ನವದೆಹಲಿ:ಮುಂದಿನ ವರ್ಷದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಪ್ರಬಲ ವಿಪಕ್ಷ ಮೈತ್ರಿಕೂಟ ರಚನೆ ಮಾಡಲು ಪ್ರಯತ್ನಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 23ರಂದು ಪಟನಾದ ಗಾಂಧಿ ಮೈದಾನದ ಜ್ಞಾನ ಭವನದಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸುತ್ತಿರುವುದು ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ.
ಈ ವರ್ಷದ ಕೊನೆಗೆ ನಡೆಯುವ ರಾಜಸ್ಥಾನ ವಿಧಾನ ಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಪ್, ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನೇ ಗುರಿ ಮಾಡುತ್ತಿದೆ. ಅದೇ ರೀತಿ ಮಧ್ಯಪ್ರದೇಶ, ಹರಿಯಾಣ, ಛತ್ತೀಸ್​ಗಢ ಚುನಾವಣೆಯಲ್ಲೂ ಸ್ಪರ್ಧಿಸುವ ತಯಾರಿ ನಡೆಸಿದೆ. ದೆಹಲಿಯಲ್ಲಿ ಕಾರ್ಯಾಂಗದ ಮೇಲೆ ಚುನಾಯಿತ ಸರ್ಕಾರಕ್ಕೆ ಅಧಿಕಾರ ಎಂಬ ಸುಪ್ರೀಂಕೋರ್ಟ್ ತೀರ್ಪಿನ ತೊಡಕನ್ನು ಹೋಗಲಾಡಿಸಲು ಕೇಂದ್ರ ತಂದಿರುವ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ಸೋಲಿಸಲು ವಿರೋಧ ಪಕ್ಷಗಳ ನಾಯಕರನ್ನು ಸಿಎಂ ಅರವಿಂದ ಕೇಜ್ರಿವಾಲ್ ಭೇಟಿ ಮಾಡಿದ್ದಾರೆ. ಆದರೆ, ರಾಹುಲ್ ಗಾಂಧಿ ಜತೆ ಅವರು ಸಭೆ ನಡೆಸಿಲ್ಲ. ಈ ಮಧ್ಯೆ, ಸುಗ್ರೀವಾಜ್ಞೆ ವಿಷಯವಾಗಿ ಆಪ್​ಗೆ ಬೆಂಬಲ ನೀಡಬಾರದು ಎಂದು ಪಂಜಾಬ್ ಮತ್ತು ದೆಹಲಿ ಕಾಂಗ್ರೆಸ್ ಘಟಕಗಳು ಹೈಕಮಾಂಡ್​ಗೆ ಒತ್ತಾಯ ಮಾಡಿವೆ. ಮೂರು ದಿನಗಳ ಹಿಂದೆ ಕಾಂಗ್ರೆಸ್ ಎಚ್ಚರಿಕೆ ನೀಡಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಗುರುತಿಸಿಕೊಂಡರೆ ಸುಮ್ಮನಿರುವುದಿಲ್ಲ ಎಂದು ಬಿಸಿ ಮುಟ್ಟಿಸಿದ್ದಾರೆ. ಜೂನ್ 23ರ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್, ಹೇಮಂತ್ ಸೊರೇನ್, ಅಖಿಲೇಶ್ ಯಾದವ್, ಶರದ್ ಪವಾರ್, ಉದ್ಧವ್ ಠಾಕ್ರೆ, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಮ್ ಯೆಚೂರಿ ಮತ್ತು ಡಿ. ರಾಜಾ ಪಾಲ್ಗೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು ಬಳಿ ಭೀಕರ ಅಪಘಾತ ಪ್ರಕರಣ: ಮೃತ 10 ಜನರ ಪೈಕಿ 7 ಮಂದಿಗೆ ಮಾತ್ರ ಪರಿಹಾರ, ವೃದ್ಧೆ ಕಂಗಾಲು
ಲೋಕಸಭೆ ಚುನಾವಣೆಯನ್ನು ತನ್ನ ನೇತೃತ್ವದಲ್ಲಿ ಎದುರಿಸಬೇಕು ಎಂಬ ಕಾಂಗ್ರೆಸ್ ವಾದವನ್ನು ಪ್ರಾದೇಶಿಕ ಪಕ್ಷಗಳು ಒಪ್ಪುವ ಸಾಧ್ಯತೆ ಕಡಿಮೆ. ಏಕೆಂದರೆ, ತಮ್ಮ ಪ್ರಭಾವ ಹೆಚ್ಚಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆಯೇ ಸಮಸ್ಯೆ ತಂದೊಡ್ಡಬಹುದು. ಪಂಜಾಬ್, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಂತೂ ವಿಪಕ್ಷಗಳ ಮಧ್ಯೆ ಒಮ್ಮತ ಮೂಡುವ ಬಗ್ಗೆಯೇ ಅನುಮಾನಗಳಿವೆ. ವಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನಷ್ಟೇ ಹಾಕಬೇಕು ಎನ್ನುವುದು ನಿತಿಶ್ ಸಲಹೆ. ಆದರೆ, ಈ ಸಲಹೆ ಉಳಿದೆಲ್ಲಾ ಪಕ್ಷಗಳಿಗೆ ಹಿತವೆನಿಸುವುದೇ? ಕಾದುನೋಡಬೇಕು.
ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್), ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಈ ಸಭೆಯಿಂದ ದೂರ ಉಳಿದಿವೆ. ಈ ಪಕ್ಷಗಳ ಹೋರಾಟ ಕಾಂಗ್ರೆಸ್ ವಿರುದ್ಧ. ಈ ವರ್ಷದ ಕೊನೆಯಲ್ಲಿ ತೆಲಂಗಾಣ ರಾಜ್ಯ ಚುನಾವಣೆಯಲ್ಲಿ ಬಿಆರ್​ಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಎದುರಿಸಲಿದೆ.
ಬಿಆರ್​ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಇತ್ತೀಚೆಗೆ ಕಾಂಗ್ರೆಸನ್ನು ಬಂಗಾಳ ಕೊಲ್ಲಿಗೆ ಎಸೆಯಬೇಕು ಎಂದಿದ್ದರು. ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಜೊತೆಗಿನ ಮೈತ್ರಿಗೆ ಮರುಜೀವ ನೀಡುವ ಚಿಂತನೆಯಲ್ಲಿದ್ದಾರೆ. ಮೇ ತಿಂಗಳಲ್ಲಿ ನಿತೀಶ್ ಕುಮಾರ್ ವಿಪಕ್ಷಗಳನ್ನು ಒಗ್ಗೂಡಿಸುವ ಸಂಬಂಧ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದಾಗ ಒಡಿಶಾ ಸಿಎಂ ನವೀನ್ ಪಟ್ನಾಯಕ್​ರನ್ನೂ ಭೇಟಿ ಮಾಡಿದ್ದರು. ಆದರೆ ಬಿಜೆಡಿಗೆ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಾಳಿ. ಪಟ್ನಾಯಕ್ ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ, ಉತ್ತರ ಪ್ರದೇಶದ ಬಿಎಸ್​ಪಿ ನಾಯಕಿ ಮಾಯಾವತಿಯವರಿಗೆ ಪಟನಾ ಸಭೆಗೆ ಆಹ್ವಾನ ನೀಡಿಲ್ಲ.
ಇದನ್ನೂ ಓದಿ:ಜಲ್ಲಿಕಲ್ಲು, ಮರಳು ದುಬಾರಿ?: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್
ಹಿಂದುಸ್ತಾನಿ ಅವಾಮಿ ಮೋರ್ಚಾ (ಎಚ್​ಎಎಂ) ಪಕ್ಷ ಆಡಳಿತಾರೂಢ ಜೆಡಿಯು-ಆರ್​ಜೆಡಿ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದೆ. ಪಕ್ಷದ ಅಧ್ಯಕ್ಷರಾದ ಮಾಜಿ ಸಿಎಂ ಜೀತನ್ ರಾಮ್ ಮಾಂಝಿ ಈ ಘೊಷಣೆ ಮಾಡಿದ್ದು, ಕೆಲ ದಿನಗಳ ಹಿಂದೆ ಹಿಂದೆ ಮಾಂಝಿ ಪುತ್ರ ಸಂತೋಷ್ ಸುಮನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೇ ಎಚ್​ಎಎಂ ಮಹಾಘಟಬಂಧನ್ ತೊರೆಯುವ ಸುಳಿವು ಸಿಕ್ಕಿತ್ತು. ಎಚ್​ಎಎಂ ಎನ್​ಡಿಎ ಮೈತ್ರಿಕೂಟ ಸೇರಿಕೊಳ್ಳುವ ಚಿಂತನೆಯಲ್ಲಿದ್ದು, ಬಿಜೆಪಿ ಮಾಂಝಿಗೆ ನೇರ ಆಹ್ವಾನ ನೀಡುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಮಾಂಝಿ ಮತ್ತು ಸುಮನ್ ದೆಹಲಿಗೆ ಭೇಟಿ ನೀಡಲಿದ್ದು, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆನ್ನಲಾಗಿದೆ. ನಮ್ಮ ಪಕ್ಷವನ್ನು ಜೆಡಿಯು ಜತೆ ವಿಲೀನಗೊಳಿಸಲು ನಿತೀಶ್ ಕುಮಾರ್ ಒತ್ತಾಯಿಸಿದ್ದರು. ಆದರೆ ಇದು ನಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆ. ವಿಲೀನದ ಪ್ರಶ್ನೆಯೇ ಇಲ್ಲ ಎಂದು ಸುಮನ್ ರಾಜೀನಾಮೆ ನೀಡುವ ವೇಳೆ ಹೇಳಿದ್ದರು. ಜೂನ್ 23ರಂದು ಪಟನಾದಲ್ಲಿ ನಡೆಯಲಿರುವ ವಿಪಕ್ಷಗಳ ಸಭೆಗೂ ಮಾಂಝಿಯನ್ನು ಆಹ್ವಾನಿಸಲಾಗಿಲ್ಲ.
ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್

ಜಲ್ಲಿಕಲ್ಲು, ಮರಳು ದುಬಾರಿ?: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
