ನವದೆಹಲಿ:ನಾವಿಲ್ಲಿ ಬದುಕಲು ಸಾಧ್ಯವಿದೆಯೇ? ಹಿಂಸಾಚಾರ, ಮಾರಾಮರಿ, ಪೆಟ್ರೋಲ್ ಬಾಂಬ್ ದಾಳಿ, ಗಲಭೆಗಳನ್ನು ನೆನೆಸಿಕೊಂಡರೆ ರಾತ್ರಿಯಿಡೀ ನಿದ್ದೆ ಬರುತ್ತಿಲ್ಲ. ಮಕ್ಕಳೆಲ್ಲಾ ಹೆದರಿ ಕೂತಿದ್ದಾರೆ. ಫರಿದಾಬಾದ್​ನಲ್ಲಿರುವ ನಮ್ಮ ಸಂಬಂಧಿಕರು ಅವರ ಮನೆಗೆ ಬನ್ನಿ ಎನ್ನುತ್ತಿದ್ದಾರೆ. ಅಲ್ಲಿಗೆ ಹೋಗುತ್ತಿದ್ದೇವೆ. ವಾಪಸ್ ಬರುವುದು ಯಾವಾಗ ಗೊತ್ತಿಲ್ಲ…
ಹೀಗೆ ಹೇಳಿದ್ದು ದೆಹಲಿಯ ಸೀಲಂಪುರ್ ಸರ್ಕಲ್ ಬಳಿ ಸಿಕ್ಕ ಹುಸೇನ್. ಕುಟುಂಬಸ್ಥರೊಂದಿಗೆ ಫರೀದಾಬಾದ್ ಕಡೆ ಮುಖ ಮಾಡಿದ್ದ ಬಸ್​ಗಾಗಿ ಕಾಯುತ್ತಿದ್ದ. ವ್ಯಾಪಾರಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಸೇನ್​ನಂತೆ ಸಾವಿರಾರು ಮಂದಿ ಈಶಾನ್ಯ ದೆಹಲಿಯನ್ನ ಬಿಟ್ಟು ರಾಜಧಾನಿಗೆ ಅಂಟಿಕೊಂಡಿರುವ ಉತ್ತರ ಪ್ರದೇಶ ಹಾಗೂ ಹರಿಯಾಣ ಗಡಿ ಪ್ರದೇಶಗಳಲ್ಲಿರುವ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ಇಡೀ ಪ್ರದೇಶ ಸಹಜ ಸ್ಥಿತಿಗೆ ಬಂದ ಬಳಿಕ ವಾಪಸ್ ಬರುವ ಬಗ್ಗೆ ಯೋಚಿಸುತ್ತೇವೆ ಎಂದು ಅವರೆಲ್ಲ ಹೇಳುತ್ತಿದ್ದರು.
ಜಫ್ರಾಬಾದ್ ಮೆಟ್ರೋ ಸ್ಟೇಷನ್ ಅಕ್ಕಪಕ್ಕದ ಪ್ರದೇಶದಲ್ಲಿ ಮನೆಯ ಕಿಟಕಿಯಿಂದ ಕಣ್ಣಾಡಿಸುತ್ತಿದ್ದ ಅನೇಕ ಮಂದಿ ಹೊರ ಬರಲು ಈಗಲೂ ಹೆದರುತ್ತಿದ್ದಾರೆ. ಸ್ಥಳದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪೊಲೀಸ್ ಸರ್ಪಗಾವಲಿದೆ. ಸದ್ಯಕ್ಕೆ ಸಾರ್ವಜನಿಕ ಓಡಾಟಕ್ಕೆ ಅವಕಾಶವಿಲ್ಲ. ನಾಲ್ಕೈದು ದಿನಗಳ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದೇನೋ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಹಿಂದೆ ಗಲಭೆ ಉಂಟಾಗಿರಲಿಲ್ಲ
ಈಶಾನ್ಯ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೂ, ಹಿಂದುಗಳೂ ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಮ್ಮ ಗಲ್ಲಿಯಲ್ಲಿ 2 ಮಂದಿರಗಳಿವೆ. ಅಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ಎಂದಿಗೂ ನಮ್ಮ ನಡುವೆ ಭಿನ್ನಾಭಿಪ್ರಾಯ, ಗಲಭೆ ಉಂಟಾಗಿರಲಿಲ್ಲ. ಆದರೆ, ದುಷ್ಕರ್ವಿುಗಳು ನಮ್ಮವರ ಮೇಲೆ ದಾಳಿ ಮಾಡಿ, ಇಡೀ ವಾತಾವರಣ ಹಾಳು ಮಾಡಿದ್ದಾರೆ. ಯಾರನ್ನು ನಂಬುವುದು ಬಿಡುವುದು ಗೊತ್ತಾಗುತ್ತಿಲ್ಲ ಎಂದಾಗ ಯುವಕ ಬಶೀರ್ ಕಣ್ಣಿನಲ್ಲಿ ನೀರು ತುಂಬಿತ್ತು. ಎರಡೂ ಕಡೆಯ ದುಷ್ಕರ್ವಿುಗಳಿಂದಾಗಿ ನಾವು ನೋವು ತಿನ್ನುವಂತಾಗಿದೆ ಎಂದು ಬಶೀರ್ ಮಾತಿಗೆ ಅನಿಲ್ ದನಿಗೂಡಿಸಿದ. ಬಾಬರ್​ಪುರ್ ಮೆಟ್ರೋ ಬಳಿಯಿದ್ದ ಅಂಗಡಿಯೊಂದರ ಎದುರು ಭಾಗದಲ್ಲಿ ಪಿಸ್ತೂಲ್​ನಿಂದ ಹಾರಿಸಿದ್ದ ಮೂರು ಗುಂಡುಗಳಿದ್ದವು. ಅಲ್ಲಿಗೆ ಬಂದ ಪೊಲೀಸರು ಮತ್ತು ಪತ್ರಕರ್ತರಿಗೆ ಸ್ಥಳೀಯರು ಆ ಗುಂಡುಗಳನ್ನು ತೋರಿಸುತ್ತಿದ್ದರು. ಎರಡೂ ಗುಂಪಿನವರು ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಓರ್ವ ನನ್ನ ಕಣ್ಣೆದುರಿಗೆ ನೆಲಕ್ಕುರುಳಿದ್ದನ್ನು ನೋಡಿದೆ. ನಾನು ದೂರದಲ್ಲಿ ನಿಂತಿದ್ದೆ. ರಕ್ಷಿಸುವ ಸ್ಥಿತಿಯಲ್ಲಿರಲ್ಲ. ನನ್ನ ಜೀವ ರಕ್ಷಣೆಗೆಂದು ತಕ್ಷಣವೇ ಮನೆ ಕಡೆ ಓಡಿದೆ ಎಂದು ಮತ್ತೋರ್ವ ಯುವಕ ಹೇಳಿದ.
ಎಫ್​ಐಆರ್​ಗೆ ಒಂದು ತಿಂಗಳು ಕಾಲಾವಕಾಶ
ದ್ವೇಷ ಭಾಷಣ ಆರೋಪಿತರ ವಿರುದ್ಧ ಒಂದು ತಿಂಗಳ ಒಳಗೆ ಎಫ್​ಐಆರ್ ದಾಖಲಿಸಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ ಮತ್ತು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಪಾರ್ಟಿಯನ್ನಾಗಿ ಮಾಡಿದೆ. ದ್ವೇಷಕಾರಿ ಭಾಷಣದ ಸಂಬಂಧ ಬಿಜೆಪಿ ಮೂವರು ಮುಖಂಡರ ವಿರುದ್ಧ ಎಫ್​ಐಆರ್ ದಾಖಲಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಗುರುವಾರ ಮನವಿ ಮಾಡಿದ್ದವು.
ಗುಪ್ತಚರ ವೈಫಲ್ಯ?
ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ದೆಹಲಿಯ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅಮೆರಿಕ ಅಧ್ಯಕ್ಷರು ಭಾರತ ಪ್ರವಾಸದಲ್ಲಿದ್ದ ವೇಳೆ ರಕ್ಷಣಾ ಕ್ರಮ ಹೆಚ್ಚಿಸಿಕೊಂಡಿದ್ದ ಕೇಂದ್ರ ಸರ್ಕಾರಕ್ಕೆ ಗಲಭೆ, ಹಿಂಸಾಚಾರದ ಸಾಧ್ಯತೆಗಳ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲವೇ? ಗುಪ್ತಚರ ಇಲಾಖೆಗೆ ಏನೂ ಗೊತ್ತಾಗಲಿಲ್ಲ ಎಂದರೆ ನಂಬಲು ಸಾಧ್ಯವೇ? ಹೋಗಲಿ, ಪೊಲೀಸರು ಗಲಭೆ ನಿಯಂತ್ರಿಸಲು ನಿಜಕ್ಕೂ ಪ್ರಯತ್ನಪಟ್ಟರೆ? ಕಲ್ಲು ತೂರಾಟ, ಹಿಂಸಾಚಾರ ಜೋರಾದಾಗಲೂ ಕೆಲ ಪೊಲೀಸರು ಮೌನವಾಗಿ ನಿಂತುಕೊಂಡಿದ್ದೇಕೆ ಎನ್ನುವುದು ಈಶಾನ್ಯ ದೆಹಲಿ ಬಹುಪಾಲು ನಿವಾಸಿಗರ ಪ್ರಶ್ನೆ. ಮಾಜಿ ಪೊಲೀಸ್ ಅಧಿಕಾರಿಗಳು ಗುಪ್ತಚರ ವೈಫಲ್ಯ ಹಾಗೂ ದೆಹಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಪೊಲೀಸರು ಮೊದಲೇ ಪೂರ್ವ ತಯಾರಿ ಮಾಡಿಕೊಂಡಿದ್ದರೆ ಇಂಥದ್ದೊಂದು ಗಲಭೆಯಾಗುತ್ತಿರಲಿಲ್ಲ ಎಂದೇ ಹೇಳುತ್ತಿದ್ದಾರೆ.
ಗಲಭೆಗೆ ಹೊಣೆ ಯಾರು
ಸಿಎಎ ಪರ-ವಿರೋಧ ಹೋರಾಟ ಏನೇ ಇರಲಿ. ಆದರೆ 1984ರ ಸಿಖ್ ವಿರೋಧಿ ದಂಗೆ ಇನ್ನೂ ನಾವು ಮರೆತಿಲ್ಲ. ಅದಾದ ನಂತರ ಸಣ್ಣಪುಟ್ಟ ಹಿಂಸಾಚಾರಕ್ಕೆ ದೆಹಲಿ ಸಾಕ್ಷಿಯಾಗಿತ್ತು. ಆದರೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ದಳ್ಳುರಿ ನನಗೆ 1984ನ್ನು ನೆನಪಿಸಿತು. ಎರಡೂ ಧರ್ಮಗಳಲ್ಲಿರುವ ಅಶಿಕ್ಷಿತ ಯುವಕರ ಮನಸ್ಸುಗಳನ್ನು ಕೆಡಿಸಿದ್ದರ ಪರಿಣಾಮದಿಂದಲೇ ಈ ಸಾವು ನೋವು ಉಂಟಾಗಿದೆ. ಇದಕ್ಕೆ ಹೊಣೆ ಯಾರು ಎನ್ನುವುದಕ್ಕೆ ಕೇಂದ್ರ ಸರ್ಕಾರ, ದೆಹಲಿ ಪೊಲೀಸ್ ಮತ್ತು ಆಮ್ ಆದ್ಮಿ ಸರ್ಕಾರ ಉತ್ತರ ನೀಡಲೇಬೇಕು’ ಎನ್ನುವುದು 75 ವರ್ಷದ ಸೀಲಂಪುರ ನಿವಾಸಿ ವೀರೇಂದರ್ ಪಾಲ್ ಆಗ್ರಹ.
-ಠಿ; 10 ಲಕ್ಷ ಪರಿಹಾರ
ಗಲಭೆಯಲ್ಲಿ ಮೃತರಾದವರ ಕುಟುಂಬಕ್ಕೆ -ಠಿ; 10 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ -ಠಿ; 5 ಲಕ್ಷ ಪರಿಹಾರವನ್ನು ದೆಹಲಿ ಆಪ್ ಸರ್ಕಾರ ಘೋಷಿಸಿದೆ. ಗಾಯಾಳುಗಳ ವೈದ್ಯಕೀಯ ವೆಚ್ಚ ಭರಿಸುವುದಾಗಿಯೂ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಬೆಂಕಿಗೆ ಆಹುತಿಯಾದ ದಾಖಲೆಗಳ ನಕಲು ಪ್ರತಿ ವಿತರಣೆಗೆ ವಿಶೇಷ ಶಿಬಿರವನ್ನು ತೆರೆಯುವುದಾಗಿ ತಿಳಿಸಿದ್ದಾರೆ.
ಹೈಕೋರ್ಟ್​ನಲ್ಲಿ ಪಿಐಎಲ್
ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, ಶಾಸಕ ಅಮಾನತುಲ್ಲಾ ಖಾನ್, ಸಂಸದ ಅಸಾದುದ್ದೀನ್ ವೈಒಸಿ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚನೆ ನೀಡುವಂತೆ ಕೋರಿ ದೆಹಲಿ ಹೈಕೊರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.
ಸ್ಮಶಾನಮೌನ
ಬಾಬರ್​ಪುರ್, ಗೋಕುಲ್ ಪುರಿ, ಚಾಂದ್ ಭಾಗ್, ಮೌಜ್ ಪುರ್, ಶಿವಪುರಿ, ಮುಸ್ತಾಫಾಬಾದ್ ಸೇರಿ ಹಿಂಸಾಚಾರದಿಂದ ರಣಾಂಗಣವಾಗಿದ್ದ ಈಶಾನ್ಯ ದೆಹಲಿಯಲ್ಲಿ ಈಗ ಸ್ಮಶಾನ ಮೌನ. ಮನೆಗಳು ಸುಟ್ಟು ಹೋಗಿವೆ. ಅಂಗಡಿ ಮುಂಗಟ್ಟುಗಳು ಧ್ವಂಸಗೊಂಡಿವೆ. ಹಿಂದುಗಳ ದೇವಸ್ಥಾನಗಳ ಮೇಲೆ ಕಲ್ಲುಗಳು ಬಿದ್ದಿವೆ. ಮಸೀದಿಗಳು ಸುಟ್ಟು ಕರಕಲಾಗಿವೆ. ತನ್ನ ಮನೆಯ ಮೇಲ್ಛಾವಣಿ ಸುಟ್ಟು ಹೋಗಿದ್ದನ್ನು ಕಂಡು ಮಹಮ್ಮದ್ ಆಲಂ ಕಣ್ಣಿರಿಡುತ್ತಿದ್ದ. ದೆಹಲಿ ಸರ್ಕಾರ ಪರಿಹಾರ ಘೊಷಿಸಿದೆ ಎಂದು ಹೇಳಿದರೂ ಆತನ ಕುಟುಂಬಸ್ಥರ ರೋದನ ನಿಂತಿಲ್ಲ.
ಬಾಬರ್​ಪುರ ಮೆಟ್ರೋ ಮುಂಭಾಗದಲ್ಲಿದ್ದ ಗಲ್ಲಿಯೊಳಗೆ ರಕ್ಷಣಾ ಪಡೆ ಪ್ರವೇಶಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿತ್ತು. ಆತಂಕದಿಂದಿದ್ದ ಕುಟುಂಬಗಳನ್ನು ಬೆಟಾಲಿಯನ್ ನೇತೃತ್ವ ವಹಿಸಿದ್ದ ಅಧಿಕಾರಿ ದುಷ್ಕರ್ವಿುಗಳ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದರೂ ನಮಗೆ ತಿಳಿಸಿ ಎನ್ನುತ್ತಿದ್ದರು. ಅವರು ಯಾರೋ ನಮಗೆ ಗೊತ್ತಿಲ್ಲ. ಸ್ಥಳೀಯರು ಎಂದು ಕೆಲವರು ಹೇಳುತ್ತಾರೆ. ನಾವು ಮಾಡದ ತಪ್ಪಿಗೆ ಈ ಶಿಕ್ಷೆ ಏಕೆ ಸರ್? ನೋಡಿ ನಮ್ಮ ಅಂಗಡಿ ಮುಂಗಟ್ಟುಗಳೆಲ್ಲವೂ ನಾಶವಾಗಿದೆ. ನಮ್ಮ ಭವಿಷ್ಯ ಏನು? ಎಂದು ಪ್ರಶ್ನಿಸಿದರು. ಪೊಲೀಸ್ ಅವರನ್ನು ಸಮಾಧಾನಪಡಿಸಿ ಮುಂದಕ್ಕೆ ಹೋದರು. ತದ ನಂತರ ಯುವಕನೊಬ್ಬ ಮಾತನಾಡಿ, ಮೊನ್ನೆ ಗುಂಡು ಹಾರಿಸುತ್ತಿದ್ದಾಗ, ಅಂಗಡಿಗಳಿಗೆ ಬೆಂಕಿ ಇಡುತ್ತಿದ್ದಾಗ ಇದೇ ಪೊಲೀಸರು ಏಕೆ ಸುಮ್ಮನಿದ್ದರು. ಎಲ್ಲಾ ಮುಗಿದ ಮೇಲೆ ಬಂದು ನಮ್ಮನ್ನು ಸಮಾಧಾನಪಡಿಸುತ್ತಿದ್ದಾರೆ. ಈ ನಾಟಕ ಏಕೆ ಎಂದು ವಿಜಯವಾಣಿ ಜತೆ ಮಾತನಾಡುತ್ತಾ ಕಿಡಿ ಕಾರಿದ. ಯುವಕನೊಬ್ಬ ಕೈಯಲ್ಲಿ ಬೆಂಕಿಯುಂಡೆಯನ್ನಿಟ್ಟುಕೊಂಡಿದ್ದ ದೃಶ್ಯವನ್ನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದನ್ನು ತೋರಿಸಿದ. ಅಲ್ಲದೇ ಅದನ್ನು ತನ್ನ ವಾಟ್ಸ್​ಆಪ್ ಸ್ಟೇಟಸ್​ನಲ್ಲೂ ಶೇರ್ ಮಾಡಿಕೊಂಡಿದ್ದ.
2 ದಿನಗಳ ಹಿಂದೆ ಇದೇ ಬಾಬರ್​ಪುರ, ಮೌಜ್​ಪುರ, ಗೋಕುಲ್​ಪುರಿ ಗಲಭೆಯಿಂದಾಗಿ ಕದನಕಣವಾಗಿ ಮಾರ್ಪಟ್ಟಿತ್ತು. ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಕಲ್ಲುಗಳು, ಇಟ್ಟಿಗೆಗಳು, ಸುಟ್ಟು ಕರಕಲಾದ ಬೈಕ್, ಅಂಗಡಿಗಳಿಂದ ಹೊರಗೆಸೆಯಲ್ಪಟ್ಟ ಕೂಲರ್ ಗಳು ಅಂದಿನ ಭಯಾನಕ ಪರಿಸ್ಥಿತಿಗೆ ಸಾಕ್ಷಿಯಾಗಿದ್ದವು. ಜಫ್ರಾಬಾದ್ ಮತ್ತು ಮೌಜ್ ಪುರದಿಂದ 6 ಕಿಮೀ ದೂರದಲ್ಲಿರುವ ಶಿವಪುರಿಯಲ್ಲಿರುವ ಖಾಸಗಿ ರ್ಪಾಂಗ್ ಸ್ಥಳದಲ್ಲಿದ್ದ ಸುಮಾರು 100 ಕಾರುಗಳು ಸಂಪೂರ್ಣವಾಗಿ ಭಸ್ಮಗೊಂಡಿದ್ದವು. ಸೋಮವಾರ ರಾತ್ರಿ ಈ ಕಾರು ರ್ಪಾಂಗ್​ಗೆ
ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದರು. ರಾತ್ರಿಯಿಡೀ ನಾವ್ಯಾರೂ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆ ವೇಳೆ ಬಾಂಬ್ ಸ್ಪೋಟವಾದ ಶಬ್ದ ಕೇಳಿತು. ಮನೆಯ ಮೇಲ್ಛಾವಣಿಗೆ ಹೋಗಿ ನೋಡಿದಾಗ ಬೃಹದಾಕಾರದಲ್ಲಿ ಬೆಂಕಿ ಉರಿಯುತ್ತಿದ್ದ ದೃಶ್ಯ ಕಂಡುಬಂತು ಎಂದು ಸ್ಥಳೀಯರು ಮಾಹಿತಿ ಹಂಚಿಕೊಂಡರು.
| ರಾಘವ ಶರ್ಮ ನಿಡ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
