|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಘೋಷಿಸಿರುವ ನದಿ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಎಳ್ಳಷ್ಟೂ ಉಪಯೋಗವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ನದಿಗಳ ಜೋಡಣೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ಬಹಳ ಹಿಂದೆಯೇ ವ್ಯಕ್ತವಾಗಿದ್ದರೂ ಈಗ ಮತ್ತೆ ಪ್ರಸ್ತಾಪಿಸಲಾಗಿದೆ. ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಹಾಗೂ ಕಾವೇರಿ-ಪೆನ್ನಾರ್ ನದಿಗಳ ಜೋಡಣೆ ಘೋಷಣೆ ಬಜೆಟ್​ನಲ್ಲಿ ಹೊರಬಿದ್ದಿದೆ. ಇದರಿಂದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ಅನುಕೂಲವೇ ಹೊರತು ರಾಜ್ಯಕ್ಕೆ ಪ್ರಯೋಜನವಿಲ್ಲವೆಂದು ತಜ್ಞರು ಹೇಳುತ್ತಿದ್ದಾರೆ.
ಹವಾಮಾನ ವೈಪರೀತ್ಯದ ಪರಿಣಾಮ ಎದುರಿಸುತ್ತಿರುವ ದಿನಗಳಲ್ಲಿ ನದಿ ಜೋಡಣೆ ಕಾರ್ಯಸಾಧುವಲ್ಲ, ಇದರ ಬದಲು ಪರ್ಯಾಯ ಮಾರ್ಗಗಳತ್ತ ಗಮನಹರಿಸಬೇಕು ಎಂಬುದು ತಜ್ಞರ ಕಿವಿಮಾತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗಲೇ ನದಿಗಳ ಜೋಡಣೆಯ ಬಗ್ಗೆ ಚರ್ಚೆಯಾಗಿತ್ತು. ಹಾಗೆಯೇ ಯಾವ ಯಾವ ನದಿಗಳ ಜೋಡಣೆ ಕಾರ್ಯಸಾಧುವಲ್ಲವೆಂಬುದನ್ನೂ ಕೇಂದ್ರ ಗುರುತಿಸಿದೆ. ಅದರಲ್ಲಿ ಈ ಮೇಲಿನ 3 ನದಿಗಳ ಜೋಡಣೆಯೂ ಬರುತ್ತದೆ.
ಏಕೆ ಕಾರ್ಯಸಾಧುವಲ್ಲ?:ಗೋದಾವರಿ ನದಿಯನ್ನು ನಾಸಿಕ್​ನಿಂದ ತಂದು ದೂದ್​ಗಂಗಾ ಬಳಿ ಕೃಷ್ಣಾ ನದಿಗೆ ಜೋಡಿಸಬೇಕಾಗುತ್ತದೆ. ಆದರೆ ಅದರಿಂದ ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ. ಕೃಷ್ಣಾ ನದಿಯನ್ನು ಪೆನ್ನಾರ್ ನದಿಗೆ ಜೋಡಿಸುವುದು ಮುಳಬಾಗಿಲಿನಿಂದ 25 ಕಿಮೀ ದೂರದಲ್ಲಿ. ಕಾವೇರಿ ನದಿಯನ್ನೂ ಅಲ್ಲಿಯೇ ಜೋಡಿಸಬೇಕಾಗುತ್ತದೆ. ಪೆನ್ನಾರ್ ನದಿ ರಾಜ್ಯದಲ್ಲಿ ಹರಿಯುವುದೇ 20 ಕಿಮೀ ಮಾತ್ರ. ಈ ನದಿಗಳನ್ನು ಜೋಡಿಸಿದರೆ ನೆರೆ ರಾಜ್ಯಗಳಿಗಷ್ಟೇ ಅನುಕೂಲ. ಆದ್ದರಿಂದ ಈ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯವಿದೆ.
ಕೇಳಿದಷ್ಟು ನೀರು ಸಿಗುವುದೇ?:ಹಿಂದೆ ರಾಜ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ ನದಿ ಜೋಡಣೆಯಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ 80 ಟಿಎಂಸಿ ನೀರು ಸಿಗಬೇಕೆಂದು ಹೇಳಿತ್ತು. ಅದರಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಉದ್ದೇಶವಿತ್ತು. ಆದರೆ ಕೇಂದ್ರ ರಾಜ್ಯಕ್ಕೆ ನೀರು ನೀಡುವ ಬಗ್ಗೆ ಒಪ್ಪಿರಲಿಲ್ಲ. ರಾಜ್ಯ ಪದೇಪದೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇತ್ತು. ಇದೀಗ ಬಜೆಟ್​ನಲ್ಲಿ ಹೊಸದಾಗಿ ಮತ್ತೆ ಘೋಷಿಸಿರುವುದರಿಂದ ಮುಂದೆ ಕನಿಷ್ಠ 50 ಟಿಎಂಸಿಯಾದರೂ ಹೆಚ್ಚುವರಿಯಾಗಿ ಲಭ್ಯವಾಗುವುದೇ ಎಂಬ ನಿರೀಕ್ಷೆ ರಾಜ್ಯದ್ದಾಗಿದೆ.
ಡಿಪಿಆರ್​ಗೆ ಮುನ್ನ ಹೇಳಿ:ರಾಜ್ಯಕ್ಕೆ ಲಭ್ಯವಾಗುವ ನೀರಿನ ಪ್ರಮಾಣ ತಿಳಿಸದಿದ್ದರೆ ಡಿಪಿಆರ್ ಮಾಡಲು ಬಿಡುವುದಿಲ್ಲವೆಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ನದಿ ಜೋಡಣೆ ಯೋಜನೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಐದು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದ ಬೊಮ್ಮಾಯಿ ಅವರಿಗೆ ನದಿ ಜೋಡಣೆಯ ಸಂಪೂರ್ಣ ಮಾಹಿತಿ ಇದೆ.
ಎಲ್ಲ ರಾಜ್ಯಗಳು ಸಮ್ಮತಿಸಬೇಕು:ನದಿ ಜೋಡಣೆಗೆ ಸಂಬಂಧಿಸಿದ ನದಿಗಳ ವ್ಯಾಪ್ತಿಯ ರಾಜ್ಯಗಳು ಒಪ್ಪಬೇಕಾಗುತ್ತದೆ. ಇಲ್ಲದಿದ್ದರೆ ಮತ್ತೆ ಅಂತಾರಾಜ್ಯ ಜಲ ವಿವಾದ ಉಂಟಾಗುವ ಸಾಧ್ಯತೆಗಳಿರುತ್ತವೆ. ಮತ್ತೆ ಕೋರ್ಟ್ ಮುಂದೆ ಪ್ರಕರಣಗಳು ಹೋಗುತ್ತವೆ. ಹವಾಮಾನ ವೈಪರೀತ್ಯದಿಂದಾಗಿ ನೀರಿನ ಲಭ್ಯತೆ ಎಷ್ಟಿರುತ್ತದೆ ಎಂಬುದೇ ತಿಳಿಯುವುದಿಲ್ಲ. ನದಿಗಳ ಜೋಡಣೆಗೆ ತಾಂತ್ರಿಕ, ಆರ್ಥಿಕ, ಪರಿಸರ ಅಧ್ಯಯನ ವರದಿಗಳು ಸಿದ್ಧವಾಗಬೇಕು. ಅವುಗಳ ಆಧಾರದಲ್ಲಿ ವಿವರವಾದ ಯೋಜನಾ ವರದಿ ಮಾಡಬೇಕಾಗುತ್ತದೆ.
ನೆರೆಯ ದೇಶದಲ್ಲಿ ಏನಾಗಿದೆ?:ನೆರೆಯ ಚೀನಾದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಆದರೆ ಅದರಿಂದ ಹಲವು ನಗರಗಳಿಗೆ ಮುಳುಗಡೆ ಭೀತಿ ಇದ್ದೇ ಇದೆ. ನೆದರ್​ಲ್ಯಾಂಡ್​ನಲ್ಲೂ ಇಂಥದ್ದೇ ಕಾರಣಗಳಿಗೆ ಅಣೆಕಟ್ಟೆ ಒಡೆದು ಹಾಕಲಾಗಿದೆ ಎಂದು ತಜ್ಞರು ವಿವರಿಸುತ್ತಾರೆ.
ಏನಿದು ನದಿ ಜೋಡಣೆ?:ಕೇಂದ್ರ ಸರ್ಕಾರದ ಜಲ ಅಭಿವೃದ್ಧಿ ಮಂಡಳಿ ಮುಂದೆ 9 ರಾಜ್ಯಗಳು 47 ನದಿಗಳ ಜೋಡಣೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅದರಲ್ಲಿ 36 ನದಿಗಳ ಕಾರ್ಯಸಾಧು ಅಧ್ಯಯನವನ್ನು ಕೇಂದ್ರ ಸರ್ಕಾರ ಮುಗಿಸಿದೆ. ರಾಜ್ಯ ಸರ್ಕಾರ ಸಹ 6 ನದಿಗಳ ಜೋಡಣೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಕಾರ್ಯಸಾಧು ವರದಿಗೆ ರಾಜ್ಯ ಆಕ್ಷೇಪಣೆ ಸಲ್ಲಿಸಿತ್ತು.
ನದಿಗಳ ಜೋಡಣೆಯಿಂದ ಏನೂ ಉಪಯೋಗವಿಲ್ಲ. ನೆರೆ ರಾಜ್ಯಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಜೋಡಣೆಗೆ ಮುಂದಾಗಲಾಗಿದೆ. ಅದನ್ನು ಬಿಟ್ಟು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಲಿ.
|ಪ್ರೊ. ಸಿ. ನರಸಿಂಹಪ್ಪಜಲ ಸಂಪನ್ಮೂಲ ತಜ್ಞ
ಪರಿಸರ ಅಧ್ಯಯನ:ರಾಜ್ಯದೊಳಗಿನ ಬೇಡ್ತಿ-ವರದಾ ನದಿಗಳ ಜೋಡಣೆಗೆ ಸಂಬಂಧಿಸಿದಂತೆ ಕಾರ್ಯಸಾಧು ವರದಿ ಸಿದ್ಧವಾಗಿರುವುದರಿಂದ ಈಗ ಪರಿಸರ ಅಧ್ಯಯನ ನಡೆಯುತ್ತಿದೆ. ನೇತ್ರಾವತಿ-ಹೇಮಾವತಿ ಜೋಡಣೆಯನ್ನು ಎತ್ತಿನಹೊಳೆ ಯೋಜನೆಗೆ ಸೇರಿಸಲಾಗಿದೆ.
ಆತಂಕಗಳೇನು?:ಆರ್ಥಿಕ ಹೊರೆ, ಪರಿಸರ ನಾಶ
ಪರ್ಯಾಯವೇನು?:ಏತ ನೀರಾವರಿ, ಅಂತರ್ಜಲ ಮರು ಪೂರಣ, ಜಲಾನಯನ ಅಭಿವೃದ್ಧಿಗೆ ಒತ್ತು
ಮತ್ತೆ ನ್ಯಾಯಾಧಿಕರಣವೇ ಗತಿ?:ನದಿ ಜೋಡಣೆಯಿಂದ ಹೆಚ್ಚುವರಿ ನೀರು ಪಡೆಯಲು ಕಾನೂನು ಹೋರಾಟಕ್ಕೂ ರಾಜ್ಯ ಸಿದ್ಧವಾಗಿದೆ. ಇದರಿಂದಾಗಿ ಮತ್ತೊಮ್ಮೆ ನ್ಯಾಯಾಧಿಕರಣವೇ ಗತಿಯಾಗುವುದೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
ನದಿಗಳ ಜೋಡಣೆ ಯಶಸ್ವಿಯಾಗುವ ಬಗ್ಗೆ ಅನುಮಾನಗಳಿವೆ. ಹವಾಮಾನ ವೈಪರೀತ್ಯ ಅದಕ್ಕೆ ಕಾರಣ. ಜಲಾನಯನ ಅಭಿವೃದ್ಧಿ, ಏತ ನೀರಾವರಿಯಂತಹ ಯೋಜನೆಗಳ ಕಡೆ ಹೆಚ್ಚಿನ ಗಮನ ಅಗತ್ಯವಿದೆ.
|ಪ್ರೊ. ಕೃಷ್ಣರಾಜುಪರಿಸರ ಆರ್ಥಿಕ ತಜ್ಞ
ಕೇಂದ್ರ ಬಜೆಟ್ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯಕ್ಕೆ ನಿರಾಸೆಯಾಗಿದೆ. ಯಾವುದೇ ಇಲಾಖೆಯ ಅನುದಾನದಲ್ಲೂ ಕರ್ನಾಟಕಕ್ಕೆಂದು ವಿಶೇಷ ವಾಗಿ ಘೋಷಣೆಯಾದ ಅಂಶ ಕಾಣಿಸಿಲ್ಲ. ಈ ಬಜೆಟ್​ನಲ್ಲಿ ಯಾವುದಾದರೂ ಘೋಷಣೆ ಮಾಡಿದ್ದರೆ ಅನುಷ್ಠಾನಕ್ಕೆ ಇನ್ನೊಂದು ವರ್ಷ ಕಾಲಾವಕಾಶ ಸಿಗುತ್ತಿತ್ತು. ಅಲ್ಲದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಬಗ್ಗೆ ಮಮಕಾರ ತೋರಿಸುತ್ತಾರೆಂದು ಭಾವಿಸ ಲಾಗಿತ್ತು. ಇನ್ನು 2022ರ ಮಾರ್ಚ್​ನಲ್ಲಿ ಚುನಾವಣೆ ಬಜೆಟ್ ಮಂಡಿಸುತ್ತೇನೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಚುನಾವಣೆ ವಾತಾವರಣ ಸೃಷ್ಟಿಯಾಗುವ ಸನ್ನಿವೇಶದಲ್ಲಿ ಕೇಂದ್ರದಿಂದ ವಿಶೇಷ ಕೊಡುಗೆ ಯನ್ನು ಆಡಳಿತ ಪಕ್ಷ ನಿರೀಕ್ಷಿಸುತ್ತಿತ್ತು, ಆದರೆ ಅದು ಹುಸಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
