ನವದೆಹಲಿ:ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಜಾತಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನ (127ನೇ ತಿದ್ದುಪಡಿ) ವಿಧೇಯಕ 2021 ಅನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ವಿಪಕ್ಷ ಸದಸ್ಯರೂ ವಿಧೇಯಕಕ್ಕೆ ಬೆಂಬಲ ನೀಡಿರುವುದರಿಂದ ರಾಜ್ಯಸಭೆಯಲ್ಲೂ ಅನುಮೋದನೆಗೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಲೋಕಸಭೆಯಲ್ಲಿ ಈ ವಿಧೇಯಕವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರಕುಮಾರ್ ಮಂಡನೆ ಮಾಡುತ್ತಿದ್ದಂತೆ ಸ್ಪೀಕರ್ ಪೀಠದ ಎದುರಿದ್ದ ಪ್ರತಿಪಕ್ಷ ಸದಸ್ಯರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಅಲ್ಲದೆ, ಸ್ಥಾನಗಳಿಗೆ ತೆರಳಿ ವಿಧೇಯಕಕ್ಕೆ ಸಹಮತ ಸೂಚಿಸಿದರು. ಸಂವಿಧಾನ ತಿದ್ದುಪಡಿಯಾದ ಕಾರಣ ಸದಸ್ಯರ ಪೈಕಿ ಮೂರನೇ ಎರಡಂಶ ಬೆಂಬಲ ಇದಕ್ಕೆ ಬೇಕಾಗಿದೆ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಇಷ್ಟು ಸದಸ್ಯಬಲವಿಲ್ಲ. ಆದಾಗ್ಯೂ, ಈ ವಿಧೇಯಕವನ್ನು ರಾಜ್ಯಸಭೆ ಅಂಗೀಕರಿಸಲಿದೆ. ವಿಪಕ್ಷ ಸದಸ್ಯರು ಕೂಡ ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿಪಕ್ಷ ಮೂಲಗಳು ತಿಳಿಸಿವೆ.
ಏನು ತಿದ್ದುಪಡಿ?:ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ ಅಂಗೀಕಾರವಾದರೆ ಸಂವಿಧಾನದ ಅನುಚ್ಛೇದ 342ಎ 1 ಮತ್ತು 2ನೇ ನಿಯಮ ತಿದ್ದುಪಡಿ ಆಗಲಿದೆ. ಅದೇ ರೀತಿ, ಮೂರನೇ ನಿಯಮ ಸೇರ್ಪಡೆಯಾಗಲಿದೆ. ಇದಲ್ಲದೆ, ಅನುಚ್ಛೇದ 366 (26ಸಿ), 338ಬಿ (9)ರಲ್ಲೂ ತಿದ್ದುಪಡಿ ಆಗಲಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ಪೂರಕವಾಗಿ ಒಬಿಸಿಯ ‘ರಾಜ್ಯ ಪಟ್ಟಿ’ಯ ನಿರ್ವಹಣೆಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನ ಇದರಲ್ಲಿ ಇರಲಿದೆ. ಅನುಚ್ಛೇದ 366 (26ಸಿ) ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವ್ಯಾಖ್ಯೆಯನ್ನು ನೀಡುತ್ತದೆ. ಇದರ ಸಂಪೂರ್ಣ ಅಧಿಕಾರ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರಲಿದೆ. ಉದ್ಯೋಗ ಮತ್ತು ಪ್ರವೇಶಾತಿಗಳಲ್ಲಿ ಸಾಮಾಜಿಕವಾಗಿ-ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಸಮುದಾಯಗಳಿಗೆ ಮೀಸಲು ಒದಗಿಸುವ ರಾಜ್ಯಗಳ ಅಧಿಕಾರ 102ನೇ ಸಂವಿಧಾನ ತಿದ್ದುಪಡಿ ಮಸೂದೆ 2018ರಲ್ಲಿ ಮಂಡನೆಯಾದಾಗ ರದ್ದಾಗಿದೆ. ಈ ಸಂಬಂಧ ಮರುಪರಿಶೀಲಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆಗಾಗಿ ಕೇಂದ್ರ ಸರ್ಕಾರ ಮೇ 5ರಂದು ಅರ್ಜಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ವಿರೋಧ ತಂದಿದ್ದ ನಿರ್ಧಾರ:ಕೇಂದ್ರ ಸರ್ಕಾರ 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ಮಾಡಿ ಅನುಚ್ಛೇದ 342ಬಿ ಯನ್ನು ಸೇರ್ಪಡೆಗೊಳಿಸಿತ್ತು. ಇದರಲ್ಲಿ ರಾಜ್ಯಗಳ ಬಳಿ ಇದ್ದ ಅಧಿಕಾರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ವರ್ಗಾವಣೆಯಾಗಿತ್ತು. ಇದಕ್ಕೆ ರಾಜ್ಯಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಮರಾಠ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿತ್ತಾದರೂ, ಸುಪ್ರೀಂ ಕೋರ್ಟ್​ನ ಪಂಚಸದಸ್ಯ ಸಾಂವಿಧಾನಿಕ ಪೀಠ ಅದನ್ನು 1992ರ ಮಂಡಲ್ ತೀರ್ಪಿಗೆ ಅನುಗುಣವಾಗಿ ರದ್ದುಗೊಳಿಸಿತ್ತು.
ವಿರೋಧ ಏಕಿತ್ತು?:ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರ 2018ರಲ್ಲಿ ತಿದ್ದುಪಡಿ ತಂದಿದ್ದರಿಂದಾಗಿ ಒಬಿಸಿ ಪಟ್ಟಿ ರಚಿಸುವ ರಾಜ್ಯಗಳ ಅಧಿಕಾರ ಮೊಟಕುಗೊಳ್ಳಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂಥ ನಡೆ ಎಂದು ಕೆಲ ರಾಜ್ಯಗಳು ಟೀಕಿಸಿದ್ದವು.
ರಾಜ್ಯಸಭೆಯಲ್ಲಿ ರೆಟ್ರೋಟ್ಯಾಕ್ಸ್ ಮಸೂದೆ ತಿರಸ್ಕೃತ:ಯುಪಿಎ ಸರ್ಕಾರದ ಅವಧಿಯ ಪೂರ್ವಾನ್ವಯ ತೆರಿಗೆ ರದ್ದುಗೊಳಿಸುವ ತೆರಿಗೆ ವಿಧೇಯಕ (ತಿದ್ದುಪಡಿ) ಮಸೂದೆ 2021 ಅನ್ನು ಮರುಪರಿಶೀಲಿಸುವಂತೆ ರಾಜ್ಯಸಭೆಯು ಲೋಕಸಭೆಗೆ ಸೋಮವಾರ ಮರಳಿಸಿದೆ. ಈ ವೇಳೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದ್ದರು. ಕೈರ್ನ್ ಎನರ್ಜಿ, ವೊಡಾಫೋನ್ ಮತ್ತು ಇತರೆ ಕಂಪನಿಗಳಿಗೆ ಅವುಗಳು ಕಟ್ಟಿದ್ದ ತೆರಿಗೆ ಹಿಂದಿರುಗಿಸುವುದಕ್ಕೆ ಈ ಮಸೂದೆ ನೆರವಾಗಲಿದೆ. ಕಳೆದ ವಾರ ಲೋಕಸಭೆ ಇದನ್ನು ಅಂಗೀಕರಿಸಿತ್ತು.
ಮೂರು ಮಸೂದೆ ಅಂಗೀಕಾರ:ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆಯೇ ಸೀಮಿತ ಬಾಧ್ಯತೆಯ ಪಾಲುದಾರಿಕೆ (ತಿದ್ದುಪಡಿ) ವಿಧೇಯಕ 2021, ಇನ್ಶೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರೆಂಟಿ ಕಾರ್ಪೆರೇಶನ್ (ಅಮೆಂಡ್​ವೆುಂಟ್) ಬಿಲ್ 2021, ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ 2021 ಇವುಗಳನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ಇದಲ್ಲದೆ, ಹೋಮಿಯೋಪಥಿ ರಾಷ್ಟ್ರೀಯ ಆಯೋಗ (ತಿದ್ದುಪಡಿ) ಮಸೂದೆ 2021, ಭಾರತೀಯ ವೈದ್ಯಪದ್ಧತಿ (ತಿದ್ದುಪಡಿ) ವಿಧೇಯಕ 2021 ಮಂಡನೆಯಾಗಿವೆ.
ಸಂಸತ್ ಕಲಾಪವೇ ಸರಿಯಾಗಿ ನಡೆಯುತ್ತಿಲ್ಲ. ಇದರ ನಡುವೆ, ಮೂರು+ಮೂರು ವಿಧೇಯಕ ಲೋಕಸಭೆಯಲ್ಲಿ ಮಂಡನೆಯಾಗಿ, ನಾಲ್ಕು ಅಂಗೀಕಾರವೂ ಆಗಿದೆ. ಸರ್ಕಾರದ ಈ ನಡೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
|ಅಧೀರ್ ರಂಜನೌ ಚೌಧರಿಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ
ರಾಜ್ಯಗಳಿಗೆ ಸವಾಲು:ಕೇಂದ್ರ ಸರ್ಕಾರದ ಈ ತಿದ್ದುಪಡಿ ನಿರ್ಧಾರದಿಂದಾಗಿ ರಾಜ್ಯಗಳ ಎದುರು ಹೊಸ ಸವಾಲುಗಳು ಉದ್ಭವಿಸಿವೆ. ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ರಾಜ್ಯದಲ್ಲಿ ಪಟ್ಟು ಹಿಡಿದಿವೆ. ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕೈತೊಳೆದುಕೊಂಡಿತ್ತು. ಆದರೀಗ ರಾಜ್ಯಗಳಿಗೇ ಆ ಅಧಿಕಾರ ಸಿಗುವುದರಿಂದ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಸರ್ಕಾರದ ಮುಂದೆ ಬರಲಿದೆ.
ಒಬಿಸಿ ಪಟ್ಟಿ ನಿರ್ವಹಣೆಯ ಅಧಿಕಾರವನ್ನು ರಾಜ್ಯಗಳಿಗೆ ಹಿಂದಿರುಗಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರೆಲ್ಲರೂ ಬೆಂಬಲಿಸಲಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯ ವಿಚಾರವಾದ ಕಾರಣ ನಾವೂ ಬೆಂಬಲಿಸುತ್ತೇವೆ.
|ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆಯಲ್ಲಿ ವಿಪಕ್ಷ ನಾಯಕ
ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..

ನಗರಸಭೆ ಸದಸ್ಯೆ ಮನೆ ಮೇಲೆ ದಾಳಿ, 25ಕ್ಕೂ ಹೆಚ್ಚು ಜನರಿದ್ದ ಪುಂಡರ ತಂಡ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + two =
Remember me
