ಬೆಂಗಳೂರು:ಆಟೋದಲ್ಲೇ ಹೆರಿಗೆಯಾಗಿ ಹಸುಳೆ ಸಾವು, 5 ದಿನ ಅಲೆದರೂ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟ ಮಹಿಳೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ 7 ತಿಂಗಳ ಹಸುಗೂಸು…! ಬೆಂಗಳೂರು ಹಾಗೂ ರಾಮನಗರದಲ್ಲಿ ಸೋಮವಾರ ನಡೆದ ಮನಕಲಕುವ ಪ್ರಕರಣಗಳಿವು.
ಬೆಂಗಳೂರಿನ ಶ್ರೀರಾಂಪುರ ನಿವಾಸಿ ನಿವೇದಿತಾ (23)ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಭಾನುವಾರ ಮಧ್ಯರಾತ್ರಿ 2.30ಕ್ಕೆ ಆಟೋದಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿದ್ದಾರೆ. ಮೊದಲು ಕೋವಿಡ್ ಪರೀಕ್ಷೆ ಮಾಡಬೇಕು ಎಂದಿದ್ದಾರೆ. ಅಲ್ಲಿಂದ ವಾಣಿವಿಲಾಸ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಸೋಂಕಿತರಿಗೆ ಮಾತ್ರ ಹೆರಿಗೆ ಮಾಡಿಸುವುದಾಗಿ ತಿಳಿಸಿದ್ದಾರೆ. ಶ್ರೀರಾಂಪುರ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರೇ ಇರಲಿಲ್ಲ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದಾಗ ವೈದ್ಯರು ಬಾರದ ಕಾರಣ ಆಟೋದಲ್ಲಿ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ. 9 ತಿಂಗಳು ಪೂರ್ಣಗೊಂಡಿರಲಿಲ್ಲ, ಬರೀ 32 ವಾರವಾದ್ದರಿಂದ ತೊಂದರೆಯಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶ್ ಹೇಳಿದ್ದಾರೆ.
5 ದಿನ ಅಲೆದರೂ ಚಿಕಿತ್ಸೆ ಸಿಗದೆ ಸಾವು:ಕಾಮಾಕ್ಷಿಪಾಳ್ಯದ ಮಹಿಳೆಯೊಬ್ಬರು 5 ದಿನಗಳಿಂದ ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ, ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತಳ ಸಹೋದರ ಅಳಲನ್ನು ತೋಡಿಕೊಂಡ ಆಡಿಯೋ ವೈರಲ್ ಆಗಿದೆ. ನಾವು 3 ದಿನ ಕರೊನಾ ವರದಿಗಾಗಿ ಆಸ್ಪತ್ರೆಗೆ ಅಲೆದಾಡಿದ್ದೇವೆ. ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಿದ ರಿಪೋರ್ಟ್ ತೆಗೆದು ಕೊಂಡು ಹೋದರೆ, ಇದರ ಬದಲು ಆರ್​ಟಿ-ಪಿಸಿಆರ್ ಲ್ಯಾಬ್ ರಿಪೋರ್ಟ್ ಬೇಕು ಎಂದು ಹಲವು ಖಾಸಗಿ ಆಸ್ಪತ್ರೆಯವರು ಹೇಳಿದರು. ಐದು ದಿನ ಆಸ್ಪತ್ರೆಗೆ ಸುತ್ತಿದರೂ, ಚಿಕಿತ್ಸೆ ಸಿಗದೆ ನಮ್ಮ ಅಕ್ಕ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಹಸುಗೂಸು ಬಲಿ:ರಾಮನಗರ ಜಿಲ್ಲೆ ಚನ್ನಪಟ್ಟಣ ಪೇಟೆಕೇರಿ ನಿವಾಸಿಗಳಾದ ಪ್ರದೀಪ್​-ನಂದಿನಿಯ 7 ತಿಂಗಳ ಹೆಣ್ಣುಮಗುವಿಗೆ ಸೋಮವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಆರಂಭವಾಗಿದೆ. ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಇಲ್ಲ ಬೇರೆಡೆ ತೋರಿಸಿ ಎಂದು ಕಳಿಸಿದ್ದಾರೆ. ಐದಾರು ಖಾಸಗಿ ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೆ, ಯಾರೊಬ್ಬರೂ ಮಗುವಿಗೆ ಚಿಕಿತ್ಸೆ ನೀಡದೆ, ಸಬೂಬು ಹೆೇಳಿ ಸಾಗಹಾಕಿದ್ದಾರೆ. ನಂತರ, ಬಸ್​ನಿಲ್ದಾಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಪೀಠೋಪಕರಣ ಧ್ವಂಸ:ಆನೇಕಲ್ ನಿವಾಸಿಯೊಬ್ಬರು ಗಾಯಗೊಂಡ ಮಗುವಿಗೆ ಚಿಕಿತ್ಸೆಗಾಗಿ ಜಿಗಣಿ ಸುಹಾಸ್ ಜನರಲ್ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಅಲ್ಲಿನ ವೈದ್ಯರು ಚಿಕಿತ್ಸೆ ನೀಡುವುದನ್ನು ಬಿಟ್ಟು ಕರೊನಾ ಬಗ್ಗೆ ಮೀಟಿಂಗ್ ಮಾಡುತ್ತಿದ್ದರು. 2 ಗಂಟೆ ಕಾಯುತ್ತಾ ಕುಳಿತರೂ ಚಿಕಿತ್ಸೆ ನೀಡದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿ, ಅಲ್ಲಿರುವ ಕೆಲ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ.
ಕಾರಿನಲ್ಲೇ ಹೆರಿಗೆ, ತಾಯಿ-ಮಗು ಕ್ಷೇಮ:ತೀರ್ಥಹಳ್ಳಿ ತಾಲೂಕು ಕಂಕಳ್ಳಿ ಗ್ರಾಮದ ಗರ್ಭಿಣಿಯನ್ನು ಸೋಮವಾರ ಶಿವಮೊಗ್ಗದ ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವು ಹೆಚ್ಚಾಗಿ ಕಾರಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗೆ ಹೋದಾಗ ಕರೊನಾ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ವಾಪಸ್ ಕಳುಹಿಸಿದರೆನ್ನಲಾಗಿದೆ.
ಶವ ಅದಲು-ಬದಲು?:ಅಸ್ತಮಾದಿಂದ ಬಳಲುತ್ತಿದ್ದ ಬೆಳಗಾವಿಯ ಕ್ಯಾಂಪ್ ಪ್ರದೇಶದ 57 ವರ್ಷದ ಮಹಿಳೆ ಜು.18ರಂದು ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆ ಸಿಬ್ಬಂದಿ ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದರು. ಅಂದೇ ಅಂತ್ಯಕ್ರಿಯೆಯೂ ನೆರವೇರಿತ್ತು. ಆದರೆ, ಮೃತ ಮಹಿಳೆಯ ಸಂಬಂಧಿಗೆ ಸೋಮವಾರ ಮತ್ತೆ ಕರೆ ಮಾಡಿರುವ ಸಿಬ್ಬಂದಿ, ‘ನಿಮ್ಮ ಸಂಬಂಧಿ ಮೃತದೇಹ ಆಸ್ಪತ್ರೆ ಶವಾಗಾರದಲ್ಲಿದ್ದು, ಏಕೆ ತೆಗೆದುಕೊಂಡು ಹೋಗಿಲ್ಲ ಎಂದು ಪ್ರಶ್ನಿಸಿ, ಶವ ತೆಗೆದುಕೊಂಡು ಹೋಗಿ’ ಎಂದಿದ್ದು ಗೊಂದಲಕ್ಕೆ ಕಾರಣವಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೇ ಇಂದ ಈವರೆಗೆ 118 ಕರೊನಾ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದ್ದು ಎಲ್ಲ ತಾಯಂದಿರು ಹಾಗೂ ನವಜಾತ ಶಿಶುಗಳು ಆರೋಗ್ಯ ದಿಂದಿದ್ದಾರೆ. ಯಾವ ಮಗುವಿಗೂ ಸೋಂಕು ತಗುಲಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರೂ ಧೃತಿಗೆಡದೆ ಸೋಂಕಿತರ ಹೆರಿಗೆಗೆ ಮುಂದಾಗಬೇಕು.
| ಡಾ. ಕೆ. ಸುಧಾಕರ್ವೈದ್ಯಕೀಯ ಶಿಕ್ಷಣ ಸಚಿವ
https://www.vijayavani.net/https-www-vijayavani-net-oxford-scientists-mull-vaccine-as-nasal-spray-ready-by-october/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
