| ರಾಘವ ಶರ್ಮ ನಿಡ್ಲೆ, ನವದೆಹಲಿ
ನಾಯಕತ್ವದ ಅಸ್ಪಷ್ಟತೆ, ದೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಗೊಂದಲಕಾರಿ ನಿಲುವುಗಳು, ಅಸ್ತಿತ್ವ ಕಳೆದುಕೊಂಡ ಪಕ್ಷದ ಸಂಸದೀಯ ಮಂಡಳಿ, ರಾಜ್ಯಗಳಲ್ಲಿ ಹಿರಿ-ಕಿರಿಯ ಮುಖಂಡರ ನಡುವೆ ಕಾದಾಟ, ಗಂಭೀರ ಚರ್ಚೆಗಳನ್ನು ಕಾಣದೆ, ಹೆಸರಿಗಷ್ಟೇ ಇರುವ ಕಾರ್ಯಕಾರಿ ಸಮಿತಿ…
ಕಳೆದ 6 ವರ್ಷಗಳಿಂದ ಕಾಂಗ್ರೆಸ್​ನ್ನು ಬಾಧಿಸುತ್ತಿರುವ ಸಮಸ್ಯೆಗಳಿವು. ಸೋನಿಯಾ ಗಾಂಧಿ ನಾಯಕತ್ವದ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಗೌರವವಿದ್ದರೂ, ಅನಾರೋಗ್ಯ ಅವರನ್ನು ಮನೆಯಲ್ಲೇ ಉಳಿಯುವಂತೆ ಮಾಡಿದೆ. ರಾಹುಲ್ ಗಾಂಧಿಯಂತೂ, 2019ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ಪಕ್ಷ ಸಂಘಟನೆ ಗಟ್ಟಿಗೊಳಿಸುವ ಜವಾಬ್ದಾರಿ ತನ್ನದಲ್ಲ ಎಂಬಂತೆ ಅಧ್ಯಕ್ಷ ಸ್ಥಾನದಿಂದ ದೂರ ಕುಳಿತಿದ್ದಾರೆ. ಈ ನಡುವೆ, ಕೆಲ ಕಾಂಗ್ರೆಸ್ಸಿಗರು ರಾಹುಲ್ ಮತ್ತೆ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸುತ್ತಿದ್ದರೆ, ಮತ್ತೆ ಕೆಲವರು ಪಕ್ಷಕ್ಕೆ ಪ್ರಬಲ, ದೂರದೃಷ್ಟಿಯುಳ್ಳ ಮತ್ತು ಎಲ್ಲರನ್ನೂ ಒಗ್ಗೂಡಿ ಕೊಂಡೊಯ್ಯಬಲ್ಲ ನಾಯಕತ್ವ ಬೇಕು ಎನ್ನುತ್ತಿದ್ದಾರೆ. ಪರೋಕ್ಷವಾಗಿ ಪರ್ಯಾಯ ನಾಯಕತ್ವ ಬೇಕು ಎನ್ನುವುದು ಅವರ ಮಾತಿನ ಒಳಾರ್ಥ. ಆದರೆ, ಗಾಂಧಿ ಮನೆತನ ಹೊರತುಪಡಿಸಿದ ವ್ಯಕ್ತಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಕೇಂದ್ರ ಸರ್ಕಾರದ ಕರೊನಾ ನಿರ್ವಹಣೆ, ಆರ್ಥಿಕ ಬಿಕ್ಕಟ್ಟು, ಚೀನಾ ಗಡಿತಂಟೆ, ಬ್ಯಾಂಕುಗಳು ಮತ್ತು ರೈಲ್ವೆ ಕ್ಷೇತ್ರದ ಖಾಸಗೀಕರಣ, ನಿರುದ್ಯೋಗ ಸಮಸ್ಯೆ…ಹೀಗೆ ಹಲವಾರು ಸಮಸ್ಯೆಗಳಿದ್ದರೂ ಮುಂಚೂಣಿಯಲ್ಲಿ ನಿಂತು ಕೇಂದ್ರದ ವಿರುದ್ಧ ನಾವೇಕೆ ಸಿಡಿದೇಳುತ್ತಿಲ್ಲ? ಹೀಗೆ ಮುಂದುವರಿದಲ್ಲಿ, ಇಡೀ ಪಕ್ಷವೇ ಹೋಳಾಗಲಿದೆ ಎಂದು ಆತಂಕಗೊಂಡೇ ಪಕ್ಷದ 23 ಮಂದಿ ನಾಯಕರು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 2 ವಾರಗಳ ಹಿಂದೆ ಪತ್ರ ಬರೆದಿದ್ದಾರೆ. ಈ ಪತ್ರವೀಗ ಬಹಿರಂಗಗೊಂಡಿರುವುದರಿಂದ ಸಹಜವಾಗಿಯೇ ಹೊಸ ನಾಯಕತ್ವದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.ಇದನ್ನೂ ಓದಿ:ಕರೊನಾವನ್ನು ಮಣಿಸಿದ ಗಾಯಕ ಎಸ್​. ಪಿ.ಬಾಲಸುಬ್ರಹ್ಮಣ್ಯಂ; ವರದಿ ನೆಗೆಟಿವ್​
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡಿದ್ದು, ರಾಜಸ್ಥಾನದಲ್ಲಿನ ಒಳಜಗಳ… ಈ ಎಲ್ಲ ಬಿಕ್ಕಟ್ಟುಗಳಿಗೆ ಪ್ರಬಲ ರಾಷ್ಟ್ರೀಯ ನಾಯಕತ್ವ ಇಲ್ಲದಿರುವುದೇ ಮುಖ್ಯ ಕಾರಣವಾಗಿತ್ತು. ಮಧ್ಯಪ್ರದೇಶದಲ್ಲಿ ಕಮಲ್​ನಾಥ್-ಜ್ಯೋತಿರಾದಿತ್ಯ ಸಿಂಧಿಯಾ ಸಮಸ್ಯೆ ಬಗೆಹರಿಸಲು ವರಿಷ್ಠರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಸಿಂಧಿಯಾ ಬಿಜೆಪಿ ಪಾಲಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಿದ್ಧತೆ ನಡೆಸುತ್ತಿದ್ದಾಗ ಸಿದ್ಧರಾಮಯ್ಯರ ಮೌನವನ್ನು ಪ್ರಶ್ನಿಸುವ ತಾಕತ್ತು ಹೈಕಮಾಂಡಿನಲ್ಲಿರಲಿಲ್ಲ. ಅದೇನಿದ್ದರೂ, ರಾಜಸ್ಥಾನದಲ್ಲಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತಿತರರು ಯಶಸ್ವಿಯಾದರು. ಬಂಡೆದ್ದಿದ್ದ ಸಚಿನ್ ಪೈಲಟ್ ಕೂಡ ಪಕ್ಷಕ್ಕೆ ವಾಪಸಾದರು. ಹಾಗಂತ ಪಕ್ಷದ ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಭವಿಷ್ಯದಲ್ಲಿ ಇಂಥದ್ದೇ ಹತ್ತು ಹಲವು ಸವಾಲುಗಳನ್ನು ಕಾಂಗ್ರೆಸ್ ಎದುರಿಸಬೇಕಾದೀತು ಮತ್ತು ಬಿಜೆಪಿಯ ರಾಜಕೀಯ ಹಾದಿ ಮತ್ತಷ್ಟು ಸಲೀಸಾದೀತು. ಹೀಗಾಗಬಾರದೆಂದೆ, 23 ಮಂದಿ ಧೈರ್ಯ ಮಾಡಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧ್ಯಕ್ಷೆ, ‘ನಾಯಕರೆಲ್ಲರೂ ಸೇರಿ ರ್ಚಚಿಸಿ, ಗಾಂಧಿ ಮನೆತನದಿಂದ ಹೊರತಾದ ವ್ಯಕ್ತಿಯನ್ನು ಪಕ್ಷ ಮುನ್ನಡೆಸಲು ಆಯ್ಕೆ ಮಾಡಿ’ ಎಂಬ ಸಲಹೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಸೋಮವಾರ ಬೆಳಗ್ಗೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ:‘ಮನಸು ಭಾರವಾದಾಗ ಹಾರುವುದೆಂತೋ … ಸುಚೇತನ್​ ಕಂಠಸಿರಿಯಲ್ಲಿ ಮನಸಿನ ಹಾಡು
ಬಂಡಾಯವೇನಲ್ಲ:ಕಾಂಗ್ರೆಸ್ ಶೋಚನೀಯ ಸ್ಥಿತಿ ಮನಗಂಡೇ ಈ ಪತ್ರ ಬರೆಯಲಾಗಿದ್ದು, ಇದು ಬಂಡಾಯದ ಸೂಚಕವೇನಲ್ಲ. ಹಾಗಂತ, ಕಾಂಗ್ರೆಸ್​ನಲ್ಲಿ ಆಮೂಲಾಗ್ರ ಬದಲಾವಣೆ ಆಗದಿದ್ದಲ್ಲಿ ತಮಗೆ, ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಟವಾದಂತಿದೆ. ಹೀಗಾಗಿ, ಈ ಬಗ್ಗೆ ಒಗ್ಗೂಡಿ ಸೋನಿಯಾ ಗಾಂಧಿ ಗಮನಸೆಳೆವ ಯತ್ನ ಮಾಡಿದ್ದಾರೆ. ಯಾರೋ ಒಬ್ಬರು ಪತ್ರ ಬರೆದಿದ್ದರೆ, ಬಹುಶಃ ಶಿಸ್ತು ಕ್ರಮಕ್ಕೆ ಗುರಿಯಾಗುತ್ತಿದ್ದರೋ ಏನೋ! ಆದರೆ ಹಾಗಾಗಿಲ್ಲ. ಪತ್ರದಲ್ಲಿ, ಸೋನಿಯಾ ಗಾಂಧಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕಪಡಿಸಿರುವ ಜತೆಗೆ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಕ್ರಮಗಳನ್ನೂ ಹೊಗಳಲಾಗಿದೆ. ಹಾಗಂತ, ರಾಹುಲ್ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳಲಾಗಿಲ್ಲ. ಬದಲಿಗೆ, ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ನೆಹರು-ಗಾಂಧಿ ಕುಟುಂಬ ಸದಾ ಅವಿಭಾಜ್ಯ ಅಂಗವಾಗಿರಲಿದೆ ಎನ್ನಲಾಗಿದೆ.
‘ಚೀನಾ ಗಡಿತಂಟೆ, ಆರ್ಥಿಕ ಬಿಕ್ಕಟ್ಟು, ಕೇಂದ್ರ ಸರ್ಕಾರದ ವಿವಿಧ ನೀತಿಗಳ ಬಗ್ಗೆ ಪ್ರಮುಖ ನಾಯಕರು ರ್ಚಚಿಸಿ, ಪಕ್ಷದ ಪ್ರತಿಕ್ರಿಯೆ ಹೀಗಿರಬೇಕು ಎಂಬ ತೀರ್ವನಕ್ಕೆ ಬರಬೇಕು. ಆದರೆ, ಈಚಿನ ದಿನಗಳಲ್ಲಿ ಇಂಥ ಚರ್ಚೆಗಳೇ ಆಗುತ್ತಿಲ್ಲ. ರಾಹುಲ್ ಗಾಂಧಿ ಎಲ್ಲ ವಿಷಯಗಳಲ್ಲೂ ಪ್ರಧಾನಿ ಮೋದಿಯವರನ್ನೇ ಗುರಿಯಾಗಿಸಿ ವಾಗ್ದಾಳಿ ನಡೆಸುವುದು ಜನರಿಗೆ ಇಷ್ಟವಾಗುವುದಿಲ್ಲ. ಹೀಗಿರುವಾಗ, ಕೇಂದ್ರದ ವಿರುದ್ಧ ನಮ್ಮ ಕಾರ್ಯನೀತಿ ಹೇಗಿರಬೇಕು ಎಂದು ರ್ಚಚಿಸಬೇಕಲ್ಲವೇ? ಆದರೆ, ಇದನ್ನೆಲ್ಲ ರಾಹುಲ್​ಗೆ ಹೇಳುವವರು ಯಾರು, ಆ ಧೈರ್ಯ ಯಾರಿಗಿದೆ’ ಎಂದು ಪಕ್ಷದ ಸಂಸದರೊಬ್ಬರು ಪ್ರಶ್ನಿಸುತ್ತಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನಿರ್ವಹಣೆ, ವೈಫಲ್ಯಗಳ ಬಗ್ಗೆ ಪಾರದರ್ಶಕ, ಪ್ರಾಮಾಣಿಕ ಆತ್ಮಾವಲೋಕನವೇ ನಡೆದಿಲ್ಲ. ಪಕ್ಷ ಸಂಘಟನೆ, ಕಾರ್ಯತಂತ್ರ, ಮತದಾರರನ್ನು ತಲುಪಲು ಬೇಕಿರುವ ನಮ್ಮ ನೀತಿಗಳು ಯಾವುದರ ಬಗ್ಗೆಯೂ ಗಂಭೀರ ಚರ್ಚೆಗಳೇ ನಡೆದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಭೆಯಂತೂ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಭಾಷಣ ಮತ್ತು ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಸೀಮಿತವಾಗಿದೆ ಎಂಬ ಅಸಮಾಧಾನ ಅನೇಕರಲ್ಲಿದೆ. ಮೇಲಾಗಿ, ವಿವಿಧ ರಾಜ್ಯಗಳಲ್ಲಿನ ಬಿಕ್ಕಟ್ಟನ್ನು ನಿಭಾಯಿಸಲೂ ದಿಲ್ಲಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ, ಅನೇಕ ಮಂದಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಮತ್ತು ಇತರ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ.
ಅದೇನೆ ಇರಲಿ, ಕೊನೆಗೂ ಕಾಂಗ್ರೆಸ್ ನಾಯಕರು ಚಳಿಬಿಟ್ಟು ಮಾತನಾಡಲು ಶುರುಮಾಡಿದ್ದಾರೆ. ಇನ್ನಾದರೂ ವಾಸ್ತವದಲ್ಲಿ ಬದುಕೋಣ ಎಂದು ವರಿಷ್ಠರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಪಕ್ಷದ ಸುಧಾರಣೆ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂಬ ಮಾತುಗಳು ಎಐಸಿಸಿ ಕೇಂದ್ರ ಕಚೇರಿಯಲ್ಲೇ ಕೇಳುತ್ತಿವೆ.
ಕಳೆದ ಬಾರಿ ರಾಜ್ಯಸಭೆ ಸದಸ್ಯರೊಂದಿಗೆ ಜೂಮ್ ಆಪ್ ಮೂಲಕ ಸಭೆ ನಡೆಸಲಾಗಿತ್ತು ಮತ್ತು ಅಲ್ಲಿ ನಡೆದಿದ್ದ ಚರ್ಚೆಗಳು ಸೋರಿಕೆಯಾಗಿದ್ದವು. ಹೀಗಾಗಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ವಿಡಿಯೋ ಹ್ಯಾಕಿಂಗ್ ತಪ್ಪಿಸಲೆಂದೇ ಸೋಮವಾರದ ಸಭೆಯನ್ನು ವೆಬೆಕ್ಸ್​ನಲ್ಲಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನಡೆಸಲು ತೀರ್ವನಿಸಲಾಗಿದೆ.
ಗಾಂಧಿಯೇತರ ಕುಟುಂಬ ವ್ಯಕ್ತಿ ಅಧ್ಯಕ್ಷರಾಗಬೇಕೆಂಬ ವಾದ ಬಲಗೊಂಡರೆ, ಕರ್ನಾಟಕದ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೆಸರೂ ಮುಂಚೂಣಿಯಲ್ಲಿರಲಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಅವರ ಹೆಸರು ಕೇಳುತ್ತಿದೆ. ದಲಿತ ಸಮುದಾಯದ ಖರ್ಗೆ ಬಗ್ಗೆ ವರಿಷ್ಠರಲ್ಲಿ ಸದಭಿಪ್ರಾಯವಿದ್ದು, ಸಂಸತ್ತಿನಲ್ಲೂ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮೇಲಾಗಿ, ದಲಿತರೊಬ್ಬರಿಗೆ ಉನ್ನತ ಸ್ಥಾನ ನೀಡುವುದು ರಾಜಕೀಯವಾಗಿಯೂ ಪರಿಣಾಮಕಾರಿ ಸಂದೇಶ ರವಾನಿಸಲಿದೆ. ಪಕ್ಷ ನಿಷ್ಠ ಎಂದು ಗುರುತಿಸಿಕೊಂಡಿರುವುದರ ಜತೆಗೆ ಹಿಂದಿ-ಇಂಗ್ಲಿಷ್ ಮೇಲೆ ಹತೋಟಿ ಸಾಧಿಸಿರುವುದೂ ಕೂಡ ಖರ್ಗೆ ಪ್ಲಸ್ ಪಾಯಿಂಟ್.
ಪತ್ರಕ್ಕೆ ಸಹಿ ಹಾಕಿದವರು:ಗುಲಾಂ ನಬೀ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮ, ಭೂಪಿಂದರ್ ಸಿಂಗ್ ಹೂಡಾ, ವೀರಪ್ಪ ಮೊಯಿಲಿ, ಮುಕುಲ್ ವಾಸ್ನಿಕ್, ಶಶಿ ಥರೂರ್, ರಾಜೇಂದ್ರ ಕುಮಾರ್ ಭಟ್ಟಲ್, ಮನೀಶ್ ತಿವಾರಿ, ಜಿತಿನ್ ಪ್ರಸಾದ್, ರಾಜ್ ಬಬ್ಬರ್, ಪೃಥ್ವಿರಾಜ್ ಚೌಹಾನ್, ವಿವೇಕ್ ಟಂಖಾ, ಪಿಜೆ ಕುರಿಯೆನ್, ಮಿಲಿಂದ್ ದಿಯೋರಾ, ರೇಣುಕಾ ಚೌಧುರಿ, ಅರವಿಂದರ್ ಸಿಂಗ್ ಲವ್ಲಿ, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್, ಕುಲ್​ದೀಪ್ ಶರ್ಮ, ಯೋಗಾನಂದ ಶಾಸ್ತ್ರಿ, ಸಂದೀಪ್ ದೀಕ್ಷಿತ್.
‘ಪ್ರಧಾನಿ ಮೋದಿ ರಾಹುಲ್​ ಗಾಂಧಿಯವರಿಗೆ ಮಾತ್ರ ಹೆದರುತ್ತಿದ್ದಾರೆ…ಹಾಗಾಗಿ ಅವರೇ ಅಧ್ಯಕ್ಷರಾಗಲಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
