದರೂ ಬಿಜೆಪಿ ನಾಯಕರು ಚಿರಾಗ್ ಪಾಸ್ವಾನ್​ರನ್ನು ಸಮಾಧಾನ ಮಾಡಿರಲಿಲ್ಲ. ಬದಲಿಗೆ, ಅವಕಾಶ ಸಿಕ್ಕಲ್ಲೆಲ್ಲಾ ಮಾಜಿ ಸಚಿವ ದಿವಂಗತ ರಾಮ್​ಲಾಸ್ ಪಾಸ್ವಾನ್​ರನ್ನು ಶ್ಲಾಘಿಸುತ್ತಾ, ಪರೋಕ್ಷವಾಗಿ ಎಲ್​ಜೆಪಿಯನ್ನು ಬೆಂಬಲಿಸಲಾಯಿತು. ಜೆಡಿಯು ಸೀಟುಗಳನ್ನು ತಗ್ಗಿಸುವಲ್ಲಿ ಬಿಜೆಪಿಯ ‘ವ್ಯವಸ್ಥಿತ ತಂತ್ರ’ ತಕ್ಕಮಟ್ಟಿಗೆ ಫಲಕೊಟ್ಟಿತು.
ತೇಜಸ್ವಿ ತಂತ್ರ ಮೀರಿಸಿದ ಮೋದಿ ಅಲೆಮೋದಿ ವಿರುದ್ಧ ಯಾವುದೇ ವೈಯಕ್ತಿಕ ವಾಗ್ದಾಳಿ ನಡೆಸದೆ, ವಿಷಯಾಧಾರಿತವಾಗಿ ಚುನಾವಣೆ ಎದುರಿಸಲು ತೇಜಸ್ವಿ ಯಾದವ್ ಸ್ಪಷ್ಟ ಕಾರ್ಯತಂತ್ರ ರೂಪಿಸಿದ್ದರು. ನಿರುದ್ಯೋಗ, ವಲಸಿಗ ಸಮಸ್ಯೆ ಸೇರಿ ನಿತೀಶ್ ನಾಯಕತ್ವದ ವೈಫಲ್ಯಗಳನ್ನೇ ಮುಂದಿಟ್ಟು ಮತ ಕೇಳಿದ್ದರು. ಬಿಜೆಪಿ ನಾಯಕರು ಲಾಲು ಪ್ರಸಾದ್ ಯಾದವ್ ಕಾಲದ (1990ರಿಂದ 2005) ‘ಜಂಗಲ್​ರಾಜ್’ ವಿಷಯ ಪ್ರಸ್ತಾಪಿಸಿಗುರಿ ಮಾಡುತ್ತಾರೆ ಎಂಬುದನ್ನರಿತಿದ್ದ ತೇಜಸ್ವಿ, ಮತಯಾಚನೆಗೆ ತಂದೆಯ ಹೆಸರನ್ನೇನೂ ಬಳಸಿಕೊಳ್ಳಲಿಲ್ಲ. ಜಾತಿ ಸಮೀಕರಣದ ಲೆಕ್ಕಾಚಾರದ ಮಧ್ಯೆಯೇ, ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಯುವಕರನ್ನು ಸೆಳೆಯಲು ಯತ್ನಿಸಿದರು. 2019ರಲ್ಲಿದ್ದ ಪ್ರಧಾನಿ ಮೋದಿ ಜನಪ್ರಿಯತೆ ಈಗಲೂ ರಾಜ್ಯದಲ್ಲಿ ಮುಂದುವರಿದಿರುವುದರಿಂದ ತೇಜಸ್ವಿ ನಿತೀಶ್​ರನ್ನೇ ಟಾರ್ಗೆಟ್ ಮಾಡಿದ್ದರು. ನಾಯಕತ್ವದ ವಿಷಯದಲ್ಲಿ ಯುವ ಮತದಾರ ನಿತೀಶ್​ಗಿಂತ ತೇಜಸ್ವಿಗೆ ಹೆಚ್ಚು ಪ್ರಾಶಸ್ಱ ನೀಡಿದಂತಿದೆ. ಆದರೆ, ಹಿರಿಯ ಮತದಾರರು ಮಾತ್ರ ಲಾಲು ಯಾದವ್ ಕಾಲದ ‘ಜಂಗಲ್​ರಾಜ್’ ಆತಂಕದಿಂದಲೇ ತೇಜಸ್ವಿಯನ್ನು ಒಪ್ಪಿದಂತಿಲ್ಲ. ಬಿಜೆಪಿ-ಆರ್​ಜೆಡಿ ನೇರ ಹಣಾಹಣಿ ಏರ್ಪಟ್ಟ ಕ್ಷೇತ್ರಗಳಲ್ಲಿ ಬಹುಪಾಲನ್ನು ಬಿಜೆಪಿ ಗೆದ್ದುಕೊಂಡಿದೆ. ಆದರೆ, ಜೆಡಿಯು-ಆರ್​ಜೆಡಿ ನಡುವಿನ ಹಣಾಹಣಿಯಲ್ಲಿ ಆರ್​ಜೆಡಿ ಬಹುಪಾಲು ಸೀಟುಗಳನ್ನು ಬಾಚಿಕೊಂಡಿದೆ. ಈ ಕಾರಣಕ್ಕಾಗಿಯೇ, ಈ ಚುನಾವಣೆಯಲ್ಲಿ ಬಿಜೆಪಿಯನ್ನೇ ಅಗ್ರಮಾನ್ಯ ಪಕ್ಷ ಎನ್ನಬೇಕಾಗುತ್ತದೆ.
ಕೈ ಕೊಟ್ಟ ಕಾಂಗ್ರೆಸ್1990ರ ಬಳಿಕ ಕಾಂಗ್ರೆಸ್​ಗೆ ಬಿಹಾರ ರಾಜಕಾರಣದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಳೆದ 30 ವರ್ಷಗಳಿಗೆ ಹೋಲಿಸಿದರೆ 2015ರ ವಿಧಾನಸಭೆ ಚುನಾವಣೆಯಲ್ಲಿ 27 ಸೀಟುಗಳನ್ನು ಗೆದ್ದುಕೊಂಡದ್ದೇ ಕಾಂಗ್ರೆಸ್​ನ ಅತಿದೊಡ್ಡ ಸಾಧನೆ. ಈ ಸಲ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ 19 ಸೀಟುಗಳಲ್ಲಷ್ಟೇ ಗೆದ್ದಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ನಿರ್ವಹಣೆ ತೋರಿದ್ದರೆ, ಮಹಾಘಟಬಂಧನ ಸರಳ ಬಹುಮತದ ಮೂಲಕ ಅಧಿಕಾರಕ್ಕೇರುವ ಸಾಧ್ಯತೆಯಿತ್ತು. 2015ರ ಚುನಾವಣೆಯಲ್ಲಿ ಜೆಡಿಯು-ಆರ್​ಜೆಡಿ ಮೈತ್ರಿ ಕಾರಣಕ್ಕಾಗಿ ಜನರು ಕಾಂಗ್ರೆಸ್ ಅಭ್ಯರ್ಥಿಗಳಿಗೂ ಮತಹಾಕಿದ್ದರು. ಈ ಬಾರಿಯೂ ಕಾಂಗ್ರೆಸ್​ನಲ್ಲಿ ಜನಪ್ರಿಯ ಸ್ಥಳೀಯ ನಾಯಕತ್ವವಿರಲಿಲ್ಲ. ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಜನಪ್ರಿಯತೆಯ ಅಲೆಯಲ್ಲೇ ಒಂದಿಷ್ಟು ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಕನಸು ಕಂಡಿದ್ದ ಕಾಂಗ್ರೆಸ್, ತೇಜಸ್ವಿ ಸಿಎಂ ಸ್ಥಾನದ ಕನಸನ್ನು ಅಕ್ಷರಶಃ ಹಾಳು ಮಾಡಿಬಿಟ್ಟಿದೆ. ಆರಂಭದಲ್ಲಿ ಕಾಂಗ್ರೆಸ್​ಗೆ 45-50ಕ್ಕಿಂತ ಹೆಚ್ಚು ಸೀಟುಗಳನ್ನು ನೀಡಲು ತೇಜಸ್ವಿಗೆ ಸುತಾರಾಂ ಒಪ್ಪಿಗೆ ಇರಲಿಲ್ಲ. ಆದರೆ, ಬಿಹಾರ ಕಾಂಗ್ರೆಸ್ ಉಸ್ತುವಾರಿ, ಗುಜರಾತ್ ಕಾಂಗ್ರೆಸ್ ನಾಯಕ ಶಕ್ತಿ ಸಿಂಗ್ ಗೋಹಿಲ್ ಚೌಕಾಶಿ ಮಾಡಿ 70 ಸೀಟುಗಳನ್ನು ಪಡೆವಲ್ಲಿ ಯಶಸ್ವಿಯಾಗಿದ್ದರು. ಈ ಹೆಚ್ಚುವರಿ ಸೀಟುಗಳನ್ನು ನೀಡಲು ಒಪ್ಪಿಕೊಂಡದ್ದೇ ಆರ್​ಜೆಡಿಗೆ ಮುಳುವಾಗಿ ಪರಿಣಮಿಸಿತು.
ಎಡಪಕ್ಷಗಳ ಸಾಧನೆಕಳೆದೆರಡು ಚುನಾವಣೆಗೆ ಹೋಲಿಸಿದರೆ ಎಡಪಕ್ಷಗಳು (ಸಿಪಿಐ-ಎಂ, ಸಿಪಿಐ-ಎಂಎಲ್, ಸಿಪಿಐ) ಗಮನಾರ್ಹ ಸಾಧನೆ ಮಾಡಿದ್ದು, 16 ಸೀಟು ಗೆದ್ದಿವೆ. ಅವು 2015ರಲ್ಲಿ 3 ಮತ್ತು 2010ರಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದ್ದವು. 2019ರ ಲೋಕಸಭೆ ಚುನಾವಣೆಯಲ್ಲಿ ಬೇಗುಸರಾಯ್ ಲೋಕಸಭೆ ಕ್ಷೇತ್ರದಲ್ಲಿ ಎಡಪಕ್ಷದ ಯುವನಾಯಕ ಕನ್ಹಯ್ಯ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ಆರ್​ಜೆಡಿ ಅಭ್ಯರ್ಥಿ ಕಣಕ್ಕಿಳಿಸಿದ್ದರ ಬಗ್ಗೆ ಅಸಮಾಧಾನಗಳು ಕೇಳಿಬಂದಿದ್ದವು. ಕನ್ಹಯ್ಯ ತನ್ನನ್ನು ಮೀರಿ ಜನಪ್ರಿಯತೆ ಗಳಿಸಬಹುದು ಎಂಬ ಆತಂಕದಿಂದಲೇ ತೇಜಸ್ವಿ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಈ ಚುನಾವಣೆಯಲ್ಲಿ ಮೂರೂ ಎಡಪಕ್ಷಗಳನ್ನು ಸಂರ್ಪಸಿದ ಆರ್​ಜೆಡಿ ಮತ್ತು ಕಾಂಗ್ರೆಸ್ ಮುಖಂಡರು ಮಹಾಮೈತ್ರಿ ಸೇರಿಕೊಳ್ಳುವಂತೆ ಮನವೊಲಿಸಿದ್ದರು. 2015ರಲ್ಲಿ ಜೆಡಿಯು, ರಾಷ್ಟ್ರೀಯ ಲೋಕಸಮತಾ ಪಾರ್ಟಿ, ಹಿಂದುಸ್ತಾನಿ ಅವಾಮಿ ಮೋರ್ಚಾ ಪಕ್ಷಗಳು ಮಹಾಮೈತ್ರಿಯಲ್ಲಿದ್ದವು. ಆದರೆ ಈ ಬಾರಿ ಆ ಪಕ್ಷಗಳು ಬೆಂಬಲವನ್ನು ಬೇರೆಡೆಗೆ ವರ್ಗಾಯಿಸಿದ್ದರಿಂದ ಸಣ್ಣ ಸಣ್ಣ ಸಮುದಾಯಗಳನ್ನು ಸೆಳೆಯಲೆಂದೇ ಎಡಪಕ್ಷಗಳನ್ನು ಮಹಾಮೈತ್ರಿ ಕಡೆಗೆ ಸೆಳೆಯಲಾಗಿತ್ತು. ‘ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ತಲಾ 50 ಸೀಟುಗಳನ್ನು ಹಂಚಿದ್ದರೆ ಮಹಾಘಟಬಂಧನ ಸುಲಭದಲ್ಲಿ ಅಧಿಕಾರಕ್ಕೇರಲು ಸಾಧ್ಯವಾಗುತ್ತಿತ್ತು. ಸೀಟು ಹಂಚಿಕೆಯೇ ಮುಳುವಾಯ್ತು’ ಎಂದು ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ನೆರವಾದ ಓವೈಸಿ!ರಾಜ್ಯದಲ್ಲಿ ಮೊದಲ ಬಾರಿಗೆ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷ 5 ಸೀಟುಗಳನ್ನು ಗೆದ್ದು ಬೀಗಿದೆ. ಮಾಜಿ ಕೇಂದ್ರ ಸಚಿವ ಉಪೇಂದ್ರ ಖುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕಸಮತಾ ಪಾರ್ಟಿ, ಬಹುಜನ ಸಮಾಜವಾದಿ ಪಕ್ಷದೊಂದಿಗೆ ಸೇರಿಕೊಂಡು ಮೈತ್ರಿಕೂಟ ರಚಿಸಿದ್ದ ಎಐಎಂಐಎಂ, 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮುಸ್ಲಿಂ ಬಾಹುಳ್ಯವುಳ್ಳ ಬಿಹಾರದ ಸೀಮಾಂಚಲ ಪ್ರದೇಶದ 5 ಸೀಟುಗಳನ್ನು ತನ್ನದಾಗಿಸಿಕೊಂಡದ್ದಲ್ಲದೆ, ಎನ್​ಡಿಎ ಮೈತ್ರಿಕೂಟದ ‘ಬಿ’ ಟೀಮ್ಂತೆ ಕಾರ್ಯನಿರ್ವಹಿಸಿತು. 24 ಸೀಟುಗಳಲ್ಲಿ ಮುಸ್ಲಿಂ ಮತಗಳು ವಿಭಜನೆಗೊಂಡಿದ್ದರಿಂದ ಮಹಾಘಟಬಂಧನಕ್ಕೆ ಅಧಿಕಾರದ ಗದ್ದುಗೆ ಕೂದಲೆಳೆಯಲ್ಲಿ ತಪ್ಪಿತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
