ಬೆಂಗಳೂರು:ಕೋವಿಡ್19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ವೃತ್ತಿಪರ ಕೋರ್ಸ್​ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಡೆಸುವ ಸಂಬಂಧ ಕೈಗೊಂಡಿರುವ ನಿರ್ಧಾರ ಮರು ಪರಿಶೀಲನೆಗೆ ಹೈಕೋರ್ಟ್ ಸೂಚಿಸಿದ ತಕ್ಷಣವೇ, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಮಟ್ಟದ ತುರ್ತುಸಭೆ ನಡೆಸಿದರು. ಮುಂದಿನ ನಡೆಯ ಬಗ್ಗೆ ಸಮಾಲೋಚಿಸಿದರು. ಅಲ್ಲದೆ, ಪರೀಕ್ಷೆ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂಬ ಅಭಿಪ್ರಾಯವೂ ಈ ಸಭೆಯಲ್ಲಿ ವ್ಯಕ್ತವಾಯಿತು.
ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸಾರಿಗೆ, ಆರೋಗ್ಯ, ಮತ್ತಿತರ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ಡಿಸಿಎಂ ಮಹತ್ವದ ವಿಡಿಯೋ ಸಂವಾದ ನಡೆಸಿದರು.
ನ್ಯಾಯಾಲಯ ಹೇಳಿದ್ದೇನು?:ಜುಲೈ 30-31 ಹಾಗೂ ಅಗಸ್ಟ್ 1ರಂದು ಸಿಇಟಿ ನಿಗದಿಯಾಗಿದೆ. ಆದರೆ, ಕೋವಿಡ್’ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕಂಟೈನ್ಮೆಂಟ್ ಜೋನ್’ಗಳಲ್ಲಿರುವ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರುವ ಹಾಗಿಲ್ಲ. ಜತೆಗೆ, ಹೊರ ರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ರಾಜ್ಯಕ್ಕೆ ಬಂದು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್-19 ಮಾರ್ಗಸೂಚಿ ಅನುಸಾರ ಕಂಟೈನ್ಮೆಂಟ್ ಜೋನ್’ನಲ್ಲಿ ಇರುವವರು ಹೊರಗೆ ಹೋಗುವಂತಿಲ್ಲ. ಬೆಂಗಳೂರಿನಲ್ಲೇ ಹೆಚ್ಚು ಕಂಟೈನ್ಮೆಂಟ್ ಜೋನ್’ಗಳಿದ್ದು, ವಿದ್ಯಾರ್ಥಿಗಳು ಎಲ್ಲಿ ಹೋಗಲು ಸಾಧ್ಯ? ಅವರು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಹೈಕೋರ್ಟ್ ಸಿಇಟಿ ಪರೀಕ್ಷೆ ನಡೆಸುವ ನಿರ್ಧಾರ ಮರುಪರಿಶೀಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಷ್ಟೇ ಅಲ್ಲದೆ, ಬುಧವಾರ ಮಧ್ಯಾಹ್ನ 2.30 ರೊಳಗೆ ಉತ್ತರಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ;18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ
ಪರೀಕ್ಷೆ ನಡೆಸಬಹುದು:ಎಲ್ಲ ಜಿಲ್ಲೆ, ಗಡಿನಾಡಿನಲ್ಲೂ ಪರೀಕ್ಷೆ ನಡೆಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಳ್ಳಲಾದ ರೀತಿಯಲ್ಲಿಯೇ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ, ಸಾರಿಗೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳೆಲ್ಲರೂ ಪರೀಕ್ಷೆ ನಡೆಸುವುದಕ್ಕೆ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತವಾಗಿರುವ ಮಾರ್ಗಸೂಚಿ ಪ್ರಕಾರ ಈಗ ಕಂಟೈನ್ಮೆಂಟ್ ಜೋನ್’ನಲ್ಲಿ ಇರುವ ಪರೀಕ್ಷಾರ್ಥಿ ಅವರ ಪಾಲಕರೊಬ್ಬರು ಹೊರಬರಬಹುದು. ಸೋಂಕಿತ ಆಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಕೂರುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಗುಣಲಕ್ಷಣವಿಲ್ಲದ ಮತ್ತು ಕೆಮ್ಮು, ಶೀತದ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಡಿಸಿಎಂಗೆ ಮಾಹಿತಿ ನೀಡಿದರು.
ಇವರ ಜತೆಗೆ, ವಿಡಿಯೋ ಸಭೆಯಲ್ಲಿ ಹಾಜರಿದ್ದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೂಡ ಪರೀಕ್ಷೆ ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ನ್ಯಾಯಾಲಯ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಸಮಸ್ಯೆ ಆಗದಂತೆ ಸಿಇಟಿ ವಿದ್ಯಾರ್ಥಿಗಳಿಗಿಂತ ಕಿರಿಯ ವಯಸ್ಸಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೇ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಉದಾಹರಣೆ ನಮ್ಮ ಮುಂದೆಯೇ ಇದೆ. ಗಡಿನಾಡು ಸೇರಿ ಎಲ್ಲ ಕೇಂದ್ರಗಳಲ್ಲಿಯೂ ಕೋವಿಡ್ ಹಿನ್ನೆಲೆಯಲ್ಲಿ ಸ್ಯಾನಿಟೈಸೇಷನ್, ದೈಹಿಕ ಅಂತರ, ಕೊಠಡಿಗಳ ನಿರ್ವಹಣೆ, ಆಂಬುಲೆನ್ಸ್, ಸಾರಿಗೆ ಸೇರಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಯ ಕ್ಷೇಮವನ್ನೂ ಗಮನದಲ್ಲಿ ಇಟ್ಟುಕೊಂಡು ನಿಗಾ ವಹಿಸಲಾಗುತ್ತಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ;ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ
ನ್ಯಾಯಾಲಯಕ್ಕೆ ಮಾಹಿತಿ:ಸಭೆಯಲ್ಲಿ ವ್ಯಕ್ತವಾದ ಎಲ್ಲ ಅಭಿಪ್ರಾಯಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಡ್ವೋಕೇಟ್ ಜನರಲ್ ಮುಖೇನ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಳ್ಳಲಿದೆ. ಅಂತಿಮವಾಗಿ ನ್ಯಾಯಾಲಯ ನೀಡುವ ಸೂಚನೆ ಪಾಲಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಸಾರಿಗೆ, ಆರೋಗ್ಯ, ಶಿಕ್ಷಣ, ಉನ್ನತ ಶಿಕ್ಷಣ, ಪೊಲೀಸ್ ಇಲಾಖೆಗಳ ಉನ್ನತ ಅಧಿಕಾರಿಗಳು ಒಳಗೊಂಡ ತಂಡ ರಚಿಸಲಿದ್ದು, ಇಡೀ ಪರೀಕ್ಷೆಯ ಉಸ್ತುವಾರಿಯನ್ನು ಈ ತಂಡ ನೋಡಿಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಎಇ) ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಜ ಸೇರಿ ಸಾರಿಗೆ, ಆರೋಗ್ಯ, ಶಿಕ್ಷಣ, ಉನ್ನತ ಶಿಕ್ಷಣ, ಪೊಲೀಸ್ ಇಲಾಖೆಗಳ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
