| ರಾಘವ ಶರ್ಮ ನಿಡ್ಲೆ, ನವದೆಹಲಿ
2009ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜುಗೊಳ್ಳುತ್ತಿದ್ದ ದಿನಗಳವು. ಎನ್​ಡಿಎ ಮೈತ್ರಿಕೂಟ ಬಿಜೆಪಿ ಹಿರಿಯಾಳು ಎಲ್.ಕೆ. ಆಡ್ವಾಣಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಪಂಜಾಬ್​ನ ಲೂಧಿಯಾನದಲ್ಲಿ ಎನ್​ಡಿಎ ಬಲಪ್ರದರ್ಶನಕ್ಕಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಜೆಡಿಯು ಮುಖಂಡ ನಿತೀಶ್ ಕುಮಾರ್​ರನ್ನು ಆಹ್ವಾನಿಸಲಾಗಿತ್ತು.
ಸಮಾವೇಶದಲ್ಲಿ ಗುಜರಾತ್​ನ ಅಂದಿನ ಸಿಎಂ ನರೇಂದ್ರ ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳಲು ನಿತೀಶ್​ಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್​ರನ್ನು ಪ್ರತಿನಿಧಿಯಾಗಿ ಕಳುಹಿಸಿಕೊಡಲು ತೀರ್ವನಿಸಿದರು. ಇದನ್ನರಿತ ಅರುಣ್ ಜೇಟ್ಲಿ, ನಿತೀಶ್​ಗೆ ದೂರವಾಣಿ ಮೂಲಕ ಮಾತನಾಡಿ, ಆಡ್ವಾಣಿಯವರು ತಾವು ಬರಲೇಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ತಿಳಿಸಿದರು. ಮೋದಿ ಉಪಸ್ಥಿತಿಯಿಂದಾಗಿ ಅಲ್ಲಿಗೆ ಹೋಗಲು ಮನಸ್ಸಿಲ್ಲದಿದ್ದರೂ ಜೇಟ್ಲಿ, ಆಡ್ವಾಣಿ ಮಾತಿಗೆ ಒಪ್ಪಿದ ಬಿಹಾರ ಸಿಎಂ, ವಿಶೇಷ ವಿಮಾನ ಮೂಲಕ ಲೂಧಿಯಾನಕ್ಕೆ ತೆರಳಿದರು. ಸಮಾವೇಶದ ಮಾರನೇ ದಿನ ಪತ್ರಿಕೆಗಳಲ್ಲಿ ಮೋದಿ ಅವರೊಂದಿಗೆ ನಿಂತು ಜನಸ್ತೋಮದ ಮುಂದೆ ಕೈಬೀಸುತ್ತಿದ್ದ ಚಿತ್ರಗಳು ಪ್ರಕಟವಾಗಿದ್ದನ್ನು ನೋಡಿ ನಿತೀಶ್ ಕಲ್ಲವಿಲಗೊಂಡಿದ್ದರು. ತನ್ನಿಂದ ಎಂತಹ ಪ್ರಮಾದವಾಗಿ ಹೋಯ್ತು ಎಂದು ಚಿಂತಿತರಾಗಿದ್ದರು. ಬಿಜೆಪಿ ನಾಯಕರು ತಮ್ಮ ಅನುಕೂಲಕ್ಕೆ ನನ್ನನ್ನು ಬಳಸಿಕೊಂಡರು ಎಂದು ಆಪ್ತರೊಂದಿಗೆ ಆಕ್ರೋಶ ಹೊರಹಾಕಿದ್ದರು. 2002ರ ಗುಜರಾತ್ ಗಲಭೆ ಬಳಿಕ ಮೋದಿಯವರಿಂದ ಅಂತರ ಕಾಯ್ದುಕೊಂಡಿದ್ದರೂ, ಮಾಜಿ ಪ್ರಧಾನಿ ಅಟಲ್ ಬಿಹಾರಿ, ಎಲ್.ಕೆ. ಆಡ್ವಾಣಿ ಬಗ್ಗೆ ನಿತೀಶ್​ಗೆ ಅಭಿಮಾನ, ಒಲವಿತ್ತು.
ಮಂಡಲ ರಾಜಕಾರಣ ಹಾಗೂ ಸೆಕ್ಯುಲರ್ ಸಿದ್ಧಾಂತದ ಪ್ರತಿಪಾದಕರಾಗಿದ್ದ ನಿತೀಶ್, ಮಂದಿರ ರಾಜಕಾರಣದಿಂದ ಉತ್ತೇಜಿತರಾದವರಲ್ಲ. ಬಿಹಾರದಲ್ಲಿ ಇದಕ್ಕೆ ಅವಕಾಶವಿಲ್ಲ ಎನ್ನುತ್ತಿದ್ದರು. ವಾಜಪೇಯಿ ಸರ್ಕಾರದ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿದ್ದ ಅವರು, 2004ರ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಸೋಲಿಗೆ 2002ರ ಗುಜರಾತ್ ಗಲಭೆ ಕೂಡ ಕಾರಣ ಎಂದು ಬಿಜೆಪಿ ಹಿರಿಯಾಳುಗಳ ಮುಂದೆ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ 2005ರ ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ನರೇಂದ್ರ ಮೋದಿ ಬರಬಾರದು ಎಂದು ದಿಲ್ಲಿ ನಾಯಕರಿಗೆ ಸ್ಪಷ್ಟಪಡಿಸಿದ್ದರು. ನಮ್ಮ-ನಿಮ್ಮ ಸಂಬಂಧ ಸೆಕ್ಯುಲರ್ ಸಿದ್ಧಾಂತದಡಿಯಲ್ಲೇ ಮುಂದುವರಿಯಲಿದೆ. ಕೋಮುವಾದ ನಾನು ಒಪ್ಪಲಾರೆ ಎನ್ನುತ್ತಿದ್ದರು. ಹಾಗಂತ, ಎನ್​ಡಿಎ ಜತೆ ಸಂಬಂಧ ಮುರಿದುಕೊಂಡಿರಲಿಲ್ಲ. ಅನಾರೋಗ್ಯದಿಂದಾಗಿ ವಾಜಪೇಯಿ ಹಾಸಿಗೆ ಹಿಡಿದ ಬಳಿಕ ಆಡ್ವಾಣಿ ಮತ್ತು ಅರುಣ್ ಜೇಟ್ಲಿ ಜತೆಗೆ ನಿತೀಶ್ ಒಡನಾಟ ಮುಂದುವರಿದಿತ್ತು. 2009ರ ಲೂಧಿಯಾನ ರ್ಯಾಲಿಯ ಫೋಟೋಗಳು ಮಾತ್ರ ನಿತೀಶ್ ನಿದ್ರೆಗೆ ಭಂಗ ತಂದಿದ್ದವು. ಇದಕ್ಕೂ ಮುನ್ನ, 2008ರಲ್ಲಿ ಬಿಹಾರದ ಕೋಸಿ ನದಿ ಉಕ್ಕಿ ಹರಿದಿತ್ತು. ಕೋಸಿ ಕಣಿವೆಯ ಲಕ್ಷಾಂತರ ಮಂದಿ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಗುಜರಾತ್ ಸಿಎಂ ಮೋದಿ ರಾಜ್ಯ ಸರ್ಕಾರಕ್ಕೆ ರೂ.5 ಕೋಟಿ ನೆರವು ನೀಡಿದ್ದರು. ಆದರೆ, ನಿಮ್ಮ ಸಹಾಯದ ಅಗತ್ಯವಿಲ್ಲ ಎಂದು ನಿತೀಶ್, 5 ಕೋಟಿ ರೂ. ಚೆಕ್​ನ್ನು ಗುಜರಾತ್ ಸರ್ಕಾರಕ್ಕೆ ವಾಪಸು ಮಾಡಿದ್ದರು.
2010ರಲ್ಲಿ ಬಿಹಾರದ ಪಟನಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಏರ್ಪಡಿಸಲಾಗಿತ್ತು ಮತ್ತು ಮೋದಿ ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲಿ, ಪ್ರತಿಷ್ಟಿತ ಪತ್ರಿಕೆಗಳಲ್ಲಿ ಮೋದಿ-ನಿತಿಶ್ ಚಿತ್ರವುಳ್ಳ ಜಾಹೀರಾತು ಪ್ರಕಟಗೊಂಡು, 5 ಕೋಟಿ ನೆರವು ನೀಡಿದ್ದ ಮೋದಿಯವರಿಗೆ ಬಿಹಾರದ ಸ್ನೇಹಿತರಿಂದ ಧನ್ಯವಾದ ಎಂದು ತಿಳಿಸಲಾಗಿತ್ತು. ಇದರಿಂದ ಕ್ರೋಧಗೊಂಡಿದ್ದ ನಿತೀಶ್, ಬಿಜೆಪಿಯ ಸ್ನೇಹಿತರಿಗೆಂದು ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಭೋಜನ ಕೂಟವನ್ನೂ ರದ್ದುಗೊಳಿಸಿದರು. ಈ ಬೆಳವಣಿಗೆ ರಾಜಕೀಯ ಸಂಚಲನವನ್ನೇ ಸೃಷ್ಟಿಸಿತ್ತು. ನಿತೀಶ್​ರನ್ನು ಸಮಾಧಾನಗೊಳಿಸಲು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಎಷ್ಟೇ ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ನಿತೀಶ್​ಗೆ ಮೋದಿ ಬಗ್ಗೆ ಸಿಟ್ಟಿದ್ದದ್ದು ಅಷ್ಟಿಷ್ಟಲ್ಲ. 2010ರ ವಿಧಾನಸಭೆ ಚುನಾವಣೆ ವೇಳೆಯೂ ಎನ್​ಡಿಎ ಪರ ಪ್ರಚಾರ ನಡೆಸುವ ಸಲುವಾಗಿ ಮೋದಿ ಬಿಹಾರಕ್ಕೆ ಕಾಲಿಡದಂತೆ ನೋಡಿಕೊಂಡರು. ಬಿಜೆಪಿ ಪರ ಪ್ರಚಾರ ಮಾಡಲು ಬಿಹಾರಕ್ಕೆ ಯಾರು ಬರಬೇಕು, ಯಾರು ಬರಬಾರದು ಎಂಬುದನ್ನು ನಿರ್ಧರಿಸಲು ನಿತೀಶ್​ಗೆ ಅಧಿಕಾರವಿಲ್ಲ ಎಂದು ಕೆಲ ಬಿಜೆಪಿ ನಾಯಕರು ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಎಲ್.ಕೆ. ಆಡ್ವಾಣಿ, ಜೇಟ್ಲಿ ಮತ್ತಿತರರ ಜತೆ ಅಸಮಾಧಾನ ಹಂಚಿಕೊಂಡರು. ಈ ಆಂತರಿಕ ಬಿಕ್ಕಟ್ಟು ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಬಿಜೆಪಿ ನಾಯಕರು ಆತಂಕಗೊಂಡರೂ ಫಲಿತಾಂಶ ಮಾತ್ರ ನಿತೀಶ್ ನಿರೀಕ್ಷೆಯಂತೆ ಬಂದಿತ್ತು. 206 ಸೀಟುಗಳನ್ನು ಬಾಚಿಕೊಳ್ಳುವ ಮೂಲಕ ಎನ್​ಡಿಎ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ 2 ವರ್ಷಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರಿಂದ ಮತ್ತಷ್ಟು ಬಲಶಾಲಿ ನಾಯಕನಾಗಿ ಹೊರಹೊಮ್ಮಿದ್ದರು ಮತ್ತು 2014ರ ಲೋಕಸಭೆ ಚುನಾವಣೆಗೆ ಮಾನಸಿಕವಾಗಿ ತಯಾರಾಗಿದ್ದರು. ದಿಲ್ಲಿ ಗದ್ದುಗೆ ಮೇಲೆ ಕಣ್ಣಿಟ್ಟಿದ್ದ ನಿತೀಶ್ ಕೂಡ ಎನ್​ಡಿಎ ಮೈತ್ರಿಗೆ ಎಳ್ಳುನೀರು ಬಿಡುವ ದಿನಗಳು ಹತ್ತಿರವಾಗಿದ್ದವು. ಯಾವಾಗ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರೋ, ಅಲ್ಲಿಗೆ ಜೆಡಿಯು-ಬಿಜೆಪಿ ಸಂಬಂಧ ಮುರಿದುಬಿದ್ದಿತ್ತು. 2 ದಶಕಗಳ ಮೈತ್ರಿಗೆ ನಿತೀಶ್ ಎಳ್ಳುನೀರು ಬಿಟ್ಟಿದ್ದರು.
ದೇಶದಲ್ಲಿ ಮೋದಿ ಜನಪ್ರಿಯತೆ ಅರಿತುಕೊಳ್ಳಲು ನಿತೀಶ್​ಗೆ ಹೆಚ್ಚು ದಿನಗಳು ಬೇಕಾಗಲಿಲ್ಲ. 2014ರ ಫಲಿತಾಂಶಗಳೇ ಅದನ್ನು ಸಾರಿದ್ದವು. ಆದರೆ, ‘ಸ್ವಾಭಿಮಾನಿ’ ನಿತೀಶ್, 2015ರ ಚುನಾವಣೆಯಲ್ಲಿ ಕಡುವೈರಿ ಲಾಲು ಯಾದವ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿಯದಂತೆ ನೋಡಿಕೊಂಡರು. ಆದರೆ, ಲಾಲೂ ಕುಟುಂಬದ ಹಸ್ತಕ್ಷೇಪದಿಂದ ಹೈರಾಣಾಗಿದ್ದ ನಿತೀಶ್, ಇದಕ್ಕಿಂತ ಮೋದಿ ಗೆಳೆತನ ಆಗಬಹುದು ಎಂದು ಎನ್​ಡಿಎ ಜತೆಗೆ ಮರು ಮೈತ್ರಿ ಮಾಡಿಕೊಂಡು ಆರ್​ಜೆಡಿಯನ್ನು ಬದಿಗಟ್ಟಿದರು.
ಕಾಲಚಕ್ರ ಹೇಗೆ ಬದಲಾಗುತ್ತದೆ ನೋಡಿ. 2005, 2010, 2014ರಲ್ಲಿ ಮೋದಿ ಬೇಡವೇ ಬೇಡ ಎಂದು ಗುಡುಗಿದ್ದ ನಿತೀಶ್, 2017ರಲ್ಲಿ ತಮ್ಮ ಅಸ್ತಿತ್ವ ಮತ್ತು ರಾಜಕೀಯ ಅನಿವಾರ್ಯತೆಗಾಗಿ ಮೋದಿ ಜತೆ ಕೈ ಕುಲುಕಿಸಿದರು. ಪ್ರಧಾನಿಯಾಗಿ ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ನಿತೀಶ್ ಯಾವ ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರೋ, ಅದೇ ಮೋದಿ ಹೆಸರನ್ನು ಬಳಸಿಕೊಂಡು 2020ರ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಮತ್ತು ಸಿಎಂ ಪದವಿಯ ರಕ್ಷಣೆಗಾಗಿ ಮತ ಯಾಚನೆ ಮಾಡುತ್ತಿದ್ದಾರೆ. ‘ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಹಾರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ’ ಎಂದೂ ಹೇಳಿದ್ದಾರೆ. ರಾಜ್ಯವನ್ನು ಪ್ರಗತಿ ದಿಸೆಯಲ್ಲಿ ಕೊಂಡೊಯ್ದರೂ, ಸಮಯಸಾಧಕ, ಅವಕಾಶವಾದಿ ಎಂಬ ಆರೋಪಗಳನ್ನು ಎದುರಿಸುತ್ತಿರುವುದು ಇದೇ ಕಾರಣಕ್ಕಾಗಿ.
ಬೆಂಬಲಿಗರ ಸಮಜಾಯಿಷಿ
2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಕೈ ಹಿಡಿದಿದ್ದ ಬಿಹಾರ ಮತದಾರರು, 2020ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್​ರನ್ನು ಮನೆಗೆ ಕಳುಹಿಸುವ ಮಾತನಾಡುತ್ತಿದ್ದಾರೆಯೇ ವಿನಃ, ಅವರಲ್ಲಿ ಬಿಜೆಪಿ ಅಥವಾ ಮೋದಿ ವಿರೋಧಿ ಭಾವನೆ ವ್ಯಕ್ತವಾಗುತ್ತಿಲ್ಲ. ಪರ್ಯಾಯ ನಾಯಕತ್ವದ ಕಡೆ ಬಿಹಾರ ಮತದಾರ ಹೊರಳಿರುವ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕಾಗಿ ತೇಜಸ್ವಿ ಯಾದವ್​ರನ್ನು ಆಯ್ಕೆ ಮಾಡುತ್ತಾರೋ ಅಥವಾ ಬಿಜೆಪಿಗೆ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಡುತ್ತಾರೋ ಗೊತ್ತಿಲ್ಲ. ಆದರೆ, ನಿತೀಶ್ ಭವಿಷ್ಯ ಅಡಕತ್ತರಿಯಲ್ಲಿದೆ. ಈ ಹತಾಶ ಭಾವವೇ ಅವರನ್ನು ‘ಇದು ನನ್ನ ಕೊನೆ ಚುನಾವಣೆ ಚುನಾವಣೆ. ನೀವೆಲ್ಲರೂ ನಮಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಮತದಾರರಲ್ಲಿ ಅಂಗಲಾಚಿ ಕೇಳುವಂತೆ ಮಾಡಿದೆ. ಅವರ ಬೆಂಬಲಿಗರು ಇದಕ್ಕೆ ಸ್ಪಷ್ಟನೆ ನೀಡಿದ್ದು, ಈ ಚುನಾವಣೆಯಲ್ಲಿ ನನ್ನ ಕೊನೆಯ ರ‍್ಯಾಲಿ ಎಂಬರ್ಥದಲ್ಲಿ ಅವರು ಹೇಳಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
