ನವದೆಹಲಿ:ಮಹಾರಾಷ್ಟ್ರ ಅಥವಾ ದೆಹಲಿಯಂತೆ ಉತ್ತರ ಪ್ರದೇಶದಲ್ಲಿ ಕರೊನಾ ವೈರಸ್ ವಿಪರೀತವಾಗೇನೂ ಹಬ್ಬಿಲ್ಲ. ಶೇ.50ರಷ್ಟು ಕೇಸುಗಳು ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರ ಸಂಪರ್ಕದಿಂದಲೇ ದಾಖಲಾಗಿವೆ. ಸುಮಾರು 23 ಕೋಟಿ ಜನಸಂಖ್ಯೆಯಿರುವ ರಾಜ್ಯದಲ್ಲಿ ಕೇಸುಗಳು ಹೆಚ್ಚಾದಲ್ಲಿ ಅವುಗಳನ್ನು ನಿಭಾಯಿಸುವುದೇ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ದೈತ್ಯ ಸವಾಲೆನಿಸಬಹುದು. ಏತನ್ಮಧ್ಯೆ, 11 ವಿವಿಧ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಉತ್ತರ ಪ್ರದೇಶ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಉಕ್ಕು, ರಿಫೈನರಿಗಳು, ಸಿಮೆಂಟ್ ಕಾರ್ಖಾನೆ, ರಾಸಾಯನಿಕ ರಸಗೊಬ್ಬರ, ಸಕ್ಕರೆ ಕಾರ್ಖಾನೆಗಳೂ ಇದರಲ್ಲಿ ಒಳಗೊಂಡಿವೆ.
ಶೇ.50ರಷ್ಟು ಮಾತ್ರ ನೌಕರರಿಗೆ ಕೆಲಸ ಮಾಡಲು ಅವಕಾಶವಿದ್ದು, ಥರ್ಮಲ್ ಸ್ಕ್ರೀನಿಂಗ್ ಬಳಿಕ ಸಿಬ್ಬಂದಿ ಒಳಪ್ರವೇಶಿಸಬೇಕು. ಹಾಗೇ ಸ್ಥಳದಲ್ಲಿ ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಮತ್ತು ನೀರಿನ ವ್ಯವಸ್ಥೆಯಿರುವುದನ್ನು ಕಡ್ಡಾಯಗೊಳಿಸಲಾಗಿದೆ. ತಮ್ಮ ಕಬ್ಬಿನ ಗದ್ದೆಗಳಲ್ಲಿ ರಾಶಿ ಹಾಕಿದ್ದ ಕ್ವಿಂಟಲ್ ಗಟ್ಟಲೆ ಕಬ್ಬುಗಳನ್ನು ಸಕ್ಕರೆ ಕಾರ್ಖಾನೆಗೆ ತಲುಪಿಸಲು ಕಾದು ಕೂತಿದ್ದ ರೈತರಿಗೆ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ನೀಡಿರುವುದು ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಬ್ಬಿನ ಗದ್ದೆಗಳಿವೆ.
ಯೋಗಿ ಖಡಕ್ ನಿರ್ಧಾರ:ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಸೋಂಕಿತರು ದುರ್ವರ್ತನೆ ತೋರಿದ್ದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್​ಎಸ್​ಎ) ಪ್ರಕರಣ ದಾಖಲಿಸಲು ಕೂಡ ಹೇಳಿದ್ದರು. ಕರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸಿಬ್ಬಂದಿ ರಕ್ಷಣೆಯೇ ಪ್ರಥಮ ಆದ್ಯತೆ ಆಗಬೇಕು ಎಂದು ಪೊಲೀಸರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಹಾಗೂ ಕ್ವಾರಂಟೈನ್​ಗೆ ಒಳಪಡಲು ಹಿಂದೇಟು ಹಾಕುವವರ ಮೇಲೆ ಕೇಸು ಹಾಕುವುದಕ್ಕೂ ಅಧಿಕಾರಿಗಳಿಗೆ ಯೋಗಿ ಮುಕ್ತ ಅವಕಾಶ ಕೊಟ್ಟಿದ್ದಾರೆ.
ಬುಧವಾರ ಗೋರಖ್​ಪುರದ ಸರಫಾ ರೆಸಿಡೆನ್ಸ್ ರೂ ಅಪಾರ್ಟ್​ವೆುಂಟ್​ನಲ್ಲಿ ಸ್ಥಳೀಯರನ್ನು ಕರೆಸಿ ತನ್ನ 10 ವರ್ಷದ ಪುತ್ರನ ಹುಟ್ಟುಹಬ್ಬ ಆಚರಿಸಿದ ಗೋರಖ್​ಪುರದ ನಿವಾಸಿ ವರುಣ್ ಅಗರ್ವಾಲ್ ಮತ್ತು ಪಾಲ್ಗೊಂಡ 50 ಮಂದಿ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಇತರೆ ಜಿಲ್ಲೆಗಳಿಗೂ ಖಡಕ್ ಸಂದೇಶ ರವಾನಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಹೋರಾಟದ ವೇಳೆ ಕಿಡಿಗೇಡಿಗಳಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದಕ್ಕೆ ಅವರಿಂದಲೇ ಹಣ ಭರಿಸಬೇಕು. ಒಂದುವೇಳೆ ದಂಡ ಕಟ್ಟಲು ವಿಫಲರಾದಲ್ಲಿ ಅವರ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಬಿಗಿ ನಿಲುವನ್ನು ಸಿಎಂ ಆದಿತ್ಯನಾಥ ಪ್ರದರ್ಶಿಸಿದ್ದು ಇಲ್ಲಿ ಉಲ್ಲೇಖನೀಯ.
800ಕ್ಕಿಂತಲೂ ಹೆಚ್ಚು ಕೇಸು ಏಪ್ರಿಲ್ 16ಕ್ಕೆ ಅನ್ವಯವಾಗುವಂತೆ ಒಟ್ಟು 21,384 ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, 809 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. 205 ಮಂದಿಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. 74 ಮಂದಿ ಗುಣಮುಖರಾಗಿದ್ದರೆ, 13 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಒಟ್ಟು 15 ಸರ್ಕಾರಿ ಪ್ರಯೋಗಾಲಯಗಳಲ್ಲಿ ಕರೊನಾ ಟೆಸ್ಟ್​ಗಳನ್ನು ನಡೆಸಲಾಗುತ್ತಿದ್ದು, 2 ಖಾಸಗಿ ಲ್ಯಾಬ್​ಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. 809 ಕೇಸುಗಳಲ್ಲಿ 473 ಕೇಸುಗಳಿಗೆ ದೆಹಲಿಯ ತಬ್ಲಿಘಿ ಜಮಾತ್ ಸಭೆಯ ನಂಟಿದೆ.
ಸಿಎಎ ಬಳಿಕ ಮತ್ತೊಂದು ತಲೆನೋವು:ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಹೋರಾಟದ ಕೇಂದ್ರತಾಣವಾಗಿದ್ದ ಮೊರಾದಾಬಾದ್​ನಲ್ಲಿ ಕರೊನಾ ಮುಂಚೂಣಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಪರೀಕ್ಷೆಗೆಂದು ಬಂದ ವೈದ್ಯರ ಮೇಲೆ ಕಲ್ಲು ತೂರಾಟ, ದಾಳಿ ನಡೆಸಿದ ಪರಿಣಾಮ ವೈದ್ಯರು, ದಾದಿಯರು ಮನೆ-ಮನೆಗೆ ಹೋಗಿ ಪರೀಕ್ಷೆ ನಡೆಸುವುದು ನಮ್ಮಿಂದ ಸಾಧ್ಯವಾಗದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ನವಾಬ್​ಪುರ ಎಂಬಲ್ಲಿ ವೈದ್ಯರೊಬ್ಬರನ್ನು ವಶಕ್ಕೆ ತೆಗೆದುಕೊಂಡ ಸ್ಥಳೀಯರು ಕೊಲೆ ಬೆದರಿಕೆಯನ್ನೂ ಹಾಕಿದ್ದರು!
ವಾಸ್ತವದಲ್ಲಿ, ನವಾಬ್​ಪುರದಲ್ಲಿ ಕರೊನಾಕ್ಕೆ ಬಲಿಯಾದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದವರನ್ನು ಪರೀಕ್ಷೆಗೊಳಪಡಿಸುವ ಉದ್ದೇಶದಿಂದ ವೈದ್ಯರ ತಂಡ ತೆರಳಿದ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿಗಳಾಗಿವೆ. ಏಪ್ರಿಲ್ ಆರಂಭದಲ್ಲಿ ಮೊರಾದಾಬಾದ್​ನ ಮಸೀದಿಯೊಂದರಲ್ಲಿ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ 13 ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್​ಗೆ ಒಳಪಡಿಸಿದ ಘಟನೆ ಕೆಲವು ಸ್ಥಳೀಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಜಮಾತ್ ಸಭೆಯಲ್ಲಿ ಉತ್ತರ ಪ್ರದೇಶದ 569 ಮಂದಿ ಪಾಲ್ಗೊಂಡಿದ್ದರು ಮತ್ತು ಸಭೆಗೆ ಸಂಬಂಧಿಸಿದ 218 ವಿದೇಶಿಯರು ಕೂಡ ರಾಜ್ಯಕ್ಕೆ ಬಂದಿದ್ದರು. ಅವರೆಲ್ಲರನ್ನೂ ಕಡ್ಡಾಯ ದಿಗ್ಬಂಧನದಲ್ಲಿ ಇರಿಸಲಾಗಿದೆ.


ಉತ್ತರ ಪ್ರದೇಶದ ಕೆಲವು ಮಂದಿಗೆ ಕರೊನಾ ಸಮಸ್ಯೆಯನ್ನು ಎಷ್ಟು ಬಿಡಿಸಿ ಹೇಳಿದರೂ ಅರ್ಥವಾಗುತ್ತಿಲ್ಲ. ಅವರಲ್ಲಿ ತರ್ಕಕ್ಕೆ ಬೆಲೆ ಇಲ್ಲ. ತಾವು ನಂಬಿಕೊಂಡಿದ್ದೇ ಸತ್ಯ ಎನ್ನುತ್ತಾರೆ. ಪ್ರಾರ್ಥನೆ ಮಾಡಿದರೆ ಎಲ್ಲವೂ ನಿವಾರಣೆಯಾಗುತ್ತದೆ ಎನ್ನುತ್ತಾ ತಿರುಗಾಡುತ್ತಾರೆ. ಅವರಿಗೆ ದಂಡಂ ದಶಗುಣಂ ಬಿಟ್ಟು ಬೇರೆ ಪರಿಹಾರವಿಲ್ಲ ಅನಿಸುತ್ತದೆ. ಈ ಕಿಡಿಗೇಡಿಗಳಿಗೆ ಸಿಎಂ ಯೋಗಿ ಸರಿಯಾಗಿಯೇ ಬುದ್ಧಿ ಕಲಿಸುತ್ತಿದ್ದಾರೆ| ಸಚಿನ್ ಕುಮಾರ್ (ಅಯೋಧ್ಯೆ) ದೆಹಲಿಯಲ್ಲಿ ಕೃಷಿ ವಿಜ್ಞಾನ ಸಂಶೋಧಕರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 17 =
Remember me
