ನವದೆಹಲಿ:ಆರ್​ಜೆಡಿ ಜತೆ ಮುನಿಸಿಕೊಂಡು ಮತ್ತೆ ಬಿಜೆಪಿ ಜತೆಗಿನ ಮೈತ್ರಿಕೂಟಕ್ಕೆ ವಾಪಸಾಗಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಂಡಿಯಾ ಮೈತ್ರಿಕೂಟ ತೊರೆದಿದ್ದ ಜೆಡಿಯು, ರಾಜ್ಯದಲ್ಲೂ ಆರ್​ಜೆಡಿ ಜತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿತ್ತು. ಮತ್ತೆ ಬಿಜೆಪಿ ಜತೆ ಕೈಜೋಡಿಸಿ ಎನ್​ಡಿಎ ಸರ್ಕಾರದ ಮರುಸ್ಥಾಪನೆಗೆ ತೀರ್ವನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರಕ್ಕೆ ವಿಶ್ವಾಸಮತ ನಿಗದಿಯಾಗಿತ್ತು.
ವಿಶ್ವಾಸಮತ ಆರಂಭಕ್ಕೆ ಕೆಲ ನಿಮಿಷಗಳ ಮೊದಲು ಮಾಜಿ ಡಿಸಿಎಂ ತೇಜಸ್ವಿ ಯಾದವ್ ನೇತೃತ್ವದ ಆರ್​ಜೆಡಿ ಮತ್ತು ಕಾಂಗ್ರೆಸ್ ಸಭಾತ್ಯಾಗ ಮಾಡಿತು. ಆರ್​ಜೆಡಿಯನ್ನು ಭ್ರಷ್ಟಾಚಾರಿಗಳ ಪಕ್ಷ ಎಂದು ಆರೋಪಿಸಿದ ನಿತೀಶ್, ಪಕ್ಷ ಹಣ ಮಾಡುವುದಲ್ಲೇ ತೊಡಗಿಕೊಂಡಿತ್ತು ಕಿಡಿಕಾರಿದರು.
ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ 122 ಶಾಸಕರ ಬೆಂಬಲ ಬೇಕಿತ್ತು. ಎನ್​ಡಿಎ ಮೈತ್ರಿಕೂಟದ 127 ಶಾಸಕರ ಬೆಂಬಲದ ಜತೆಗೆ ಆರ್​ಜೆಡಿಯ ಮೂವರು ಶಾಸಕರು ಎನ್​ಡಿಎ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದರು. ಇದರಿಂದಾಗಿ, ಎನ್​ಡಿಎ ಸಂಖ್ಯಾಬಲ 130ಕ್ಕೆ ತಲುಪಿತು. ನಿತೀಶ್ ವಿರುದ್ಧ ಆಕ್ರೋಶಭರಿತರಾಗಿದ್ದ ತೇಜಸ್ವಿ ಯಾದವ್, ಪದೇಪದೆ ತಮ್ಮ ನಿಲುವು ಬದಲಿಸುವ ನಿತೀಶ್ ಕುಮಾರ್ ಬಿಹಾರದ ಜನತೆಗೆ ಉತ್ತರ ನೀಡಬೇಕು. ನಿತೀಶ್​ಗೆ ಪಲ್ಟು ಕುಮಾರ್ ಎಂದು ವ್ಯಂಗ್ಯವಾಡಿದ ತೇಜಸ್ವಿ, ಪ್ರಧಾನಿ ನರೇಂದ್ರ ಮೋದಿಗೆ ಅವರು ಕೈಕೊಡುವುದಿಲ್ಲ ಎಂದು ಗ್ಯಾರಂಟಿ ನೀಡಬಹುದೇ? ಎಂದು ಪ್ರಶ್ನಿಸಿದರು.
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ಬರುತ್ತಿದ್ದಾಗ ನೀವು, ‘ಆರ್​ಜೆಡಿ ಮನಸ್ಸು ಹೊಂದುತ್ತಿಲ್ಲ. ಆನಂದದಿಂದ ಸರ್ಕಾರ ನಡೆಸಲೂ ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದೀರಿ. ಅಂದರೆ, ನಾವೇನು ನಿಮ್ಮೊಂದಿಗೆ ಹಾಡಲು, ನೃತ್ಯ ಮಾಡಲು ಸರ್ಕಾರ ರಚನೆ ಮಾಡಿದ್ದೆವಾ? ಆನಂದಿ ಸುತ್ತಿಲ್ಲ ಎಂದರೆ ಸರ್ಕಾರ ಮನರಂಜನೆ ನೀಡಲಿರುವುದೇ? ನಿಮಗೆ ಬೆಂಬಲ ನೀಡಲಷ್ಟೇ ನಾವು ಸರ್ಕಾರ ರಚಿಸಿದ್ದೆವು. ಒಂದೇ ಅವಧಿಯಲ್ಲಿ ನಿತೀಶ್, ಮೂರು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂಥದ್ದನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಕಿಡಿಕಾರಿದರು.
ನಿತೀಶ್ ಕುಮಾರ್ ಮತ್ತು ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಮಾರ್ಗದರ್ಶಕ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪರಿ ಠಾಕೂರ್ ಅವರಿಗೆ ಭಾರತರತ್ನ ನೀಡುವ ನಿರ್ಧಾರ ಜೆಡಿಯು-ಬಿಜೆಪಿ ಒಳಒಪ್ಪಂದದ ಒಂದು ಭಾಗ ಎಂದೂ ಟೀಕಿಸಿದರು. ನಂತರ, ತೇಜಸ್ವಿಗೆ ತಿರುಗೇಟು ನೀಡಿದ ನಿತೀಶ್, ಆರ್​ಜೆಡಿ ನಾಯಕರ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲಾಗುವುದು. ನಾನು ಆರ್​ಜೆಡಿ ನಾಯಕರಿಗೆ ಗೌರವ ನೀಡುತ್ತಾ ಬಂದಿದ್ದೆ. ಆದರೆ, ಅವರ ದುಷ್ಕೃತ್ಯಗಳ ಬಗ್ಗೆ ತಿಳಿದಾಗ ನನಗೆ ನೋವಾಯಿತು ಎಂದರು. ಮುಂದೆಂದಿಗೂ ಎನ್​ಡಿಎ ಮೈತ್ರಿಕೂಟ ತೊರೆಯುವುದಿಲ್ಲ ಎಂದು ಪ್ರಕಟಿಸಿದ ನಿತೀಶ್, ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲಾ ಪಕ್ಷಗಳನ್ನು ಒಟ್ಟಿಗೆ ತರಲು ಪ್ರಯತ್ನಿಸಿದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಜೆಡಿಯು ಕೆಲಸಗಳಿಗೆ ಆರ್​ಜೆಡಿ ನಾಯಕರು ಶ್ರೇಯಸ್ಸು ಪಡೆಯಲು ಪ್ರಯತ್ನಿಸುತ್ತಿದ್ದರು ಎಂದೂ ಕಿಡಿಕಾರಿದರು.
ಸಿಎಂ ಆಗಿಯೂ ದಾಖಲೆ:ಬಿಹಾರದಲ್ಲಿ 9ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ನಿತೀಶ್, ಅತಿಹೆಚ್ಚು ಬಾರಿ ಪ್ರಮಾಣವಚನಗೈದ ಸಿಎಂ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದಿನ ದಾಖಲೆಯೂ ಅವರ ಹೆಸರಿನಲ್ಲೇ ಇದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನೇಹಿತರನ್ನು ಬದಲಿಸುವ ನಿತೀಶ್, ರಾಜ್ಯದಲ್ಲಿ ಪಲ್ಟು ಕುಮಾರ್ ಎಂದೇ ಕುಖ್ಯಾತಿ ಆಗಿದ್ದಾರೆ. ವಿಧಾನಸಭೆಯಲ್ಲಿ ಜೆಡಿಯು ಸಂಖ್ಯೆ 50 ದಾಟಿರದಿದ್ದರೂ, ಅವರನ್ನೇ ಸಿಎಂ ಆಗಿ ಮುಂದುವರಿಸಲು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದರು. ಇದಕ್ಕೂ ಮುನ್ನ, ಇಂಡಿಯಾ ಮೈತ್ರಿಕೂಟದ ಸದಸ್ಯರು ಲೋಕಸಭೆ ಚುನಾವಣೆಗೆ ಸರಿಯಾಗಿ ಸಜ್ಜಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಮೈತ್ರಿ ಸಹವಾಸ ಸಾಕು ಎಂದು ಹೊರಬಂದಿದ್ದೇನೆ ಎಂದಿದ್ದರು. ಆದರೆ, ವಾಸ್ತವದಲ್ಲಿ ತಾನು ಸಜ್ಜುಗೊಳಿಸಿದ ಮೈತ್ರಿಕೂಟದಲ್ಲಿ ತಾನೇ ಕಡೆಗಣನೆಗೆ ಒಳಗಾಗಿದ್ದೇನೆ ಎಂದು ಬೇಸರಗೊಂಡಿದ್ದ ನಿತೀಶ್, ಪಿಎಂ ಅಭ್ಯರ್ಥಿಯನ್ನಾಗಿ ಕೂಡ ತಮ್ಮನ್ನು ಆಯ್ಕೆ ಮಾಡಲಿಲ್ಲ. ಹೀಗಾಗಿ, ಈ ಮೈತ್ರಿಕೂಟದಲ್ಲಿದ್ದು ಪ್ರಯೋಜನವೇನು ಎಂದು ತಮ್ಮ ಹಿಂದಿನ ಸಾಥಿ ಬಿಜೆಪಿ ಜತೆ ಕೈಜೋಡಿಸುವ ತೀರ್ವನಕ್ಕೆ ಬಂದಿದ್ದರು.
ನಂದಕಿಶೋರ್ ನೂತನ ಸ್ಪೀಕರ್:ಹೊಸ ಸ್ಪೀಕರ್ ನೇಮಿಸುವ ಸಲುವಾಗಿ, ಬಿಹಾರ ವಿಧಾನಸಭೆ ಸ್ಪೀಕರ್ ಆಗಿದ್ದ ಆರ್​ಜೆಡಿಯ ಅವಧ್ ಕುಮಾರ್ ಚೌಧುರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. 125ರಲ್ಲಿ 112 ಮಂದಿ ಅವರ ವಿರುದ್ಧ ಮತಹಾಕಿ, ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಲಾಯಿತು. ಬಿಜೆಪಿಯ ಪಟನಾ ಸಾಹಿಬ್ ಕ್ಷೇತ್ರದ ಶಾಸಕ, ರಾಜ್ಯದ ಮಾಜಿ ಸಚಿವ ನಂದಕಿಶೋರ್ ಯಾದವ್ ಅವರನ್ನು ನೂತನ ಸ್ಪೀಕರ್ ಆಗಿ ನೇಮಿಸ ಲಾಗಿದ್ದು, ಫೆ.13ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
